ಇದು ಟ್ರೋಲ್ ಅಲ್ಲ ಹೆರಾಸ್ಮೆಂಟ್

Most read

ಜೂಜು ಮತ್ತು ಯುದ್ಧ ಗಂಡಸರ ದರ್ಬಾರ್. ಇದು ಹೆಣ್ಣು ಮಕ್ಕಳ ಘನತೆಯ ಬದುಕನ್ನು ಬೀದಿಗೆ ತರುತ್ತದೆ. ಕ್ಷಮೆ ಮತ್ತು ಪಾಲನೆ ತಾಯಿಗುಣ. ಇದು ಬಿಕ್ಕಟ್ಟುಗಳನ್ನು ಶಮನಗೊಳಿಸುತ್ತದೆ. ಸಮಾಜವನ್ನು ಸಮತೋಲನದಲ್ಲಿ ಮುನ್ನಡೆಸುತ್ತದೆ. ಬದುಕನ್ನು ಎತ್ತರಿಸುತ್ತದೆ. ಈ ಸಂಕಷ್ಟ ಕಾಲದಲ್ಲಿ ಪಲ್ಲವಿ, ಹಿಮಾಂಶಿ, ಸೋಫಿಯಾರಂತಹ ಮಾತೃಹೃದಯದ ಗಟ್ಟಿಗಿತ್ತಿಯರು ಮಾತ್ರ ಅಧ:ಪತನದತ್ತ ಜಾರುತ್ತಿರುವ ಈ ದೇಶವನ್ನು ಮೇಲೆತ್ತಿ ಕಾಪಾಡಬಲ್ಲರು ಉಷಾ ಕಟ್ಟೆಮನೆ. ಬಂಡಿಹೊಳೆ.

ಏಪ್ರಿಲ್ 22 ರಂದು ಕಾಶ್ಮೀರದ ಪೆಹಲ್ಗಾಂನ ಸಮೀಪದ ಬೈಸರನ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರಾಮಿಗಳಿಂದ ಗುಂಡಿನ ಮಳೆ ಸುರಿಯಿತು. ಅದು ಗಂಡಸರನ್ನೇ ಗುರಿಯಾಗಿಸಿಕೊಂಡು ನಡೆದ ದಾಳಿ.  ಒಟ್ಟು 26 ಜನ  ಸತ್ತರು. ಅದರಲ್ಲಿ ದಾಳಿಯ ಐಕಾನ್ ಆದವರು ಹಿಮಾಂಶಿ ನರ್ವಾಲ್. ಉಗ್ರಗಾಮಿಯ ಗುಂಡು ಆಕೆಯ ಗಂಡ ವಿನಯ್ ನರ್ವಾಲ್ ಹಣೆಯನ್ನು ಸೀಳಿದೆ. ಅವರು ಅಂಗಾತನೆ ನೆಲಕ್ಕೆ ಉರುಳಿ ಬಿದ್ದಿದ್ದಾರೆ.ಅವರ ಪಕ್ಕದಲ್ಲಿ ಹಿಮಾಂಶಿ ಕಲ್ಲಿನಂತೆ ಕುಳಿತಿದ್ದಾರೆ; ಟ್ರಾನ್ಸ್ ನಲ್ಲಿದ್ದಾರೆ. ಈ ಲೋಕದ ಪರಿವೆ ಆಕೆಗೆ ಇದ್ದಂತಿಲ್ಲ. ಇದೊಂದು ದೃಶ್ಯ ಪೈಂಟಿಂಗ್ ನಂತೆ ನೋಡುಗರ ಮನದಲ್ಲಿ ಅಚ್ಚೊತ್ತಿದೆ. ಈ ಚಿತ್ರ ಪೆಹಲ್ಗಾಂ ದಾಳಿಯ ಸಿಂಬಲ್ ಆಗಿದೆ.

