ಮಂಡ್ಯ: ಬಿಡದಿ ಸೇರಿದಂತೆ ಏಳು ಬೆಂಗಳೂರು ಸುತ್ತಮುತ್ತ ಟೌನ್‌ಶಿಪ್ ಮಾಡಲು ಹೊರಟಿದ್ದವರು ಹಾಗೂ ಈ ಯೋಜನೆಯ ಪಿತಾಮಹರೇ ಕುಮಾರಸ್ವಾಮಿ. ಈಗ ಅವರ ಕುಟುಂಬದವರೇ ವಿರೋಧ ಮಾಡುವುದು ಯಾವ ನ್ಯಾಯ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಕೆ.ಆರ್.ಎಸ್. ನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ದೇವೇಗೌಡರು ದೊಡ್ಡವರು. ಪಾಪ ಅವರು ಮರೆತಿರಬೇಕು. ಬಿಡದಿ, ಸಾತನೂರು, ನಂದಗುಡಿ ಈ ಭಾಗದಲ್ಲಿ ಟೌನ್ ಶಿಪ್‌ಗೆ ನೋಟಿಫಿಕೇಶನ್ ಹೊರಡಿಸಿದ್ದು ಅವರ ಸುಪುತ್ರ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ. ಅವರೇ ಈ ತೀರ್ಮಾನ ಮಾಡಿ ಡಿ.ಎಲ್.ಎಫ್ ಅವರಿಂದ ರೂ.300 ಕೋಟಿ ಹಣ ಕಟ್ಟಿಸಿಕೊಂಡಿದ್ದರು. ಆನಂತರ ಬಿಜೆಪಿ ಸರ್ಕಾರ ಬಂದಾಗ ಯೋಜನೆ ಮಾಡಲು ಸಾಧ್ಯವಿಲ್ಲ ಎಂದು ಹಣ ವಾಪಸ್ ನೀಡಿದ್ದರು ಎನ್ನುವುದನ್ನು ನೆನಪು ಮಾಡಿಕೊಟ್ಟರು.
ನಮ್ಮ ಸರ್ಕಾರ ಈಗ ಯಾವುದೇ ಜಮೀನನ್ನು ಡಿನೋಟಿಫಿಕೇಷನ್ ಮಾಡಲು ಸಿದ್ಧವಿಲ್ಲ. ಡಿನೋಟಿಫೈ ಮಾಡಿದರೆ ಹಣ ಮಾಡಿಕೊಂಡರು ಎನ್ನುವ ಆರೋಪ ಕೇಳಿ ಬರುತ್ತದೆ. ಈಗಾಗಲೇ ನಾನು ಕೋರ್ಟ್, ಕಚೇರಿ ಅಲೆದು, ಜೈಲು ವಾಸವನ್ನೂ ಅನುಭವಿಸಿದ್ದೇನೆ. ನನ್ನ ಸ್ವಂತ ಜಮೀಮು ಕುರಿತೂ ಮಾಜಿ ಪ್ರಧಾನಿ ಕುಟುಂಬದವರೇ ಆರೋಪ ಮಾಡಿದ್ದಾರೆ. ಸನ್ಮಾನ್ಯ ದೇವೇಗೌಡರೇ ನಿಮ್ಮ ಮಗ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಅವರೇ ಯಾಕೆ ಈ ಜಮೀನು ಡಿನೋಟಿಫಿಕೇಷನ್ ಮಾಡಲಿಲ್ಲ. ಈಗೇಕೆ ಮಾತನಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು.
ಈ ಭಾಗದಲ್ಲಿ ರೈತರು ತಮ್ಮ ಜಮೀನನ್ನು ಮಾರಾಟ ಮಾಡಲೂ ಆಗದೆ, ಅಭಿವೃದ್ಧಿಯನ್ನೂ ಮಾಡಲಾಗದೇ ಪರದಾಡುತ್ತಿದ್ದಾರೆ. ದೇಶಕ್ಕೆ ಮಾದರಿಯಾಗುವಂತಹ ಟೌನ್‌ಶಿಪ್ ಮಾಡುತ್ತೇವೆ. ರೈತರಿಗೆ ಉತ್ತಮ ಪರಿಹಾರ ನೀಡುತ್ತೇವೆ ಮತ್ತು ಅವರ ಭೂಮಿಗೂ ಒಳ್ಳೆಯ ಬೆಲೆ ಬರುವಂತೆ ಮಾಡುತ್ತೇವೆ ಎಂದು ಶಿವಕುಮಾರ್ ಹೇಳಿದರು.