ಉಡುಪಿ-ಚಿಕ್ಕಮಗಳೂರು ಕ್ಷೇತ್ರ | ಕಾಂಗ್ರೆಸ್ ಪಕ್ಷದಿಂದ ಜಯಪ್ರಕಾಶ್ ಹೆಗ್ಡೆ ಕಣಕ್ಕೆ : ಶೋಭ ಕರಂದ್ಲಾಜೆಗೆ ಸಾಲು ಸಾಲು ಸಂಕಷ್ಟ!

Most read

ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅಲೆಯಿಂದ ರಾಜ್ಯದ ಬಿಜೆಪಿ ನಾಯಕರಿಗೆ ಗೆಲುವು ಸುಲಭ ಮಾರ್ಗವಾಗಿತ್ತು. ಆದರೆ ಈ ಬಾರಿ ಬಿಜೆಪಿ ಗೆಲುವಿನ ಹಾದಿ ಅಷ್ಟು ಸುಲಭವಾಗಿಲ್ಲ. ಕಳೆದ ಬಾರಿಗಿಂತ ಈ ಬಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚಿತ್ರಣ ಬದಲಾಗಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಕರಾವಳಿಯ ಪ್ರಬಲ ನಾಯಕ ಬಿಜೆಪಿಗೆ ಗುಡ್‌ಬೈ ಹೇಳಿ ಕಾಂಗ್ರೆಸ್‌ ಸೇರ್ಪಡೆಯಾಗುತ್ತಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಇಂದು (ಮಾರ್ಚ್ 12) ಅಧೀಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ.

ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ಎರಡನೇ ಪಟ್ಟಿಯಲ್ಲಿ ಜಯಪ್ರಕಾಶ್ ಹೆಗ್ಡೆ ಹೆಸರು ಪ್ರಕಟವಾಗಲಿದೆ. ಕಳೆದ ವಾರ ನಡೆದ ಕಾಂಗ್ರೆಸ್ ಸಿಇಸಿ ಸಭೆಯಲ್ಲಿ ಜಯಪ್ರಕಾಶ್ ಹೆಗ್ಡೆ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಆದರೆ ಅವರು ಕಾಂಗ್ರೆಸ್ ಸೇರ್ಪಡೆಯಾಗದ ಕಾರಣ ಹೆಸರು ಘೋಷಣೆಯನ್ನು ತಡೆಹಿಡಿಯಲಾಗಿತ್ತು.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜಯಪ್ರಕಾಶ್ ಹೆಗ್ಡೆ ಪಕ್ಷಾಂತರ ಗೊಂಡಿದ್ದು ಈಗ ಕುತೂಹಲಕ್ಕೆ ಕಾರಣವಾಗಿದೆ. ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಅವರಿಗೆ ಬಿಜೆಪಿ ವಿರುದ್ಧ ಗೆಲುವಿನ ಹಾದಿ ಸುಲಭವಾಗುತ್ತದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಶೋಭಾ ಕರಂದ್ಲಾಜೆಗೆ ಟಿಕೆಟ್, ಉಡುಪಿ ಚಿಕ್ಕಮಗಳೂರು ಬಿಜೆಪಿ ಕಾರ್ಯಕರ್ತರ ವಿರೋಧ; ಹೆಗ್ಡೆಗೆ ಪ್ಲಸ್!

ಹತ್ತು ವರ್ಷಗಳಿಂದ ಗೆಲ್ಲಿಸಿ ಕಳುಹಿಸಿದ್ದರು ಜನರ ಕಡೆ ತಿರುಗಿ ನೋಡದ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಕೊಡಬಾರದು ಎಂದು ಗೋ ಬ್ಯಾಕ್ ಶೋಭಾ ಚಳುವಳಿಗಳು ಕಳೆದ ಎರಡು ವರ್ಷಗಳಿಂದ ನಡೆಯುತ್ತಲೇ ಇದೆ. ಇದರ ನಡುವೆ 2019ರಲ್ಲಿಯೂ ಗೆಲ್ಲಿಸಿದ್ದೆವು. ಆದರೆ ಕ್ಷೇತ್ರ ಅಭಿವೃದ್ಧಿಯನ್ನು ಅವರು ಸಂಪೂರ್ಣ ಕಡೆಗಣಿಸಿದ್ದಾರೆ. ನಮಗೆ ಮೀನುಗಾರು ದಿನನಿತ್ಯ ಓಡಾಡುವ, ಏಷ್ಯಾ ಅತೀದೊಡ್ಡ ಮೀನುಗಾರಿಕಾ ಬಂದರು ಮಲ್ಪೆ – ಉಡುಪಿ ನಡುವಿನ ಮೂರು ಮುಕ್ಕಾಲು ಕಿ.ಮೀ. ರಸ್ತೆಯ ದುರಸ್ತಿಗೆ 10 ವರ್ಷದಿಂದ ಬೇಡಿಕೆ ಸಲ್ಲಿಸಿದ್ದರೂ ಅವರು ಸ್ಪಂದಿಸಿಲ್ಲ. ಆದ್ದರಿಂದ ಅವರಿಗೆ ಟಿಕೆಟ್ ನೀಡುವುದಕ್ಕೆ ನಮ್ಮ ವಿರೋಧ ಇದೆ ಎಂದು ಕಿಡಿಕಾರುತ್ತಿದ್ದಾರೆ.

