ಬೆಂಗಳೂರು: ಹೊರ ವರ್ತುಲ ರಸ್ತೆ (ಓ ಆರ್ ಆರ್) ಕಾರಿಡಾರ್‌ನಲ್ಲಿ ಅದರಲ್ಲೂ ವಿಶೇಷವಾಗಿ ಇಬ್ಲೂರು ಜಂಕ್ಷನ್ ಬಳಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ವಿಪ್ರೋ ಕ್ಯಾಂಪಸ್ ಮೂಲಕ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಪ್ರೋ ಸಂಸ್ಥಾಪಕ-ಅಧ್ಯಕ್ಷ ಅಜೀಂ ಪ್ರೇಮ್‌ಜಿ ಅವರಿಗೆ ಪತ್ರ ಬರೆದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್ 19 ರಂದು ಈ ಪತ್ರ ಬರೆದಿದ್ದು, ಬೆಂಗಳೂರು ಮಹಾನಗರ ಪ್ರಸ್ತುತ ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಪೀಕ್ ಅವರ್ ಸಂಚಾರ ದಟ್ಟಣೆಯು ಒಂದಾಗಿದೆ. ಈ ಸಂಚಾರ ದಟ್ಟಣೆಯು ಚಲನೆ, ಉತ್ಪಾದಕತೆ ಮತ್ತು ನಗರ ಜೀವನದ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯದಮಾಹಿತಿ ತಂತ್ರಜ್ಞಾನ ಕೇತ್ರದ ಪ್ರಗತಿಗೆ ಮತ್ತು ಒಟ್ಟಾರೆ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ವಿಪ್ರೋ ನೀಡುತ್ತಿರುವ ನಿರಂತರ ಕೊಡುಗೆಯನ್ನು ಪ್ರಾಮಾಣಿಕವಾಗಿ ಪ್ರಶಂಸಿಸುತ್ತೇನೆ. ಪ್ರಸ್ತುತ ಬೆಂಗಳೂರು ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಒಂದಾಗಿರುವ ವಿಶೇಷವಾಗಿ ಇಬ್ಲೂರು ಜಂಕ್ಷನ್‌ನಲ್ಲಿರುವ ಹೊರ ವರ್ತುಲ ರಸ್ತೆ ಕಾರಿಡಾರ್‌ನಲ್ಲಿ, ಪೀಕ್ ಸಮಯದಲ್ಲಿ ತೀವ್ರ ಸಂಚಾರ ದಟ್ಟಣೆಯಾಗುತ್ತಿರುವುದು ನಿಮಗೂ ಅರಿವಿದೆ ಎಂದು ಭಾವಿಸುತ್ತೇನೆ.
ಈ ಸಂದರ್ಭದಲ್ಲಿ, ಪರಸ್ಪರ ಒಪ್ಪಿದ ನಿಯಮಗಳು ಮತ್ತು ಅಗತ್ಯ ಭದ್ರತಾ ಪರಿಗಣನೆಗಳಿಗೆ ಒಳಪಟ್ಟು ವಿಪ್ರೋ ಕ್ಯಾಂಪಸ್ ಮೂಲಕ ಸೀಮಿತ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಕೋರುತ್ತೇನೆ. ಹಲವಾರು ಪರೀಕ್ಷೆಗಳು ಮತ್ತು ಸಂಚಾರ ತಜ್ಞರ ವರದಿಗಳ ಪ್ರಕಾರ ORRನ ಅಕ್ಕಪಕ್ಕದ ಪ್ರದೇಶಗಳಲ್ಲಿ, ವಿಶೇಷವಾಗಿ ಪೀಕ್ ಅವರ್ ಗಳಲ್ಲಿ ವಿಪ್ರೋ ಕ್ಯಾಂಪಸ್ ಮೂಲಕ ವಾಹನ ಸಂಚಾರಕ್ಕೆ ಅವಕಾಶ ನೀಡಿದರೆ ಸುಮಾರು ಶೇ.30 ರಷ್ಟು ಸಂಚಾರದಟ್ಟಣೆಯನ್ನು ಕಡಿಮೆ ಮಾಡಬಹುದಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ಮನವಿಗೆ ತಾವು ಮತ್ತು ತಮ್ಮ ಸಂಸ್ಥೆ ಸ್ಪಂದಿಸಿದಲ್ಲಿ ಸಂಚಾರ ಅಡಚಣೆಗಳನ್ನು ನಿವಾರಿಸುವಲ್ಲಿ ಹೆಚ್ಚಿನ ಕೊಡುಗೆ ನೀಡಿದಂತಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ.
ಅಜೀಂ ಪ್ರೇಮ್ ಜಿ ಮತ್ತು ಅವರ ವಿಪ್ರೋ ಸಂಸ್ಥೆ ಸರ್ಕಾರದ ಮನವಿಗೆ ಸ್ಪಂದಿಸಲಿದೆಯೇ ಎಂದು ಕಾದು ನೋಡಬೇಕಿದೆ.