Friday, December 12, 2025

ಗಾಂಧೀಜಿ, ಅಂಬೇಡ್ಕರ್ ಸ್ಮರಣೆ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದ ಮೂಲ ಉದ್ದೇಶ:ಡಿ.ಕೆ ಶಿವಕುಮಾರ್

Most read

ಧಾರವಾಡ: ಮಹಾತ್ಮಾ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ಸ್ಮರಣೆ ಹಾಗೂ ಸಂವಿಧಾನದ ರಕ್ಷಣೆಯ ಉದ್ದೇಶದಿಂದ “ಜೈ ಬಾಪು, ಜೈ ಭೀಮ್, ಜೈ ಸಂವಿಧಾನ” ಸಮಾವೇಶ ನಡೆಸಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಧಾರವಾಡದಲ್ಲಿ ಪಕ್ಷದ ನಾಯಕರೊಂದಿಗೆ ಸಮಾವೇಶದ ಪೂರ್ವಭಾವಿ ಸಭೆ ಹಾಗೂ ನಂತರ ನಡೆದ ಮಾಧ್ಯಮಗೋಷ್ಠಿಯಲ್ಲಿ ಶಿವಕುಮಾರ್ ಅವರು ಮಾತನಾಡಿದರು.

ಜೈ ಬಾಪು, ಜೈ ಭೀಮ್ ಜೈ ಸಂವಿಧಾನ ಸಮಾವೇಶ ಇಡೀ ದೇಶಕ್ಕೆ ದೊಡ್ಡ ಸಂದೇಶ ರವಾನಿಸುವ ಸಮಾವೇಶವಾಗಿದೆ. ಬೆಳಗಾವಿ ಮೂಲಕ ದೇಶಕ್ಕೆ ಹೊಸ ಸಂದೇಶ ರವಾನಿಸಲಾಗುವುದು. ಗಾಂಧಿ ಅವರ ಇತಿಹಾಸ ಕಾಂಗ್ರೆಸ್ ಇತಿಹಾಸ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗಗಳು ಅಧಿಕಾರಕ್ಕೆ ಬಂದಂತೆ. ಗಾಂಧೀಜಿ ಅವರ ಕಾರ್ಯಕ್ರಮವನ್ನು ನಾವು ದೇಶಕ್ಕಾಗಿ ಮಾಡುತ್ತಿದ್ದೇವೆ. ದೇಶಕ್ಕೆ ಅವರು ಕೊಟ್ಟ ಬುನಾದಿ ಮೇಲೆ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.

ಸಂವಿಧಾನ ಪವಿತ್ರ ಗ್ರಂಥ: ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿಕೊಂಡು ನೂರು ವರ್ಷ ಪೂರ್ಣಗೊಂಡಿದೆ. ಅಖಂಡ ಕರ್ನಾಟಕಕ್ಕೆ ವೇದಿಕೆ ಸಜ್ಜು ಮಾಡಿದ್ದು 1924ರಲ್ಲೇ. ಗಂಗಾಧರ ದೇಶಪಾಂಡೆ ಅವರು ಇದಕ್ಕೆ ಶ್ರಮವಹಿಸಿದ್ದರು. ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ದೇಶಕ್ಕೆ ಸ್ವಾಂತ್ರ್ಯ ಬಂದಿದೆ, ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಸಿಕ್ಕಿದೆ. ರಾಷ್ಟ್ರಧ್ವಜ, ರಾಷ್ಟ್ರಗೀತೆ ಸಿಕ್ಕಿದೆ. ಸಂವಿಧಾನವನ್ನು ಪಡೆದಿದ್ದೇವೆ. ಈ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಶಾಸಕರು, ಮಂತ್ರಿಗಳು, ಪಂಚಾಯ್ತಿ ಸದಸ್ಯರಾಗಿ ಆಯ್ಕೆಯಾಗಿದ್ದೇವೆ. ಸಂವಿಧಾನ ನಮ್ಮ ಪಾಲಿನ ಭಗವದ್ಗೀತೆ, ಕುರಾನ್ ಹಾಗೂ ಬೈಬಲ್ ಆಗಿದೆ. ಇದನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.

ಜ.21ರಂದು ಬೆಳಗ್ಗೆ 10 ಗಂಟೆಗೆ ಸರ್ಕಾರಿ ಕಾರ್ಯಕ್ರಮ ಸುವರ್ಣಸೌಧದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಕೇವಲ ಆಹ್ವಾನಿತರಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ನಂತರ ಪಕ್ಷದ ಕಾರ್ಯಕ್ರಮ ನಡೆಯಲಿದೆ. ಪಕ್ಷದ ಕಾರ್ಯಕ್ರಮಕ್ಕೆ ಎಲ್ಲಾ ಸಾರ್ವಜನಿಕರಿಗೂ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಬಿಜೆಪಿ ಅಪಮಾನ ಮಾಡಿದ್ದು, ಅವರ ಗೌರವ ಉಳಿಸಿ, ಸಂವಿಧಾನ ರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ನೀಡಲು ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ನಮಗೆ ಜನ ಸೇರಿಸುವುದು ದೊಡ್ಡ ವಿಚಾರವಲ್ಲ. ಈ ಭಾಗದಿಂದ ಹೆಚ್ಚಿನ ಜನರು ಸೇರಬೇಕು. ನಾವು ರಾಜಕೀಯ ಸಭೆ ಮಾಡುತ್ತಿಲ್ಲ. ಐತಿಹಾಸಿಕ ಸಭೆ ಮಾಡುತ್ತಿದ್ದೇವೆ. ನೂರು ವರ್ಷಗಳ ಹಿಂದೆ ಈ ಅಧಿವೇಶನಕ್ಕೆ 80 ಎಕರೆ ಭೂಮಿ ಸಿದ್ಧಪಡಿಸಿ, ಇದಕ್ಕಾಗಿ ಒಂದು ರೈಲ್ವೇ ನಿಲ್ದಾಣ ಆರಂಭಿಸಲಾಗಿತ್ತು ಎಂದು ತಿಳಿಸಿದರು.

