ಗಯಾನಾ: ಮಳೆಯ ಅಬ್ಬರದ ನಡುವೆ ಪಂದ್ಯ ನಡೆಯುತ್ತೋ ಇಲ್ಲವೋ ಎಂಬ ಅನುಮಾನದ ನಡುವೆಯೂ ನಿನ್ನೆ ಭಾರತ- ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಕಾಳಗ ನಡೆದು ಭಾರತ ಭರ್ಜರಿ ಗೆಲುವು ದಾಖಲಿಸಿತು.
ಕ್ರಿಕೆಟ್ ನ ಮೂರೂ ಫಾರ್ಮ್ಯಾಟ್ ಗಳಲ್ಲಿ ಮಿಂಚುತ್ತಿರುವ ಭಾರತ 2023ರ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಲುಪಿತ್ತು. 2023ರ ODI ವಿಶ್ವಕಪ್ ಫೈನಲ್ ಕೂಡ ತಲುಪಿತ್ತು. ಇದೀಗ T 20 ವಿಶ್ವಕಪ್ (T20 World Cup) ಫೈನಲ್ ಕೂಡ ತಲುಪುವುದರೊಂದಿಗೆ ಎಲ್ಲ ಫಾರ್ಮ್ಯಾಟ್ ನಲ್ಲೂ ತನ್ನ ಶಕ್ತಿ ನಿರೂಪಿಸಿದೆ.
ಕಳೆದ ವರ್ಷ ಭಾರತದಲ್ಲೇ ನಡೆದ ODI ವಿಶ್ವಕಪ್ ನಲ್ಲಿ ಆಡಿದ ಎಲ್ಲ ಪಂದ್ಯಗಳನ್ನೂ ಗೆದ್ದು ಫೈನಲ್ ತಲುಪಿದ್ದ ಭಾರತ ಆಸ್ಟ್ರೇಲಿಯಾ ಎದುರು ಸೋತು ನಿರಾಶೆ ಅನುಭವಿಸಿತ್ತು. ಈ ಬಾರಿ ದಕ್ಷಿಣ ಆಫ್ರಿಕ ಸೋಲಿಸಿ ಕಪ್ ಗೆಲ್ಲುವ ನಿರೀಕ್ಷೆ ಹುಟ್ಟಿಸಿದೆ. ನಾಳೆ ಫೈನಲ್ ಪಂದ್ಯ ನಡೆಯಲಿದೆ.
ನಿನ್ನೆ ರಾತ್ರಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಅಬ್ಬರಿಸಿದರು. ಆದರೆ ಅದು ಅವರ ಎಂದಿನ ಆಟವಾಗಿರಲಿಲ್ಲ. ಗಯಾನಾದ ಮಂದಗತಿಯ ಪಿಚ್ ನಲ್ಲಿ ಚೆಂಡು ಸ್ಪಿನ್ ಆಗುತ್ತಿತ್ತು, ಮಾತ್ರವಲ್ಲ ಸ್ಕಿಡ್ ಆಗುತ್ತಿತ್ತು. ಬ್ಯಾಟ್ಸ್ ಮನ್ ಗಳಿಗೆ ಚೆಂಡಿನ ಗತಿ ಮತ್ತು ಲೆಂತ್ ಅರಿಯುವುದೇ ಕ್ಲಿಷ್ಟಕರವಾಗಿತ್ತು. ಒಂದು ಮನಮೋಹಕ ಸಿಕ್ಸರ್ ಸಿಡಿಸಿದ ವಿರಾಟ್ ಕೊಹ್ಲಿ ಇನ್ನೊಮ್ಮೆ ಅದೇ ಶಾಟ್ ಹೊಡೆಯಲು ಹೋಗಿ ಬೌಲ್ಡ್ ಆಗಿದ್ದರು. ಇಂಥ ಸನ್ನಿವೇಶದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಭಾರತದ ಇನ್ನಿಂಗ್ಸ್ ಕಟ್ಟಿದರು. ಹೀಗಾಗಿಯೇ ಭಾರತ ಇಂಥ ಪಿಚ್ ನಲ್ಲಿ 172ರನ್ ಗಳ ಸವಾಲು ಒಡ್ಡಲು ಸಾಧ್ಯವಾಗಿತ್ತು.
ಆದರೆ ಭಾರತದ ಭರ್ಜರಿ ಗೆಲುವಿಗೆ ಕಾರಣರಾದವರು ಅಕ್ಷರ್ ಪಟೇಲ್ (Axar Patel). ಸ್ಪಿನ್ನರ್ ಗಳು ಪವರ್ ಪ್ಲೇನಲ್ಲಿ ಬೌಲ್ ಮಾಡುವುದು ಬಹಳ ಕಷ್ಟ. ಆದರೆ ಅಕ್ಷರ್ ಈ ಸವಾಲನ್ನು ಅಕ್ಷರ್ ಈ ಟೂರ್ನಿಯಲ್ಲಿ ಹಲವು ಬಾರಿ ಯಶಸ್ವಿಯಾಗಿ ನಿಭಾಯಿಸಿದ್ದಾರೆ.
