ಚೆನ್ನೈನ ಮರೀನಾ ಬೀಚ್‌ನಲ್ಲಿ ಏರ್ ಶೋ ವೇಳೆ ಬಿಸಿಲಿನ ತಾಪದಿಂದ ಕನಿಷ್ಠ 5 ಮಂದಿ ಮೃತಪಟ್ಟಿದ್ದ ಪತ್ರಿ ವ್ಯಕ್ತಿಯ ಕುಟುಂಬಕ್ಕೆ ತಲಾ ಐದು ಕೋಟಿ ಪರಿಹಾರವನ್ನು ತಮಿಳುನಾಡು ಸರ್ಕಾರ ಘೋಷಿಸಿದೆ.
ಭಾರತೀಯ ವಾಯುಪಡೆಯ 92 ವರ್ಷಗಳನ್ನು ಪೂರ್ಣಗೊಳಿಸಿದ ಸಂಭ್ರಮಾಚರಣೆಗಾಗಿ ಚೆನ್ನೈನ ಮರೀನಾ ಬೀಚ್‌ನಲ್ಲಿ ಏರ್ ಶೋ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ 72 ವಿಮಾನಗಳು ವಿವಿಧ ಸಾಹಸಗಳನ್ನು ಪ್ರದರ್ಶಿಸಿದವು. ಈ ಏರ್ ಶೋ ವೀಕ್ಷಿಸಲು ಬರೋಬ್ಬರಿ 15 ಲಕ್ಷಕ್ಕೂ ಹೆಚ್ಚು ಮಂದಿ ಸೇರಿದ್ದರು. ಈ ವೇಳೆ ಬಿಸಿಲಿನ ತಾಪದಿಂದ ಕನಿಷ್ಠ 5 ಮಂದಿ ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.
ಮೃತರನ್ನು ಜಾನ್ (56), ಕಾರ್ತಿಕೇಯನ್, ಶ್ರೀನಿವಾಸನ್ ಮತ್ತು ದಿನೇಶ್ ಕುಮಾರ್ ಎಂದು ಗುರುತಿಸಲಾಗಿದೆ. “ಇವರೆಲ್ಲ ಏರ್ ಶೋ ವೀಕ್ಷಿಸಲು ಬಂದಿದ್ದರು, ಅಲ್ಲಿ ಹೆಚ್ಚಿನ ಜನಸಮೂಹ ಸೇರಿದ್ದರಿಂದ ವಿಪರೀತ ಸೆಖೆಯ ನಡುವೆ ಉಸಿರುಗಟ್ಟುವಿಕೆ, ಒತ್ತಡದಿಂದ ಅಸ್ವಸ್ಥರಾಗಿದ್ದರು. ಇದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ನಾಲ್ವರು ಸಾವನ್ನಪ್ಪಿದ್ದಾರೆ” ಎಂದು ಚೆನ್ನೈನ ಸರ್ಕಾರಿ ಆಸ್ಪತ್ರೆಯ ಅಟೆಂಡೆಂಟ್ವೊಬ್ಬರು ಹೇಳಿದ್ದಾರೆ.