Saturday, July 27, 2024

ಪ್ರೆಸ್ ಕ್ಲಬ್ ಪ್ರಶಸ್ತಿ; ಆಯ್ಕೆ ಮಾನದಂಡಗಳೇ ನಾಸ್ತಿ

Most read

ಯಾವುದನ್ನು ಹಕ್ಕಿನಿಂದ ಪಡೆಯಬಹುದಾಗಿತ್ತೋ ಅದನ್ನು ಓಲೈಕೆಯಿಂದ ಪಡೆದುಕೊಳ್ಳುವ ರಾಜಿಗೆ ಪ್ರೆಸ್ ಕ್ಲಬ್ ಬಳಕೆಯಾಗುತ್ತಿದೆಯಾ? ಇದು ನಿಜಕ್ಕೂ ಕಳವಳಕಾರಿ ಯಾಗಿರುವಂತಹುದು ಹಾಗೂ ಪತ್ರಕರ್ತರ ನೈತಿಕತೆಯನ್ನು ಪ್ರಶ್ನಿಸುವಂತಹುದು – ಶಶಿಕಾಂತ ಯಡಹಳ್ಳಿ, ಪತ್ರಕರ್ತರು

ಎಷ್ಟೋ ಸಲ ಈ ಪ್ರಶಸ್ತಿ ಪಡೆಯುವವರಿಗಿಂತ ಕೊಡುವವರ ಮೇಲೆ ಅನುಮಾನ ಹೆಚ್ಚಾಗುತ್ತದೆ. ನಿಜವಾದ ಸಾಧಕರನ್ನು ಸ್ವಾರ್ಥರಹಿತವಾಗಿ ಹಾಗೂ ಪಾರದರ್ಶಕವಾಗಿ ಆಯ್ಕೆ ಮಾಡಿದ್ದೇ ಆದರೆ ಅದು ಕೊಟ್ಟ ಪ್ರಶಸ್ತಿಗೂ ಮೌಲ್ಯ, ತೆಗೆದುಕೊಂಡವರಿಗೂ ಗೌರವ. ಆದರೆ.. ಯಾರಿಗೆ ಕೊಟ್ಟರೆ ನಮಗೇನು ಲಾಭ ಎನ್ನುವ ಅವಕಾಶವಾದಿತನದ ಆಶಯದಲ್ಲಿ ಪ್ರಶಸ್ತಿ ಕೊಡುವುದು ತೋರುಂಬ ಲಾಭವಾಗುತ್ತದೆ. ಇದರಿಂದಾಗಿ ಪ್ರಶಸ್ತಿಯ ಗೌರವವೂ ಕಡಿಮೆಯಾಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನ ಪ್ರೆಸ್ ಕ್ಲಬ್ ಕೊಡುವ ವಾರ್ಷಿಕ ಪ್ರಶಸ್ತಿ ಪುರಸ್ಕೃತರ ವಿಶೇಷ ಪ್ರಶಸ್ತಿಗೆ ಭಾಜನರಾದವರ ಪಟ್ಟಿ ಗಮನಿಸಿದಾಗ ಈ ಮೇಲೆ ತಿಳಿಸಿದಂತೆ ಸಂದೇಹ ಕಾಡದೇ ಇರದು. ಪ್ರೆಸ್ ಕ್ಲಬ್ ಪ್ರಶಸ್ತಿಗೆ ಆಯ್ಕೆಯ ಮಾನದಂಡಗಳು ಯಾವುವು? ಆಯ್ಕೆಯ ವಿಧಾನಗಳು ಹೇಗೆ? ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾರ್ಗದರ್ಶಿ ಸೂಚಿಗಳು ಇಲ್ಲದೇ ಇರುವುದರಿಂದ ಪ್ರೆಸ್ ಕ್ಲಬ್ ಪದಾಧಿಕಾರಿಗಳೇ ಸಭೆ ಕರೆದು ತಮಗೆ ಅನುಕೂಲವಾಗುವವರ ಹೆಸರನ್ನು ಅಂತಿಮ ಗೊಳಿಸುತ್ತಾರೆ. ಹೆಚ್ಚಾಗಿ ಆಳುವ ವರ್ಗದವರನ್ನು ಅದರಲ್ಲೂ ವರ್ಷದ ವ್ಯಕ್ತಿ ಹಾಗೂ ವ್ಯಕ್ತಿ ವಿಶೇಷ ಪ್ರಶಸ್ತಿಗೆ ರಾಜಕಾರಣಿಗಳ ಹೆಸರನ್ನೇ ಅಂತಿಮ ಗೊಳಿಸಲಾಗುತ್ತದೆ.

