ಓಟ್ ಮಾಡುವಾಗ ಅಮ್ಮ ಅಲ್ಲಿ ನಿಂತು 5-6 ಸಲ ಜೋರಾಗಿ ಕೂಗಿ ಹೇಳಿದರು ನಾನು ಒತ್ತಿದ ಬಟನ್ ಬೇರೆಯವರಿಗೆ ಹೋಯ್ತು ಅಂತ …. ನನಗೂ ಅದೇ ಅನುಭವವಾಗಿ ಅಲ್ಲಿದ್ದ ಆಫೀಸರ್ ಗೆ ಹೇಳೋಣಾ ಅಂತ ಹೋದರೆ ಅವರು ಅಮ್ಮನನ್ನು ತಳ್ಳಿಬಿಟ್ಟರು. ಅಮ್ಮ ಕೊನೇ ಸಾರಿ ಓಟ್ ಮಾಡಿದ್ದು ಅದೇ- ರೂಮಿ ಹರೀಶ್
ನಾನು ಮೊದಲ ಬಾರಿಗೆ ಓಟು ನೀಡಿದಾಗ ನನಗೆ 19ವರ್ಷ. ಹೆಣ್ಣಾಗಿ ಓಟು ಕೊಟ್ಟಿದ್ದು. ಆಗ ನಾನು ಓಟು ಮಾಡಲ್ಲ, ಇದು ನನ್ನ ಐಡೆಂಟಿಟಿ ಅಲ್ಲ ಅಂತ ಕೂರಕ್ಕಾಗಲಿಲ್ಲ. ಆ ಕಾಲದಲ್ಲಿ ಯಾವ ಟ್ರಾನ್ಸ್ ಜೆಂಡರ್ ಜನಕ್ಕೆ ಕೂಡ ಪೌರ ಗುರುತಿಸುವಿಕೆ ಸಿಗುತ್ತಿದ್ದದ್ದು ಅವರ ಹಿಂದಿನ ಬೇಡದ ಜೆಂಡರ್ ನಲ್ಲಿ ಮಾತ್ರ. ಹಾಗೆ ನೋಡಿದರೆ ನಮ್ಮ ಟ್ರಾನ್ಸ್ ಜೆಂಡರ್ ಸಮುದಾಯಕ್ಕೆ ತಮ್ಮ ಮೂಲಭೂತ ಹಕ್ಕು ಚಲಾಯಿಸಿ ತಮ್ಮ ಪೌರತ್ವವನ್ನು ಖಚಿತವಾಗಿ ಹೇಳುವ ಅವಕಾಶ 2014ರ ವರೆಗೆ ಇರಲಿಲ್ಲ. ಅಂದರೆ 65 ವರ್ಷಗಳಷ್ಟು ನಮ್ಮ ಸಮುದಾಯದವರು ತಮ್ಮ ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದರು. ನಾನು 2019 ರಲ್ಲಿ ನಾನು ನನ್ನ ಅಮ್ಮ ಕೊನೆಯ ಬಾರಿ ಓಟು ಮಾಡಿದ್ದು.
ನಾನಾಗ ತೀರ್ಮಾನಿಸಿದ್ದೆ ನಾನಿನ್ನು ಹೆಣ್ಣಿನ ಯಾವ ಐಡೆಂಟಿಟಿಯನ್ನು ಎತ್ತಿ ಹಿಡಿಯುವುದಿಲ್ಲ ಎಂದು. ಆಗಲೂ ನಾನು ಹಠ ಮಾಡಿದ್ದೆ ಈಗ ಓಟು ಮಾಡಿದರೆ ನಾನು ಹೆಣ್ಣೆಂದು ಮತ್ತೆ ಹೇಳಿಕೊಳ್ಳಬೇಕಾಗುತ್ತದೆ ಎಂದು. ಅಗ ಅಮ್ಮ ಹೇಳಿದ್ದು ನಾನು ಮರೆಯಲಿಕ್ಕೇ ಸಾಧ್ಯವಿಲ್ಲ. “ಓಯ್ ಮಿಸ್ಟರ್ ನೀನೇನು…. ದೊಡ್ಡ ತರ್ಕಲಾಂಡಿನಾ? ನೀನು ಓಟು ಮಾಡದಿದ್ದರೆ ಮತ್ತಾರೋ ನಿನ್ನ ಓಟನ್ನು ಚಲಾಯಿಸುತ್ತಾರೆ. ಅದು ಬೇಕಾ ನಿನಗೆ? ಇಷ್ಟೆಲ್ಲಾ ರಾಜಕೀಯ ಮಾತಾಡೋ ನೀನು ಒಂದು ಗಂಟೆ ನಿನ್ನ ಲಿಂಗತ್ವವನ್ನು ಪಕ್ಕಕ್ಕಿಟ್ಟು ನಿನ್ನ ದೇಶಕ್ಕೆ ಏನು ಬೇಕು, ಅದನ್ನು ಚಲಾಯಿಸಲು ನೀನು ಯಾರನ್ನ ನಿನ್ನ ಪ್ರತಿನಿಧಿ ಎಂಬ ತೀರ್ಮಾನ ಮಾಡಕ್ಕಾಗಲ್ವ? ನಂಗೆ ಗೊತ್ತು ನಮ್ಮಿಬ್ಬರ ಒಂದು ಓಟಿನಿಂದ ದೇಶ ಏನೂ ಬದಲಾಗಲ್ಲ ಆದ್ರೆ ಆ ಒಂದು ಅವಕಾಶವನ್ನ ನಾವು ಮುಚ್ಚಬಾರ್ದು.. ನಾವು ಹೇಗೆ ಈ ದೇಶದಲ್ಲಿ ಯಾರೂ ಅವಕಾಶ ವಂಚಿತರಾಗಬಾರ್ದು ಅಂತ ಯೋಚಿಸುತ್ತೇವೋ ಹಾಗೇ ಅಲ್ವಾ? ಏನ್ ಮಿಸ್ಟರ್ ಬಾ, ನನ್ ಜೊತೆ ಬಂದು ಓಟ್ ಹಾಕಿ ಬರೋಣ” ಎಂದು ಬಲವಂತದಿಂದ ಎಳೆದುಕೊಂಡು ಹೋದರು.
ಅಲ್ಲಿ ನಡೆದಿದ್ದೇ ಬೇರೆ…. ಮೊದಲೆಲ್ಲಾ ಬೂತುಗಳಲ್ಲಿ ವಯಸ್ಸಾದವರಿಗೆ ಮೊದಲ ಆದ್ಯತೆ ಕೊಟ್ಟು ಗೌರವದಿಂದ ನಡೆದು ಕೊಳ್ಳುತ್ತಿದ್ದರು. ಆದ್ರೆ ಆ ಬಾರಿ ತುಂಬಾ ಅವಮಾನಕ್ಕೆ ಈಡಾದರು ನಮ್ಮಮ್ಮ. ಅವರು ಕ್ಯೂನಲ್ಲಿ ಮುಂದೆ ನಿಂತಿದ್ದರೂ ಗುಂಪಿನ ನೂಕು ನುಗ್ಗಲಿಂದ ಅವರು ಬೀಳುವಂತಾಯಿತು. ಅವರನ್ನು ಹೇಗೋ ಸಂಭಾಳಿಸಿ ಕರೆದುಕೊಂಡು ಮುಂದೆ ಹೋದೆ. ಓಟ್ ಮಾಡುವಾಗ ಅಮ್ಮ ಅಲ್ಲಿ ನಿಂತು 5-6 ಸಲ ಜೋರಾಗಿ ಕೂಗಿ ಹೇಳಿದರು ನಾನು ಒತ್ತಿದ ಬಟನ್ ಬೇರೆಯವರಿಗೆ ಹೋಯ್ತು ಅಂತ …. ನನಗೂ ಅದೇ ಅನುಭವವಾಗಿ ಅಲ್ಲಿದ್ದ ಆಫೀಸರ್ ಗೆ ಹೇಳೋಣಾ ಅಂತ ಹೋದರೆ ಅವರು ಅಮ್ಮನನ್ನು ತಳ್ಳಿಬಿಟ್ಟರು. ಅದೇ ಅಮ್ಮ ಕೊನೇ ಸಾರಿ ಓಟ್ ಮಾಡಿದ್ದು. ಮತ್ತೆ ತುಂಬಾ ನೊಂದು ಕೊಂಡರು.
