“ಅರ್ಬನ್ ಕತೆಗಳ ಬೆನ್ನು ಹತ್ತಿ”

Most read

ಬದುಕು ಬದಲಾಗುವ ಪರಿಯು ಬದುಕಿಗಷ್ಟೇ ಗೊತ್ತು.

ಅದು ನಾವು ಶಾಲೆಗೆ ಹೋಗುತ್ತಿದ್ದ ದಿನಗಳು. ನಮ್ಮೂರಿನಲ್ಲೊಬ್ಬ ಹುಡುಗನಿದ್ದ. ಅದೇನು ಕಾರಣವೋ ಗೊತ್ತಿಲ್ಲ. ನಮ್ಮೆಲ್ಲರಿಗೆ ಹೋಲಿಸಿದರೆ ಅವನು ಬಹಳ ಊರೂರು ಸುತ್ತುತ್ತಿದ್ದ. ಹೀಗಿರುವಾಗಲೊಮ್ಮೆ ಶಾಲೆಯ ರಜಾದಿನಗಳನ್ನು ಮುಗಿಸಿ ಮರಳಿ ಬಂದಾಗ, ನಾನು ಈ ಊರಿನಿಂದ ಬಂದೆ ಎಂದು ಖುಷಿಯಿಂದ ಹೇಳಿಕೊಂಡ. ಸದ್ಯದ ಅನುಕೂಲಕ್ಕೆ ಊರಿನ ಹೆಸರನ್ನು ಕೃಷ್ಣಾಪುರ ಎಂದಿಟ್ಟುಕೊಳ್ಳಿ. ಅಲ್ಲ… ಆ ಹೆದ್ದಾರಿಯಲ್ಲಿ ನಾವು ಅದೆಷ್ಟು ಬಾರಿ ಹೋಗಿಲ್ಲ? ಅಂಥದ್ದೊಂದು ಊರೇ ಇಲ್ಲ, ಇವನು ಕತೆ ಕಟ್ಟುತ್ತಿದ್ದಾನೆ ಎಂದು ನಾವು ಹುಡುಗರು ಅವನೊಂದಿಗೆ ಸಾಕಷ್ಟು ವಾದ ಮಾಡಿದ್ದೆವು. ಅದು ಹಾಗಲ್ಲವೇ ಅಲ್ಲ, ಕೃಷ್ಣಾಪುರ ಅನ್ನೋ ಊರು ಖಂಡಿತ ಇದೆ… ಇದು ಗೊತ್ತಿಲ್ಲದ ನೀವೇ ಮುಠ್ಠಾಳರು ಎಂದು ಅವನೂ ಹಟ ಹಿಡಿದ. ಕೊನೆಗೂ ಈ ವಾದವು ಯಾವ ತಾರ್ಕಿಕ ಅಂತ್ಯವನ್ನೂ ಕಾಣದೆ ತನ್ನಷ್ಟಕ್ಕೆ ಬಿದ್ದುಹೋಯಿತು.

ಇದಾದ ಒಂದೆರಡು ವರ್ಷಗಳ ನಂತರ ಅವನು ಹೇಳುತ್ತಿದ್ದ ಆ ಕೃಷ್ಣಾಪುರ ಎಂಬ ಊರು ನಿಜಕ್ಕೂ ಇದೆ ಎಂಬುದು ನನಗೆ ಗೊತ್ತಾಯಿತು. ಆಗ ನನಗಾದ ಮುಜುಗರ ಅಷ್ಟಿಷ್ಟಲ್ಲ. ನಮ್ಮದೇ ಊರಿನ ಅದೆಷ್ಟು ಭೌಗೋಳಿಕ ವಿವರಗಳು ನಮಗೆ ಗೊತ್ತಿಲ್ಲ; ಆದರೂ ನಮಗಿರುವ ಸೀಮಿತ ಜ್ಞಾನದ ಬಗ್ಗೆ ನಾವು ಅದೆಂಥಾ ಭಂಡ ಆತ್ಮವಿಶ್ವಾಸವನ್ನು ಇಟ್ಟುಕೊಂಡಿರುತ್ತೇವೆ ಅಂತೆಲ್ಲ ಅನಿಸಿ ಅಂದು ತಲೆ ಚಚ್ಚಿಕೊಳ್ಳುವಂತಾಗಿತ್ತು.