ಉದಾಹರಣೆಗೆ 2021 ರಲ್ಲಿ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೂ ಹಾಗೂ ವಿಶೇಷ ಪ್ರಶಸ್ತಿಯನ್ನು ಆರೋಗ್ಯ ಸಚಿವರಾಗಿದ್ದ ಡಾ.ಕೆ.ಸುಧಾಕರ್ ರವರಿಗೂ ಕೊಡಮಾಡಲಾಗಿತ್ತು.

2022 ರ ಸಾಲಿನ ‘ವರ್ಷದ ವ್ಯಕ್ತಿ’ ಪ್ರಶಸ್ತಿಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಹಾಗೂ ವ್ಯಕ್ತಿ ವಿಶೇಷ ಪ್ರಶಸ್ತಿಯನ್ನು ಕೈಗಾರಿಕೆ ಸಚಿವ ಮುರಗೇಶ ನಿರಾಣಿ ಹಾಗೂ ಸಹಕಾರಿ ಸಚಿವರಾಗಿದ್ದ ಎಸ್.ಟಿ.ಸೋಮಶೇಖರ್ ರವರಿಗೆ ಪ್ರದಾನ ಮಾಡಲಾಗಿತ್ತು.

ಈಗ 2023 ರಲ್ಲಿ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಡಿಸಿಎಂ ಡಿ.ಕೆ.ಶಿವಕುಮಾರರವರಿಗೆ ಹಾಗೂ ವಿಶೇಷ ಪ್ರಶಸ್ತಿಯನ್ನು ಸಚಿವ ಶಾಮನೂರು ಶಿವಶಂಕರಪ್ಪನವರಿಗೆ ಡಿ.31 ರಂದು ಸಿಎಂ ಸಿದ್ದರಾಮಯ್ಯನವರು ಪ್ರದಾನ ಮಾಡಿದರು.

ಕಳೆದ ಮೂರು ವರ್ಷಗಳ ಪ್ರಶಸ್ತಿಯ ಪಟ್ಟಿ ಗಮನಿಸಿದರೆ ಪ್ರೆಸ್ ಕ್ಲಬ್ ವಿಶೇಷ ಪ್ರಶಸ್ತಿಗಳಿಗೆ ಆಡಳಿತ ಪಕ್ಷದ ಅಧಿಕಾರಸ್ಥ ರಾಜಕಾರಣಿಗಳನ್ನು ಹಾಗೂ ಪ್ರಭಾವಶಾಲಿ ವಿರೋಧ ಪಕ್ಷದ ರಾಜಕಾರಣಿಗಳನ್ನು ಮಾತ್ರ ಯಾಕೆ ಆಯ್ಕೆ ಮಾಡಲಾಗುತ್ತಿದೆ. ಬೇರೆ ಕ್ಷೇತ್ರಗಳಲ್ಲಿ ಸಾಧಕರು ಇಲ್ಲವೇ?

ರಾಜಕಾರಣಿಗಳಿಗೆ ಪ್ರಶಸ್ತಿ ಕೊಡಬಾರದು ಅಂತೇನಿಲ್ಲ. ಆದರೆ ಅವರು ಅಧಿಕಾರದಲ್ಲಿ ಇದ್ದಾಗಲೇ ಪ್ರಶಸ್ತಿಗೆ ಆಯ್ಕೆ ಮಾಡುವುದರ ಹಿಂದೆ ಲಾಭ ಮಾಡಿಕೊಳ್ಳಲು ಇರುವ ಲೆಕ್ಕಾಚಾರಗಳು ಸಂದೇಹವನ್ನು ಹುಟ್ಟಿಸುವಂತಿವೆ. ಆಳುವ ವರ್ಗದ ಕೃಪಾ ಕಟಾಕ್ಷವನ್ನು ಪ್ರೆಸ್ ಕ್ಲಬ್ ಬಯಸಿದಂತೆ ಭಾಸವಾಗುತ್ತಿದೆ. ಪ್ರಶಸ್ತಿ ಕೊಡುವ ಮೂಲಕ ಆಳುವವರನ್ನು ಓಲೈಸುವ ಹಾಗೂ ಅಧಿಕಾರಸ್ಥರಿಂದ ಅನುಕೂಲ ಪಡೆಯುವ ಉದ್ದೇಶವೇ ಎದ್ದು ಕಾಣುವಂತಿದೆ.