ಹಿಮಾಂಶಿ

ದಾಳಿಯಲ್ಲಿ ಪಾರಾಗಿ ಉಳಿದ ಮಹಿಳೆಯರ ಮುಂದೆ ಟಿವಿಯವರು ಮೈಕ್ ಹಿಡಿದರು. ಅದರಲ್ಲಿ ಮುಖ್ಯವಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದವರು ನಮ್ಮ ಶಿವಮೊಗ್ಗದ ಪಲ್ಲವಿ. ಅದಕ್ಕೆ ಕಾರಣ ಇದೆ.   ಉಗ್ರಗಾಮಿಗಳು ಗುಂಡು ಹಾರಿಸುವ ಮುನ್ನ ಧರ್ಮವನ್ನು ಕೇಳಲಿಲ್ಲ. ಆದರೆ ”ನಮ್ಮನ್ನೂ ಕೊಲ್ಲಿ’ ಎಂದಾಗ  ’ಇಲ್ಲ ಕೊಲ್ಲುವುದಿಲ್ಲ”  ’ಯಾಕೆ’ ’ಹೋಗಿ ಮೋದಿಯನ್ನು ಕೇಳಿ’  ಅಂತ ಮಾಧ್ಯಮದೆದುರು ಆಕೆ ಹೇಳಿದ್ದು ಮಾತ್ರವಲ್ಲ ಸ್ಥಳೀಯರು ತಮ್ಮ ಜೀವಪಣಕ್ಕಿಟ್ಟು ಪ್ರವಾಸಿಗರನ್ನು ರಕ್ಷಿಸಿದರು ಎಂದು ಹೇಳಿದ್ದು ಚಾನಲ್ ಗಳು ಬಯಸಿದ ಉತ್ತರವಾಗಿರಲಿಲ್ಲ!

 ಅನಂತರದಲ್ಲಿ ಈ ದಾಳಿಯನ್ನು ಹಿಂದೂಗಳ ಮೇಲೆ ಮುಸ್ಲಿಂರಿಂದ ನಡೆದ ದಾಳಿ ಎಂಬ ನೆಲೆಯಲ್ಲಿ ಮಾಧ್ಯಮಗಳು ಬಿಂಬಿಸುತ್ತಾ ಹೋದವು.

ಉಗ್ರಗಾಮಿಗಳು ಧರ್ಮದ ಹೆಸರು ಕೇಳದೆ ಕೇವಲ ಗಂಡಸರನ್ನು ಮಾತ್ರ ಗುರಿಯಾಗಿಸಿಕೊಂಡು ಗುಂಡು ಹೊಡೆದರು ಎಂದು ಯಾರೆಲ್ಲಾ ಹೇಳಿದರೋ ಅವರ ಚಾರಿತ್ರ್ಯವಧೆಗೆ ಮಾಧ್ಯಮದ ಜೊತೆ ಬಿಜೆಪಿ ಐಟಿ ಸೆಲ್ ಇಳಿಯಿತು. ಅದಕ್ಕೆ ಮೊದಲು ಬಲಿಯಾದವರು ಪಲ್ಲವಿ.

ಇದಾಗಿ ಎಂಟು ದಿನ ಕಳೆದಿದೆ. ಮೇ 1 ರಂದು ವಿನಯ್  ಜನ್ಮದಿನ. ಅಂದು ಪೂರ್ವನಿಗದಿತ ಕಾರ್ಯಕ್ರಮದಂತೆ ರಕ್ತದಾನ ಶಿಬಿರ ನಡೆದಿದೆ. ಅಲ್ಲಿಗೆ ತನ್ನ ದುಖತಪ್ತ ಪರಿವಾರದೊಡನೆ ಹಿಮಾಂಶಿ ನರ್ವಾಲ್ ಬಂದಿದ್ದಾರೆ. ಆಗ ಅವರೆದುರು ಸುದ್ದಿ ಚಾನಲ್ ಗಳು ಮೈಕ್ ಹಿಡಿದಿವೆ. ಪಲ್ಲವಿಯ ಎದುರು ಕೇಳಿದಂತೆ ಇಲ್ಲಿಯೂ ಪಹಲ್ಗಾಂ ಘಟನೆಗೆ ಕೋಮುಬಣ್ಣ ಬಳೆಯಲು ಪ್ರಯತ್ನಿಸಿದ್ದಾರೆ. ಆದರೆ ಹಿಮಾಂಶಿ  ’ಮುಸ್ಲಿಮರು ಅಥವಾ ಕಾಶ್ಮೀರಿಗಳ ಮೇಲೆ ಮುಗಿಬೀಳುವುದು ಬೇಡ. ನಮಗೆ ಶಾಂತಿ ಮತ್ತು ನ್ಯಾಯ ಬೇಕು’ ಅಂದುಬಿಟ್ಟಳು. ಅಷ್ಟು ಆಕೆ ಹೇಳಿದ್ದೇ ತಡ ಆಕೆಯ ಮೇಲೆ ಹಿಂದೂ ಮೂಲಭೂತವಾದಿಗಳ ಟ್ರೋಲ್ ಪಡೆ ಮುಗಿಬಿತ್ತು. ಆಕೆ ದೆಹಲಿಯ ಜೆ ಎನ್ ಯು ನಲ್ಲಿ ಓದಿದವಳು ಎಂದು ಹುಡುಕಿ  ಮುಸ್ಲಿಂ ಹುಡುಗನೊಬ್ಬನ ಜೊತೆ ತಳಕು ಹಾಕಿ ಚಾರಿತ್ರ್ಯ ವಧೆಗೆ ಟೊಂಕಕಟ್ಟಿ ನಿಂತಿತು. ಅದು ಎಲ್ಲಿಯವರೆಗೆ ತಲುಪಿತು ಎಂದರೆ ’ಗಂಡನ ಕೊಲೆಯನ್ನು ಪ್ಲಾನ್ ಮಾಡಿಯೇ ಮಾಡಿಸಿದ್ದಾಳೆ’ ಎಂದು ಆಪಾದಿಸುವವರೆಗೆ!

