ಬೆಂಗಳೂರು: ವಿಲ್ಸನ್ ಗಾರ್ಡನ್ 10ನೇ ಅಡ್ಡ ರಸ್ತೆಯಲ್ಲಿರುವ ಹೊಂಬೇಗೌಡ ಆಟದ ಮೈದಾನದಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ. ಈತನಿಂದ 110 ಗ್ರಾಂ ನಿಷೇಧಿತ ಎಂಡಿಎಂಎ ಕ್ರಿಸ್ಟಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಈತನನ್ನು ವಿಚಾರಣೆಗೊಳಪಡಿಸಿದಾಗ ತನ್ನ ಜತೆ ಮತ್ತೊಬ್ಬ ಆರೋಪಿಯೂ ಇದೇ ದಂಧೆಯಲ್ಲಿ ತೊಡಗಿರುವ ವಿಷಯವನ್ನು ಬಾಯಿ ಬಿಟ್ಟಿದ್ದಾನೆ.
ಮತ್ತೊಬ್ಬ ಆರೋಪಿಯನ್ನು ಗಣೇಶ ದೇವಸ್ಥಾನದ ಬಳಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈತನಿಂದಲೂ 407 ಗ್ರಾಂ ಕೊಕೇನ್, 865 ಗ್ರಾಂ ಎಂಡಿಎಂಎ ಕ್ರಿಸ್ಟಲ್ ಅನ್ನು ವಶಕ್ಕೆ ಪಡೆಯಲಾಗಿದೆ. ಇವರಿಬ್ಬರಿಂದಲೂ ವಶಪಡಿಸಿಕೊಂಡ ಮಾದಕ ವಸ್ತುಗಳ ಮೌಲ್ಯ 1.37 ಕೋಟಿ ರೂ. ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಲ್ಯಾಪ್ ಟಾಪ್ ಕಳ್ಳನ ಬಂಧನ:
ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿಜಿಗಳಲ್ಲಿ ಲ್ಯಾಪ್ ಟಾಪ್ ಗಳನ್ನು ಕಳವು ಮಾಡುತ್ತಿದ್ದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಂದ 10 ಲಕ್ಷ ರೂ. ಬೆಲೆ ಬಾಳುವ 16 ಲ್ಯಾಪ್ ಟಾಪ್, 4 ಮೊಬೈಲ್ ಮತ್ತು ಒಂದು ಐ ಪ್ಯಾಡ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ತಿಂಗಳು ಬೆಳ್ಳಂದೂರಿನ ಪಿಜಿಯಂದರಲ್ಲಿ ವಾಸವಾಗಿದ್ದ ದೂರುದಾರರು ತಮ್ಮ ಕೊಠಡಿಯಲ್ಲಿ ಮಲಗಿದ್ದಾಗ ಮೂರು ಲ್ಯಾಪ್ ಟಾಪ್ ಮತ್ತು ಐ ಪ್ಯಾಡ್ ಕಳವಾಗಿದೆ ಎಂದು ದೂರು ನೀಡಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಬೆಳಗಿನ ಜಾವ ಅನುಮಾನಸ್ಪಾದವಾಗಿ ತಿರುಗುತ್ತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕಳ್ಳತನ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾನೆ. ಈತ ಬೆಳ್ಳಂದೂರು, ಕೆ ಆರ್ ಪುರ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳ ಪಿಜಿಗಳಲ್ಲಿ ಕಳವು ಮಾಡುತ್ತಿದ್ದ ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ.