ಪ್ರಕೃತಿಯಿಂದ ಪಾಠ ಕಲಿಯದಿದ್ದರೆ ಪ್ರಕೃತಿಯೇ ನಮಗೆ ಪಾಠ ಕಲಿಸುತ್ತದೆ. ಹವಾಗುಣ ಬದಲಾವಣೆಯಂತಹ ಗಂಭೀರ ವಿಷಯಗಳ ಬಗ್ಗೆಯೂ ನಾವು ತೋರುತ್ತಿರುವ ತಾತ್ಸಾರ ಮತ್ತು ಎಗ್ಗಿಲ್ಲದೆ ಪ್ರಕೃತಿಯ ಮೇಲೆ ನಡೆಸುತ್ತಿರುವ ಅತ್ಯಾಚಾರದ ಪರಿಣಾಮವನ್ನು ಜಗತ್ತಿನಾದ್ಯಂತ ಕಣ್ಣಾರೆ ಕಾಣುತ್ತಿದ್ದೇವೆ, ಅನುಭವಿಸುತ್ತಿದ್ದೇವೆ. ಪ್ರಕೃತಿ ಏನೋ ಎಚ್ಚರಿಕೆಯ ಸಂದೇಶವನ್ನು ರವಾನಿಸುತ್ತಿದೆ. ಅದನ್ನು ಆಲಿಸುವ ವ್ಯವಧಾನ ನಮಗಿದೆಯೇ?
ಧಗಧಗಿಸುವ ಕಾಡ್ಗಿಚ್ಚಿನಿಂದ ದಕ್ಷಿಣ ಕ್ಯಾಲಿಫೋರ್ನಿಯಾ ನಲುಗಿದೆ. ಹಿಂದೆಂದೂ ಕಂಡಿರದ ರೀತಿಯಲ್ಲಿ ಹಾನಿಯನ್ನು ಅನುಭವಿಸಿದೆ. ಅಮೆರಿಕಾದಂತಹ ಅಮೆರಿಕಾಕ್ಕೇ ಈ ಕಾಡಿನ ಬೆಂಕಿಯನ್ನು ಹತೋಟಿಗೆ ತರಲು ಕಷ್ಟವಾಗಿದೆ.
ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾದಲ್ಲಿ ಹತ್ತಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ. 1,30,000 ಮಂದಿಯನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅಸಂಖ್ಯ ಭವ್ಯ ಬಂಗಲೆಗಳೂ ಭಸ್ಮವಾಗಿವೆ. ಹಾಲಿವುಡ್ ಹಿಲ್ಸ್ ಬೆಂಕಿಗೆ ನಲುಗಿದ್ದು, ಬೆಂಕಿಯ ಕಾರಣಕ್ಕೇ ಆಸ್ಕರ್ ಪುರಸ್ಕಾರ ನಾಮಕರಣಗಳನ್ನು ತಡಮಾಡಲಾಗಿದೆ. ಹಾಲಿವುಡ್ ನ ಸೆಲೆಬ್ರಿಟಿಗಳಾದ ಪ್ಯಾರಿಸ್ ಹಿಲ್ಟನ್, ಆಡಂ ಬ್ರಾಡಿ, ಬಿಲ್ಲಿ ಕ್ರಿಸ್ಟಲ್ ಮತ್ತಿತರರ ಮನೆಗಳೂ ಸುಟ್ಟು ಭಸ್ಮವಾಗಿವೆ.
ಹಾಗೆ ನೋಡಿದರೆ, ಕ್ಯಾಲಿಫೋರ್ನಿಯಾಕ್ಕೆ ಈ ಕಾಡ್ಗಿಚ್ಚು ವಿದ್ಯಮಾನಗಳೇನೂ ಹೊಸದಲ್ಲ. ಆದರೆ ಈಗಿನದು ಮಾತ್ರ ನಿಜಕ್ಕೂ ಭಯಾನಕ ಮತ್ತು ವಿಚಿತ್ರ. ಯಾಕೆಂದರೆ ಇದು ಚಳಿಗಾಲ! ಚಳಿಗಾಲದಲ್ಲಿ ಕಾಡ್ಗಿಚ್ಚು ವಿರಳ. ಹಾಗಾದರೆ, ಲಾಸ್ ಏಂಜಲೀಸ್ ನಲ್ಲಿ ಏಕೆ ಈ ಬೆಂಕಿ? ಪರಿಸ್ಥಿತಿ ಇಷ್ಟು ಭೀಕರವಾದುದಾದರೂ ಯಾಕೆ?