ಇದು ಖಂಡಿತಾ ಪತ್ರಿಕಾ ಧರ್ಮವಲ್ಲ. ಸಂವಿಧಾನದ ನಾಲ್ಕನೇ ಅಂಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮಾಧ್ಯಮಾಂಗವು ಯಾವಾಗಲೂ ಸಕ್ರಿಯ ವಿರೋಧ ಪಕ್ಷದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಆಳುವ ವರ್ಗಗಳು ಮಾಡುವ ಜನವಿರೋಧಿ ನೀತಿಗಳನ್ನು, ಜೀವವಿರೋಧಿ ನಿರ್ಣಯಗಳನ್ನು, ಭ್ರಷ್ಟಾಚಾರ ಸ್ವಜನ ಪಕ್ಷಪಾತಗಳನ್ನು ಆಯಾ ಮಾಧ್ಯಮಗಳ ಮೂಲಕ ರಾಜಿ ರಹಿತವಾಗಿ ಅನಾವರಣ ಗೊಳಿಸುವ ಹೊಣೆಗಾರಿಕೆ ಪತ್ರಕರ್ತರದ್ದಾಗಿದೆ. ಆದರೆ ಪತ್ರಕರ್ತರ  ಕೂಟವಾದ ಬೆಂಗಳೂರು ಪ್ರೆಸ್ ಕ್ಲಬ್ ಹೀಗೆ ಅಧಿಕಾರಸ್ಥರ ಜೊತೆ ಶಾಮೀಲಾಗುವುದು, ಆಳುವವರನ್ನು ಓಲೈಸುವುದು, ಅದಕ್ಕಾಗಿ ಪ್ರಶಸ್ತಿಗಳನ್ನು ಕೊಡುವುದೆಲ್ಲಾ ಪತ್ರಕರ್ತರ ನಿಷ್ಠೆ ಹಾಗೂ ಬದ್ಧತೆಯನ್ನು ಪ್ರಶ್ನಿಸುವಂತಿದೆ.

ಯಾಕೆ ಹೀಗೆ? ಎಂದು ಪ್ರೆಸ್ ಕ್ಲಬ್ ನ ಹಿರಿಯ ಸದಸ್ಯರೊಬ್ಬರನ್ನು ಕೇಳಿದಾಗ. ” ರಾಜಕೀಯದವರ ಜೊತೆಗೆ ಸಂಬಂಧ ಚೆನ್ನಾಗಿದ್ದರೆ ಪ್ರೆಸ್ ಕ್ಲಬ್ಬಿಗೆ ಹಲವಾರು ರೀತಿಯಲ್ಲಿ ಪ್ರಯೋಜನವಾಗುತ್ತವೆ. ಅಬಕಾರಿ ಇಲಾಖೆಯಿಂದ ಮದ್ಯ ಸರಬರಾಜು ಸಲೀಸಾಗುತ್ತದೆ. ಕ್ಲಬ್ ವರಮಾನ ಹೆಚ್ಚಾಗುತ್ತದೆ. ಕೋವಿಡ್ ಸಮಯದಲ್ಲಿ ಉಚಿತ ಪಡಿತರ ತಂದು ಪತ್ರಕರ್ತರಿಗೆ ಹಂಚಲು ಸಾಧ್ಯವಾಗುತ್ತದೆ. ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದ ಖರ್ಚು ನಿಭಾಯಿಸ ಬಹುದಾಗಿದೆ. ಪ್ರೆಸ್ ಕ್ಲಬ್ ಡೈರಿಗೆ ಜಾಹಿರಾತುಗಳು ಸಿಗುತ್ತವೆ. ಪತ್ರಕರ್ತರಿಗೆ ವಿಮೆ, ಬಸ್ ಪಾಸ್, ಆಸ್ಪತ್ರೆ ಚಿಕಿತ್ಸೆ ಯಂತಹ ಅನುಕೂಲಗಳನ್ನು ಪಡೆಯಲು ಅಧಿಕಾರಸ್ಥರ ಜೊತೆ ಸೌಹಾರ್ದ ಸಂಬಂಧ ಹೊಂದುವುದು ಅಗತ್ಯವಾಗಿದೆ” ಎಂದು ಉತ್ತರಿಸಿದರು.

