ನೆನಪು
ಪ್ರಖರವಾದ ವೈಚಾರಿಕ ಪ್ರಜ್ಞೆಯ ಚಿಂತಕ, ಸರ್ವ ಧರ್ಮ ಸಮಭಾವದ ಪ್ರತಿಪಾದಕ, ಬರೆದಂತೆ ಬದುಕಿದ, ಬದುಕಿದಂತೆ ಬರೆದ ಸಮಾಜಮುಖಿ ಸಾಹಿತಿ ಡಾ.ನಾ. ಡಿಸೋಜ ಅವರು ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಅವರ ಹೋರಾಟದ ಸಂಗಾತಿ ಸಾಗರದ ಎನ್ ಶಿವಾನಂದ ಕುಗ್ವೆಯವರು ಸಾಗರದ ಮಣ್ಣಿನ ಸಾಹಿತಿಯನ್ನು ಆಪ್ತವಾಗಿ ನೆನಪು ಮಾಡಿಕೊಂಡಿದ್ದಾರೆ.
ನಮ್ಮ ಸಾಗರದ ಮಣ್ಣಿನ ಸಾಹಿತಿ ನಾ.ಡಿಸೋಜ ಅಗಲಿದ್ದಾರೆ.
ಸಾಗರದಂತಹ ಸಣ್ಣ ಪಟ್ಟಣದಲ್ಲಿಯೇ ಇದ್ದುಕೊಂಡು ಯಾವುದೇ ಅಕಾಡೆಮಿಕ್ ಲಾಬಿಗಳ ಬಲ, ಹಿನ್ನೆಲೆ ಇಲ್ಲದೆ ನಾಡಿನ ಖ್ಯಾತ ಸಾಹಿತಿಗಳೆನ್ನಿಸಿಕೊಂಡ ಡಿಸೋಜ ಕನ್ನಡದ ಎಲ್ಲಾ ಜನಪ್ರಿಯ ಸಾಹಿತ್ಯ ಪ್ರಕಾರಗಳಲ್ಲಿಯೂ ತಮ್ಮ ಛಾಪನ್ನು ಮೂಡಿಸಿದವರು. ಅವರು ಹಲವು ಕಾದಂಬರಿಗಳನ್ನು ಬರೆದವರು. ಕನ್ನಡ ಸಾಹಿತ್ಯಕ್ಕೆ ಅಪರಿಚಿತವೇ ಆಗಿದ್ದ ಮಲೆನಾಡಿನ ಸಮುದಾಯಗಳಾದ ದೀವರು, ಹಸಲರುಗಳ ಬದುಕು ಸಂಪ್ರದಾಯ, ಜಾನಪದ ಕುರಿತು ಮೊದಲು ಬರೆದವರು ಸಹ ನಾ ಡಿಸೋಜಾ ಅವರು.
ಚಾರಿತ್ರಿಕ ಕಾಗೋಡು ಚಳುವಳಿ ನಡೆದಾಗ ಆ ಕಾಲದ ಗೇಣಿದಾರರ ಸಂಕಟ, ದಬ್ಬಾಳಿಕೆ ಗಳ ಹಿನ್ನೆಲೆಗಳ ಕುರಿತು ಅವರು ಬರೆದ ಕೊಳಗ ಕಾದಂಬರಿಯಲ್ಲಿ ದೀವರು ಹಾಗೂ ಇನ್ನಿತರ ಗೇಣಿ ರೈತರ ಬದುಕನ್ನುಅನನ್ಯವಾಗಿ ದಾಖಲಿಸಿರುವುದನ್ನು ಕಾಣುತ್ತೇವೆ. ಅನಕ್ಷರಸ್ಥರೇ ಹೆಚ್ಚಾಗಿದ್ದ, ಬಡತನವೇ ಬದುಕಾಗಿದ್ದ ಈ ಪ್ರದೇಶದಲ್ಲಿ ಬಹುಸಂಖ್ಯಾತರಾಗಿರುವ ದೀವರ ಸಮುದಾಯದ ಹಸೆ ಚಿತ್ತಾರ, ಸೋಬಾನೆ ಹಾಡುಗಳು ಮದುವೆ ಸಂಪ್ರದಾಯಗಳ ಕುರಿತು ಮೊದಲು ದಾಖಲಸಿದ ಅವರ ಆಸಕ್ತಿ ವಿಶೇಷವಾದದ್ದು.
