‘ಆಪರೇಷನ್ ಸಿಂಧೂರ‘ ಚರ್ಚೆಗೆ ಸಂಸತ್ ಅಧಿವೇಶನಕ್ಕೆ ಟಿಎಂಸಿ ಆಗ್ರಹ

Most read

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಪ್ರತೀಕಾರವಾಗಿ ನಡೆಸಿದ ‘ಆಪರೇಷನ್ ಸಿಂಧೂರ‘ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಸಂಸತ್ತಿನ ವಿಶೇಷ ಅಧಿವೇಶನ ನಡೆಸುವಂತೆ ತೃಣಮೂಲ ಕಾಂಗ್ರೆಸ್ ಸಂಸದರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಲೋಕಸಭೆ ಮತ್ತು ರಾಜ್ಯಸಭೆಯ ಟಿಎಂಸಿ ಸದಸ್ಯರು ಹಳೆಯ ಸಂಸತ್ತು ಕಟ್ಟಡದ ಸಭಾಂಗಣದಲ್ಲಿ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ.
ಸಭೆಯ ನಂತರ ಮಾತನಾಡಿದ ರಾಜ್ಯಸಭೆಯ ಪಕ್ಷದ ಉಪನಾಯಕಿ ಸಾಗರಿಕಾ ಘೋಷ್, ‘ಆಪರೇಷನ್ ಸಿಂಧೂರ’ದ ನಂತರ ರಾಜತಾಂತ್ರಿಕ ಕಾರ್ಯಾಚರಣೆಯ ಭಾಗವಾಗಿ ವಿದೇಶಗಳಿಗೆ ಕಳುಹಿಸಿರುವ ಸರ್ವ ಪಕ್ಷಗಳ ನಿಯೋಗಗಳು ಜೂನ್ 5ರಂದು ಮರಳುತ್ತವೆ. ಆ ನಂತರ ಸಂಸತ್ತಿನ ವಿಶೇಷ ಅಧಿವೇಶನ ನಡೆಸಬೇಕೆಂದು ಕೋರಿ ಪ್ರಧಾನಿಗೆ ಪತ್ರ ಬರೆದಿದ್ದೇವೆ ಎಂದು ಹೇಳಿದ್ದಾರೆ.

ಆಪರೇಷನ್ ಸಿಂಧೂರ’ ಕಾರ್ಯಾಚರಣೆಗೆ ಸಂಬಂಧಿಸಿದಂತೆ ದೇಶದ ಜನರಿಗೆ ವಾಸ್ತವಾಂಶಗಳನ್ನು ತಿಳಿಸುವ ಪ್ರಯತ್ನದ ಭಾಗವಾಗಿ ಸಂಸತ್ತಿನ ವಿಶೇಷ ಅಧಿವೇಶನ ನಡೆಸುವಂತೆ ಇತ್ತೀಚೆಗೆ ನಡೆದ ಸರ್ವಪಕ್ಷ ಸಭೆಯಲ್ಲಿಯೂ ಈ ಬೇಡಿಕೆಯನ್ನು ಇಡಲಾಗಿತ್ತು ಎಂದು ಘೋಷ್ ತಿಳಿಸಿದ್ದಾರೆ.

ಭಯೋತ್ಪಾದನೆಯ ವಿರುದ್ಧ ಭಾರತದ ಸಂದೇಶವನ್ನು ರವಾನಿಸಲು ವಿದೇಶಗಳಿಗೆ ಕಳುಹಿಸಲಾದ ಬಹುಪಕ್ಷೀಯ ನಿಯೋಗಗಳನ್ನು ಟಿಎಂಸಿ ಬೆಂಬಲಿಸಿದೆ. ಹಾಗೆಯೇ ದೇಶದ ಜನರು ಸಹ ಸರ್ಕಾರದ ಕ್ರಮಗಳ ಬಗ್ಗೆ ತಿಳಿದುಕೊಳ್ಳಲು ಅರ್ಹರು ಎಂದು ಪಕ್ಷ ತಿಳಿಸಿದೆ.

More articles

Latest article