ಮೊದಲ ಎರಡು ಓವರ್ ಗಳನ್ನು ಅರ್ಶದೀಪ್ ಸಿಂಗ್ ಮತ್ತು ಜಸ್ಪೀತ್ ಬುಮ್ರಾ ಎಸೆದಿದ್ದರು. ಆರಂಭಿಕ ಆಟಗಾರರಾದ ಜಾಸ್ ಬಟ್ಲರ್ ಮತ್ತು ಫಿಲ್ ಸಾಲ್ಟ್ ನಿಧಾನವಾಗಿ ಪಿಚ್ ಗೆ ಹೊಂದಿಕೊಂಡು ಆಡುವ ಪ್ರಯತ್ನ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಭಾರತಕ್ಕೆ ಬೇಕಾಗಿದ್ದೇ ಜಾಸ್ ಬಟ್ಲರ್ ಅವರ ವಿಕೆಟ್. ಯಾಕೆಂದರೆ ಈತ ಆಟಕ್ಕೆ ಕುದುರಿಕೊಂಡರೆ ಹಿಡಿಯುವುದು ಕಷ್ಟ ಎಂಬುದು ಎಲ್ಲರಿಗೂ ಗೊತ್ತಿತ್ತು. ಬಟ್ಲರ್ ಜೊತೆಯಲ್ಲಿ ಮೊಯಿನ್ ಅಲಿ ಮತ್ತು ಜಾನಿ ಬೇರ್ ಸ್ಟೋ ಆಡಲು ತೊಡಗಿದರೆ ರನ್ ಪ್ರವಾಹವನ್ನು ತಡೆಯುವುದು ಕಷ್ಟವಿತ್ತು.
ಇಂಥ ಸನ್ನಿವೇಶದಲ್ಲಿ ಅಕ್ಷರ್ ಪಟೇಲ್ ಎಸೆದ ಮೊದಲ ಎಸೆತವನ್ನು ಜೋಸ್ ಬಟ್ಲರ್ ಅತಿಯಾದ ಆತ್ಮವಿಶ್ವಾಸದಿಂದ ರಿವರ್ಸ್ ಸ್ವೀಪ್ ಮಾಡಲು ಯತ್ನಿಸಿದರು. ಬ್ಯಾಟ್ ನ ಕೆಳತುದಿಗೆ ತಾಗಿದ ಚೆಂಡು ಮೇಲಕ್ಕೆ ಹಾರಿತು. ರಿಷಬ್ ಪಂಥ್ ಆರಾಮವಾಗಿ ಕ್ಯಾಚ್ ಹಿಡಿದರು. ಇಂಗ್ಲೆಂಡ್ ಪತನದ ಮುನ್ಸೂಚನೆ ಇಲ್ಲಿಂದಲೇ ಆಯಿತು. ಹೊಡಿಬಡಿ ಆಟಕ್ಕೆ ಹೆಸರಾದ ಜಾನಿ ಬೇರ್ ಸ್ಟೋ ಕೂಡ ಅಕ್ಷರ್ ಅವರ ಎಸೆತಕ್ಕೆ ದೊಡ್ಡ ಹೊಡೆತಕ್ಕೆ ಕೈ ಹಾಕಿ ಬೌಲ್ಡ್ ಆದರು. ಇನ್ನು ಮೊಯಿನ್ ಅಲಿ ಮುಂದೆ ಬಂದು ಆಡಲು ಹೋಗಿ, ಚೆಂಡು ಎಲ್ಲಿದೆ ಎಂದು ಗೊತ್ತಾಗುವಷ್ಟರಲ್ಲಿ ರಿಷಬ್ ಪಂಥ್ ಸ್ಟಂಪ್ ಮಾಡಿಬಿಟ್ಟಿದ್ದರು. ಭಾರತಕ್ಕೆ ಬೇಗನೇ ಬೇಕಾಗಿದ್ದ ಮೂರೂ ವಿಕೆಟ್ ಗಳನ್ನು ಅಕ್ಷರ್ ಸಂಪಾದಿಸಿಕೊಟ್ಟಿದ್ದರು.
ನಂತರದ ಆಟಗಾರರಿಗೆ ಲೆಗ್ ಸ್ಪಿನ್ನರ್ ಕುಲದೀಪ್ ಯಾದವ್ ಕಬ್ಬಿಣದ ಕಡಲೆಯಾಗಿಹೋದರು. ಕುಲದೀಪ್ ಕೊನೆಯ ಕ್ಷಣದವರೆಗೆ ತನ್ನ ಎಸೆತವನ್ನು ಕಾಯ್ದಿರಿಸಿಕೊಂಡು ಬ್ಯಾಟ್ಸ್ ಮನ್ ಪಾದಗಳ ಚಲನೆಯನ್ನು ಗಮನಿಸಿ ತನ್ನ ಲೆಗ್ ಸ್ಪಿನ್, ಗೂಗ್ಲಿ, ಕಟರ್ ಗಳನ್ನು ಪ್ರಯೋಗಿಸುತ್ತಾರೆ. ಇಂಗ್ಲಿಷ್ ಆಟಗಾರರು ಒಬ್ಬರಾದ ಮೇಲೊಬ್ಬರಂತೆ ವಿಕೆಟ್ ಒಪ್ಪಿಸಿ ನಡೆದರು.
ಈ ವಿಶ್ವಕಪ್ ಗೆ ಆಟಗಾರರ ಆಯ್ಕೆಯಾದಾಗ ಅನುಭವಿ ಆರ್. ಅಶ್ವಿನ್ ಬದಲಿಗೆ ಅಕ್ಷರ್ ಪಟೇಲ್ ಆಯ್ಕೆ ಮಾಡಿದ್ದು ಯಾಕೆ ಎಂದು ಹಲವರು ಹುಬ್ಬೇರಿಸಿದ್ದರು. ಅಕ್ಷರ್ ಪಟೇಲ್ ತಮ್ಮ ಆಯ್ಕೆಯನ್ನು ಅಚ್ಚುಕಟ್ಟಾಗಿ ಸಮರ್ಥಿಸಿದ್ದಾರೆ. ಅದೂ ಸೆಮಿಫೈನಲ್ ಪಂದ್ಯದಲ್ಲಿ ಗೆಲುವು ತಂದುಕೊಡುವ ಮೂಲಕ. ಹೀಗಾಗಿಯೇ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯೂ ಒಲಿದು ಬಂದಿದೆ.