ಯುಎಪಿಎ ಪ್ರಕರಣದಲ್ಲಿ ಮೂವರು ಮಾಜಿ ನಕ್ಸಲರ ಖುಲಾಸೆ; ಲತಾ, ರವೀಂದ್ರ, ವನಜಾಕ್ಷಿಗೆ ಬಿಗ್‌ ರಿಲೀಫ್‌

Most read

ಬೆಂಗಳೂರು: ಇತ್ತೀಚೆಗೆ ಸರ್ಕಾರದ ಮುಂದೆ ಶರಣಾಗಿದ್ದ ನಕ್ಸಲ್‌ ಮುಖಂಡರಾದ ಮುಂಡಗಾರು ಲತಾ, ಕೋಟೆಹೊಂಡ ರವೀಂದ್ರ, ವನಜಾಕ್ಷಿ ಮತ್ತು ಸಾವಿತ್ರಿ ಅವರ ವಿರುದ್ಧ ದಾಖಲಾಗಿದ್ದ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಪ್ರಕರಣಗಳಲ್ಲಿ, ಮೂವರನ್ನೂ ಖುಲಾಸೆ ಮಾಡಿ ಬೆಂಗಳೂರಿನ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಶೃಂಗೇರಿಯ ಬುಕ್ಕಡಿಬೈಲು ಬಸ್‌ ನಿಲ್ದಾಣದ ಅಂಗಡಿಯೊಂದರ ಗೋಡೆ ಮೇಲೆ ಲತಾ, ರವೀಂದ್ರ ಮತ್ತು ಸಾವಿತ್ರಿ ಅವರು ಕರಪತ್ರಗಳನ್ನು ಅಂಟಿಸಿ, ಸರ್ಕಾರಿ ವಿರೋಧಿ ಘೋಷಣೆ ಕೂಗಿದ್ದರು ಎಂದು ಶೃಂಗೇರಿ ಪೊಲೀಸ್‌ ಠಾಣೆಯಲ್ಲಿ 2009ರಲ್ಲಿ ಯುಎಪಿಎ ಪ್ರಕರಣ ದಾಖಲಿಸಲಾಗಿತ್ತು.

2005 ರಲ್ಲಿ ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ಗಂಗಾಧರ ಶೆಟ್ಟಿ ಎಂಬುವವರ ಬೈಕ್‌ ಸುಟ್ಟ ಆರೋಪವೂ ಈ ಮೂವರ ಮೇಲಿತ್ತು. ಜತೆಗೆ ಲತಾ, ರವೀಂದ್ರ ಮತ್ತು ವನಜಾಕ್ಷಿ ಅವರು ಶೃಂಗೇರಿ ತಾಲ್ಲೂಕಿನ ನೆಮ್ಮಾರಿನಲ್ಲಿ ಮತ್ತು ಮಾವೋವಾದಿ ಪರ ಘೋಷಣೆ ಕೂಗಿದ್ದ ಆರೋಪದಲ್ಲಿಯೂ ಎಫ್‌ ಐಆರ್‌ ದಾಖಲಿಸಲಾಗಿತ್ತು. 2018ರಲ್ಲಿ ಥಣಿಕೋಡು ಅರಣ್ಯ ಚೆಕ್‌ ಪೋಸ್ಟ್‌ ನಲ್ಲಿ ಸ್ಪೋಟಕಗಳನ್ನು ಎಸೆದು ದಾಖಲೆಗಳನ್ನು ಸುಟ್ಟು ರೂ.34,000 ನಷ್ಟ ಉಂಟು ಮಾಡಿದ್ದರು ಎಂದು ಮತ್ತೊಂದು ಯುಎಪಿಎ ಪ್ರಕರಣವೂ ಇವರ ವಿರುದ್ಧ ದಾಖಲಿಸಲಾಗಿತ್ತು.

