ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯಗಳ ಮೃತದೇಹಗಳನ್ನು ತನ್ನ ಮೂಲಕ ಹೂತು ಹಾಕಿಸಲಾಗಿದೆ ಎಂದು ದೂರು ನೀಡಿದ್ದ ಾಮಾನಿಕ ದೂರುದಾರನಿಗೆ ಬೆದರಿಕೆ ಒಡ್ಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ದೂರು ವಾಪಸ್ ಪಡೆಯುವಂತೆ ಸಾಕ್ಷಿ ದೂರುದಾರನಿಗೆ ಶಿರಸಿ ಗ್ರಾಮಾಂತರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ್ ಗೌಡ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ.
ದೂರು ನೀಡಿರುವುದರಿಂದ ನಿನಗೆ ಶಿಕ್ಷೆಯಾಗುತ್ತದೆ. ನೀನು ಜೀವನವಿಡೀ ಜೈಲಿನಲ್ಲಿ ಕೊಳೆಯಬೇಕಾಗುತ್ತದೆ. ಪೊಲೀಸರು ನಿನ್ನನ್ನೇ ಬಂಧಿಸುತ್ತಾರೆ ಎಂದು ಸಾಕ್ಷಿ ದೂರುದಾರನಿಗೆ ಬೆದರಿಸಿ ದೂರು ವಾಪಸ್ ಪಡೆಯುವಂತೆ ಒತ್ತಡ ಹೇರುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಈ ರೀತಿ ದೂರು ನೀಡುವಂತೆ ಹೊರಗಿನ ವ್ಯಕ್ತಿಗಳು ಪ್ರಚೋದನೆ ನೀಡಿದ್ದರು ಎಂದು ಬಲವಂತವಾಗಿ ಸಾಕ್ಷಿ ದೂರುದಾರಿನಿಂದ ಹೇಳಿಸಿ ತನ್ನ ಮೊಬೈಲ್ ನಲ್ಲಿ ಮಂಜುನಾಥ್ ಗೌಡ ಚಿತ್ರಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯ ನಂತರ ಎಸ್‌ಐ ಮಂಜುನಾಥ್ ಗೌಡ ರಜೆಯ ಮೇಲೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಈ ಬೆಳವಣಿಗೆ ಕುರಿತು ಸಾಕ್ಷಿ ದೂರುದಾರನ ಪರ ವಕೀಲರು ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರಿಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ. ಅನೇಕ ಹೋರಾಟಗಾರರು ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ಎಸ್‌ಐ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.