Monday, September 23, 2024

ತಿರುಪತಿ ʼಲಡ್ಡುʼ- ಒಂದು ಲೆಕ್ಕಾಚಾರ ಹೀಗಿದೆ…

Most read

ಪ್ರಸಾದ ಅಂದರೆ ದೇವರಿಗೆ ಪೂಜೆ ಮಾಡಿ ಅರ್ಪಿಸಿದ ನೈವೇದ್ಯ. ಒಂದು ದಿನದಲ್ಲಿ ತಿರುಪತಿ ದೇವಸ್ಥಾನದಲ್ಲಿ ಎಷ್ಟು ಲಡ್ಡುಗಳನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ? ಗೊತ್ತಿಲ್ಲ. ಆದರೆ, ವರದಿಗಳ ಪ್ರಕಾರ ತಿರುಪತಿ ದೇವಸ್ಥಾನ ಪ್ರತೀ ವರ್ಷ 12-13 ಕೋಟಿ ಲಡ್ಡುಗಳನ್ನು ಪ್ರಸಾದ ಎಂದು ಮಾರಾಟ ಮಾಡುತ್ತದೆ. ಅಂದರೆ ತಿಂಗಳಿಗೆ ಕನಿಷ್ಟ ಒಂದು ಕೋಟಿ ಲಡ್ಡುಗಳನ್ನು ಮಾರುತ್ತದೆ. ಅಂದರೆ, ಇಷ್ಟು ಸಂಖ್ಯೆಯ ಲಡ್ಡುಗಳಲ್ಲಿ ಎಲ್ಲವನ್ನೂ ನೈವೇದ್ಯವಾಗಿ ಅರ್ಪಿಸಲಾಗುವುದಿಲ್ಲ. ಅಂದರೆ, ಪ್ರಸಾದವೆಂದು ಕೊಡಲಾಗುವ ಎಲ್ಲಾ ಲಡ್ಡುಗಳು ವಾಸ್ತವದಲ್ಲಿ ಪ್ರಸಾದವಲ್ಲ. ಬದಲಿಗೆ, ಹಣ ಪಡೆದು ಮಾರಾಟ ಮಾಡುವ ಸರಕುಗಳು. ದುಡ್ಡು ಕೊಟ್ಟು ಖರೀದಿಸುವುದು ಪ್ರಸಾದವಾಗುತ್ತದೆಯೇ?

ಮಾರಾಟವೆಂದರೆ ಅಲ್ಲಿ ಲಾಭವಷ್ಟೇ ಪ್ರಮುಖವಾಗುತ್ತದೆ. ಯಾವುದೇ ವ್ಯಾಪಾರದಲ್ಲಿ ಮಾರಾಟ ಮಾಡುವ ವಸ್ತುವನ್ನು ಆದಷ್ಟು ಕಡಿಮೆ ಖರ್ಚಿನಲ್ಲಿ ತಯಾರಿಸಿ, ಸಪ್ಲೈ ಮತ್ತು ಡಿಮಾಂಡನ್ನು ಲೆಕ್ಕ ಹಾಕಿ ಆದಷ್ಟು ಲಾಭಕರ ದರದಲ್ಲಿ ಮಾರುವುದು ಮೂಲ ವ್ಯಾಪಾರಿ ಸೂತ್ರ. ತಿರುಪತಿಯಲ್ಲಿ ಪ್ರತೀದಿನ 3,50,000 ಲಡ್ಡುಗಳನ್ನು ತಯಾರಿಸಲಾಗುತ್ತದೆ. ಇಷ್ಟು ಲಡ್ಡು ತಯಾರಿಸಲು ಪ್ರತೀದಿನ 16,000 ಕೆಜಿ ತುಪ್ಪವನ್ನು ಬಳಸಲಾಗುತ್ತದೆ. ತಿರುಮಲ ತಿರುಪತಿ ದೇವಸ್ಥಾನಂ (TTD)ಯ ಹಿಂದಿನ ಆಡಳಿತ ಮಂಡಳಿ ತಲಾ ಕೆಜಿಗೆ 320-410 ರುಪಾಯಿ ದರದಲ್ಲಿ ಇಷ್ಟು ತುಪ್ಪವನ್ನು ಖರೀದಿಸುತ್ತಿದ್ದಿದ್ದರೆ, ಜೆ ಶ್ಯಾಮಲಾ ರಾವ್ ಎಂಬುವವರ ಮುಂದಾಳತ್ವದ ಈಗಿನ ಮಂಡಳಿ 475 ರುಪಾಯಿಯಲ್ಲಿ ಖರೀದಿಸುತ್ತಿದೆ.