ಬೆಂಕಿಯ ಕಿಡಿ ಹಾರಿದ್ದು ಹೇಗೆ ಎಂಬುದು ಸ್ಪಷ್ಟವಿಲ್ಲ. ಬೀಸುಗಾಳಿಗೆ ಸಿಲುಕಿರುವ ವಿದ್ಯುತ್ ತಂತಿಗಳು ಇದನ್ನು ಉಂಟು ಮಾಡಿರಲೂ ಬಹುದು. ಆದರೆ ಅದಕ್ಕಿಂತಲೂ ಮುಖ್ಯವಾಗಿ ಮೂರು ಅಂಶಗಳು ಈ ಬೆಂಕಿಯ ರೌದ್ರಾವತಾರಕ್ಕೆ ಕಾರಣ ಎನ್ನಲಾಗಿದೆ. ಅವೆಂದರೆ-
ಒದ್ದೆ ಹವಾಮಾನದ ಬೆನ್ನಿಗೇ ಬಂದ ಶುಷ್ಕ ಹವಾಮಾನ
ಕಳೆದ ಎರಡು ಚಳಿಗಾಲಗಳಲ್ಲಿ, ಅಂದರೆ 2022, 2023 ರಲ್ಲಿ, ಲಾಸ್ ಏಂಜಲೀಸ್ ಪ್ರದೇಶ ಅಪರೂಪಕ್ಕೆಂಬಂತೆ ಒದ್ದೆಯಾಗಿತ್ತು. ಇದರಿಂದ ದೊಡ್ಡ ಪ್ರಮಾಣದಲ್ಲಿ ಮರಗಿಡಗಳು ಮತ್ತು ಪೊದೆಗಳು ಹುಟ್ಟಿಕೊಂಡವು, ಚಿಗುರೊಡೆದವು, ಆದರೆ ಈ ಬಾರಿಯ ಚಳಿಗಾಲ ದಕ್ಷಿಣ ಕ್ಯಾಲಿಫೋರ್ನೀಯಾ ಪಾಲಿಗೆ ತೀರಾ ಒಣ ಸ್ವರೂಪದ್ದಾಗಿದೆ. ಹಾಗಾಗಿ ಬಹುತೇಕ ಎಲ್ಲ ಮರಗಿಡಗಳು ಒಣಗಿದವು. ಅಕ್ಷರಶಃ ಒಣ ಇದ್ದಿಲುಗಳು ಅಗ್ನಿಜ್ವಾಲೆಯ ಹಾದಿಯಲ್ಲಿ ಕಾದು ಕುಳಿತ ಪರಿಸ್ಥಿತಿಯಂತಾಗಿತ್ತು ಅಲ್ಲಿನದ್ದು.
ನಾಸಾ ಪ್ರಕಾರ, ಅಕ್ಟೋಬರ್ ಲಾಗಾಯ್ತು ದಕ್ಷಿಣ ಕ್ಯಾಲಿಫೋರ್ನಿಯಾ, ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ ಪ್ರಮಾಣದ ಮಳೆಯನ್ನು ಪಡೆದಿದೆ. ಚಳಿಗಾಲದ ಆರಂಭದಲ್ಲಿ ಇಷ್ಟೊಂದು ಒಣ ಪರಿಸ್ಥಿತಿ ಇದ್ದ ದಾಖಲೆಯೇ ಇಲ್ಲ. ಉದಾಹರಣೆಗೆ ಲಾಸ್ ಏಂಜಲೀಸ್ ವಿಮಾನ ನಿಲ್ದಾಣ ಅಕ್ಟೋಬರ್ 1ರ ಲಾಗಾಯ್ತು ಕೇವಲ 0.03 ಇಂಚುಗಳಷ್ಟು ಮಳೆ ಪಡೆದಿದೆ. ಚಳಿಗಾಲದ ಆರಂಭಕ್ಕೆ ಮುನ್ನ ಇಷ್ಟೊಂದು ಒಣ ವಾತಾವರಣ ಇದ್ದುದು ಇದೇ ಮೊದಲು.
