ಭಾರತದ ಉತ್ಪನ್ನಗಳ ಮೇಲೆ ಪ್ರತಿ ಸುಂಕ; ಟ್ರಂಪ್‌ ಘೋಷಣೆ

Most read

ವಾಷಿಂಗ್ಟನ್:‌  ಅಮೆರಿಕದ ಉತ್ಪನ್ನಗಳ ಮೇಲೆ ಭಾರತ ಚೀನಾ ಸೇರಿದಂತೆ ಹಲವಾರು ರಾಷ್ಟ್ರಗಳು ಹೆಚ್ಚಿನ ಸುಂಕ ವಿಧಿಸುವುದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಟುವಾಗಿ ಟೀಕಿಸಿದ್ದಾರೆ. ಇದರಿಂದ ಅಮೆರಿಕಕ್ಕೆ ಅನ್ಯಾಯವಾಗುತ್ತಿದ್ದು ಬೇರೆ ದೇಶಗಳು ವಿಧಿಸುವಷ್ಟೇ ಸುಂಕವನ್ನು ಅವರ ದೇಶಗಳ ಉತ್ಪನನಗಳ ಮೇಲೆ ಅಮೆರಿಕವೂ ವಿಧಿಸಲಿದೆ ಎಂದು ಟ್ರಂಪ್‌ ಹೇಳಿದ್ದಾರೆ.

ಅಧ್ಯಕ್ಷರಾದ ಬಳಿಕ ಮೊದಲನೇ ಬಾರಿಗೆ ಕಾಂಗ್ರೆಸ್‌ನ (ಸಂಸತ್) ಜಂಟಿ ಅಧಿವೇಶನದಲ್ಲಿ ಮಾತನಾಡಿರುವ ಟ್ರಂಪ್, ಈ ಸುಂಕದ ನಿಯಮಗಳು ಏಪ್ರಿಲ್ 2 ರಿಂದ ಜಾರಿಯಾಗಲಿವೆ ಎಂದು ತಿಳಿಸಿದ್ದಾರೆ.

ಇತರ ದೇಶಗಳು ದಶಕಗಳಿಂದಲೂ ನಮ್ಮ ಉತ್ಪನ್ನಗಳ ಮೇಲೆ ಸುಂಕ ವಿಧಿಸುತ್ತಲೇ ಬಂದಿವೆ. ಈಗ ಪ್ರತಿಯಾಗಿ ಸುಂಕ ವಿಧಿಸುವುದು ನಮ್ಮ ಸರದಿಯಾಗಿದೆ. ಯುರೋಪಿಯನ್ ಒಕ್ಕೂಟ, ಚೀನಾ, ಬ್ರೆಜಿಲ್, ಭಾರತ, ಮೆಕ್ಸಿಕೊ, ಕೆನಡಾ ಸೇರಿದಂತೆ ಹಲವು ದೇಶಗಳು ನಾವು ಅವರ ಉತ್ಪನ್ನಗಳ ಮೇಲೆ ವಿಧಿಸುವುದಕ್ಕಿಂತ ಹೆಚ್ಚಿನ ಸುಂಕವನ್ನು ವಿಧಿಸುತ್ತಿವೆ. ಇದು ಅನ್ಯಾಯ ಎಂದು ಟ್ರಂಪ್ ಗುಡುಗಿದ್ದಾರೆ. ಭಾರತ ದೇಶ ನಮ್ಮ ಮೇಲೆ ಶೇ. 100ಕ್ಕಿಂತ ಹೆಚ್ಚಿನ ಸುಂಕ ವಿಧಿಸುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.

ಶೀಘ್ರದಲ್ಲೇ ಭಾರತ ಮತ್ತು ಚೀನಾ ದೇಶಗಳಿಗೆ ಪ್ರತಿ ಸುಂಕ ವಿಧಿಸುವುದಾಗಿ ಫೆಬ್ರುವರಿಯಲ್ಲಿ ಟ್ರಂಪ್ ಹೇಳಿದ್ದರು. ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ಸಂದರ್ಭದಲ್ಲಿ ಭಾರತದ ಮೇಲೆ ಅಮೆರಿಕ ಸುಂಕ ವಿಧಿಸುವುದು ಖಚಿತ. ಈ ಬಗ್ಗೆ ನನ್ನೊಂದಿಗೆ ಯಾರೂ ವಾದಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ನಮ್ಮ ಉತ್ಪನ್ನಗಳ ಮೇಲೆ ಚೀನಾ ಸರಾಸರಿ ಎರಡು ಪಟ್ಟು ಹೆಚ್ಚು ಸುಂಕ ವಿಧಿಸುತ್ತಿದೆ. ಇನ್ನೊಂದೆಡೆ ದಕ್ಷಿಣ ಕೊರಿಯಾ ನಾಲ್ಕು ಪಟ್ಟು ಹೆಚ್ಚು ಸುಂಕ ವಿಧಿಸುತ್ತಿದೆ. ನಾವು ದಕ್ಷಿಣ ಕೊರಿಯಾಕ್ಕೆ ಮಿಲಿಟರಿ ಸೇರಿದಂತೆ ಇತರ ಹಲವು ಸಹಾಯ ಮಾಡುತ್ತೇವೆ ಆದರೆ, ಅವರು ಹೆಚ್ಚು ಸುಂಕ ವಿಧಿಸಿ ನಮ್ಮ ವೈರಿಯಂತೆ ನಡೆಸಿಕೊಳ್ಳುತ್ತಿದ್ದಾರೆ. ಈ ವ್ಯವಸ್ಥೆಯು ಅಮೆರಿಕಕ್ಕೆ ನ್ಯಾಯಸಮ್ಮತವಲ್ಲ ಎಂದು ಹೇಳಿದ್ದಾರೆ.

More articles

Latest article