3,50,000 ಲಡ್ಡು ತಯಾರಿಸಲು ತಿರುಪತಿ ದೇವಸ್ಥಾನದ ಅಡುಗೆ ಮನೆಯಲ್ಲಿ 600 ಜನ ವೈಷ್ಣವ ಬ್ರಾಹ್ಮಣ ಅಡುಗೆಯವರಿದ್ದಾರೆ. ಲಡ್ಡು ತಯಾರಿಸಲು ಬೇಕಾಗುವ ತುಪ್ಪ, ಸಕ್ಕರೆ, ಗೋಡಂಬಿ, ಬೆಂಗಾಲ್ ಕಡಳೆ, ಬಾದಾಮಿ ಮತ್ತು ಒಣದ್ರಾಕ್ಷಿಯನ್ನು ಖರೀದಿಸುವುದರಿಂದ ಹಿಡಿದು ಲಡ್ಡು ತಯಾರಿಸುವರೆಗಿನ ಸಂಪೂರ್ಣ ಜವಾಬ್ದಾರಿ ಇವರದ್ದಾಗಿರುತ್ತದೆ. ಇಲ್ಲಿ ನಾಲ್ಕು ವಿಧದ ಲಡ್ಡುಗಳನ್ನು ತಯಾರಿಸಲಾಗುತ್ತದೆ-

1. 25 ಗ್ರಾಂ ತೂಕದ ಚಿಕ್ಕ ಲಡ್ಡು. ಇದನ್ನು ದರ್ಶನದ ನಂತರ ಭಕ್ತರಿಗೆ ಉಚಿತವಾಗಿ ನೀಡಲಾಗುತ್ತದೆ.

2. 160-175 ಗ್ರಾಂ ತೂಕದ ಪ್ರೋಕ್ತಂ ಲಡ್ಡು. ಇದರ ಬೆಲೆ 50 ರುಪಾಯಿ.

3. 700 ಗ್ರಾಂ ತೂಕದ ಕಲ್ಯಾಣೋತ್ಷವಂ ಲಡ್ಡು. ಇದರ ಬೆಲೆ 250 ರುಪಾಯಿ.

4. ಆಸ್ಥಾನ ಲಡ್ಡು. ಇದನ್ನು ದೇವಸ್ಥಾನದೊಳಗಿನವರಿಗೆ ಮಾತ್ರ ನೀಡಲಾಗುತ್ತದೆ, ಭಕ್ತಾದಿಗಳಿಗಿಲ್ಲ.

TTD ಪ್ರತೀವರ್ಷ ತುಪ್ಪ ಖರೀದಿಸಲು ಅಂದಾಜು 250 ಕೋಟಿ ರುಪಾಯಿ ವ್ಯಯಿಸುತ್ತದೆ. ಪ್ರತೀ ವರ್ಷ 12-13 ಕೋಟಿ ಲಡ್ಡುಗಳನ್ನು ಮಾರಿ, ಕನಿಷ್ಟವೆಂದರೆ 500 ಕೋಟಿ ಆದಾಯ ಗಳಿಸುತ್ತದೆ. ಭಕ್ತರು ತಮ್ಮನ್ನು ತಿಮ್ಮಪ್ಪನ ಭಕ್ತರು ಎಂದು ಭಾವಿಸಿದರೆ, ದೇವಸ್ಥಾನದ ಆಡಳಿತ ಮಡಳಿಗೆ ಅವರು ಗ್ರಾಹಕರು. ಈಗಿನ ಕಾಲದಲ್ಲಿ ವ್ಯಾಪಾರವೆಂದರೆ ಗ್ರಾಹಕರಿಗೆ ನಾಮ ಹಾಕುವುದು. ಎಲ್ಲಕ್ಕಿಂತ ದೊಡ್ಡ ನಾಮವೆಂದರೆ ತಿರುಪತಿ ನಾಮ!

ಪಂಜು ಗಂಗೊಳ್ಳಿ

ಖ್ಯಾತ ವ್ಯಂಗ್ಯಚಿತ್ರಕಾರರು.

More articles

Latest article