ವೇದಿಕೆಯಿಂದ ಕೆಳಗೆ ಬಿದ್ದ ಶಾಸಕಿ; ಸ್ಥಿತಿ ಗಂಭೀರ

Most read

ಕೊಚ್ಚಿ: ಬೃಹತ್ ಭರತನಾಟ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಕೇರಳದ ತ್ರಿಕ್ಕಾಕರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಉಮಾ ಥಾಮಸ್ ಆಯತಪ್ಪಿ ಬಿದ್ದಿದ್ದು ಅವರ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದೆ. ಕಲೂರ್‌ ನ ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವರು ಆಗಮಿಸಿದ್ದರು. ಶಾಸಕಿ ಉಮಾ ವಿಐಪಿ ಗ್ಯಾಲರಿ ಹತ್ತುವಾಗ ಆಯತಪ್ಪಿ 15-20 ಅಡಿ ಎತ್ತರದಿಂದ ನೆಲದ ಮೇಲೆ ಬಿದ್ದಿದ್ದು, ಅವರ ತಲೆಗೆ ಗಂಭೀರವಾದ ಗಾಯವಾಗಿದೆ.

ಕಲೂರ್ ಕ್ರೀಡಾಂಗಣದಲ್ಲಿ 12 ಸಾವಿರ ಭರತನಾಟ್ಯ ಕಲಾವಿದರಿಂದ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆ ಹಾಕಲಾಗಿತ್ತು. ಸಚಿವರು, ಶಾಸಕರು ಸೇರಿದಂತೆ ಗಣ್ಯರಿಗೆ ವಿಐಪಿ ಗ್ಯಾಲರಿಯನ್ನು ನಿರ್ಮಿಸಲಾಗಿತ್ತು. ಉಮಾ ಅವರು ವಿಐಪಿ ಗ್ಯಾಲರಿ ಹತ್ತಿದಾಗ ವೇದಿಕೆ ಅಂಚಿನಿಂದ ಕೆಳಕ್ಕೆ ಬಿದ್ದಿದ್ದಾರೆ. ಇಪ್ಪತ್ತು ಅಡಿ ಕೆಳಗೆ ಬಿದ್ದಿದ್ದರಿಂದ ಅವರ  ಮುಖ ಹಾಗೂ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದೆ ಎಂದು ವೈದ್ಯರು ತಿಳಿಸಿದ್ದಾರೆ. 

ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ  ಉಮಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವೆಂಟಿಲೇಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯ ವೈದ್ಯರ ಪ್ರಕಾರ ಅವರ  ಸ್ಥಿತಿ ಚಿಂತಾಜನಕವಾಗಿದೆ. ಉಮಾ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಹಲವು ಕಡೆ ಮೂಳೆ ಮುರಿದಿದೆ. ಮುಂದಿನ 24 ಗಂಟೆಗಳ ಕಾಲ ಏನನ್ನೂ ಹೇಳಲಾಗದು ಎಂದು  ಕಾಂಗ್ರೆಸ್ ನಾಯಕ ವಿಡಿ ಸತೀಶನ್ ತಿಳಿಸಿದ್ದಾರೆ.

ಕೇರಳ ವಿಧಾನಸಭೆಯಲ್ಲಿರುವ ಕಾಂಗ್ರೆಸ್ ಪಕ್ಷದ ಏಕೈಕ ಮಹಿಳಾ ಸದಸ್ಯೆ ಎಂಬ ಹೆಗ್ಗಳಿಕೆಗೂ ಉಮಾ ಥಾಮಸ್ ಪಾತ್ರರಾಗಿದ್ದಾರೆ. ತ್ರಿಕ್ಕಾಕರ ವಿಧಾನಸಭಾ ಕ್ಷೇತ್ರ ಶಾಸಕರಾಗಿದ್ದ ಪಿ.ಟಿ. ಥಾಮಸ್ ಅವರು ಡಿಸೆಂಬರ್ 2021 ರಲ್ಲಿ ನಿಧನರಾದರು. ಆಗ ನಡೆದ ಉಪ ಚುನಾವಣೆಯಲ್ಲಿ ಪತ್ನಿ ಉಮಾ ಸ್ಪರ್ಧಿಸಿ 25,016 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಉಮಾ ಅವರು ತಮ್ಮ ಪರಿಣಾಮಕಾರಿ ಭಾಷಣಗಳಿಂದ ಎಲ್ಲರ ಗಮನ ಸೆಳೆದಿದ್ದರು.

More articles

Latest article