ಸದ್ಯ ಶೋಭಾ ಕರಂದ್ಲಾಜೆ ಅವರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಹಿಡಿತ ಕಳೆದುಕೊಂಡಿದ್ದರು, ಸ್ವಪಕ್ಷ ಕಾರ್ಯಕರ್ತರು, ನಾಯಕರಿಂದ ತೀರ್ವ ವಿರೋಧಕ್ಕೆ ಒಳಗಾಗಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಜೊತೆ ಬಿಜೆಪಿ ಕಾರ್ಯಕರ್ತರು ಸಹ ಹೆಗ್ಡೆ ಅವರಿಗೆ ಸಂಪೂರ್ಣ ಬೆಂಬಲ ಕೊಡುವ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ಶೋಭ ವಿರೋಧಿ ಅಲೆಯಲ್ಲಿ ಜಯಪ್ರಕಾಶ್ ಹೆಗ್ಡೆ ಸಕ್ರಿಯ;-

ಕ್ಷೇತ್ರದಲ್ಲಿ ಹಿಡಿತ ಕಳೆದುಕೊಂಡು ತೀರ್ವ ವಿರೋಧ ಎದುರಿಸುತ್ತಿರುವ ಈ ಒತ್ತಿನಲ್ಲಿ  ಮಾಜಿ ಸಂಸದ, ಸದ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಜಯಪ್ರಕಾಶ್‌ ಹೆಗ್ಡೆ ಲೋಕಸಭೆ ಕಣದಲ್ಲಿ ಸಕ್ರಿಯರಾಗಿದ್ದಾರೆ. ಜಿಲ್ಲೆಗೆ ಆಗಾಗ ಆಗಮಿಸುತ್ತಿರುವ ಜಯಪ್ರಕಾಶ್‌ ಹೆಗ್ಡೆ ಪ್ರಮುಖ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಜೆಪಿ ಫಾರ್‌ ಉಡುಪಿ-ಚಿಕ್ಕಮಗಳೂರು ಎಂಬ ಪೋಸ್ಟರ್‌ಗಳ ಮೂಲಕ ಸಂಸದರಾಗಿದ್ದ ಸಂದರ್ಭದಲ್ಲಿನ ಸಾಧನೆಗಳನ್ನು ಹಂಚಿಕೊಳ್ಳುತ್ತಿದ್ದು, ಸೋಶಿಯಲ್‌ ಮೀಡಿಯಾ ಫ್ಲಾಟ್‌ ಫಾರಂನಲ್ಲಿ ಪೂರ್ಣ ಸಕ್ರಿಯರಾಗಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಉಡುಪಿಯಲ್ಲಿ ಐದಕ್ಕೆ ಐದು ಬಿಜೆಪಿ ಗೆದ್ದಿದ್ದರೆ, ಚಿಕ್ಕಮಗಳೂರಿನಲ್ಲಿ ಐದಕ್ಕೆ ಐದು ಕಾಂಗ್ರೆಸ್ ಗೆದ್ದಿದೆ. ಶೋಭಾ ಕರಂದ್ಲಾಜೆ ಅವರಿಗೆ ಸ್ವಪಕ್ಚದಲ್ಲೇ ವಿರೋಧ ವ್ಯಕ್ತವಾಗಿರುವುದು ಹೆಗ್ಡೆ ಅವರಿಗೆ ಪ್ಲಸ್ ಆಗಲಿದೆ ಎಂಬುದು ಲೆಕ್ಕಾಚಾರ.

