ಬೆಂಗಳೂರು: ಚಿತ್ರನಟ ಕಮಲ್ ಹಾಸನ್ ಅವರ ಅಭಿನಯದ ತಮಿಳು ಚಿತ್ರ ‘ಥಗ್ ಲೈಫ್’ ಬಿಡುಗಡೆಯನ್ನು ವಿರೋಧಿಸುವ ಜನರ ಬೆದರಿಕೆಗಳಿಂದ ಚಿತ್ರಮಂದಿರಗಳು ಮತ್ತು ನಾಗರೀಕರನ್ನು ರಕ್ಷಿಸುವಲ್ಲಿ ಸರ್ಕಾರಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ, ಕರ್ನಾಟಕದಲ್ಲಿ ಸಾಂವಿಧಾನಿಕ ಆಡಳಿತ ಕುಸಿತವಾಗಿದೆ ಎಂದು ಆರೋಪಿಸಿ ಸುಪ್ರೀಂಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
ವಕೀಲ ಅಥೇನಮ್ ವೇಲನ್, ಸುಪ್ರೀಂ ಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಿದ್ದಾರೆ.
ನಾನು, ನನ್ನ ತಂಡದ ಸದಸ್ಯರಾದ ನವಪ್ರೀತ್ ಕೌರ್, ನಿಲಯ್ ರೈ ಮತ್ತು ಪ್ರಿನ್ಸ್ ಸಿಂಗ್ ಅವರೊಂದಿಗೆ, ಕಮಲ್ ಹಾಸನ್ ಅವರ ‘ಥಗ್ ಲೈಫ್’ ಚಿತ್ರವನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವಲ್ಲಿ ಕರ್ನಾಟಕ ವಿಫಲವಾಗಿದೆ ಎಂಬುದನ್ನು ಎತ್ತಿ ತೋರಿಸುವ ಸಲುವಾಗಿಯೇ ಪಿಐಎಲ್ ಸಲ್ಲಿಸಿರುವುದಾಗಿ ವೇಲನ್ ಹೇಳಿದ್ದಾರೆ.
ಸರಕಾರವೇ ಚಿತ್ರಮಂದಿರಗಳು ಮತ್ತು ನಾಗರಿಕರಿಗೆ ಬಹಿರಂಗವಾಗಿ ಬೆದರಿಕೆ ಹಾಕಲು ಅವಕಾಶ ಮಾಡಿಕೊಟ್ಟಿದೆ, ಇದು ಕಾನೂನಿನ ನಿಯಮವನ್ನು ಹಾಳುಮಾಡುವ ಭಯದ ವಾತಾವರಣವನ್ನು ಸೃಷ್ಟಿಸಿದೆ ಎಂದು ಅವರು ಅರ್ಜಿಯಲ್ಲಿ ಹೇಳಿದ್ದಾರೆ.
ಇಂದು ದೇಶಾದ್ಯಂತ ಥಗ್ ಲೈಫ್ ಬಿಡುಗಡೆಯಾಗಿದೆ. ಆದರೆ ಕನ್ನಡಪರ ಸಂಘಟನೆಗಳ ಬೆದರಿಕೆಗಳು, ಆಕ್ರೋಶ, ವಿರೋಧಗಳಿಂದಾಗಿ ಹೈಕೋರ್ಟ್ ತಡೆಯೊಡ್ಡಿದೆ. ವಿವಿಧ ಸಂಘಟನೆಗಳ ಬೆದರಿಕೆಗಳ ಹೊರತಾಗಿಯೂ, ಯಾವುದೇ ಪ್ರಮುಖ ಕನ್ನಡ ನಟ ಅಥವಾ ಗಣ್ಯ ವ್ಯಕ್ತಿ ಬಹಿಷ್ಕಾರದ ಕರೆಯನ್ನು ಬೆಂಬಲಿಸಿಲ್ಲ ಮತ್ತು ಯಾವುದೇ ಅಧಿಕೃತ ನಿಷೇಧವನ್ನು ವಿಧಿಸಲಾಗಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಇಂತಹ ಬೆದರಿಕೆ ಪರೋಕ್ಷ ಸೆನ್ಸಾರ್ ಶಿಪ್ಗೆ ಸಮನಾಗಿರುತ್ತದೆ ಮತ್ತು ಸಂವಿಧಾನದ 19(1)(a) ವಿಧಿಯನ್ನು ಉಲ್ಲಂಘಿಸುತ್ತದೆ. ಹಿಂಸಾಚಾರಕ್ಕೆ ಪ್ರಚೋದನೆ ನೀಡುವವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲು, ಎಲ್ಲಾ ಸಿನಿಮಾ ಮಂದಿರಗಳನ್ನು ರಕ್ಷಿಸಲು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.