ಬೆಂಗಳೂರು: ಭಾರತೀಯ ಸಂವಿಧಾನ ಜಾರಿಗೆ ಬಂದು 75 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನಾಳೆ (ನವೆಂಬರ್ 26) ರಂದು ದೇಶಾದ್ಯಂತ “ಸಂವಿಧಾನ ದಿನ” ಆಚರಿಸಲಾಗುತ್ತಿದೆ. ಈ ದಿನವನ್ನು ವಿಶಿಷ್ಟವಾಗಿ ಆಚರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಸರ್ಕಾರಿ ಕಚೇರಿ ಮತ್ತು ಶಾಲಾ ಕಾಲೇಜುಗಳಲ್ಲಿ ಸಂವಿಧಾನ ದಿನವನ್ನು ಅರ್ಥಬದ್ಧವಾಗಿ ಆಚರಿಸಲು ನಿರ್ಧರಿಸಿದೆ.
1949ರ ನವೆಂಬರ್ 26ರಂದು ಸಂವಿಧಾನ ಸಭೆಯು ಭಾರತೀಯ ಸಂವಿಧಾನವನ್ನು ಅಂಗೀಕರಿಸಲಾಗಿತ್ತು ಮತ್ತು 1950ರ ಜನವರಿ 26ರಂದು ಜಾರಿಗೆ ಬಂದಿತ್ತು. ಆದ್ದರಿಂದ ಪ್ರತಿ ವರ್ಷ ನವೆಂಬರ್ 26ರಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ.
ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಸಾಮೂಹಿಕ ಸಂವಿಧಾನ ಓದುವ ಕಾರ್ಯಕ್ರಮ ಇರುತ್ತದೆ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬೆಳಗ್ಗೆ 11 ಗಂಟೆಗೆ ಸಂವಿಧಾನದ ಪೀಠಿಕೆಯನ್ನು ಓದುವುದು ಕಡ್ಡಾಯವಾಗಿರುತ್ತದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ ನಡೆಯಲಿದೆ.
ವಿಶೇಷವಾಗಿ ಎಲ್ಲಾ ಶಾಲಾ ಕಾಲೇಜುಗಳಲ್ಲೂ ಸಂವಿಧಾನದ ಮಹತ್ವವನ್ನು ತಿಳಿಸುವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚನೆ ನೀಡಲಾಗಿದೆ. ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪ್ರತಿಗಳನ್ನು ಹಿಡಿದುಕೊಂಡು “ಸಂವಿಧಾನ ಜಾಗೃತಿ ಜಾಥಾ” ನಡೆಸಬೇಕು. ಸಂವಿಧಾನದ ಮೌಲ್ಯಗಳ ಕುರಿತು ಭಾಷಣ, ಚರ್ಚೆ, ಪ್ರಶ್ನೋತ್ತರ ಸ್ಪರ್ಧೆ ಹಮ್ಮಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಪ್ರತಿ ಶಾಲೆ ಕಾಲೇಜಿನಲ್ಲಿ ಸಂವಿಧಾನದ ಪ್ರತಿಯನ್ನು ಪ್ರದರ್ಶಿಸುವಂತೆ ಮತ್ತು ವಿದ್ಯಾರ್ಥಿಗಳಿಗೆ ಅದರ ಮಹತ್ವವನ್ನು ವಿವರಿಸುವಂತೆ ಸೂಚಿಸಲಾಗಿದೆ. “ಡಾ. ಬಿ.ಆರ್. ಅಂಬೇಡ್ಕರ್ ಅವರ ಕನಸಿನ ಸಂವಿಧಾನವನ್ನು ಯುವ ಪೀಳಿಗೆಗೆ ಪರಿಚಯಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ” ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ರಾಜ್ಯಮಟ್ಟದ ಸಂವಿಧಾನ ದಿನಾಚರಣೆ ನಡೆಯಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಲಿದ್ದಾರೆ. ಅವರು ಸಂವಿಧಾನದ ಪೀಠಿಕೆಯನ್ನು ಸಾರ್ವಜನಿಕವಾಗಿ ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

