ತಿರುಮಲ: ಹಿಂದೂ ದೇಗುಲಗಳಲ್ಲಿ ಅನ್ಯ ಧರ್ಮೀಯರಿಗೆ ಉದ್ಯೋಗ ನೀಡಬಾರದು ಎನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುವುದಾಗಿ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ತಿಳಿಸಿದ್ದಾರೆ. 2018ರಲ್ಲಿ ಅನ್ಯಧರ್ಮೀಯ ನೌಕರರನ್ನು ಗುರುತಿಸಿ ಕ್ರಮ ಕೈಗೊಳ್ಳಲು ಟಿಟಿಡಿ ಮುಂದಾಗಿತ್ತು. ಆಗಿನ ದಾಖಲೆಗಳಲ್ಲಿ ದಾಖಲಾಗಿದ್ದ ವಿವರಗಳ ಆಧಾರದ ಮೇಲೆ ಅನ್ಯಧರ್ಮೀಯರೆಂದು ಪರಿಗಣಿಸಲ್ಪಟ್ಟ ನೌಕರರನ್ನು ಗುರುತಿಸಲಾಗಿತ್ತು.ಆದರೆ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಸಿಎಂ ಆದ ಬಳಿಕ ಈ ಪ್ರಕ್ರಿಯೆ ಸ್ಥಗಿತಗೊಂಡಿತ್ತು.
ಟಿಟಿಡಿಯಲ್ಲಿ 1000ಕ್ಕೂ ಹೆಚ್ಚು ಅನ್ಯಧರ್ಮೀಯ ನೌಕರರಿದ್ದು, ಇವರಲ್ಲಿ ಕೆಲವರು ಟಿಟಿಡಿಯ ಖಾಯಂ ನೌಕರರು, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕಾನೂನು ಸಮಸ್ಯೆಗಳನ್ನು ಬಗೆಹರಿಸಿ ಅನ್ಯಧರ್ಮೀಯ ನೌಕರರ ವರ್ಗಾವಣೆ ಇಲ್ಲವೇ ಕಾಯಂ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ. ಬಿ.ಆರ್.ನಾಯ್ಡು ನೇತೃತ್ವದಲ್ಲಿ ನೂತನವಾಗಿ ರಚನೆಯಾದ ಟಿಟಿಡಿ ಮಂಡಳಿ ಈ ಸಂಬಂಧ ಚರ್ಚೆ ನಡೆಸುತ್ತಿದೆ.
ತಿರುಪತಿ ದೇವಸ್ಥಾನದಲ್ಲಿ ಭಕ್ತರು ಇನ್ನುಮುಂದೆ ದಿನಗಟ್ಟಲೆ ತಿಮ್ಮಪ್ಪನ ದರ್ಶನಕ್ಕಾಗಿ ಕಾದು ನಿಲ್ಲುವ ಸಮಸ್ಯೆಯಿರುವುದಿಲ್ಲ. ಕೇವಲ 3 ಗಂಟೆಗಳ ದರ್ಶನ ಮಾಡಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿದೆ.
ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯು ಕೃತಕ ಬುದ್ಧಿಮತ್ತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಹೊಸ ದರ್ಶನ ವ್ಯವಸ್ಥೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ನೂತನ ವ್ಯವಸ್ಥೆಯಲ್ಲಿ ಭಕ್ತರಿಗೆ ಕೇವಲ 2ಗಂಟೆಯಲ್ಲಿ ವೆಂಕಟೇಶ್ವರನ ದರ್ಶನ ನೀಡಲಾಗುತ್ತದೆ. ಪ್ರಸ್ತುತ ದೇವರ ದರ್ಶನಕ್ಕೆ 20 ರಿಂದ 30ಗಂಟೆಗಳ ಅವಶ್ಯಕತೆ ಇದೆ.