ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಟೋಲ್ ಸಂಗ್ರಹ ದುಪ್ಪಟ್ಟಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಗೆ ತಿಳಿಸಿದ್ದಾರೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ನೀಡಿರುವ ಮಹಿತಿಗಳ ಪ್ರಕಾರ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 2023-24 ರ ಹಣಕಾಸು ವರ್ಷದಲ್ಲಿ ಟೋಲ್ ಪ್ಲಾಜಾಗಳಲ್ಲಿ ಹೆದ್ದಾರಿ ಬಳಕೆದಾರರ ಶುಲ್ಕವಾಗಿ 56,882 ಕೋಟಿ ರೂ. ಸಂಗ್ರಹಿಸಿದೆ. 2019-20ರಲ್ಲಿ 27,503 ಕೋಟಿ ರೂಪಾಯಿ ಸಂಗ್ರಹವಾಗಿತ್ತು ಎಂದು ತಿಳಿಸಿದ್ದಾರೆ.
ಕಳೆದ 5 ವರ್ಷಗಳಲ್ಲಿ 1,50,000 ಕಿಲೋಮೀಟರ್‌ಗಳ ಒಟ್ಟು ಹೆದ್ದಾರಿಗಳಲ್ಲಿ ಸುಮಾರು 70,000 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆ ಮತ್ತು ನಿರ್ವಹಣೆಯನ್ನು ಪ್ರಾಧಿಕಾರ ವಹಿಸಿಕೊಂಡಿದೆ. ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಮತ್ತು ಸಂಗ್ರಹಣೆ) ನಿಯಮಗಳು, 2008 ರ ಅನುಸಾರವಾಗಿ ಈ ಹೆದ್ದಾರಿಗಳಲ್ಲಿ ಬಳಕೆದಾರರ ಶುಲ್ಕವನ್ನು (ಟೋಲ್‌ಗಳು) ಸಂಗ್ರಹಿಸಲು ಪ್ರಾಧಿಕಾರಕ್ಕೆ ಅಧಿಕಾರವಿದೆ. ಪ್ರಸ್ತುತ, ಅಂದಾಜು 45,000 ಕಿಮೀ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್ ಪ್ರೆಸ್ ವೇಗಳಿಗೆ ಬಳಕೆದಾರರ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ಸುಮಾರು 1,015 ಟೋಲ್ ಪ್ಲಾಜಾಗಳನ್ನು ಪ್ರಾಧಿಕಾರ ನಿರ್ವಹಿಸುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಕೊರೊನಾ ನಂತರ, 2020-21ರಲ್ಲಿ ಟೋಲ್ ಸಂಗ್ರಹವು 27,926 ಕೋಟಿ ರೂ.ಗಳಷ್ಟಿದ್ದು, ಮರು ವರ್ಷ 33,928 ಕೋಟಿ ರೂ.ಗೆ ಏರಿಕೆಯಾಗಿತ್ತು. 2022-23ರಲ್ಲಿ ಸಂಗ್ರಹಣೆಯು 48,032 ಕೋಟಿ ರೂ.ಗೆ ಏರಿಕೆಯಾಗಿದೆ ಎಂದೂ ಅವರು ತಿಳಿಸಿದ್ದಾರೆ.52021ರ ಫೆಬ್ರವರಿ 16ರಿಂದ ಜಾರಿಗೆ ಬರುವಂತೆ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿನ ಎಲ್ಲಾ ಲೇನ್‌ಗಳನ್ನು ‘ಫಾಸ್ಟ್ ಟ್ಯಾಗ್’ ಲೇನ್‌ಗಳಾಗಿ ಸರ್ಕಾರ ಘೋಷಿಸಿದ್ದು, ಇದು ಬಳಕೆದಾರರ ಶುಲ್ಕ ಸಂಗ್ರಹಣೆಯ ಒಟ್ಟಾರೆ ದಕ್ಷತೆಯನ್ನು ಸುಧಾರಿಸಿದೆ ಎಂದು ಅವರು ತಿಳಿಸಿದ್ದಾರೆ.