ಸಾಂತಾ ಅನಾ ವಿಂಡ್ಸ್
ಈ ಋತುವಿನಲ್ಲಿ ಸಾಂತಾ ಅನಾ ವಿಂಡ್ ಗಳು ತೀರಾ ಸಾಮಾನ್ಯ. ಆದರೆ ಈ ವರ್ಷ ಅವು ಹಿಂದೆಂದಿಗಿಂತಲೂ ಬಲವಾಗಿದ್ದವು. ಬಲವಾದ ಗಾಳಿಯಿಂದಾಗಿ ಬೆಂಕಿಯ ಜ್ವಾಲೆಗಳು ದೊಡ್ಡದಾದವು ಮತ್ತು ತೀವ್ರ ಗತಿಯಲ್ಲಿ ಹರಡಿದವು. ಅಕ್ಟೋಬರ್ ಮತ್ತು ಜನವರಿಯ ನಡುವೆ ಗ್ರೇಟ್ ಬೇಸಿನ್ ನ ಮರಳುಗಾಡಿನಲ್ಲಿ ಅಧಿಕ ಒತ್ತಡ ಉಂಟಾಗುತ್ತದೆ. ಈ ಅಧಿಕ ಒತ್ತಡ ವ್ಯವಸ್ಥೆಯು ಪ್ರದಕ್ಷಿಣಾಕಾರದಲ್ಲಿ ಸುತ್ತುತ್ತಾ ಗಾಳಿಯನ್ನು ಪಶ್ಚಿಮದೆಡೆಗೆ ತರುತ್ತದೆ. ಈ ಗಾಳಿ ಸಿಯೆರಾ ನೆವಡಾ ಮತ್ತು ಸಾಂತಾ ಅನಾ ಶಿಖರಗಳ ಮೇಲೆ ಬೀಸುತ್ತಾ ತನ್ನ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಬೆಚ್ಚಗಾಗುತ್ತದೆ. ಶಿಖರ ಕಣಿವೆಗಳ ಮೂಲಕ ಸಾಗುತ್ತಿದ್ದಂತೆ ವಿಪರೀತ ವೇಗವನ್ನು ಪಡೆದುಕೊಳ್ಳುತ್ತದೆ. ಹೀಗೆ ಕ್ಯಾಲಿಫೋರ್ನಿಯಾದ ಮೇಲೆ ಬೀಸುವಾಗ ಗಾಳಿ ಅತ್ಯಂತ ವೇಗದಿಂದ ಕೂಡಿರುತ್ತದೆ, ಶುಷ್ಕವಿರುತ್ತದೆ ಮತ್ತು ಬೆಚ್ಚಗಿರುತ್ತದೆ.
ಇದೇ ಬೀಸುಗಾಳಿ ಲಾಂಸ್ ಏಂಜಲೀಸ್ ಮೇಲೆ ಬೆಂಕಿಯ ಜ್ವಾಲೆ ಉಗುಳುತ್ತಿದೆ. ಒಣಗಿದ ಗಿಡಗಳು, ವಿದ್ಯುತ್ ತಂತಿಗಳು, ಭೂಕಂಪ ತಡೆದುಕೊಳ್ಳಲು ನಿರ್ಮಿಸಿದ ಮರಗಳ ಮನೆಗಳು ಈ ಬೆಂಕಿಯ ರೌದ್ರಾವತಾರಕ್ಕೆ ಅತ್ಯಂತ ಪೂರಕ ಪರಿಸರ ನಿರ್ಮಿಸುತ್ತದೆ.
ಹವಾಗುಣ ಬದಲಾವಣೆ
ಜಗತ್ತಿನಾದ್ಯಂತ ಹವಾಗುಣ ಬದಲಾವಣೆ (ಕ್ಲೈಮೇಟ್ ಚೇಂಜ್) ವಿಪರೀತ ಹವಾಮಾನ ವಿದ್ಯಮಾನಗಳನ್ನು ಇನ್ನಷ್ಟು ಭಯಾನಕಗೊಳಿಸುತ್ತಿದೆ. ಪರಿಣತರು ಹೇಳುವ ಪ್ರಕಾರ ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು ಋತುಗಳು ಇತ್ತೀಚಿನ ವರ್ಷಗಳಲ್ಲಿ ದೀರ್ಘಗೊಂಡಿವೆ. ಉದಾಹರಣೆಗೆ 2021 ರ ಒಂದು ಅಧ್ಯಯನದ ಪ್ರಕಾರ ಕಳೆದ ಎರಡು ದಶಕಗಳಲ್ಲಿ ರಾಜ್ಯದ ಒಣ ಋತು ದೀರ್ಘಗೊಂಡಿದೆ. ಅದರ ವಾರ್ಷಿಕ ಗರಿಷ್ಠವು ಆಗಸ್ಟ್ ನಿಂದ ಜುಲೈಗೆ ಪಲ್ಲಟಗೊಂಡಿದೆ.