ಹಿಮಾಂಶಿ

ನೆನಪಿಡಿ, ನೌಕಾಪಡೆಯ ಅಧಿಕಾರಿ ವಿನಯ್ ನರ್ವಾಲ್ ಜೊತೆ ಹಿಮಾಂಶಿ ಮದುವೆ ನಡೆದದ್ದು ಏಪ್ರಿಲ್ 19 ಕ್ಕೆ.  ಅವರು ಆರು ದಿನಗಳ ಎಳೆಯ ದಂಪತಿಗಳು. ಹನಿಮೂನ್ ಗೆಂದು ಭೂಲೋಕದ ಸ್ವರ್ಗ ಕಾಶ್ಮೀರಕ್ಕೆ ಬಂದಿದ್ದಾರೆ. ಆತನಿಗಿನ್ನೂ 26 ವರ್ಷ. ಆಕೆ ಆತನ ಬಾಲ್ಯದ ಒಡನಾಡಿ. ನಮ್ಮ ಆಡುಮಾತಿನಲ್ಲಿ ಹೇಳುವುದಾದರೆ ಅರಶಿನದ ಹಸಿ ಮೈಯ ದಂಪತಿಗಳು. ಆರು ದಿನಗಳಲ್ಲಿ ವೈಧವ್ಯಕ್ಕೆ ಜಾರಿದಳು. ಯಾರು ಕಾರಣರು ಇದಕ್ಕೆ? ಉಗ್ರಗಾಮಿಗಳೇ? ಅಥವಾ ಅವರು ಒಳನುಸುಳಿ ಬರಲು ಕಾರಣವಾದ ಭದ್ರತಾ ವೈಫಲ್ಯವೇ? ಪ್ರಜ್ಞಾವಂತರು ಯೋಚಿಸಬೇಕಾದ ವಿಷಯ ಇದು. ಪ್ರತೀಕಾರ ತೀರಿಸೋದು ಮುಖ್ಯ ಅಲ್ಲ. ಅವಘಡ ಸಂಭವಿಸದಂತೆ ನೋಡಿಕೊಳ್ಳೋದು ಮುತ್ಸದ್ದಿತನ.

ಆಪ್ತರ ಮದುವೆಗಾಗಿ ವಿದೇಶದಲ್ಲಿದ್ದರೂ ಓಡೋಡಿ ಬರುವ ನಮ್ಮ ಪ್ರಧಾನಿಗಳು  ನೌಕಾದಳದ ಈ ಅಧಿಕಾರಿಯ ಸಾವಿಗೆ ಕನಿಷ್ಠ ಸಂತಾಪವನ್ನಾದರೂ ಸೂಚಿಸಿದ್ದಂತಿಲ್ಲ. ಹೌದು ಈಗಲೂ ಅವರು ವಿದೇಶದಲ್ಲೇ ಇದ್ದರು. ದಾಳಿಯ ಸುದ್ದಿ ತಿಳಿದೊಡನೆ ಅವರು ಓಡಿ ಬಂದದ್ದೂ ನಿಜ. ಆದರೆ ಓಡಿ ಹೋಗಿದ್ದು ಎಲ್ಲಿಗೆ ಗೊತ್ತಾ? ಬಿಹಾರಕ್ಕೆ. ಅಲ್ಲಿ ಚುನಾವಣಾ ಸಭೆಯಲ್ಲಿ ಭಾಗವಹಿಸಲು. ತನ್ನ ದೇಶದ ಪ್ರಜೆಗಳ ನೆತ್ತರನ್ನು ಓಟಾಗಿ ಪರಿವರ್ತಿಸುವ ತವಕ!