ಅಷ್ಟಕ್ಕೂ ಈ ಪೀಠಿಕೆ ಯಾಕೆಂದರೆ ಇಂತಹ ಕೂಪಮಂಡೂಕಗಳು ಏಕಾಏಕಿ ಮಹಾನಗರದಂತಹ ಮಹಾಸಾಗರಕ್ಕೆ ಬಂದು ಬಿದ್ದುಬಿಟ್ಟರೆ ಅದ್ಹೇಗಿರಬಹುದು ಎಂಬುದನ್ನು ನೀವೇ ಊಹಿಸಿಕೊಳ್ಳಿ ಎಂದು. ನೀವು ದೆಹಲಿಗೆ ಬಂದು ಎಷ್ಟು ವರ್ಷವಾಯಿತು ಎಂದು ನನ್ನ ಉತ್ತರ ಭಾರತದ ಸಹೋದ್ಯೋಗಿಯೊಬ್ಬರು ಕೇಳಿದಾಗ, ಸುಮಾರು ಹತ್ತು ವರ್ಷಕ್ಕೂ ಮೇಲಾಯಿತು ಎಂದು ನಾನು ಉತ್ತರಿಸಿದ್ದೆ. ಹಾಗಾದರೆ ನೀವು ಇಲ್ಲಿಯವರೇ ಆಗಿಬಿಟ್ಟಿರಿ ಬಿಡಿ ಎಂದು ನಕ್ಕಿದ್ದರು ಅವರು. ಅದು ನಿಜಕ್ಕೂ ಹಾಗಲ್ಲ ಎಂಬುದು ಮಾತ್ರ ಬೇರೆ ಮಾತು. ಅದೇನೇ ಇರಲಿ. ಬಹುತೇಕರಿಗೆ ಬದುಕಿನ ಎಲ್ಲಾ ಮೊದಲುಗಳಂತೆ ಮಹಾನಗರದ ಬದುಕಿನ ಮೊದಲು ಕೂಡ ಸ್ವಾರಸ್ಯಕರವಾಗಿಯೇ ಇರುತ್ತವೆ. ವಿಶೇಷವಾಗಿ ನಮ್ಮಂತೆ ಗ್ರಾಮೀಣ ಪ್ರದೇಶಗಳಿಂದ ಬಂದವರಿಗೆ.

ಚಿತ್ರ : MB

ಒಮ್ಮೆ ಶಾರೂಖ್ ಖಾನ್ ಮೊಟ್ಟಮೊದಲು ನ್ಯೂಯಾರ್ಕ್ ಮಹಾನಗರವನ್ನು ಕಂಡಾಗ ಅಲ್ಲಿಯ ವೈಭವವನ್ನು, ಜಗಮಗಿಸುವ ಗಗನಚುಂಬಿ ಕಟ್ಟಡಗಳನ್ನು ಕಂಡು ದಂಗಾಗಿದ್ದರಂತೆ. ಇದು ಬಹುತೇಕರ ಅನುಭವವೂ ಹೌದು. ಸ್ವತಃ ನಡೆದಾಡುವ ಸಂದರ್ಭಗಳನ್ನು ಹೊರತುಪಡಿಸಿ ರಸ್ತೆಗಳ ಬಗ್ಗೆ ಅಷ್ಟಾಗಿ ಗಮನಹರಿಸದ ನಾನು ದೆಹಲಿ ಮತ್ತು ಹರಿಯಾಣಾದ ಬಸ್ಸು-ಆಟೋಗಳಲ್ಲಿ ದಾರಿತಪ್ಪಿದ್ದಿದೆ. ಬಹುಷಃ ಜಿ.ಪಿ.ಎಸ್ ಎಂಬುದು ಆ ದಿನಗಳಲ್ಲಿ ಇನ್ನೂ ಬಂದಿರಲಿಲ್ಲ. ಒಂದು ಪಕ್ಷ ಹೊಸದಾಗಿ ಬಂದಿದ್ದರೂ ನಿತ್ಯದ ಬಳಕೆಯ ನಿಟ್ಟಿನಲ್ಲಿ ಅಷ್ಟಾಗಿ ಜನಪ್ರಿಯವಾಗಿರಲಿಲ್ಲ. ಚಂಡೀಗಢದಂತಹ ಶಹರಗಳಲ್ಲಿ ಪ್ರತಿಯೊಂದು ಸೆಕ್ಟರ್ ಕೂಡ ಸುಮಾರಾಗಿ ಒಂದೇ ರೀತಿ ಕಾಣುವುದರಿಂದ ಒಂದೇ ಏರಿಯಾದಲ್ಲಿ ಅಲೆಯುತ್ತಿದ್ದೇವೆ ಎಂಬ ಭ್ರಮೆಗಳು ಮೂಡಿದ್ದು ಕೂಡ ಇದೆ.

