ಬೆಂಗಳೂರು: ಕಳವು ಮಾಡಿದ್ದ ವಾಹನಗಳನ್ನೇ ಬಳಸಿಕೊಂಡು ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಿದ್ಯಾರಣ್ಯಾಪುರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇವರಿಂದ ರೂ. 41.36 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು, 2 ಕಾರು ಹಾಗೂ 6 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ದೀಪಕ್ ಅಲಿಯಾಸ್ ದೀಪು ಮತ್ತು ಪವನ್ ಅಲಿಯಾಸ್ ಕಾಟ ಬಂಧಿತ ಆರೋಪಿಗಳು. ದೀಪಕ್ ವಿರುದ್ಧ 37 ಪ್ರಕರಣಗಳು ದಾಖಲಾಗಿದ್ದರೆ ಪವನ್ ವಿರುದ್ಧ 13 ಪ್ರಕರಣಗಳು ದಾಖಲಾಗಿವೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ವಿರುದ್ಧ 29 ಪ್ರಕರಣಗಳು ದಾಖಲಾಗಿವೆ.
ಈ ಇಬ್ಬರೂ ಹಳೆಯ ಆರೋಪಿಗಳಾಗಿದ್ದು, ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿ ಮತ್ತೇ ಕಳ್ಳತನಕ್ಕೆ ಇಳಿದಿದ್ದರು. ಎಚ್ಎಂಟಿ ಲೇಔಟ್ ನಿವಾಸಿಯೊಬ್ಬರು ತೀರ್ಥಯಾತ್ರೆ ನಿಮಿತ್ತ ಗುಜರಾತ್ ಗೆ ಹೋಗಿದ್ದಾಗ ಇವರಿಬ್ಬರು ಮನೆಯ ಬೀಗ ಮುರಿದು ಒಳನುಗ್ಗಿ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ, 7 ಕೆಜಿ ಬೆಳ್ಳಿ ವಸ್ತುಗಳು ಹಾಗೂ ಕಾರನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಕನಕಪುರ ರಸ್ತೆಯ ಹಾರೋಹಳ್ಳಿ ಬಸ್ ನಿಲ್ದಾಣದ ಹತ್ತಿರ ಇಬ್ಬರನ್ನು ಕಾರು ಸಮೇತ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಮನೆಗಳ್ಳತನ ಹಾಗೂ ವಾಹನ ಕಳವು ಮಾಡಿರುವುದಾಗಿ ತಿಳಿಸಿದ್ದಾರೆ. ಯಲಹಂಕ ನ್ಯೂಟೌನ್ ಕೆಂಪನಹಳ್ಳಿಯ ಪೀಕಾಕ್ ಗಾರ್ಡನ್ ಬಳಿ ಇರುವ ಖಾಲಿ ಜಾಗದಲ್ಲಿ ಕಾರನ್ನು ನಿಲ್ಲಿಸಿರುವುದಾಗಿ ತಿಳಿಸಿದ್ದು, ಅಲ್ಲಿಂದ ಕಾರು ಹಾಗೂ ಅದರಲ್ಲಿದ್ದ 12 ಗ್ರಾಂ ಚಿನ್ನಾಭರಣ ಮತ್ತು 3 ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಹೊಸಕೋಟೆಯಲ್ಲಿ ವಾಸವಿರುವ ತಮ್ಮ ಸ್ನೇಹಿತನಿಗೆ ನೀಡಿದ್ದ 39 ಗ್ರಾಂ ಆಭರಣ ಹಾಗೂ ಸೋಲದೇವನಹಳ್ಳಿ ವ್ಯಾಪ್ತಿಯ ಖಾಲಿ ಜಾಗದಲ್ಲಿ ಕಳವು ಮಾಡಿ ನಿಲ್ಲಿಸಿದ್ದ 6 ದ್ವಿಚಕ್ರ ವಾಹನ ಹಾಗೂ ವಿದ್ಯಾರಣ್ಯಾಪುರದ ದೊಡ್ಡಗೌಡನ ಪಾಳ್ಯದಲ್ಲಿರುವ ಮಹಾಲಕ್ಷ್ಮಿ ಬ್ಯಾಂಕರ್ಸ್ ಅಂಗಡಿಯಲ್ಲಿ ಮಾರಾಟ ಮಾಡಿದ್ದ 64 ಗ್ರಾಂ ಆಭರಣವನ್ನು ವಶಕ್ಕೆ ಪಡೆಯಲಾಗಿದೆ. ಹೊಸಕೋಟೆಯ ಟ್ರೂ ಗೋಲ್ಡ್ ಕಂಪನಿಗೆ ಮಾರಾಟ ಮಾಡಿದ್ದ 42 ಗ್ರಾಂ ಆಭರಣ, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಮಾರಾಟ ಮಾಡಿದ್ದ 129 ಗ್ರಾಂ ಆಭರಣ, ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಆರು ದ್ವಿಚಕ್ರ ವಾಹನ, ದೊಡ್ಡಗೌಡನ ಪಾಳ್ಯದಲ್ಲಿರುವ ಮಹಾಲಕ್ಷ್ಮಿ ಬ್ಯಾಂಕರ್ಸ್ ಅಂಗಡಿಯಲ್ಲಿ ಮಾರಾಟ ಮಾಡಿದ್ದ 44 ಗ್ರಾಂ ಚಿನ್ನಾಭರಣ, ಹೊಸಕೋಟೆಯ ಸ್ನೇಹಿತನಿಗೆ ನೀಡಿದ್ದ 39 ಗ್ರಾಂ ಆಭರಣವನ್ನು ವಶಕ್ಕೆ ಪಡೆದಿದ್ದಾರೆ.
ಒಟ್ಟಾರೆ ಇವರಿಬ್ಬರ ಬಂಧನದಿಂದ 7 ಮನೆಗಳ್ಳತನ ಪ್ರಕರಣಗಳು ಹಾಗೂ 6 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.