ಬೆಂಗಳೂರಿನಲ್ಲಿ ಮಳೆರಾಯ ಗುರುವಾರ ಬಿಡುವು ಕೊಟ್ಟಿದ್ದಾನೆ. ಹಾಗೆಂದು ಮೈಮರೆಯಬೇಡಿ. ಅಕ್ಟೋಬರ್ 20ರವರೆಗೂ ಮಳೆ ಮುಂದುವರೆಯುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆನೀಡಿದೆ. ಮಳೆ ಇಲ್ಲದಿದ್ದರೂ ಸತತ ಎರಡು ದಿನಗಳಿಂದ ಸುರಿದಿರುವ ಮಳೆಯ ಅನಾಹುತಗಳಿಂದ ಕೆಲವು ಬಡಾವಣೆಗಳ ನಾಗರೀಕರು ಹೊರ ಬರಲಾಗಿಲ್ಲ. ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್ ಮೆಂಟ್, ಹೊರಮಾವು ಬಳಿ ಇರುವ ಸಾಯಿಶ್ರೀ ಲೇಔಟ್, ಮಾನ್ಯತಾ ಟೆಕ್ ಪಾರ್ಕ್, ಮತ್ತು ಬೆಳ್ಳಂದೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಗರೀಕರು ಇನ್ನೂ ಮಳೆಯಿಂದಾಗಿರುವ ಅವಘಡಗಳಿಂದ ಹೊರಬರಲು ಹೋರಾಟ ನಡೆಸುತ್ತಿದ್ದಾರೆ.
ಬುಧವಾರ ಬೆಳಗ್ಗೆ 8.30ರಿಂದ ಸಂಜೆ 5.30ರವರೆಗೆ ಬೆಂಗಳೂರು ನಗರದಲ್ಲಿ 6.8 ಎಂ ಎಂ ಮಳೆಯಾಗಿದ್ದರೆ ಎಚ್ ಎ ಎಲ್ ವಿಮಾನ ನಿಲ್ದಾಣ ಬಳಿ 5.1 ಎಂಎಂ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 5.6 ಎಂಎಂ, ಮಳೆಯಾಗಿದೆ.
ಇಂದು ಮಳೆ ಇಲ್ಲದ ಕಾರಣ ಬಹುತೇಕ ಬಡಾವಣೆಗಳಲಿ ತುಂಬಿಕೊಂಡಿದ್ದ ನೀರನ್ನು ಪಂಪ್ ಮೂಲಕ ಹೊರ ಹರಿಸಲಾಗಿದೆ. ರಮಣಶ್ರೀ ಕ್ಯಾಲಿಪೋರ್ನಿಯಾ ರೆಸಾರ್ಟ್, ಭದ್ರಪ್ಪ ಲೇಔಟ್, ಗೆದ್ದಲಹಳ್ಳಿ, ಸಾಯಿ ಬಡಾವಣೆ, ಸಪ್ತಗಿರಿ ಲೇಔಟ್, ಓಕಳಿಪುರ ಅಂಡರ್ ಪಾಸ್, ಮಡಿವಾಳ ಕೆಳಸೇತುವೆ, ಸಿಲ್ವರ್ ಕೌಂಟಿ ರಸ್ತೆ ಜೆ.ಪಿ. ಪಾರ್ಕ್, ಲಗ್ಗೆರೆ ಮೊದಲಾದ ಬಡಾವಣೆಗಳಲ್ಲಿ ತುಂಬಿಕೊಂಡಿದ್ದ ನೀರನ್ನು ತೆರವುಗೊಳಿಸಲಾಗಿದೆ. ನೀರು ಹರಿಯುವ ಕಾಲುವೆಗಳನ್ನು ಸ್ವಚ್ಛಗೊಳಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಭಾಗಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ ಎಂದು ಬೆಂಗಳೂರಿನ ಹವಾಮಾನ ಇಲಾಖೆಯ ವಿಜ್ಞಾನಿ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.