ದೇಶದಲ್ಲಿ ಆಡಳಿತ ಪಕ್ಷವು ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ದಾಳಿ ಮಾಡುತ್ತಿದೆ. ರಾಜ್ಯಸಭೆ ಮತ್ತು ಲೋಕಸಭೆಯ 92 ಸಂಸದರನ್ನು ಅಮಾನತು ಮಾಡಲಾಗಿದೆ. ಮೂರ್ನಾಲ್ಕು ಜನರ ಮೇಲೆ ಪ್ರಿವಿಲೋಜ್ ಕಮಿಟಿಗೆ ಶಿಫಾರಸ್ಸು ಮಾಡಿದ್ದಾರೆ. ತೃಣಮೂಲ ಕಾಂಗ್ರೆಸ್ ಸಂಸದರನ್ನು ಅನರ್ಹಗೊಳಿಸಿದರೋ ಅದೇ ರೀತಿ ಇವರನ್ನೂ ಅನರ್ಹಗೊಳಿಸಲು ಹುನ್ನಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕ ವಿಎಸ್ ಉಗ್ರಪ್ಪ ಕಿಡಿಕಾರಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರದ ವೈಫಲ್ಯವನ್ನು ಪ್ರಶ್ನೆ ಮಾಡುವ ಹಕ್ಕು ಸಂಸದರಿಗೆ ಇರುತ್ತದೆ. ಡಿ.13, 2001ರಲ್ಲಿ ಸದನದ ಹೊರಗೆ ದಾಳಿ ಆಗಿತ್ತು. ಈ ಬಾರಿ ಸದನದ ಒಳಗೆ ದಾಳಿ ಆಗಿದೆ. ಈ ಭದ್ರತಾ ವೈಫಲ್ಯದ ಬಗ್ಗೆ ಪ್ರಧಾನಮಂತ್ರಿಗಳು ಸದನದಲ್ಲಿ ಪ್ರತಿಕ್ರಿಯೆ ನೀಡದೇ, ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿ ಸಂಸತ್ತಿನ ಮೇಲೆ ದಾಳಿ ಆಘಾತಕಾರಿ ಎಂದಿದ್ದಾರೆ. ಸದನ ನಡೆಯುವಾಗ ಅವರು ಸದನದಲ್ಲಿ ತಮ್ಮ ಹೇಳಿಕೆ ದಾಖಲಿಸಬೇಕು. ಅದರ ಹೊರತಾಗಿ ಹೊರಗಡೆ ಹೇಳಿಕೆ ನೀಡುವುದು ಸಂಸದೀಯ ವ್ಯವಸ್ಥೆಗೆ ಮಾಡುವ ಅಪಚಾರವಾಗುತ್ತದೆ ಎಂದಿದ್ದಾರೆ.
ಈ ದಾಳಿ ಬಗ್ಗೆ ಗುಪ್ತಚರ ವಿಭಾಗ ವಿಫಲವಾಗಿರುವುದೇಕೆ? ಇಂತಹವರಿಗೆ ಪಾಸ್ ನೀಡಿದ್ದೇಕೆ ಎಂದು ಚರ್ಚೆ ಮಾಡಬೇಕು ಎಂದು ವಿರೇಧ ಪಕ್ಷದ ಸಂಸದರು ಪ್ರಸ್ತಾಪಕ್ಕೆ ಪ್ರಯತ್ನಕ್ಕೆ ಮುಂದಾದಾಗ ಅವರನ್ನು ಅಮಾನತುಗೊಳಿಸಿದ್ದಾರೆ. ಲೋಕಸಭೆಯಲ್ಲಿ 5 ಪ್ರೇಕ್ಷಕ ಗ್ಯಾಲರಿಗಳಿರುತ್ತವೆ. ಒಂದು ಸ್ಪೀಕರ್ಸ್ ಗ್ಯಾಲರಿ, ಮಾಜಿ ಸಂಸದರ ಗ್ಯಾಲರಿ, ಹಾಲಿ ಸದಸ್ಯರ ಸಂಬಂಧಿಗಳು ಕೂರುವ ಗ್ಯಾಲರಿ, ವಿದೇಶಿ ಗಣ್ಯರ ಗ್ಯಾಲರಿ, ಸಾರ್ವಜನಿಕ ಗ್ಯಾಲರಿ ಗಳಿರುತ್ತವೆ.