ಈ ಸನ್ನಿವೇಶದಲ್ಲಿ ಒಬ್ಬ ಸಮರ್ಥ ಪ್ರಧಾನಿ ಏನು ಮಾಡುತ್ತಿದ್ದರು? ತಕ್ಷಣ ಸರ್ವಪಕ್ಷ ಸಭೆ ಕರೆಯುತ್ತಿದ್ದರು. ಅದರಲ್ಲಿ ಸ್ವತಃ ಭಾಗಿಯಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದೇನು ಎಂದು ಚರ್ಚಿಸಿ ಒಮ್ಮತದ ನಿರ್ಣಯ ಕೈಗೊಳ್ಳುತ್ತಿದ್ದರು. ಆನಂತರದಲ್ಲಿ ಮೂರು ದಳಗಳ ಮುಖ್ಯಸ್ಥರ ಸಭೆ ಕರೆದು ಚರ್ಚಿಸುತ್ತಿದ್ದರು. ಕೊನೆಗೆ ದೇಶವನ್ನು ಉದ್ದೇಶಿಸಿ ಮಾತಾಡುತ್ತಿದ್ದರು. ಯಾಕೆಂದರೆ ನಮ್ಮ ಪ್ರಧಾನಿ ತೆಗೆದುಕೊಳ್ಳುವ ನಿರ್ಧಾರಗಳಿಗೆ ನಾವು ಕೂಡಾ ಬಾಧ್ಯಸ್ಥರಾಗುತ್ತೇವೆ. ಆದರೆ ಇಲ್ಲಿ ’ಪ್ರಧಾನಿ’ ಎಂಬ ಜವಾಬ್ದಾರಿಯುತ ಸ್ಥಾನ ಹಿಂದಕ್ಕೆ ಸರಿದು ’ಮೋದಿ ’ಎಂಬ ವ್ಯಕ್ತಿ ಪ್ರಜ್ಞೆಯೇ ವಿಜೃಂಭಿಸಿತು!

 ಇಲ್ಲಿ ಎರಡು ಬಾರಿ ಸರ್ವಪಕ್ಷ ಸಭೆಯನ್ನೇನೋ ಕರೆದರು.ಆದರೆ ಸ್ವತಃ ಪ್ರಧಾನಿಯೇ ಎರಡೂ ಸಭೆಗಳಿಗೆ  ಗೈರು ಹಾಜರಾಗಿದ್ದರು. ಎರಡನೇ ಸಭೆಯ ನಂತರ ಮಾಧ್ಯಮದ ಜೊತೆ ಮಾತಾಡಿದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು  ’ಆಪರೇಷನ್ ಸಿಂಧೂರ’ ಗೆ ಕಾಂಗ್ರೇಸ್ ಪಕ್ಷದ  ಸಂಪೂರ್ಣ ಬೆಂಬಲವನ್ನು ಸ್ಪಷ್ಟಪಡಿಸಿದರು. ಮೋದಿ ಯಾಕೆ ಸಭೆಯಲ್ಲಿ ಭಾಗವಹಿಸಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ, ’ಅವರು ಸಂಸತ್ತಿಗಿಂತಲೂ ಮೇಲ್ಮಟ್ಟದಲ್ಲಿದ್ದೇನೆ ಎಂದು ಭಾವಿಸಿಕೊಂಡಿರ್ಬೇಕು’ ಎಂದು ಹೇಳಿದರು. ಈ ಹೇಳಿಕೆಯನ್ನು ವಿಶ್ಲೇಷಣೆಗೆ ಒಳಪಡಿಸಬೇಕು!