ಶತಮಾನಗಳಿಂದ ಕಳಂಕ ಹೊತ್ತು ಬದುಕಿದವರು ನಮ್ಮ ಸಮುದಾಯದವರು. ಅವರಿಗೆ ಮತ ಚಲಾವಣೆಯ ಹಕ್ಕು ಸಿಕ್ಕಿರುವುದೇ ಇತ್ತೀಚೆಗೆ ಅಂದ್ರೆ ಒಂದು 10 ವರ್ಷಗಳಾಗಿರ ಬಹುದು. ಆದರೆ ನಮ್ಮ ಸಮುದಾಯಕ್ಕೆ ಮತ ಚಲಾವಣೆಯ ರಾಜಕೀಯ, ಹಕ್ಕು, ತಿಳಿದಿಲ್ಲ ಎಂದಲ್ಲ. ರಾಜಕೀಯ ಪಕ್ಷಗಳ ಭರವಸೆಗಳು ಯಾವುದೂ ಇದುವರೆಗೂ ನಡೆದಿಲ್ಲ. ಒಂದು ದಿನ ಬೆಳಗ್ಗೇಳುವಾಗ “ಹೋ ಈ ಟ್ರಾನ್ಸ್ ಜೆಂಡರ್ ಜನ ಇದ್ದಾರಲ್ಲ ಏನಾದ್ರೂ ಮಾಡ್ಬೇಕು ಪಾಪ” ಅಂತ ಅನಿಸಿ ಯಾವುದೋ ಯೋಜನೆಯ ಅಡಿಯಲ್ಲಿ ಹಿಂದೆ ಮುಂದೆ ನೋಡದೆ ಟ್ರಾನ್ಸ್ ಜೆಂಡರ್ ಸಮುದಾಯದಲ್ಲಿರುವ ಅನೇಕ ಅನನ್ಯತೆಗಳ ಅರಿವೂ ಇಲ್ಲದೆ ಬಾಯಿಗೆ ಬಂದ ಹಾಗೆ ಘೋಶಿಸಿ…. ನಂತರ ಅದರ ಕಡೆಗೆ ತಲೆ ಹಾಕದೆ ಬದುಕುವ ಮಂತ್ರಿ ಮಹೋದಯರೇ ಇರುವುದು.
ಈ ರಾಜಕೀಯ ಪಕ್ಷಗಳ ಮ್ಯಾನಿಫೆಸ್ಟೋ ಓದಕ್ಕೆ ಬಹಳ ಮಜ ಇರುತ್ತೆ. ಅದರಲ್ಲೂ ಬಿಜೆಪಿಯವರ ಮ್ಯಾನಿಫೆಸ್ಟೋ. ಅವರ ಭರವಸೆಗಳಿಗೆ ಒಂದು ಪ್ರಾಯೋಗಿಕತೆಯೇ ಇರುವುದಿಲ್ಲ. ಅಚ್ಛೆ ದಿನ್, ಭೇಟಿ ಪಡಾವ್ (ಅವರೇ ಹೇಳಿದಂತೆ), ಬಾಂಡುಗಳು….ರಾಮಮಂದಿರದ ಕಥೆಯಂತೂ ಕೇಳಲೇ ಬೇಡಿ.
2018- 19 ರಲ್ಲಿ ನಮ್ಮ ಟ್ರಾನ್ಸ್ ಜೆಂಡರ್ ಸಮುದಾಯವನ್ನು ಸಮಾಲೋಚಿಸದೆಯೇ ಕಾನೂನು ತಂದು ಅದಕ್ಕೆ ನಿಯಮಗಳನ್ನು ಅರ್ಜೆಂಟ್ ಅರ್ಜೆಂಟಿನಲ್ಲಿ ಕೋವಿಡ್ ನ ಸಮಯದಲ್ಲಿ ಘೋಶಿಸಿ ಬಿಟ್ಟರು. ಅಂದು ಪಾರ್ಲಿಮೆಂಟಿನಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಆ ಮಂತ್ರಿ ನಮ್ಮನ್ನು “ಉಭಯಲಿಂಗಿ” ಎಂದು ಕರೆದು ನಗುತ್ತಿದ್ದ….. ಆತ ಬಿಜೆಪಿಯವ. ಅವನ ಜೊತೆಗೆ ಇತರ ಕೆಲವು ಬಿಜೆಪಿ ಮಂತ್ರಿಗಳು ಸೇರಿ ನಗುತ್ತಿದ್ದರು. ಉಭಯ ಲಿಂಗಿ ಎಂದರೇನು?…. ಅಂತರ ಲಿಂಗ ವೈವಿಧ್ಯತೆ ಇರುವ ಜನರು ಬೇರೆ… ಅಂದರೆ ಹುಟ್ಟಿನಲ್ಲಿ ಸಮಾಜ ಹೇಳುವ ಪ್ರಕಾರದ ದೇಹಗಳಿಲ್ಲದ ಜನ. ನಮ್ಮ ಸಮುದಾಯದಲ್ಲಿ ಅನೇಕ ಅನನ್ಯತೆಗಳು ಇರುವ ಒಂದು ಗುಂಪು. ಅವರ ಸಂಘರ್ಷಗಳೇ ಬೇರೆ. ಎನಿವೇ..
