ಕನ್ನಡಿಗರಿಗೆ ಅನ್ಯಾಯ; ಬಿಇಎಲ್ ನಲ್ಲಿ ಟ್ರೈನಿ ಇಂಜಿನಿಯರ್‌ ನೇಮಕಾತಿ ಮರುಪರಿಶೀಲನೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಗ್ರಹ

Most read

ಬೆಂಗಳೂರು: ಸ್ಥಳೀಯ ಕನ್ನಡಿಗರ ಹಕ್ಕುಗಳನ್ನು ಪೂರ್ಣವಾಗಿ ಅಲಕ್ಷಿಸಿರುವ ಬಿಇಎಲ್ ಸಂಸ್ಥೆಯ ಟ್ರೈನಿ ಇಂಜಿನಿಯರುಗಳ ನೇಮಕಾತಿ ಪ್ರಕ್ರಿಯೆಯನ್ನು ಕೂಡಲೇ ಮರು ಪರಿಶೀಲಿಸಿ ಕನ್ನಡಿಗರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.

ಈ ಕುರಿತಂತೆ ಕೇಂದ್ರ ಸಚಿವರಿಗೆ ಪತ್ರ ಬರೆದಿರುವ ಬಿಳಿಮಲೆ ಅವರು, ಬಿಇಎಲ್ ಸಂಸ್ಥೆಯು ಇತ್ತೀಚೆಗೆ ತನ್ನ ಬೆಂಗಳೂರು ಕೇಂದ್ರಕ್ಕೆ ಟ್ರೈನಿ ಇಂಜಿನಿಯರುಗಳ ನೇಮಕಾತಿಗೆ ಪ್ರಕಟಣೆಯನ್ನು ಹೊರಡಿಸಿದ್ದು, ಈ ನೇಮಕಾತಿ ಅಧಿಸೂಚನೆ ಕೇವಲ ಆಂಗ್ಲ ಮತ್ತು ಹಿಂದಿ ಭಾಷೆಗಳಲ್ಲಿರುತ್ತದೆ. ನೇಮಕಾತಿ ಅಧಿಸೂಚನೆಯಲ್ಲಿ ಸ್ಥಳೀಯ ಕನ್ನಡಿಗರಿಗೆ ಯಾವ ಅವಕಾಶವೂ ದೊರೆಯದ ರೀತಿಯಲ್ಲಿ ಈ ಅಧಿಸೂಚನೆ ಸಿದ್ಧಗೊಂಡಿರುತ್ತದೆ ಎಂದು ಹೇಳಿದ್ದಾರೆ.

ಸಂವಿಧಾನದ ಒಕ್ಕೂಟ ತತ್ತ್ವವನ್ನು ಈ ಅಧಿಸೂಚನೆ ಗಾಳಿಗೆ ತೂರಿದೆ ಎಂದು ಅಪಾದಿಸಿರುವ ಬಿಳಿಮಲೆ, ಬಿಇಎಲ್ ಸಂಸ್ಥೆಗೆ ಬೆಂಗಳೂರು ಮುಂಚಿನಿಂದಲೂ ಪ್ರಮುಖ ಚಟುವಟಿಕೆಯ ಕೇಂದ್ರವಾಗಿದ್ದು, ಸ್ಥಳೀಯ ಕನ್ನಡಿಗರು ಸಂಸ್ಥೆಯು ಈ ಮಟ್ಟಕ್ಕೆ ಬೆಳೆಯಲು ಪ್ರಮುಖ ಕಾರಣಕರ್ತರಾಗಿದ್ದಾರೆ ಎನ್ನುವುದನ್ನು ಗಮನಿಸಬೇಕಾಗುತ್ತದೆ ಎಂದಿದ್ದಾರೆ. ಹಾಗಾಗಿ ಸಮತೋಲಿತ ನೇಮಕಾತಿ ಪ್ರಕ್ರಿಯೆ ರಾಷ್ಟ್ರೀಯ ಐಕ್ಯತೆಯನ್ನು ಪ್ರೋತ್ಸಾಹಿಸುತ್ತದೆ ಎಂದಿರುವ ಅವರು, ರಾಜ್ಯಗಳ ನಡುವಿನ ಬಾಂಧವ್ಯವನ್ನು ಅದು ವೃದ್ಧಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದ್ದಾರೆ.

ಇಲಾಖೆಯ ಅಧೀನದಲ್ಲಿರುವ ಎಲ್ಲ ಸಾರ್ವಜನಿಕ ಉದ್ದಿಮೆಗಳಿಗೆ ತಮ್ಮ ನೇಮಕಾತಿ ಪ್ರಕ್ರಿಯೆಗಳಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆಯನ್ನು ನೀಡಬೇಕೆನ್ನುವ ನಿರ್ದೇಶನವನ್ನು ಹೊರಡಿಸಲು ರಕ್ಷಣಾ ಸಚಿವರನ್ನು ಆಗ್ರಹಿಸಿರುವ ಬಿಳಿಮಲೆ, ಇಂತಹ ಆಶಯವು ಸಾಕಾರವಾದಲ್ಲಿ ಮಾತ್ರ ನಿಜವಾದ ನ್ಯಾಯದಾನ ಸಾಧ್ಯ, ಸಾಂವಿಧಾನಿಕ ತತ್ತ್ವಗಳಿಗೆ ಗೌರವ ದೊರಕಲು ಸಾಧ್ಯ ಎಂದು ಹೇಳಿದ್ದಾರೆ.

More articles

Latest article