ಸಮಾವೇಶ 2028ರ ಚುನಾವಣೆಗೆ ಮುನ್ನುಡಿ ಬರೆಯಬೇಕು:

ಈ ಸಮಾವೇಶದಲ್ಲಿ ಭಾಗವಹಿಸುವುದೇ ನಿಮ್ಮ ಇತಿಹಾಸ. ಹಿಂದೆ ಆಗಿದ್ದು ಚರಿತ್ರೆ, ಮುಂದೆ ಆಗುವುದು ಭವಿಷ್ಯ. ಇಂದು ನಿಮ್ಮ ಕೈಯಲ್ಲಿದೆ. ಈಗ ನಡೆಯಲಿರುವ ಕಾರ್ಯಕ್ರಮದಲ್ಲಿ ನಿಮ್ಮ ಕೊಡುಗೆ ನಿಮ್ಮ ಜೀವನದಲ್ಲಿ ದೊಡ್ಡ ಭಾಗವಾಗಿರಲಿದೆ. ಮತ್ತೆ ಇಂತಹ ಐತಿಹಾಸಿಕ ಕಾರ್ಯಕ್ರಮ ಸಿಗುವುದಿಲ್ಲ. ಗಾಂಧೀಜಿ ಅವರ ಪರಂಪರೆಯನ್ನು ಬಳಸಿಕೊಳ್ಳಲು ಕಾಂಗ್ರೆಸ್ಸಿಗರಿಗೆ ಮಾತ್ರ ಅವಕಾಶವಿದೆಯೇ ಹೊರತು, ಬಿಜೆಪಿ ಹಾಗೂ ದಳದವರಿಗೆ ಇಲ್ಲ ಎಂದು ತಿಳಿಸಿದರು.

2023ರ ವಿಧಾನಸಭೆ ಚುನಾವಣೆಗೂ ಮುನ್ನ ಬೆಳಗಾವಿಯ ಗಾಂಧೀಜಿ ಬಾವಿಯಿಂದ ನೀರು ತೆಗೆದು ಬೆಳಗಾವಿ ರಸ್ತೆ ಸ್ವಚ್ಛಗೊಳಿಸಿ ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ನಾವು ಚುನಾವಣಾ ಪ್ರಚಾರ ಆರಂಭಿಸಿದೆವು. ನಂತರ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇವೆ. ನಿಮ್ಮಲ್ಲಿ ಅನೇಕರು ಸಮಿತಿ ಸದಸ್ಯರು, ಪಂಚಾಯ್ತಿ ನಾಯಕರು ಇದ್ದೀರಿ. ನಿಮ್ಮಲ್ಲಿ ಒಬ್ಬೊಬ್ಬರು 10 ಜನ ಕರೆತಂದರೂ ಒಂದು ಕ್ಷೇತ್ರದಿಂದ 10 ಸಾವಿರ ಜನ ಆಗುತ್ತಾರೆ. ನಿಮ್ಮ ನಾಯಕರ ಜತೆ ನಾನು ಚರ್ಚೆ ಮಾಡಿದ್ದೇನೆ. ಇದು ವ್ಯಕ್ತಿಯ ಕಾರ್ಯಕ್ರಮವಲ್ಲ, ದೇಶದ ಕಾರ್ಯಕ್ರಮ, ಪಕ್ಷದ ಕಾರ್ಯಕ್ರಮ. ನೀವೆಲ್ಲರೂ ಸೇರಿ ಇದನ್ನು ಯಶಸ್ವಿಗೊಳಿಸಬೇಕು ಎಂದರು.

ಸರ್ಕಾರದ ಹಣದಲ್ಲಿ ನಕಲಿ ಗಾಂಧಿಗಳು ಸಮಾವೇಶ ಮಾಡುತ್ತಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪದ ಬಗ್ಗೆ ಕೇಳಿದಾಗ, ನಾವೆಲ್ಲರೂ ನಿಜವಾದ ಗಾಂಧಿ ವಂಶಸ್ಥರು. ಅವರು ಗೋಡ್ಸೆ ವಂಶಸ್ಥರು. ಸುವರ್ಣಸೌಧದಲ್ಲಿ ಸರ್ಕಾರಿ ಕಾರ್ಯಕ್ರಮ ನಡೆಯಲಿದೆ. ಉಳಿದಂತೆ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ ಎಂದರು.

More articles

Latest article