ಬೆಂಗಳೂರಿನ, ಯುಎಪಿಎ ಪ್ರಕರಣ ವಿಶೇಷ ನ್ಯಾಯಾಲಯವು ಈ ಪ್ರಕರಣಗಳ ವಿಚಾರಣೆ ನಡೆಸಿತ್ತು. ತೀರ್ಪು ನೀಡಿದ ನ್ಯಾಯಾಧೀಶ ಸಿ.ಎಂ. ಗಂಗಾಧರ ಅವರು ಈ ಎಲ್ಲ ಪ್ರಕರಣಗಳಲ್ಲಿ, ಈ ನಾಲ್ವರೇ ಅಪರಾಧ ಎಸಗಿದ್ದಾರೆ ಎನ್ನುವುದನ್ನು ಸಾಬೀತುಪಡಿಸುವಲ್ಲಿ ತನಿಖಾಧಿಕಾರಿಗಳು ವಿಫಲರಾಗಿದ್ದಾರೆ. ಆದ್ದರಿಂದ ಇವರ ವಿರುದ್ಧ ಯುಎಪಿಎ ಮತ್ತು ಐಪಿಸಿ ಸೆಕ್ಷನ್‌ ಗಳ ಅಡಿಯಲ್ಲಿ ದಾಖಲಿಸಿರುವ ಪ್ರಕರಣಗಳನ್ನು ವಜಾ ಮಾಡಬಹುದಾಗಿದೆ ಎಂದು ಅಭಿಪ್ರಾಯಪಟ್ಟು ಆರೋಪಿಗಳನ್ನು ದೋಷಮುಕ್ತಗೊಳಿಸಿದ್ದಾರೆ. ಆರೋಪಿಗಳ ಪರವಾಗಿ ವಕೀಲ ಶಿವಮಣಿಧನ್ ವಾದ ಮಂಡಿಸಿದ್ದರು.

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಮುಂಡಗಾರು ಲತಾ, ಕೋಟೆಹೊಂಡ ರವೀಂದ್ರ ಮತ್ತು ವನಜಾಕ್ಷಿ  ಶರಣಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಪ್ರಾಸಿಕ್ಯೂಷನ್‌ ವಿಫಲ: ಶಿವಮಣಿಧನ್

ಕನ್ನಡ ಪ್ಲಾನೆಟ್ ಜತೆ ಮಾತಾಡಿದ ಶಿವಮಣಿಧನ್ “ಆರೋಪ ಪಟ್ಟಿಯಲ್ಲಿ ಆರೋಪಿಗಳು ಅಪರಾಧ ಎಸಗಿದ್ದಾರೆಂದು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಯಾವುದೇ ಪುರಾವೆಗಳನ್ನು ಒದಗಿಸಲು ವಿಫಲವಾಗಿದೆ. ಯಾವುದೇ ಸ್ವತಂತ್ರ ಸಾಕ್ಷಿಗಳೂ ಪ್ರಾಸಿಕ್ಯೂಷನ್‌ ಗೆ ಬೆಂಬಲ ನೀಡಲಿಲ್ಲ. ಯುಎಪಿಎ ಅಡಿಯಲ್ಲಿ ಅಪರಾಧಕ್ಕೆ ಕಾನೂನು ಕ್ರಮ ಜರುಗಿಸಲು ಕಾನೂನಿನಡಿಯಲ್ಲಿ ನಿಗದಿಪಡಿಸಿದ 14 ದಿನಗಳಲ್ಲಿ ಅನುಮತಿಯನ್ನು ಪಡೆಯಲಾಗಿಲ್ಲ. ವಿಶೇಷ ನ್ಯಾಯಾಲಯವು ಈ ಮೂರು ಪ್ರಕರಣಗಳಲ್ಲಿನ ಎಲ್ಲಾ ಅಪರಾಧಗಳಿಂದ ಆರೋಪಿಗಳನ್ನು ಖುಲಾಸೆಗೊಳಿಸಿದೆ, ನ್ಯಾಯವಾದಿಯಾಗಿ ನ್ಯಾಯ ಒದಗಿಸಲು ನನ್ನ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

More articles

Latest article