ಇತ್ತೀಚೆಗೆ ಕಾಂಗ್ರೆಸ್ ಅವರ ಮ್ಯಾನಿಫೆಸ್ಟೋ ನೋಡಿದಾಗ ಸ್ವಲ್ಪ ಓಕೆ ಅನಿಸಿತು. ನಮ್ಮ ಸಮುದಾಯಕ್ಕೆ ಮದುವೆಯ ಹಕ್ಕನ್ನು ನಿಷೇಧಿಸಿದಾಗ ಇವರು ಸಾಕಷ್ಟು ಯೋಚಿಸಿದ್ದಾರೆಂದು ತಿಳಿಯುತ್ತದೆ. ಇವರು ನಮಗೆ ಪೌರ ಸಂಬಂಧದ ಕರಾರುಗಳನ್ನು ಮಾಡಿಕೊಂಡು ಬದುಕುವ ಅವಕಾಶದ ಬಗ್ಗೆ ಮಾತನಾಡಿದ್ದಾರೆ. ನ್ಯಾಯದ ಬಗ್ಗೆ ಚೆನ್ನಾಗಿ ಯೋಚಿಸಿದ್ದಾರೆ…. ಮಹಿಳೆಯರು, ರೈತರು, ಅಂಚಿಗೆ ತಳ್ಳಲ್ಪಟ್ಟವರು. ಕಾಂಟ್ರಾಕ್ಟ್ ವ್ಯವಸ್ಥೆಯನ್ನು ತೆಗೆಯುವ ಭರವಸೆ ದೊಡ್ಡ ವಿಷಯವೇ. ಆದರೇ ಚುನಾಯಿತರಾದ ಮೇಲೆ ಮರೆತು ಬಿಡಬಾರದು.
ಆದ್ರೂ ನನಗೆ ಒಳಮನಸ್ಸಿನಿಂದ ನಂಬಿಕೆ ಅಂತ ಇರುವುದು ಮಲ್ಲಿಕಾರ್ಜುನ ಖರ್ಗೆಯವರ ಮೇಲೆ. ಅವರ ರಾಜಕಾರಣದ ಘನತೆ ನನಗೆ ಯಾವಾಗಲೂ ಅಚ್ಚು ಮೆಚ್ಚು. ಹಾಗೇ ಅವರ ಮಾತು ಮತ್ತು ಕೆಲಸ. ನಾನು ರಾಜಕಾರಣಿಗಳೆಂದರೆ ಒಂದಷ್ಟು ದೂರದಲ್ಲೇ ಇರ್ತೀನಿ. ಆದ್ರೇ, ಖರ್ಗೆ ಸರ್ ಗೆ ಜನರ ಸಮಸ್ಯೆಗಳು ಬಹಳ ಬೇಗ ಅರ್ಥವಾಗುತ್ತವೆ.. ಅವರು ಅವುಗಳನ್ನು ನ್ಯಾಯ ಸಮ್ಮತವಾಗಿ ನೋಡ್ತಾರೆ. ರಾಜಕೀಯ ಪಕ್ಷಗಳು ಯಾವಾಗ ಜನರಿಗೆ ಹತ್ತಿರವಾಗಿ ತಮ್ಮ ಸೆಲೆಬ್ರಿಟಿ ಸ್ಟೇಟಸ್ ಬಿಡ್ತಾರೋ ಆಗಲೇ ಜನರಿಗೆ ನಂಬಿಕೆ ಬರುವುದು. ರಾಜಕಾರಣಿಗಳಾದ ಕೂಡಲೇ ಅವರು ನಮಗಿಂತ ಬೇರೆಯಾದರೆ ಅದು ಅಸಮಾನತೆಯೇ ಸರಿ.
ರೂಮಿ ಹರೀಶ್
ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು ಕಳೆದ ಸುಮಾರು 2೫ ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ ಮತ್ತು ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.