ಕಳೆದ ಕೆಲವು ವರ್ಷಗಳಲ್ಲಿ ಕಾಡ್ಗಿಚ್ಚುಗಳು ಕೂಡಾ ಹೆಚ್ಚು ತೀವ್ರವಾಗಿವೆ. ಜಾಗತಿಕ ತಾಪಮಾನ ಏರಿಕೆಯ ಫಲವಾಗಿ ಇತ್ತೀಚಿನ ವರ್ಷಗಳಿಂದ, ವಸಂತ ಕಾಲ ಮತ್ತು ಬೇಸಗೆ ತುಲನಾತ್ಮಕವಾಗಿ ಹೆಚ್ಚು ಬೆಚ್ಚಗಾಗಿವೆ. ವಸಂತ ಕಾಲದ ಆರಂಭದಲ್ಲಿಯೇ ಮಂಜುಗಡ್ಡೆ ಕರಗುತ್ತಿದೆ. ಇಂತಹ ಸನ್ನಿವೇಶವು ಒಟ್ಟಾರೆಯಾಗಿ ದೀರ್ಘಾವಧಿಯ ಮತ್ತು ತೀವ್ರತಮ ಒಣ ಋತುವಿಗೆ ಕಾರಣವಾಗುತ್ತದೆ. ಹಸಿರು ಸಸ್ಯಗಳು ಹೆಚ್ಚು ನೀರಿನಂಶ ಕಳೆದುಕೊಳ್ಳುತ್ತವೆ. ಒಟ್ಟಿನಲ್ಲಿ ಕಾಡ್ಗಿಚ್ಚಿನ ಅನಾಹುತಗಳಿಗೆ ಅತ್ಯಂತ ಪ್ರಶಸ್ತ ಪರಿಸ್ಥಿತಿ!
ಪ್ರಕೃತಿಯಿಂದ ಪಾಠ ಕಲಿಯದಿದ್ದರೆ ಪ್ರಕೃತಿಯೇ ನಮಗೆ ಪಾಠ ಕಲಿಸುತ್ತದೆ. ಹವಾಗುಣ ಬದಲಾವಣೆಯಂತಹ ಗಂಭೀರ ವಿಷಯಗಳ ಬಗ್ಗೆಯೂ ನಾವು ತೋರುತ್ತಿರುವ ತಾತ್ಸಾರ ಮತ್ತು ಎಗ್ಗಿಲ್ಲದೆ ಪ್ರಕೃತಿಯ ಮೇಲೆ ನಡೆಸುತ್ತಿರುವ ಅತ್ಯಾಚಾರದ ಪರಿಣಾಮವನ್ನು ಜಗತ್ತಿನಾದ್ಯಂತ ಕಣ್ಣಾರೆ ಕಾಣುತ್ತಿದ್ದೇವೆ, ಅನುಭವಿಸುತ್ತಿದ್ದೇವೆ. ಬೇಸಗೆಯಲ್ಲಿ ಧಾರಾಕಾರ ಮಳೆ, ಮಳೆಗಾಲದಲ್ಲಿ ಉರಿಬಿಸಿಲು, ಚಳಿಗಾಲದಲ್ಲಿ ಕಾಡ್ಗಿಚ್ಚು! ಬತ್ತುತ್ತಿರುವ ನದಿಗಳು, ಕುಸಿಯುತ್ತಿರುವ ಬೆಟ್ಟಗಳು!
ಪ್ರಕೃತಿ ಏನೋ ಎಚ್ಚರಿಕೆಯ ಸಂದೇಶವನ್ನು ರವಾನಿಸುತ್ತಿದೆ. ಅದನ್ನು ಆಲಿಸುವ ವ್ಯವಧಾನ ನಮಗಿದೆಯೇ?
ಶ್ರೀನಿವಾಸ ಕಾರ್ಕಳ
ಚಿಂತಕರು