ಕೆಲವೊಮ್ಮೆ ಇದು ತೀರಾ ತಮಾಷೆಯ ಅಥವಾ ಫಜೀತಿಯ ಸಂದರ್ಭಗಳಿಗೂ ನಮ್ಮನ್ನು ತಳ್ಳುವುದುಂಟು. ಉದಾಹರಣೆಗೆ ಇಲ್ಲಿಗೆ ಬಂದ ಹೊಸತರಲ್ಲಿ, ಕುದಿಯುವ ಬಾಣಲೆಯಂತಹ ಗುರ್ಗಾಂವ್ ನಗರಕ್ಕೆ ತಲುಪಿದ್ದ ನಾನು ಮೊಟ್ಟಮೊದಲ ಬಾರಿಗೆ ಇಲ್ಲಿಯ ರಾಕ್ಷಸ ಚಳಿಗೆ ಮೈಯೊಡ್ಡಿ ಕಂಗಾಲಾಗಿದ್ದೆ. ಈ ಮೈಕೊರೆಯುವ ಚಳಿಯಲ್ಲಿ ದಿನನಿತ್ಯ ಪ್ರಯಾಣಿಸಬೇಕಾದ ಅನಿವಾರ್ಯತೆಯೂ ಇದ್ದಿದ್ದರಿಂದ ಅವು ಬಹಳ ಸವಾಲಿನ ದಿನಗಳಾಗಿದ್ದವು. ಒಂದು ಜಬರ್ದಸ್ತಾದ ಜಾಕೆಟ್ ತಗಳ್ಳಿ, ಎಲ್ಲವೂ ಸರಿಹೋಗುತ್ತೆ ಎಂದು ಸ್ಥಳೀಯ ಮಿತ್ರರೊಬ್ಬರು ಸಲಹೆ ನೀಡಿದರು. ಹೆಚ್ಚು ತಡಮಾಡಲು ಅವಕಾಶವೂ ಇಲ್ಲದ ಕಾರಣ ನಾನು ಈ ಸಲಹೆಯನ್ನು ತಕ್ಷಣ ಒಪ್ಪಿಕೊಂಡೆ.

ಉಚಿತ ಸಲಹೆಯನ್ನು ಪಡೆದುಕೊಂಡ ನಂತರದ ಹೆಜ್ಜೆ ಜಾಕೆಟ್ ಖರೀದಿಯದ್ದು. ಇದರಂತೆ ಜಬರ್ದಸ್ತಾದ ಚಳಿಗೆಂದು ಜಬರ್ದಸ್ತಾದ ಜಾಕೆಟ್ ಖರೀದಿಸಿಯೂ ಆಯಿತು. ಆದರೆ ಆ ಜಾಕೆಟ್ ಅದೆಷ್ಟು ದೊಡ್ಡದಿತ್ತೆಂದರೆ ನಾನು ನೇರವಾಗಿ ಸಿಯಾಚಿನ್ ನಿಂದ ಅಥವಾ ಅಂಟಾರ್ಟಿಕಾ ಖಂಡದಿಂದ ಬಂದವನಂತೆ ಕಾಣುತ್ತಿದ್ದೆ. ನನ್ನ ಎತ್ತರಕ್ಕೆ ಮತ್ತು ಜಾಕೆಟ್ಟಿನ ದೈತ್ಯ ಗಾತ್ರಕ್ಕೆ ನಾನು ಎಲ್ಲಾದರೂ ಸುಮ್ಮನೆ ನಿಂತರೆ, ಹೊಲಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಬೆದರುಗೊಂಬೆಯಂತೆಯೇ ಕಾಣುತ್ತಿದ್ದೆನಂತೆ. ಇಂತಹ ವಿಚಿತ್ರ ಫಜೀತಿಗಳಿಂದಾಗಿ ಕೊನೆಗೆ ಸದರಿ ಜಾಕೆಟ್ ಆಫೀಸಿಗೆ ತೊಡಲು ಯೋಗ್ಯವಲ್ಲ ಎಂದು ತೀರ್ಮಾನವಾಗಿ ಅದು ಮನೆಗಷ್ಟೇ ಸೀಮಿತವಾಯಿತು. ಮೇಲಾಗಿ ಕಂಬಳಿಯನ್ನು ಹೊದ್ದುಕೊಳ್ಳುವ ಬದಲು, ಸುತ್ತಿಕೊಂಡೇ ಓಡಾಡುತ್ತಿದ್ದಾನೆ ಎಂಬ ಟೀಕೆಗೆ ಇದರಿಂದಾಗಿ ನಾನು ಗುರಿಯಾಗಬೇಕಾಯಿತು. ಕ್ರಮೇಣ “ಯೇತಿ” ಎಂಬ ಅಡ್ಡ ಹೆಸರನ್ನು ಕೂಡ ಅದು ಪಡೆದುಕೊಂಡಿತು.