ಪಲ್ಲವಿ

ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಮೇ ‌7 ರ ಮುಂಜಾನೆ ’ಅಪರೇಷನ್ ಸಿಂಧೂರ್’ ಹೆಸರಿನಲ್ಲಿ ಪಾಕಿಸ್ತಾನದ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಯಿತು. ಇದು ಪೂರ್ಣಪ್ರಮಾಣದ ಯುದ್ಧ ಅಲ್ಲ. ಭಾರತ ಪ್ರತೀಕಾರ ಮತ್ತು ತನ್ನ ಸ್ವರಕ್ಷಣೆಗಾಗಿ ಮಾಡಿದ ಸಂಘರ್ಷ. ಇದನ್ನೇ ಭಾರತದ ಮತ್ತು ಪಾಕಿಸ್ತಾನದ ಮೀಡಿಯಾಗಳು, ಮುಖ್ಯವಾಗಿ ಸುದ್ದಿಚಾನಲ್ ಗಳು ಯುದ್ಧವೆಂದೇ ಬಿಂಬಿಸಿದವು.

ಆದರೆ ಸರಕಾರವು ಇಲ್ಲಿ ಒಂದು ಒಳ್ಳೆಯ ಕೆಲಸ ಮಾಡಿತು. ಮಿಲಿಟರಿ ಕಾರ್ಯಾಚರಣೆಯ ಸಂಪೂರ್ಣ ಜವಾಬ್ದಾರಿಯನ್ನು ಸೇನೆಗೆ ನೀಡಿತು. ಹಾಗಾಗಿ ಸೇನೆ ಕರಾರುವಕ್ಕಾಗಿ ತಂತ್ರಗಳನ್ನು ಯೋಜಿಸಿತು. ಉಗ್ರರ ನೆಲೆಗಳನ್ನು ದ್ವಂಸಮಾಡಿತು. ಅದನ್ನು ಸಂಯಮದಿಂದ ದೇಶದ ಮುಂದೆ ಬ್ರೀಫ್ ಮಾಡಿತು.

ಮಿಲಿಟರಿ ಕಾರ್ಯಾಚಾರಣೆಯನ್ನು ಬ್ರೀಫ್ ಮಾಡಿದ್ದು  ಕೂಡ ಇಬ್ಬರು ಮಹಿಳಾ ಅಧಿಕಾರಿಗಳು. ಕರ್ನಲ್ ಸೋಫಿಯಾ ಖುರೇಶಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್. ಬ್ರೀಫಿಂಗ್ ಸಮಯದಲ್ಲಿ ಇವರ ಜೊತೆಗಿದ್ದವರು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ. ಸೇನಾ ದಾಳಿಯ ವಿವರಣೆಯನ್ನು ಜನತೆಗೆ ತಿಳಿಸುವಲ್ಲಿಯೂ ಸೇನೆ ಸಾಮರಸ್ಯವನ್ನು ತೋರಿಸಿದೆ. ಇದು ಮತ್ತೆ ಧರ್ಮದ ಗುತ್ತಿಗೆದಾರರ ನಿದ್ದೆ ಕೆಡಿಸಿತು. ಟ್ರೋಲ್ ಪಡೆ ಕಾರ್ಯಾಚರಣೆಗೆ ಇಳಿಯಿತು. ಆಕೆಯ ಧರ್ಮವನ್ನು ಆಧಾರವಾಗಿಟ್ಟುಕೊಂಡು ಚಾರಿತ್ರ್ಯವಧೆಗೆ ಮುಂದಾಯ್ತು.