ಶೋಭಾ ಕರಂದ್ಲಾಜೆ ವಿರುದ್ಧ ಸಿಟಿ ರವಿ ಮತ್ತು ಪ್ರಮೋದ್ ಮದ್ವರಾಜ್;-

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ಗಾಗಿ ಸಿಟಿ ರವಿ ಮತ್ತು ಮದ್ವರಾಜ್ ಮುಂಚೂಣಿಯಲ್ಲಿದ್ದರು. ಈ ಸಲುವಾಗಿ ಕ್ಷೇತ್ರದಲ್ಲಿ ಮುಖಂಡರ ಜೊತೆ ಕಾರ್ಯಕರ್ತರ ಜೊತೆ ಹೆಚ್ಚು ಓಡಾಟ ಕೂಡ ನಡೆಸಿದ್ದರು ಆದರೆ. ಇಬ್ಬರಿಗೂ ಟಿಕೆಟ್ ಕೈತಪ್ಪಿದ್ದು, ಶೋಭಾ ವಿರುದ‌್ಧ ಕತ್ತಿಮಸಿಯುತ್ತಿದ್ದಾರೆ.  ಸಿಟಿ ರವಿ ಸದ್ಯ  ಶಾಸಕ ಸ್ಥಾನ ಕಳೆದುಕೊಂಡು, ಪಕ್ಷದಲ್ಲೂ ಸ್ಥಾನಮಾನ ಇಲ್ಲದೇ ಬೇಸರದಲ್ಲಿ ಇದ್ದು,  ಬಿಜೆಪಿಯಲ್ಲಿ ಆಗುತ್ತಿರುವ ಅನ್ಯಾಯವನ್ನು ಲೋಕ ಚುನಾವಣೆಯ ನಂತರ ಎಲ್ಲವನ್ನು ಹೇಳುತ್ತೇನೆ ಎಂದು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರು.

ಶೋಭಾ ಕರಂದ್ಲಾಜೆ ಅವರಿಗೆ ಬಿಜೆಪಿ ಟಿಕೆಟ್ ನೀಡುವುದಾದರೆ ಖಂಡಿತವಾಗಿಯೂ ಅವರ ವಿರುದ್ಧ ತಮ್ಮ ಪಕ್ಷದ ಕಾರ್ಯಕರ್ತರೇ ಕೆಲಸ ಮಾಡುತ್ತಾರೆ ಎಂಬುದು ರಾಜಕೀಯ ವಲಯದಿಂದ ತಿಳಿದುಬಂದಿದೆ. ಇದಕ್ಕೆ ಸಿಟಿ ರವಿ ಹಾಗೂ ಮದ್ವರಾಜ್ ಇಬ್ಬರೂ ಸಂಪೂರ್ಣ ಬೆಂಬಲ ನೀಡುವ ಸಾಧ್ಯತೆ ಹೆಚ್ಚಿದೆ. 

ಸಿ.ಟಿ ರವಿ ಮನವೋಲಿಕೆಗೆ ಮುಂದಾದ ಹೈಕಮಾಂಡ್;-

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿ.ಟಿ ರವಿಗೆ  ಟಿಕೆಟ್ ಕೈ ತಪ್ಪಿದ್ದರಿಂದ ಅಸಮಧಾನಗೊಂಡಿದ್ದು ಅವರ ಮನವೋಲಿಕೆ ಹೈಕಮಾಂಡ್ ಕಸರತ್ತು ಮುಂದುವರಿದಿದೆ. ಅಸಮಾಧಾನ ಸಮನವಾದರೆ ಶೋಭಾ ಕರಂದ್ಲಾಜೆಗೆ ಅವರಿಗೆ ಸ್ವಲ್ಪ ನಿಟ್ಟಿಸಿರು ಬಿಟ್ಟಂತೆ. ಇದರಿಂದಾಗಿ ಹೆಗ್ಡೆ ಅವರು ನೆಕ್ ಟು ನೆಕ್ ಚುನಾವಣೆ ಎದುರಿಸಲೇ ಬೇಕಾಗುತ್ತದೆ.