ಸಾಮಾನ್ಯವಾಗಿ ಮಹಾನಗರಗಳಿಗೆ ಬಂದುಹೋಗುವ ಹಲವು ಹೊಸಬರ ಮಾತುಗಳಿಗೆ, ಸವಾಲುಗಳಿಗೆ ನಾನು ಸದಾ ಕಿವಿಯಾಗುವವನು. ಇವೆಲ್ಲದರ ಹೊರತಾಗಿಯೂ ಮಹಾನಗರಗಳು ಇಲ್ಲಿಗೆ ಬರುವ ಹೊಸಬರಿಗೆ ಸಾಕಷ್ಟು ಕಲಿಸುತ್ತವೆ ಎಂಬ ಮಾತಿನಲ್ಲಿ ಸಂದೇಹವಿಲ್ಲ. ನಾನು ಇತ್ತೀಚೆಗೆ ಭೇಟಿಯಾಗಿದ್ದ ಹಿರಿಯ ಪೋಲೀಸ್ ಅಧಿಕಾರಿಯೊಬ್ಬರು ತಾವು ದೆಹಲಿಗೆ ವರ್ಗವಾದ ನಂತರ ಕಲಿತ ಸಾಕಷ್ಟು ಸಂಗತಿಗಳು, ತೆರೆದುಕೊಂಡ ಹಲವಾರು ಅವಕಾಶಗಳ ಬಗ್ಗೆ ಭಾವುಕರಾಗಿ ಮಾತನಾಡಿದ್ದರು. ತಮ್ಮ ಹುಟ್ಟೂರಿನಿಂದ ಸಾಕಷ್ಟು ದೂರ ಬಂದಿದ್ದರೂ, ಮುಂದಿನ ವರ್ಗಾವಣೆಗೆಂದು ದೆಹಲಿಯನ್ನು ಬಿಡುವಾಗ ಅವರಿಗೆ ಬಹಳ ಬೇಜಾರೇ ಆಗಿತ್ತಂತೆ. ಹೀಗೆ ಕಲಿಯುವ ಹಂಬಲವಿದ್ದವರಿಗೆ ಮಹಾನಗರವು ಬಹಳಷ್ಟನ್ನು ಕಲಿಸುತ್ತದೆ ಕೂಡ. ಕನಸುಗಾರರಿಗೆ ಇದು ತಕ್ಕದಾದ ವೇದಿಕೆ.

