ಚಿಕ್ಕೋಡಿ: ಕಾವಿ ಧರಿಸಿದ ಮಠಾಧೀಶರು ಬಸವ ತಾಲಿಬಾನಿಗಳು ಎಂದು ಹೇಳುವ ಮೂಲಕ ಮಹಾರಾಷ್ಟ್ರದ ಕೊಲ್ಲಾಪುರದ ಕನ್ನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಲಿಂಗಾಯತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ಭಜರಂಗದಳ ಹಮ್ಮಿಕೊಂಡಿದ್ದ ಹನುಮ ಮಾಲಾ ಧೀಕ್ಷಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾಲೆ ಎನ್ನುವುದು ಪೊಲೀಸ್ ಇದ್ದಂತೆ. ನಮ್ಮನ್ನು ಕೆಟ್ಟ ಕೆಲಸ ಮಾಡಲು ಪ್ರೇರೇಪಿಸುವುದಿಲ್ಲ. ಒಂದು ವೇಳೆ ಕೆಟ್ಟ ಕೆಲಸ ಮಾಡಲು ಹೊರಟರೆ ನಮ್ಮನ್ನು ತಡೆಯುತ್ತದೆ. ನಮ್ಮಲ್ಲಿ ಪಂಡರಾಪುರಕ್ಕೆ ಹೋಗುವವರು ಮಾಲೆ ಹಾಕಿಕೊಳ್ಳುತ್ತಾರೆ. ಒಂದು ವೇಳೆ ಮಾಲೆ ಧರಿಸಿರುವವರು ಮದ್ಯದಂಗಡಿ ಕಡೆ ಹೊರಟರೆ ಕೊರಳಿನಲ್ಲಿರುವ ಮಾಲೆ ಎಂಬ ಪೊಲೀಸ್ ನಮ್ಮನ್ನು ತಡೆಯುತ್ತದೆ ಎಂದರು.
ಈ ಮಾಲೆ ಮಾತನಾಡುವುದಿಲ್ಲ. ಹನುಮ ಮಾಲೆಯ ಕುರಿತು ಕೆಲವರು ಟೀಕೆ ಮಾಡಬಹುದು. ಕಮ್ಯುನಿಸ್ಟರು ಹಾಗೂ ನಮ್ಮಂಥ ಕಾವಿ ಬಟ್ಟೆ ಧರಿಸಿರುವ ಬಸವ ತಾಲಿಬಾನಿಗಳು ಮಾಲೆ ಬಗ್ಗೆ ಟೀಕೆ ಮಾಡಬಹುದು ಎಂದು ಲಿಂಗಾಯತ ಸ್ವಾಮೀಜಿಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕೈಯಲ್ಲಿ ಬಡಗಿ ಹಿಡಿದು ಸಂಚಾರ ನಡೆಸಿದರೆ ವಿರೋಧ ಮಾಡುತ್ತಾರೆ. ಬಡಗಿ ಬದಲು ಏನು ಆರತಿ ತಟ್ಟೆ ಹಿಡಿದುಕೊಳ್ಳಬೇಕಿತ್ತೇ? ನಮ್ಮ ಹುಡುಗಿಯರನ್ನ ಹೊತ್ತುಕೊಂಡು ಹೋಗುತ್ತಿದ್ದಾರೆ. ಅಂಥಹವರನ್ನ ಹಿಡಿದುಕೊಂಡು ಬಂದು ತಿಳಿಯುವ ಭಾಷೆಯಲ್ಲಿ ಹೇಳಬೇಕು. ಸನ್ಯಾಸಿಯಾಗಿ ಗಡ್ಡ ಬಿಡುತ್ತಿದ್ದರು. ನಾನು ತಿಳಿ ಹೇಳಿದ ಮೇಲೆ ತಲೆ ಬೋಳಿಸಿಕೊಂಡು ಪೇಟಾ ಸುತ್ತುತ್ತಿದ್ದಾರೆ. ರಾತ್ರಿ ಟೀ ಶರ್ಟ್, ಚಡ್ಡಿ ಹಾಕುವುದು, ಹೋಟೆಲ್, ಬಾರ್‌ಗೆ ಹೋಗುವುದನ್ನು ಮಾಡುತ್ತಿದ್ದಾರೆ. ಅಂತಹವರಿಗೆ ಮಠ ಏಕೆ ಬೇಕು? ಮಠಗಳನ್ನು ಏಕೆ ಹಾಳುಗೆಡವುತ್ತಿದ್ದೀರಿ? ನಿಮಗೆ ಸನ್ಯಾಸತ್ವ ಏಕೆ ಬೇಕು ಮಠ ಬಿಟ್ಟು ಹೋಗಿ ಎಂದು ಸ್ವಾಮೀಜಿಗಳನ್ನು ಕುರಿತು ಟೀಕೆಗಳ ಮಳೆ ಸುರಿಸಿದ್ದಾರೆ.
ತಮ್ಮ ವಿವಾದಾತ್ಮಕ ಹೇಳಿಕೆಗಳಿಗೆ ಪ್ರಸಿದ್ಧಿ ಪಡೆದಿರುವ ಕನ್ನೇರಿ ಶ್ರೀಗಳು ಈ ಹಿಂದೆಯೂ ಇಂತಹುದೇ ಹೇಳಿಕೆ ನೀಡಿದ್ದರು. ಇದೇ ಕಾರಣಗಳಿಗೆ ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಿಗೆ ಅವರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

