ನಾಳೆಯ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆಯೇ? : ಜೈರಾಮ್ ಪ್ರಶ್ನೆ

Most read

ನವದಹೆಲಿ: ಕಾಶ್ಮೀರದ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಗುರಿಯಾಗಿಸಿ ಸಶಸ್ತ್ರ ಪಡೆಗಳು ನಡೆಸಿರುವ ಆಪರೇಷನ್ ಸಿಂಧೂರಕಾರ್ಯಾಚರಣೆಯ ಕುರಿತು ವಿವರಣೆ ನೀಡಲು ಕೇಂದ್ರ ಸರ್ಕಾರ ನಾಳೆ ಗುರುವಾರ ಸರ್ವಪಕ್ಷ ಸಭೆ ಕರೆದಿದೆ. ನಾಳೆ ಬೆಳಗ್ಗೆ 11ಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯಲಿದೆ.

ಈ ಸಭೆ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಭಾಗಿಯಾಗುತ್ತಾರೆ ಎಂಬ ನಿರೀಕ್ಷೆಯಿದೆ. ಅವರು ಕಳೆದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಪ್ರಧಾನಿ ಅವರ ಉಪಸ್ಥಿತಿಯನ್ನು ನಾವು ಬಯಸಿದ್ದೆವು. ನಮ್ಮೆಲ್ಲ ಲೋಕಸಭಾ ಹಾಗೂ ರಾಜ್ಯಸಭಾ ಸದ್ಯಸರೂ ನಾಳಿನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಪಹಲ್ಗಾಮ್‌ ನಲ್ಲಿ ನಡೆದ ಭಯೋತ್ಪಾದಕರ ದಾಳಿ ಬೆನ್ನಲ್ಲೇ ಕೇಂದ್ರ ಸರ್ಕಾರ ಸರ್ವ ಪಕ್ಷ ಸಭೆ ಕರೆದಿತ್ತು. ಆದರೆ ಆ ಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿರಲಿಲ್ಲ. ಸೌದಿ ಅರೇಬಿಯಾ ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಸ್ವದೇಶಕ್ಕೆ ಮರಳಿದ್ದ ಪ್ರಧಾನಿ ಮೋದಿ ಸಭೆಯಲ್ಲಿ ಭಾಗವಹಿಸದೇ ಬಿಹಾರಕ್ಕೆ ತೆರಳಿ ಪಕ್ಷದ ಚುನಾವಣಾ ಪ್ರಚಾರ  ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅವರ ಈ ವರ್ತನೆ ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಇಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಉಗ್ರರ ವಿರುದ್ಧ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿರುವ ಭಾರತೀಯ ಸಶಸ್ತ್ರ ಪಡೆಯ ಸಾಧನೆ ಬಗ್ಗೆ ಕಾಂಗ್ರೆಸ್ ಹರ್ಷ ವ್ಯಕ್ತಪಡಿಸಿದೆ.

ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರ ಹಾಗೂ ಸಶಸ್ತ್ರ ಪಡೆ ಕೈಗೊಳ್ಳುವ ಎಲ್ಲ ಕ್ರಮಗಳನ್ನು ಕಾಂಗ್ರೆಸ್ ಬೆಂಬಲಿಸಿದೆ. ಭಾರತೀಯ ಸಶಸ್ತ್ರ ಪಡೆಯ ಧೈರ್ಯ, ಅರ್ಪಣೆ ಹಾಗೂ ದೇಶಭಕ್ತಿಗೆ ಸೆಲ್ಯೂಟ್ ಎಂದು ಜೈರಾಮ್ ಹೇಳಿದ್ದಾರೆ. ಈ ಕ್ಷಣದಲ್ಲಿ ಏಕತೆ ಹಾಗೂ ಒಗಟ್ಟು ಅತ್ಯಂತ ಮಹತ್ವದ್ದಾಗಿದೆ. ಸಶಸ್ತ್ರ ಪಡೆಗೆ ಕಾಂಗ್ರೆಸ್‌ನ ಸಂಪೂರ್ಣ ಬೆಂಬಲವಿದ್ದು, ರಾಷ್ಟ್ರೀಯ ಹಿತಾಸಕ್ತಿಗೆ ನಮ್ಮ ಮೊದಲ ಆದ್ಯತೆ ಎಂದು ಹೇಳಿದ್ದಾರೆ.

More articles

Latest article