ಅಂದರೆ ಯಾವುದನ್ನು ಹಕ್ಕಿನಿಂದ ಪಡೆಯಬಹುದಾಗಿತ್ತೋ ಅದನ್ನು ಓಲೈಕೆಯಿಂದ ಪಡೆದುಕೊಳ್ಳುವ ರಾಜಿಗೆ ಪ್ರೆಸ್ ಕ್ಲಬ್ ಬಳಕೆಯಾಗುತ್ತಿದೆಯಾ? ಇದು ನಿಜಕ್ಕೂ ಕಳವಳಕಾರಿಯಾಗಿರುವಂತಹುದು ಹಾಗೂ ಪತ್ರಕರ್ತರ ನೈತಿಕತೆಯನ್ನು ಪ್ರಶ್ನಿಸುವಂತಹುದು.

ಹೌದು. ಯಾರಿಗೂ ಹೆದರದ ಅಧಿಕಾರದಲ್ಲಿರುವ ರಾಜಕಾರಣಿಗಳು ಮಾಧ್ಯಮದವರಿಗೆ ಹೆದರುತ್ತಾರೆ. ಎಲ್ಲಿ ತಾವು ಮಾಡುವ ಅಕ್ರಮ ಕೆಲಸಗಳು, ಭ್ರಷ್ಟಾಚಾರ ಪ್ರಕರಣಗಳು ಮಾಧ್ಯಮಗಳಲ್ಲಿ ಪ್ರಸಾರಗೊಂಡು ತಮ್ಮ ವರ್ಚಸ್ಸಿಗೆ ಧಕ್ಕೆ ಬರುತ್ತದೋ, ಅಧಿಕಾರಕ್ಕೆ ಕುತ್ತು ತರುತ್ತದೋ ಎಂದು ಎಲ್ಲಾ ಪಕ್ಷದ ನಾಯಕರೂ ಆತಂಕ ಪೀಡಿತರಾಗುತ್ತಾರೆ. ಅಂತವರೂ ಸಹ ಮಾಧ್ಯಮ ಮಿತ್ರರೊಂದಿಗೆ ಸೌಹಾರ್ದ ಸಂಬಂಧವನ್ನೇ ಬಯಸುತ್ತಾರೆ. ಕೆಲವು ಪತ್ರಕರ್ತರಿಗೆ ಆಗಾಗ ಕಾಣಿಕೆಗಳನ್ನೂ ಕೊಟ್ಟು ಸಾಕಿಕೊಂಡಿರುತ್ತಾರೆ. ಪತ್ರಕರ್ತರ ಚಿಕ್ಕಪುಟ್ಟ ಬೇಡಿಕೆಗಳನ್ನೂ ಈಡೇರಿಸಿರುತ್ತಾರೆ. ಒಮ್ಮೆ ಈ ಅಧಿಕಾರಸ್ಥರ ಆಮಿಷಕ್ಕೆ ಬಲಿಯಾದ ಪತ್ರಕರ್ತ ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವಾ?

ಶಾಸಕಾಂಗ ಮತ್ತು ಮಾಧ್ಯಮಾಂಗ ಪರಸ್ಪರ ಕೊಡುತೆಗೆದುಕೊಳ್ಳುವ ಮೂಲಕ ರಾಜಿ ಆದರೆ ಇಡೀ ವ್ಯವಸ್ಥೆ ಅರಾಜಕವಾಗುತ್ತದೆ. ಸತ್ಯ ದರ್ಶನ ಮಾಡಬೇಕಾದ ಪತ್ರಕರ್ತರು ಆಳುವವರ ಮರ್ಜಿಗೆ ಒಳಗಾದರೆ ವಾಸ್ತವ ತಿರುಚಲ್ಪಡುತ್ತದೆ. ಆಗ ಪತ್ರಕರ್ತರ ಮೇಲೆ ಜನರಿಗಿರುವ ಅಲ್ಪ ಸ್ವಲ್ಪ ನಂಬಿಕೆಯೂ ನಾಶವಾಗುತ್ತದೆ.‌

ಬೇಕಿರಲಿಲ್ಲ. ಬೆಂಗಳೂರಿನ ಪತ್ರಕರ್ತರ ಪ್ರಾತಿನಿಧಿಕ ಸಂಸ್ಥೆಯಂತಿರುವ ಪ್ರೆಸ್ ಕ್ಲಬ್ ಈ ರೀತಿ ಆಳುವ ವರ್ಗದ ಪ್ರಭಾವಿಗಳಿಗೆ ಪ್ರಶಸ್ತಿ ಕೊಡುವ ಅಗತ್ಯವೂ ಇರಲಿಲ್ಲ. ಪ್ರಶಸ್ತಿ ಮೂಲಕ ಓಲೈಸುವುದೂ ಬೇಕಿರಲಿಲ್ಲ. ಇಷ್ಟಕ್ಕೂ ಪತ್ರಕರ್ತರ ಹಿತರಕ್ಷಣೆ ಕುರಿತ ಇಲ್ಲವೇ ಪ್ರೆಸ್ ಕ್ಲಬ್ ಅಗತ್ಯಗಳ ಕುರಿತ ಬೇಡಿಕೆಗಳಿದ್ದರೆ ಅವುಗಳನ್ನು ಡಿಮಾಂಡ್ ಮಾಡುವ ಮೂಲಕವೇ ಪಡೆದು ಕೊಳ್ಳಬಹುದಾಗಿದೆ. ಆದರೆ ಹೀಗೆ ಪ್ರತಿ ವರ್ಷ ಪ್ರಭಾವಿ ರಾಜಕಾರಣಿಗಳಿಗೆ ಪ್ರಶಸ್ತಿ ಕೊಟ್ಟು ಗೌರವಿಸಿ ಸನ್ಮಾನಿಸುವುದು ಸಮಂಜಸವೆನ್ನಿಸದು. ಹೀಗೆ ಪ್ರಶಸ್ತಿ ಪಡೆದವರು ಈ ಹಿಂದೆ ಹಗರಣಗಳಲ್ಲಿ ಭಾಗವಹಿಸಿದ್ದರೆ ಅಥವಾ ಮುಂದೊಮ್ಮೆ ಹಗರಣ ಮಾಡಿ ಸಿಕ್ಕಾಕಿಕೊಂಡರೆ ಪ್ರಶಸ್ತಿಗೂ ಹಾಗೂ ಕೊಟ್ಟ ಸಂಸ್ಥೆಗೂ ಕಳಂಕ ತಟ್ಟದೇ ಬಿಡದು.

ಇತ್ತೀಚಿನ ವರ್ಷಗಳಲ್ಲಿ ಪ್ರೆಸ್ ಕ್ಲಬ್ಬಿನ ವಿಶೇಷ ಪ್ರಶಸ್ತಿಗಳು ರಾಜಕಾರಣಿಗಳ ಪಾಲಾಗುತ್ತಿವೆ. ಇದಕ್ಕೂ ಮೊದಲು ಜಸ್ಟೀಸ್ ವೆಂಕಟಾಚಲಯ್ಯ, ಲೋಕಾಯುಕ್ತರಾಗಿ ಭ್ರಷ್ಟರಿಗೆ ಸಿಂಹಸ್ವಪ್ನರಾಗಿದ್ದ ಸಂತೋಷ ಹೆಗ್ಡೆ, ಕ್ರಿಕೆಟ್ ಸಾಧಕ ಅನಿಲ್ ಕುಂಬ್ಳೆಯಂತಹ ಸಾಧಕರಿಗೆ ಪ್ರೆಸ್ ಕ್ಲಬ್ ವಿಶೇಷ ಪ್ರಶಸ್ತಿ ಕೊಡಮಾಡುವ ಮೂಲಕ ಪ್ರಶಸ್ತಿಯ ಮೌಲ್ಯ ಹೆಚ್ಚಿಸಿಕೊಳ್ಳಲಾಗಿತ್ತು. ಈ ಹಿಂದೆ 2020 ರಲ್ಲಿ ವಿಪ್ರೋ ಸಂಸ್ಥೆಯ ಅಧ್ಯಕ್ಷ ಅಜಿಂ ಪ್ರೇಮ್‌ ಜಿ, ನಟ ಸುದೀಪ್, ನಾರಾಯಣ ಹೃದಯಾಲಯದ ಡಾ. ದೇವಿಪ್ರಸಾದ್ ಶೆಟ್ಟಿಯವರಂತಹ ನಿಜವಾದ ಸಾಧಕರಿಗೆ ಪ್ರೆಸ್ ಕ್ಲಬ್ ಪ್ರಶಸ್ತಿ ಕೊಟ್ಟು ಗೌರವಿಸಲಾಗಿತ್ತು. ಆದರೆ ಈಗ ಯಾಕೆ ಪ್ರೆಸ್ ಕ್ಲಬ್ ಈ ಆಳುವ ವರ್ಗದ ಅಧಿಕಾರಸ್ಥರ ಓಲೈಕೆಗೆ ಮುಂದಾಗಿದೆ?