ಬೆಂಗಳೂರು ಉತ್ತರಕ್ಕೆ ಶೋಭಾ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ (Bangalore North Lok Sabha constituency) ಶೋಭಾ ಕರಂದ್ಲಾಜೆ (Shobha Karandlaje) ಅವರನ್ನು ಕಣಕ್ಕಿಳಿಸುವ ಕುರಿತು ಚರ್ಚೆಯಾಗುತ್ತಿದೆ. ಆದರೆ ಇದು ಸಾಧ್ಯವಾ ಎಂಬುದನ್ನು ಕರ್ನಾಟಕ ನಾಯಕರ ಬಳಿ ಚರ್ಚೆಯಾಗಲಿದೆ. ಇದೇ ವೇಳೆ ಈ ಕ್ಷೇತ್ರದಲ್ಲಿ ಹಾಲಿ ಸಂಸದರಾಗಿರುವ ಡಿ.ವಿ. ಸದಾನಂದಗೌಡ (DV Sadananda Gowda) ರೆಬೆಲ್‌ ಆಗುವ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ಟಿಕೆಟ್‌ ಸಿಗದಿದ್ದರೆ ಮುಂದೇನು ಎಂದು ಕೇಳಿದ್ದಕ್ಕೆ, “ಮುಂದಿನ ಬೆಳವಣಿಗೆಗೆ ಈಗ ಉತ್ತರ ಕೊಡಲ್ಲ” ಎಂದು ತಣ್ಣನೆಯ ಸ್ವರದಲ್ಲಿ ಹೇಳಿದ್ದಾರೆ.

ಜಯಪ್ರಕಾಶ್ ಹೆಗ್ಡೆ ಅವರ ರಾಜಕೀಯ ಜೀವನ;-

1972ರಲ್ಲಿ ಮೊದಲ ಬಾರಿಗೆ ಬ್ರಹ್ಮಾವರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಸಜ್ಜನ ರಾಜಕಾರಣಿ ಜಯಪ್ರಕಾಶ್ ಹೆಗ್ಡೆ ಬಳಿಕ ಜನತಾ ದಳ ಸೇರಿದ್ದರು. 1994ರಿಂದ 1996ರವರೆಗೆ ಅಂದಿನ ಮುಖ್ಯಮಂತ್ರಿ ಎಚ್.ಡಿ ದೇವೇಗೌಡ ಅವರ ಸಂಪುಟದಲ್ಲಿ ಬಂದರು ಮತ್ತು ಮೀನುಗಾರಿಕೆ ಸಚಿವರಾಗಿ ಕಾರ್ಯ ನಿರ್ವಹಸಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಳಿಕ ಕಾಂಗ್ರೆಸ್​ಗೆ ಸೇರ್ಪಡೆಗೊಂಡಿದ್ದರು.

2012ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪ ಅವರು ಸಿಎಂ ಹುದ್ದೆ ತ್ಯಜಿಸಬೇಕಾದಾಗ ಉಡುಪಿ- ಚಿಕ್ಕಮಗಳೂರು ಸಂಸದರಾಗಿದ್ದ ಡಿ.ವಿ.ಸದಾನಂದ ಗೌಡರಿಗೆ ಸಿಎಂ ಸ್ಥಾನ ನೀಡಲಾಗಿತ್ತು. ಈ ಹಿನ್ನೆಲೆ ಸದಾನಂದ ಗೌಡರ ರಾಜೀನಾಮೆಯಿಂದಾಗಿ ತೆರವಾಗಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭೆ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್​ನಿಂದ ಸಂಸದರಾಗಿ ಚುನಾಯಿತರಾಗಿದ್ದರು.

2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿ, ಸೋಲು ಅನುಭವಿಸಿದ್ದರು. ಬಳಿಕ ಬದಲಾದ ಸನ್ನಿವೇಶದಲ್ಲಿ ಅವರು ಕಾಂಗ್ರೆಸ್ ಪಕ್ಷ ತ್ಯಜಿಸಿ ಬಿಜೆಪಿಗೆ ಸೇರಿಕೊಂಡಿದ್ದರು. ಬಿಜೆಪಿ ಸರ್ಕಾರ ಇದ್ದಾಗ ಹೆಗ್ಡೆ ಅವರನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನೇಮಿಸಿತ್ತು. ರಾಜ್ಯದಲ್ಲಿ ಬಹು ಚರ್ಚೆಗೆ ಗ್ರಾಸವಾಗಿರುವ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಅಧ್ಯಯನ ವರದಿ ಸಲ್ಲಿಕೆಯ ಹಿನ್ನಲೆಯಲ್ಲಿ ಪ್ರಸಕ್ತ ಕಾಂಗ್ರೆಸ್ ಆಡಳಿತದ ಅವಧಿಯಲ್ಲೂ ಹೆಗ್ಡೆಯವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದುವರಿಕೆ ಮಾಡಿದ್ದರು. ಫೆಬ್ರವರಿ ಅಂತ್ಯದಲ್ಲಿ ಹೆಗ್ಡೆ ತಮ್ಮ ತಂಡದ ಜೊತೆ ವರದಿಯನ್ನು ಸರಕಾರಕ್ಕೆ ಸಲ್ಲಿಕೆ ಮಾಡಿದ್ದರು.

More articles

Latest article