ಬಿಜೆಪಿಯ ಐಟಿ ಪಡೆ ಭಸ್ಮಾಸುರ ಹಸ್ತ ಇದ್ದಂತೆ. ಅದು ಕೊನೆಗೆ ಕೈಯಿಡುವುದು ತನ್ನ ಸೃಷ್ಟಿದಾತನ ಮೇಲೆಯೇ. ಇದು ಸ್ಪಷ್ಟವಾಗಿ ಗೋಚರವಾಗಿದ್ದು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಶ್ರಿಯ ಮೇಲೆ. ಕದನ ವಿರಾಮವನ್ನು ಮಾಧ್ಯಮದ ಎದುರು ಅನೌನ್ಸ್ ಮಾಡಿದ್ದು ವಿಕ್ರಂ ಮಿಶ್ರಿ. ಪಾಕಿಸ್ತಾನವನ್ನು ಭೂಪಟದಿಂದಲೇ ಮಾಯಮಾಡಿಬಿಡಬೇಕು ಎಂಬ ಯುದ್ಧೋನ್ಮಾದದಲ್ಲಿ ಇದ್ದ ಭಕ್ತ ಪಡೆಗೆ ಇದು ಅಘಾತ ತಂದಿತು. ಇವರ ಅಕ್ರೋಶಕ್ಕೆ ಮಿಶ್ರಿ ತುತ್ತಾದರು. ಟ್ವಿಟ್ಟರ್ ನಲ್ಲಿ  ಹೀನಾತೀನವಾಗಿ ನಿಂದನೆಯ ಮಳೆಗೆರೆದರು. ಇಷ್ಟಾಗಿದ್ದರೆ ಅದನ್ನು ನಿರ್ಲಕ್ಷಿಸ ಬಹುದಿತ್ತೇನೋ. ಆದರೆ ಟ್ರೋಲ್ ಪಡೆಗಳು ಅವರ ಪತ್ನಿ ಮತ್ತು ಮಗಳ ಮೇಲೆಯೂ ಅವಾಚ್ಯ ಶಬ್ದಗಳಿಂದ ದಾಳಿ ನಡೆಸಲಾರಂಭಿಸಿದರು. ಕೊನೆಗೆ ವಿದೇಶಾಂಗ ಕಾರ್ಯದರ್ಶಿಯವರೇ ತಮ್ಮ ಟ್ವಿಟ್ಟರ್ ಖಾತೆಯನ್ನು ಲಾಕ್ ಮಾಡ್ಬೇಕಾಯ್ತು. ಇದು ಇಷ್ಟಕ್ಕೆ ನಿಲ್ಲಲ್ಲಿಲ್ಲ. ಪ್ರಧಾನಿ ಮೋದಿಯವರನ್ನು ಕೂಡಾ ಈ ಚೌಕಿದಾರರು ಟ್ರೋಲ್ ಮಾಡತೊಡಗಿದರು!

ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಶ್ರಿ

ಕೇವಲ ಭಕ್ತಪಡೆಯನ್ನು ದೂರಿ ಪ್ರಯೋಜನವಿಲ್ಲ. ಅವರೆಲ್ಲಾ ಕೇವಲ ಕಾಲಾಳುಗಳಷ್ಟೇ. ಇದರಲ್ಲಿ ಸಚಿವ ಮಟ್ಟದ ಭಕ್ತರೂ ಇದ್ದಾರೆ ಎಂಬುದು ಮಧ್ಯಪ್ರದೇಶದ ಕುನ್ವರ್ ವಿಜಯ್ ಶಾ (ಬಿಜೆಪಿ) ಎಂಬ ಸಚಿವರು ಕರ್ನಲ್ ಸೋಫಿಯಾ ಖುರೇಶಿ ಬಗ್ಗೆ ಹೇಳಿದ ಮಾತುಗಳೇ ಸಾಕ್ಷಿ. ಆತ ’  ನಮ್ಮ ಹೆಣ್ಣುಮಕ್ಕಳ ಸಿಂಧೂರ ಅಳಿಸಿದವರ ಬಳಿ ಅವರ ತಂಗಿಯನ್ನೇ ಪ್ರತೀಕಾರಕ್ಕಾಗಿ ಕಳಿಸಿದ್ದೇವೆ’ ಎಂದು ಹೇಳಿದ್ದಾರೆ. ಮುಸ್ಲಿಂ ದ್ವೇಷ ಯಾವ್ಯಾವ ರೀತಿಯಲ್ಲಿ ರಕ್ತದೊಳಗೆ ಸೇರಿ ಹೋಗಿದೆ ನೋಡಿ.

ಈಗ ಐಟಿ ಸೆಲ್ ಗೆ ಗೊತ್ತಾಗಿರಬಹುದು, ತಾವು ಎಂತಹ ಝೋಂಬಿಗಳನ್ನು ಸೃಷ್ಟಿಸಿದ್ದೇವೆ ಎಂದು.

ಭಕ್ತ ಟ್ರೋಲ್ ಪಡೆ ಈಗ ರಕ್ತಬೀಜಾಸುರನ ಸಂತತಿಯಂತೆ ಎಲ್ಲೆಡೆ ಹರಡಿಕೊಂಡಿದೆ. ಇವರಿಂದ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ. ಈ ಡಿಜಿಟಲ್ ಭಯೋತ್ಪಾದಕರನ್ನು ಮಟ್ಟ ಹಾಕುವವರು ಯಾರು?