ಸಂಸತ್ ಸದಸ್ಯರು ಸಾರ್ವಜನಿಕರಿಗೆ ಪಾಸ್ ನೀಡುವಾಗ ಸಂಸದರು ತಮಗೆ ಚೆನ್ನಾಗಿ ಪರಿಚಿತರಿರುವವರಿಗೆ ಮಾತ್ರ ಪಾಸ್ ನೀಡಬೇಕು. ಪಾಸ್ ನೀಡುವಾಗ ಅವರು ಇಂತಹ ವ್ಯಕ್ತಿ ನನ್ನ ಸಂಬಂಧಿ, ಸ್ನೇಹಿತ ಅಥವಾ ಪರಿಚಿತ ವ್ಯಕ್ತಿ. ಅವರ ಸಂಪೂರ್ಣ ಜವಾಬ್ದಾರಿ ತಾನು ವಹಿಸಿಕೊಳ್ಳುತ್ತೇನೆ ಎಂದು ಪ್ರಮಾಣಪತ್ರವನ್ನು ನೀಡಬೇಕು. ಅರ್ಜಿಯಲ್ಲಿ ಪಾಸ್ ಪಡೆಯುತ್ತಿರುವ ವ್ಯಕ್ತಿಯ ಸಂಪೂರ್ಣ ಹೆಸರು ತಂದೆ ಹೆಸರು ಸೇರಿದಂತೆ ವಿವರ ಸಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ದೇಶದ ಹಿತದೃಷ್ಟಿಯಿಂದ ಸಂಸತ್ ಸದಸ್ಯರು ಈ ಕಾನೂನು ಉಲ್ಲಂಘನೆ ಬಗ್ಗೆ ಪ್ರಸ್ತಾಪ ಮಾಡಿದರೆ ಅವರನ್ನು ಅಮಾನತು ಮಾಡಿದ್ದಾರೆ. ಸ್ಪೀಕರ್ ಅವರು ಯಾವುದಾದರೂ ಸದಸ್ಯರು ಅನುಚಿತ ವರ್ತನೆ, ಕೆಟ್ಟ ಪದಗಳನ್ನು ಬಳಸಿದರೆ ಆ ಸದಸ್ಯರನ್ನು ಅಮಾನತುಗೊಳಿಸುವ ಅಧಿಕಾರವಿದೆ. ಆದರೆ ಈಗ ಅಮಾನತು ಆಗಿರುವ 92 ಸದಸ್ಯರ ಪೈಕಿ ಯಾರಾದರೂ ಈ ರೀತಿ ನಡೆದುಕೊಂಡಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
2001ರ ದಾಳಿ ನಡೆದ ಸಂದರ್ಭದಲ್ಲಿ ಶ್ರೀಮತಿ ಸೋನಿಯಾ ಗಾಂಧಿ ಅವರು ಈ ದಾಳಿಯ ವಿಚಾರ ಪ್ರಸ್ತಾಪ ಮಾಡಿದ್ದರು. ಆಗ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಉತ್ತರ ನೀಡಿದ್ದಾರೆ. ಅದು ನಿಜವಾದ ಸಂಸದೀಯ ನಡೆ.
ಈಗಿನ ಪ್ರಧಾನಮಂತ್ರಿಗಳು ಸದನದ ಹೊರಗೆ ಹೇಳಿಕೆ ನೀಡುತ್ತಿರುವಾಗ ಸದನದ ಒಳಗೆ ಯಾಕೆ ಹೇಳಿಕೆ ನೀಡುತ್ತಿಲ್ಲ. ಈ ವಿಚಾರವಾಗಿ ಗೃಹ ಸಚಿವರು ಯಾಕೆ ಹೇಳಿಕೆ ನೀಡುತ್ತಿಲ್ಲ. ಇದಕ್ಕೆ ಕಾರಣ ಅವರ ವೈಫಲ್ಯ. ಇದರ ನೇರಹೊಣೆಯನ್ನು ಪ್ರಧಾನಮಂತ್ರಿ ಹಾಗೂ ಗೃಹಸಚಿವರು ಹೊರಬೇಕು. ಸಂಸತ್ತಿನ ಐದು ಭದ್ರತಾ ವ್ಯವಸ್ಥೆ ದಟಿ ದಾಳಿ ನಡೆದಿರುವುದರ ಹೊಣೆಯನ್ನು ಸ್ಪೀಕರ್ ಅವರು ಹೊರಬೇಕಾಗುತ್ತದೆ. ಇದಕ್ಕೆ ಮೂಲವಾಗಿರುವ ಮೈಸೂರಿನ ಸಂಸದರು ಈ ದಾಳಿಕೋರರ ಬಗ್ಗೆ ಯಾವುದೇ ಹೇಳಿಕೆ ನೀಡದೆ ತಲೆಮರೆಸಿಕೊಂಡಿದ್ದಾರೆ. ಅವರ ಈ ನಡೆ ಅವರು ತಪ್ಪಿತಸ್ಥರು ಎಂಬುದನ್ನು ಸಾಬೀತುಪಡಿಸುತ್ತಿದೆ. ಮೈಸೂರು ಸಂಸದ, ಪ್ರಧಾನಮಂತ್ರಿ ಹಾಗೂ ಗೃಹಸಚಿವರು ಹಾಗೂ ಸ್ಪೀಕರ್ ಅವರ ರಾಜೀನಾಮೆ ನೀಡಬೇಕು ಎಂದು ರಾಷ್ಟ್ರಪತಿಗಳ ಗಮನ ಸೆಳೆಯಲು ಬಯಸುತ್ತೇವೆ.