ಬೆಂಗಳೂರು: ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತಮ್ಮ ಮನೆ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಸೋರಿಕೆಯಾಗಿದೆ. ಈ ಸೋರಿಕೆ ನಂತರ ತಮಗೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದು ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಫ್ಯಾಕ್ಟ್ ಚೆಕ್ಕಿಂಗ್ ವೆಬ್ ಸೈಟ್ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ಹೇಳಿದ್ದಾರೆ. ಈ ಸಂಬಂಧ ಇದುವರೆಗೂ ಯಾವುದೇ ಎಫ್ ಐ ಆರ್ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ರಾತ್ರಿ ‘X’ ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಕೆಲವು ಜನರು ತಮ್ಮ ಮನೆ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆ ಮಾಡಿದ್ದಾರೆ. ನಮ್ಮ ಮನೆ ವಿಳಾಸಕ್ಕೆ ಹಂದಿ ಮಾಂಸ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಜುಬೈರ್ ಆರೋಪಿಸಿದ್ದಾರೆ.
ನನಗೆ ಈಗಾಗಲೇ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಇದು ಮೊದಲ ಬಾರಿಗೆ ಅಲ್ಲ. 2023ರಲ್ಲಿಯೂ ಅದೇ ವ್ಯಕ್ತಿ ನನ್ನ ವಿಳಾಸಕ್ಕೆ ಹಂದಿ ಮಾಂಸ ಕಳುಹಿಸಿದ್ದ ಮತ್ತು ಟ್ವಿಟರ್ ನಲ್ಲಿ ಶಿಪ್ಪಿಂಗ್ ವಿಳಾಸವನ್ನು ಹಂಚಿಕೊಂಡಿದ್ದ. ನಾನು ದೂರು ದಾಖಲಿಸಿದ್ದೇನೆ. ಪೂರ್ವ ವಿಭಾಗದ ಡಿಸಿಪಿ, ಬೆಂಗಳೂರು ಪೊಲೀಸ್ ಆಯುಕ್ತರು ಮತ್ತು ಡಿಜಿಪಿ ಈ ಬೆದರಿಕೆಯನ್ನು ಈ ಬಾರಿಯಾದರೂ ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ನಂಬಿದ್ದೇನೆ ಎಂದು ಅವರು ತಮ್ಮ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಕಳೆದ ಬಾರಿ ಕೂಡ ಇದೇ ರೀತಿಯ ದೂರು ದಾಖಲಿಸಿದಾಗ, ಕೆಲವು ತಿಂಗಳುಗಳ ನಂತರ ಎಫ್ಐಆರ್ ಅನ್ನು ರದ್ದುಗೊಳಿಸಲಾಯಿತು ಎಂದಿದ್ದಾರೆ.
ಈ ಸಂಬಂಧ ಜುಬೈರ್ ಅವರಿಂದ ನಮಗೆ ದೂರು ಬಂದಿದೆ. ಆದರೆ, ಇನ್ನೂ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ದೂರನ್ನು ಆರ್ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ವರ್ಗಾಯಿಸಲಾಗುತ್ತಿದ್ದು, ಅವರು ಅಲ್ಲೇ ವಾಸಿಸುತ್ತಿದ್ದಾರೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.