ಬೆಂಗಳೂರು: ರಾಜ್ಯ ಬಿಜೆಪಿ ಪಕ್ಷದಲ್ಲಿ ನಡೆಯುತ್ತಿರುವ ಅಂತರಿಕ ಕೋಲಾಹಲವನ್ನು ಮುಚ್ಚಿಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರದ ಮೇಲೆ ಬಿಜೆಪಿ ಪಕ್ಷ ಕೆಸರೆರಚುವ ಕೆಲಸ ಮಾಡುತ್ತಿದೆ. ತಮ್ಮ ಪಕ್ಷದಲ್ಲೇ ಕಿತ್ತಾಟ, ಹುಳುಕುಗಳು ಇಡೀ ರಾಜ್ಯಕ್ಕೆ ಕಾಣುತ್ತಿದ್ದರೂ ವಿನಾಕಾರಣ ಮುಡಾ ಹಾಗೂ ವಕ್ಫ್ ವಿಚಾರವನ್ನು ಪದೇ ಪದೇ ಪ್ರಸ್ತಾಪಿಸುತ್ತಿವೆ ಎಂದು ಕೆಪಿಸಿಸಿಯ ಉಪಾಧ್ಯಕ್ಷ ವಿ.ಎಸ್ ಉಗ್ರಪ್ಪ ಆರೋಪಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಯಡಿಯೂರಪ್ಪ ಹಾಗು ಬಸವರಾಜ ಬೊಮ್ಮಾಯಿ ಸರ್ಕಾರಗಳ ಅವಧಿಯಲ್ಲಿ ವಕ್ಫ್ ಸಂಬಂಧ ಸುಮಾರು 2000 ನೋಟೀಸ್ ಗಳನ್ನು ನೀಡಲಾಗಿತ್ತು . ಆದರೆ ಸಿದ್ದರಾಮಯ್ಯ ಸರ್ಕಾರ ಅವಧಿಯಲ್ಲಿ 1500 ನೋಟೀಸ್ ಗಳನ್ನು ಮಾತ್ರ ನೀಡಲಾಗಿದೆ. ಇಷ್ಟೆಲ್ಲ ತಪ್ಪುಗಳು ತಮಲ್ಲೇ ಇದ್ದರೂ, ವಿನಾಕಾರಣ ರಾಜ್ಯ ಸರ್ಕಾರದ ಮೇಲೆ ಬಿಜೆಪಿ ಬೆರಳು ತೋರಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಬಿಜೆಪಿ ಪಕ್ಷದಲ್ಲಿ ವಿಜಯೇಂದ್ರ ಮತ್ತು ಯತ್ನಾಳ್ ಕಿತ್ತಾಟವಿದ್ದರೂ ಕಾಂಗ್ರೆಸ್ ಸರ್ಕಾರದ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದೆ. ರಾಜ್ಯದ ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವ ಬಿಜೆಪಿ ನಾಯಕರು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಪಡಿಸಿದರು.
ವಿರೋಧ ಪಕ್ಷದಲ್ಲಿರುವ ಬಿಜೆಪಿ ನಾಯಕರು, ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ, ಜನಪರ ಕೆಲಸಗಳಿಗೆ ಅಭಿಪ್ರಾಯ ಮತ್ತು ಸಲಹೆಗಳನ್ನು ಕೊಟ್ಟು ಸರಿಯಾದ ವಿರೋಧ ಪಕ್ಷದ ಕೆಲಸ ಮಾಡಿ ಎಂದೂ ಅವರು ತಾಕೀತು ಮಾಡಿದರು.
ಪ್ರಧಾನಿ ಮೋದಿ ಅವರ ಗೆಳೆಯ ಅದಾನಿಯವರ ಸೋಲಾರ್ ಯೋಜನೆ ಹಗರಣ ಬಗ್ಗೆ ವಿಶ್ವವ್ಯಾಪಿ ಚರ್ಚೆ ಆಗುತ್ತಿದೆ. ಇದರ ಬಗ್ಗೆ ಲೋಕಸಭೆ ಮತ್ತು ರಾಜ್ಯಸಭಾ ಕಲಾಪದಲ್ಲಿ ಮಾತನಾಡಲು ಅವಕಾಶ ಕೊಡದಿರುವುದು ಪ್ರಧಾನಿಯವರು ಪರೋಕ್ಷವಾಗಿ ಅದಾನಿ ಹಾಗೂ ಅವರ ತಂಡವನ್ನು ರಕ್ಷಣೆ ಮಾಡುತ್ತಿರುವುದು ಎದ್ದು ಕಾಣುತ್ತಿದೆ. ಅಂದು ಬೋಫೋರ್ಸ್ ನ 65ಕೋಟಿ ಹಗರಣದ ಬಗ್ಗೆ ಚರ್ಚೆ ಮಾಡಲು ಬಿಜೆಪಿ ನಾಯಕರಾದ ವಾಜಪೇಯಿ, ಅಡ್ವಾಣಿ ಅವರು ಅವಕಾಶ ಕೋರಿದ್ದಾಗ, ಅಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಅನುಮತಿ ನೀಡಿತ್ತು. ಇಂದಿನ ಮೋದಿ ಸರ್ಕಾರ ಯಾಕೆ ಚರ್ಚೆಗೆ ಅನುಮತಿ ನೀಡುತ್ತಿಲ್ಲ. ತಪ್ಪು ಮಾಡದಿದ್ದರೆ ಏಕೆ ಈ ಭಯ ಎಂದು ಉಗ್ರಪ್ಪ ಪ್ರಶ್ನಿಸಿದರು.