ಚಿತ್ರ : ಹಿಂದುಸ್ತಾನ್‌ ಟೈಮ್ಸ್

ಸದ್ಯ ನಮ್ಮ ಕಣ್ಣಮುಂದಿರುವ ಮಹಾನಗರಗಳು ಮಹಾನಗರಗಳಾಗುವ ಮುನ್ನ ಹೇಗಿದ್ದವು ಎಂಬುದನ್ನು ಕೂಡ ಕಣ್ಣಾರೆ ಕಂಡಿರುವ ಒಂದು ಪೀಳಿಗೆಯೂ ನಮ್ಮ ಮುಂದಿದೆ. ಈ ಮಂದಿ ಇವೆಲ್ಲಾ ಬೆಳವಣಿಗೆಗಳನ್ನು ತಮ್ಮ ಸೀಮಿತ ಜೀವನಾನುಭವ ಮತ್ತು ಗ್ರಹಿಕೆಯಲ್ಲಿ ಕಂಡಿರುವ ಪ್ರತ್ಯಕ್ಷದರ್ಶಿಗಳೂ ಹೌದು. ಉದಾಹರಣೆಗೆ ಗುರ್ಗಾಂವ್ ಎಂಬ ಬಂಜರುಭೂಮಿ ಹೇಗೆ ಭಾರತದ ಮಿಲೇನಿಯಮ್ ಮಹಾನಗರಿಯಾಗಿ ಬೆಳೆಯಿತು ಎಂಬುದನ್ನು ಕೆದಕುತ್ತಾ ಹೋದರೆ ಹಲವು ಸ್ವಾರಸ್ಯಕರ ಕತೆಗಳು ನಮಗೆ ಸಿಗುತ್ತವೆ. ಇದರಲ್ಲಿ ಬಹು ಜನಪ್ರಿಯವಾದ ಕತೆಯೊಂದು ಹೀಗೆ ಸಾಗುತ್ತದೆ: “…ಹೀಗೆ ತಮ್ಮ ಜಮೀನುಗಳನ್ನು ರಿಯಲ್ ಎಸ್ಟೇಟ್ ಕುಳಗಳಿಗೆ ಮಾರಿದ ಕೆಲ ಕೃಷಿಕರು ಏಕಾಏಕಿ ಶ್ರೀಮಂತರಾಗಿ ಬಿಟ್ಟಿದ್ದರು. ಅಷ್ಟು ದುಡ್ಡನ್ನು ಆವತ್ತಿನವರೆಗೂ ಕಾಣದಿದ್ದ ಅವರ ಸ್ಥಿತಿಯು ಹೆಂಡ ಕುಡಿದ ಮಂಗನಂತಾಗಿತ್ತು. ದುಂದುವೆಚ್ಚ, ಶೋಕಿ ಮಿತಿ ಮೀರಿತು. ಕೆಲವರಂತೂ ಲಕ್ಷಾಂತರ ರೂಪಾಯಿ ಮೌಲ್ಯದ ಕಾರುಗಳ ಢಿಕ್ಕಿಗಳಲ್ಲೂ ಒಣಗಿದ ಹುಲ್ಲು, ಗೊಬ್ಬರ, ಸೆಗಣಿಯ ಬೆರಣಿಗಳನ್ನು ತುರುಕಿ ನಿತ್ಯದ ದಿನಚರಿಗಳಿಗಾಗಿ ತಿರುಗಾಡುತ್ತಿದ್ದರು. ಟ್ರ್ಯಾಕ್ಟರ್ ಮತ್ತು ಐಷಾರಾಮಿ ಕಾರುಗಳ ನಡುವಿನ ವ್ಯತ್ಯಾಸವೂ ಅವರಿಗೆ ತಿಳಿದಿರಲಿಲ್ಲ”! ಈ ಕತೆಗಳು ಒಂದಿಷ್ಟು ಸತ್ಯ ಮತ್ತು ತಕ್ಕಮಟ್ಟಿನ ಉತ್ಪ್ರೇಕ್ಷೆಗಳಿರುವ ಒಂದು ಹದವಾದ ಮಿಶ್ರಣ ಎಂದೇ ಇಟ್ಟುಕೊಳ್ಳೋಣ. ಹಾಗಂತ ಕತೆಗಳಲ್ಲಿ ನಾವು ಸಾಮಾನ್ಯವಾಗಿ ಬಯಸುವ ನವರಸಗಳೂ ಇಲ್ಲಿ ಸಿಗುತ್ತವೆ ಎಂದರೆ ತಪ್ಪಾಗಲಿಕ್ಕಿಲ್ಲ.