ನಿಮಗೆ ನೆನಪಿರಬಹುದು, 2016 ರಲ್ಲಿ ಸ್ವಾತಿ ಚತುರ್ವೇದಿ ಎಂಬ ಪತ್ರಕರ್ತೆಯೊಬ್ಬರು ಐ ಆಮ್ ಎ ಟ್ರೋಲ್’ ಎಂಬ ಪುಸ್ತಕ ಬರೆದಿದ್ದರು. ಅದರಲ್ಲಿ ಆಕೆ  ಆಡಳಿತಾರೂಢ ಭಾರತೀಯ ಜನತಾ ಪಕ್ಷ ರಾಜಕೀಯ ವಿರೋಧಿಗಳನ್ನು ಬೆದರಿಸುವ, ಮಣಿಸುವ ಟ್ರೋಲ್ ಪಡೆಯನ್ನು ಹೊಂದಿದೆ ಎಂದು ಬರೆದಿದ್ದಾರೆ. ಬಿಜೆಪಿಯ ಡಿಜಿಟಲ್ ಆರ್ಮಿ ತನ್ನನ್ನು ಹೇಗೆ ಟ್ರೋಲ್ ಮಾಡಿದರು ಎಂಬುದರ ಬಗ್ಗೆಯೂ ವಿವರವಾಗಿ ಬರ್ದಿದ್ದಾರೆ. ಅದರಲ್ಲಿಯೂ ತನ್ನನ್ನು ಟ್ರೋಲ್ ಮಾಡುತ್ತಿದ್ದವರ ಟಿಟ್ಟರ್ ಅಕೌಂಟ್ ಗಳನ್ನು ಸ್ವತಃ ಪ್ರಧಾನಿಗಳೇ ಫಾಲೋ ಮಾಡುತ್ತಿದ್ದರು ಎಂಬುದನ್ನು ಪುರಾವೆಗಳೊಂದಿಗೆ ವಿವರಿಸಿದ್ದಾರೆ. ’ ಹರ ಕೊಲ್ಲಲು ಪರ ಕಾಯ್ವನೇ?’

ಟ್ರೋಲ್ ಮಾಡುವುದು ಎಂದರೆ ಕಾಲೆಳೆಯುವುದು. ಇದು ಒಂದು ರೀತಿಯ ಛೇಡಿಸುವ ನಡವಳಿಕೆ. ಮಿತಿಯಲ್ಲಿ ಇದ್ದರೆ ಅದು ಆರೋಗ್ಯಕಾರಿಯೂ ಹೌದು. ಆದರೆ ಹೆರಾಸ್ಮೆಂಟ್, ಇದು ಸೈಕೋಪಾತ್ ನಡವಳಿಕೆ.  ಒಬ್ಬ/ಳು ವ್ಯಕ್ತಿಯನ್ನು ಸಾಮೂಹಿಕವಾಗಿ ಅವಮಾನಿಸಿ, ಬೆದರಿಸಿ, ಜೀವ ಭಯವನ್ನು ಹುಟ್ಟು ಹಾಕಿ ಮಾನಸಿಕವಾಗಿ ಕುಗ್ಗಿಸಿ ಖಿನ್ನತೆಗೆ ದೂಡುವುದು ವಿಕೃತಿ. ಇದು ಕಾನೂನು ವ್ಯಾಪ್ತಿಗೆ ಒಳಪಡುತ್ತದೆ.

ಇಡೀ ಆಡಳಿತ ಯಂತ್ರವೇ ಧರ್ಮಾಧಾರಿತವಾದ ದ್ವೇಷ ರಾಜಕಾರಣದಲ್ಲಿ ಮುಳುಗಿದೆ. ಸೋನಿಯಾ ಗಾಂಧಿಯನ್ನು ವಿದೇಶೀ ಮಹಿಳೆಯೆಂದೂ, ರಾಹುಲ್ ಗಾಂಧಿಯನ್ನು ಪಪ್ಪು ಎಂದೂ, ಮುಸ್ಲಿಮರೆಲ್ಲಾ ದೇಶ ವಿರೋಧಿಗಳೆಂದೂ ಬಿಂಬಿಸುವುದರಲ್ಲೇ ಅವರ ಬುದ್ಧಿಮತ್ತೆ ವ್ಯಯ ಆಗಿದೆ. ಇವರ ಪ್ರಾಪಗಾಂಡಗಳಿಗೆ ಸಿಂಬಲ್ ಗಳು ಬೇಕು. ಆದರೆ ವಾಸ್ತವದ ಬದುಕಿನಲ್ಲಿ ರಕ್ತಮಾಂಸದ ಭಾವನೆಗಳು ತುಂಬಿರುವ ಮನುಷ್ಯರು ಬೇಡ.