ಪ್ರೆಸ್ ಕ್ಲಬ್ ನಲ್ಲಿ ಸಾವಿರದ ಆರುನೂರಕ್ಕೂ ಹೆಚ್ಚು ಸದಸ್ಯರಿದ್ದಾರೆ. ಇವರೆಲ್ಲರನ್ನೂ ಪ್ರೆಸ್ ಕ್ಲಬ್ ಆಡಳಿತ ಮಂಡಳಿ ಪ್ರತಿನಿಧಿಸುತ್ತದೆ. ಆಡಳಿತ ಸಮಿತಿ ತೆಗೆದುಕೊಂಡ ನಿರ್ಧಾರಗಳು ಎಲ್ಲಾ ಸದಸ್ಯರ ಪರವಾದ ನಿರ್ಣಯಗಳು ಎಂದೇ ಗುರುತಿಸಲಾಗುತ್ತಿದೆ. ಹೀಗಾಗಿ ಎಲ್ಲರೂ ಮೆಚ್ಚುವಂತಹ ನಿಜವಾದ ಸಾಧಕರನ್ನು ಪ್ರೆಸ್ ಕ್ಲಬ್ ವಿಶೇಷ ಪ್ರಶಸ್ತಿಗಳಿಗೆ  ಆಯ್ಕೆ ಮಾಡುವ ಮೂಲಕ ಪ್ರೆಸ್ ಕ್ಲಬ್ಬಿನ ಘನತೆಯನ್ನು ಹಾಗೂ ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಬೇಕಾದ ಹೊಣೆಗಾರಿಕೆ ಪ್ರೆಸ್ ಕ್ಲಬ್ಬಿನ ಸಮಿತಿಯ  ಸದಸ್ಯರುಗಳ ಮೇಲಿದೆ. 

ಮುಂದಿನ ವರ್ಷದಿಂದಾದರೂ ಪದಾಧಿಕಾರಿಗಳೇ ಪ್ರಶಸ್ತಿ ಪುರಸ್ಕೃತರಾಗುವವರನ್ನು ಆಯ್ಕೆ ಮಾಡದೇ ತಜ್ಞರ ಸಮಿತಿಯನ್ನು ರಚಿಸಿ, ಸರ್ವ ಸದಸ್ಯರ ಅಭಿಪ್ರಾಯಗಳನ್ನೂ ಪರಿಗಣಿಸಿ ರಾಜಕಿಯೇತರ ಸಾಧಕರಿಗೆ ಪ್ರಶಸ್ತಿ ಘೋಷಿಸುವುದು ಸೂಕ್ತವೆನಿಸುತ್ತದೆ. ಒಟ್ಟಿನ ಮೇಲೆ ಪತ್ರಿಕಾ ಧರ್ಮವನ್ನು ಪಾಲಿಸುವ ಹಾಗೂ ನೈತಿಕ ಪ್ರಜ್ಞೆಯನ್ನು ಹೊಂದಿರುವ ಪತ್ರಿಕಾರಂಗವನ್ನು ಕಟ್ಟುವ ನಿಟ್ಟಿನಲ್ಲಿ ಪ್ರೆಸ್ ಕ್ಲಬ್ ಮಾದರಿಯಾಗಲಿ ಎನ್ನುವುದೇ ಮಾಧ್ಯಮಾಂಗದ ಎಲ್ಲರ ಆಶಯವಾಗಿದೆ.

ಶಶಿಕಾಂತ ಯಡಹಳ್ಳಿ

ಪತ್ರಕರ್ತರು

More articles

Latest article