ಇವೆಲ್ಲಾ ಕಾರಣಗಳಿಂದಲೇ ಮಹಾನಗರಗಳಲ್ಲೇನು ಮಹಾ ಕತೆಗಳಿರುತ್ತವೆ ಎಂಬ ಮಾತನ್ನು ನಾನು ಸಲೀಸಾಗಿ ತಳ್ಳಿಹಾಕುತ್ತೇನೆ. ಇಲ್ಲಿಯ ಟ್ರಾಫಿಕ್ ಜಾಮ್ ಗಳು, ಕಂಡರೂ ಕಾಣಿಸದಂತಿರುವ ಕತ್ತಲಿನ ಲೋಕ, ಪಬ್ಬುಗಳ ಮಬ್ಬು ಬೆಳಕಿನಲ್ಲಿ ಅರಳಿಕೊಳ್ಳುವ ಲೋಕ, ಎಡೆಬಿಡದ ಭರಾಟೆಯಲ್ಲಿ ಅನಾಮಿಕರಾಗಿ ಕಳೆದುಹೋಗುವ ವ್ಯಕ್ತಿ-ಸಂಗತಿಗಳು, ಇಲ್ಲಿಯ ನಂಬಿಕೆ-ಮೂಢನಂಬಿಕೆಗಳು, ಕಾಸ್ಮೋಪಾಲಿಟನ್ ಮಂದಿಯ ಕನಸುಗಳು-ಬೇಗುದಿಗಳು… ಹೀಗೆ ಒಂದೇ ಎರಡೇ? ಎಲ್ಲೆಡೆ ಇರುವಂತೆ ಇಲ್ಲೂ ಅಸಂಖ್ಯಾತ ಕತೆಗಳಿವೆ. ಉಳಿದ ಭಾಷೆಗಳಲ್ಲಿ ಹಾಗಿರಲಿ. ಕೇವಲ ಕನ್ನಡದಲ್ಲೇ ಹೊಸ ತಲೆಮಾರಿನ ಹಲವಾರು ಮಂದಿ ಅದ್ಭುತ ಅನ್ನಿಸುವಂತಹ ನಗರ ಕೇಂದ್ರಿತ ಕತೆಗಳನ್ನು ಬರೆದಿದ್ದಾರೆ.

ಈಜಿಪ್ಟಿನ ಪಿರಾಮಿಡ್ಡುಗಳ ಬಗ್ಗೆ ಆಸಕ್ತನಾಗಿದ್ದು, ಈ ಬಗ್ಗೆ ಹೆಚ್ಚಿನ ಸಂಶೋಧನೆಯಲ್ಲಿ ನಿರತನಾಗಿರುವ ವ್ಯಕ್ತಿಯೊಬ್ಬನ ಮಾತುಗಳನ್ನು ಇತ್ತೀಚೆಗೆ ಕೇಳುತ್ತಿದ್ದೆ. ಆತ ಹೇಳುವಂತೆ ಪಿರಾಮಿಡ್ ಗಳ ತೀರಾ ಹತ್ತಿರಕ್ಕೆ ಹೋದರೆ ಕೆಳಭಾಗದಲ್ಲಿ ಪೇರಿಸಿಟ್ಟ ಆ ದೈತ್ಯ ಕಲ್ಲುಗಳನ್ನು ಕಾಣಬಹುದೇ ಹೊರತು, ಮೇಲ್ಭಾಗದಲ್ಲಿರುವ ಕಲ್ಲುಗಳ ವ್ಯವಸ್ಥಿತ ಜೋಡಣೆಯನ್ನು ಕಾಣುವುದು ಸಾಧ್ಯವಿಲ್ಲ. ದೂರಕ್ಕೆ ಹೋಗಿ ಚಿತ್ರವನ್ನು ಸೆರೆಹಿಡಿದರೆ ಫ್ರೇಮಿನಲ್ಲಿ ಪೂರ್ತಿ ಪಿರಾಮಿಡ್ ಬರುವುದೇನೋ ಹೌದು. ಆದರೆ ಇಡೀ ಪಿರಾಮಿಡ್ಡಿನ ಪ್ರತಿಯೊಂದು ಕಲ್ಲುಗಳನ್ನು ಜೋಡಿಸಿರುವ ಪ್ಯಾಟರ್ನ್ ಅನ್ನು ಸ್ಪಷ್ಟವಾಗಿ, ಏಕಕಾಲದಲ್ಲಿ ಕಾಣುವುದು ಸಾಧ್ಯವಿಲ್ಲ. ದೂರ ಸಾಗಿದಷ್ಟು ಕ್ಯಾಮೆರಾದ ಕಣ್ಣುಗಳು ಸೋಲುವುದು ಸಹಜ. ಇದು ಮಹಾನಗರಗಳ ವಿಚಾರದಲ್ಲೂ ಸತ್ಯ. ಬದುಕಿನ ವಿಚಾರದಲ್ಲೂ ಸತ್ಯ. ಎಲ್ಲರ ಪಾಲಿಗೆ ಇವರೆಡೂ ತೆರೆದಷ್ಟೇ ಬಾಗಿಲು.

ನಮಗೆ ದಕ್ಕಿರುವಷ್ಟು ನಮ್ಮದು. ಅಷ್ಟೇ!

ಪ್ರಸಾದ್‌ ನಾಯ್ಕ್‌, ದೆಹಲಿ

ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು” ಮತ್ತು “ಮರ ಏರಲಾರದ ಗುಮ್ಮ” ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.

More articles

Latest article