ಸುಪ್ರೀಂಕೋರ್ಟ್ ವಕೀಲರಾದ ಮಹೇಶ್ ಜೇಠ್ಮಲಾನಿ ಹಾಗೂ ಅನೇಕ ಹಿರಿಯ ವಕೀಲರು ತಮ್ಮ ವೃತ್ತಿಯ ನೀತಿ, ನಿಯಮಗಳನ್ನು ಮರೆತು ಅದಾನಿಯ ಪರ ಮಾತನಾಡುತ್ತಿರುವುದನ್ನು ನೋಡಿದರೆ ಕೇಂದ್ರ ಬಿಜೆಪಿ ಸರ್ಕಾರ ವಕೀಲರನ್ನು ಈ ವಿಷಯಗಳಿಗೆ ದುರ್ಬಳಕೆ ಮಾಡುತ್ತಿರುವುದು ಎದ್ದು ಕಾಣುತ್ತಿದೆ. ಇಂತಹ ಕೆಲಸಗಳಿಗೆ ಬೆಂಬಲ ನೀಡುತ್ತಿರುವ ಕೇಂದ್ರ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ. ಮೋದಿ, ಅಮಿತ್ ಶಾ ಅವರಿಗೆ ಭಾರತದ ಸಂವಿಧಾನ ಮತ್ತು ದೇಶದ ಜನರ ನಂಬಿಕೆ ಉಳಿಸಿಕೊಳ್ಳಬೇಕು ಎಂದಿದ್ದರೆ ಅದಾನಿಯವರ ಎಲ್ಲಾ ಆರೋಪಗಳನ್ನು ಚರ್ಚೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿದಾಗ ಕುಮಾರ ಬಂಗಾರಪ್ಪನವರ ನೇತೃತ್ವದಲ್ಲಿ ಈ ವಕ್ಫ್ ಭೂಮಿ ವಿಚಾರವಾಗಿ ಸಮಿತಿ ರಚಿಸಿತ್ತು. ಆದರೆ ಈಗ ಕುಮಾರ ಬಂಗಾರಪ್ಪನರು ಯತ್ನಾಳ್ ಜೊತೆ ಸೇರಿ ವಕ್ಫ್ ಸಮಿತಿ ಸರಿಯಾಗಿಲ್ಲ ಎಂದು ಎರಡು ನಾಲಗೆಯ ಮಾತುಗಳನ್ನಾಡುತ್ತಿದ್ದಾರೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ. ರೇವಣ್ಣಆಪಾದಿಸಿದರು.
ಬಿಜೆಪಿ, ಮೋದಿ ಹಾಗೂ ಅದಾನಿಯ ಗೆಳತನ ಎಲ್ಲರಿಗೂ ಗೊತ್ತಿರುವ ವಿಷಯ. ಮೊನ್ನೆ ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಅದಾನಿಯವರು ಪರೋಕ್ಷವಾಗಿ ಬಿಜೆಪಿಗೆ ಬೆಂಬಲಿಸಿರುವುದು ಕಂಡು ಬಂದಿದೆ. ಅವರ ವಿರುದ್ಧ ಹಗರಣದ ಆರೋಪದ ವಿಚಾರವಾಗಿ ಯಾವುದೇ ಚರ್ಚೆ ಆಗದೆ ಕ್ಲೀನ್ ಚೀಟ್ ಕೊಡಲು ಹೇಗೆ ಸಾಧ್ಯ? ಹಲವು ರಾಷ್ಟ್ರಗಳು ಅದಾನಿ ಮೇಲೆ ಆರೋಪಿಸುತ್ತಿರುವ ಬಗ್ಗೆ ಲೋಕಸಭೆ ಕಲಾಪದಲ್ಲಿ ಚರ್ಚೆ ಮಾಡಲು ಅವಕಾಶ ಕೊಡದೆ ಇರುವುದು ಖಂಡನೀಯ ಎಂದರು.