ಇವರಿಗೆ ಕಾಶ್ಮೀರದ ನೆಲ ಬೇಕು ಕಾಶ್ಮೀರಿಗಳು ಬೇಡ.

ಇವರಿಗೆ ಮಹಿಳೆಯರು ಧರಿಸುವ ಸಿಂಧೂರ ಬೇಕು,ಮಹಿಳೆಯರು ಬೇಡ.

ಸೋಫಿಯಾ ಖುರೇಷಿ

ಮಹಿಳೆಯರಿಗೆ ಭಾವಾನಾತ್ಮಕ ಯಾತನೆ ಉಂಟುಮಾಡಿದ್ದಲ್ಲಿ ಅವರು ಗೆದ್ದಂತೆ. ದುರ್ಬಲ ಮನಸಿನವರು ಬೇಗ ಇವರಿಗೆ ಆಹಾರವಾಗುತ್ತಾರೆ. ಆದರೆ ಇಲ್ಲಿ ಪಲ್ಲವಿ, ಹಿಮಾಂಶಿ ನರ್ವಾಲ್ , ಸೋಫಿಯಾ ಖುರೇಶಿಯಂತವರು ಕುಗ್ಗಿಲ್ಲ ಮಾತ್ರವಲ್ಲಾ ಈ ಟ್ರೋಲ್ ಪಡೆ ಬಗ್ಗೆ ದಿವ್ಯ ನಿರ್ಲಕ್ಷ್ಯ ತಾಳಿದ್ದಾರೆ. ತಮ್ಮ ನಿಲುವಿಗೆ ಬದ್ಧರಾಗಿದ್ದಾರೆ. ಒಂದು ವೇಳೆ ಮೀಡಿಯಾಗಳು ಬಯಸಿದಂತಹ ಉತ್ತರ ಅವರ ಬಾಯಿಯಿಂದ ಬಂದಿದ್ದರೆ ದೇಶಕ್ಕೆ ದೇಶವೇ ಹೊತ್ತಿ ಉರಿಯುತ್ತಿತ್ತು.

ಜೂಜು ಮತ್ತು ಯುದ್ಧ ಗಂಡಸರ ದರ್ಬಾರ್. ಇದು ಹೆಣ್ಣು ಮಕ್ಕಳ ಘನತೆಯ ಬದುಕನ್ನು ಬೀದಿಗೆ ತರುತ್ತದೆ. ಕ್ಷಮೆ ಮತ್ತು ಪಾಲನೆ ತಾಯಿಗುಣ. ಇದು ಬಿಕ್ಕಟ್ಟುಗಳನ್ನು ಶಮನಗೊಳಿಸುತ್ತದೆ. ಸಮಾಜವನ್ನು ಸಮತೋಲನದಲ್ಲಿ ಮುನ್ನಡೆಸುತ್ತದೆ. ಬದುಕನ್ನು ಎತ್ತರಿಸುತ್ತದೆ. ಈ ಸಂಕಷ್ಟ ಕಾಲದಲ್ಲಿ ಮೇಲೆ ಹೆಸರಿಸಿದಂತಹ ಮಾತೃಹೃದಯದ ಗಟ್ಟಿಗಿತ್ತಿಯರು ಮಾತ್ರ ಅಧ:ಪತನದತ್ತ ಜಾರುತ್ತಿರುವ ಈ ದೇಶವನ್ನು ಮೇಲೆತ್ತಿ ಕಾಪಾಡಬಲ್ಲರು.

ಉಷಾ ಕಟ್ಟೆಮನೆ, ಬಂಡಿಹೊಳೆ

ಲೇಖಕಿ, ಕೃಷಿಕಳು

More articles

Latest article