ನಾಡಿಯವರು ಬರೆದಿರುವ ಒಂದು ಕತೆಯ ಶೀರ್ಷಿಕೆ ಕುರ್ಚಿ. ಅದು ಕಾಗೋಡು ಸತ್ಯಾಗ್ರಹದಲ್ಲಿ ತುಂಬಾ ಸಕ್ರಿಯವಾಗಿದ್ದ ಅತ್ಯಂತ ಸ್ವಾಭಿಮಾನಿಯಾಗಿದ್ದ ಕಣಸೆ ಜಟ್ಯಪ್ಪ ಎಂಬ ಸಾಮಾನ್ಯ ರೈತನ ಕುರಿತು ದಾಖಲಿಸಿರುವಂತಹದ್ದು. ಅಂದು ಗೌಡರೆಂದರೆ ಹೆದರಿ ಎದುರು ಮಾತನಾಡದ, ಚಪ್ಪಲಿ ಹಾಕಿ ಗೌಡರೆದುರು ನಡೆಯುವುದು, ಉದ್ದ ಪಂಜೆ ಉಟ್ಟು ಒಳ್ಳೆಯ ಅಂಗಿ ಹಾಕಿ ಒಡೆಯರೆದುರು ಬರುವುದೇ ಭಾರೀ ಅವಿಧೇಯತೆ ಎಂದು, ಗೇಣಿದಾರನ ಧಿಮಾಕು ಎಂದು ಜಮೀನ್ದಾರರು ಭಾವಿಸುತ್ತಿದ್ದ ಹಾಗೂ ಅಂತಹವರಿಗೆ ಶಿಕ್ಷೆ ನೀಡುತ್ತಿದ್ದ ಕಾಲ. ಗೇಣಿದಾರರು ಹೀಗೆ ಇರಬೇಕು, ಹೀಗೆ ಇರಬಾರದು ಎಂದು ಇದ್ದಂತಹ ಅಲಿಖಿತ ನಿಯಮಕ್ಕೆ ಅಪವಾದವಾಗಿ ಬಡ ರೈತರ ನಡುವೆ ಕಣಸೆ ಜಟ್ಯಪ್ಪ ಕಚ್ಚೆ ಪಂಚೆ ಉಟ್ಟು, ಕಾಲಿಗೆ ನರಿಕೆ ಜೋಡು ತೊಟ್ಟು ನಡೆಯುತ್ತಿದ್ದ ಎಂಬುದೇ ಇಂದಿಗೂ ಒಂದು ಪ್ರತೀತಿಯಾಗಿ ಇಂದು ಆ ಸ್ವಾಭಿಮಾನಿ ಕಣಸೆ ಜಟ್ಯಪ್ಪ ಒಂದು ಲೆಜೆಂಡರಿ ವ್ಯಕ್ತಿಯಾಗಿದ್ದವ. ನಾ ಡಿಸೋಜಾ ಅವರು ಇಂತಹ ವ್ಯಕ್ತಿಯ ಕುರಿತು ಕತೆ ಬರೆದು ದಾಖಲಿಸಿರುವುದು ಅಪರೂಪದ ದಾಖಲೆಯಾಗಿದೆ.
ಖ್ಯಾತ ನಾಮರೆಲ್ಲಾ ನಮಗ್ಯಾಕೆ ಊರಿನ ಉಸಾಬರಿ ಎಂದು ಮನೆಯೊಳಗೆ ಕುಳಿತಿರುತ್ತಿದ್ದ ಕಾಲದಲ್ಲಿ ನಾ.ಡಿ ಯವರು ನಮ್ಮ ಪರಿಸರಕ್ಕೆ ಕುತ್ತು ಬಂದಾಗ, ಪಶ್ಚಿಮ ಘಟ್ಟಗಳ ಉಳಿವಿಗೆ ಅಘಾತ ಮಾಡುವ ಸರ್ಕಾರಿ ಯೋಜನೆಗಳ ವಿರುದ್ಧ ಧ್ವನಿ ಎತ್ತುವ ಜನರೊಂದಿಗೆ ನಿಲ್ಲುತ್ತಿದ್ದರು. ಸಾಹಿತಿಯಾದವರಿಗೆ ಸಾಮಾಜಿಕ ಬದ್ಧತೆ ಎಷ್ಟು ಮುಖ್ಯ ಎಂಬುದಕ್ಕೆ ದೊಡ್ಡ ನಿದರ್ಶನ ನಮ್ಮ ನಾ ಡಿಸೋಜಾ ಅವರು.
ಬ್ರಿಟಿಷರ ಕಾಲದಲ್ಲೆ ಹಾಕಲಾಗಿದ್ದ ಬೆಂಗಳೂರು_ತಾಳಗುಪ್ಪ ರೈಲ್ವೆ ಯ ಹಳಿಗಳನ್ನು ರೈಲ್ವೆ ಇಲಾಖೆ ಲಾಭದಾಯಕ ವಲ್ಲದ ಪಟ್ಟಿಗೆ ಸೇರಿಸಿ ಕೀಳಲು ಹೊರಟಾಗ ಬ್ರಾಡ್ ಗೇಜ್ ರೈಲುಮಾರ್ಗ ಬೇಕು, ಎಂದು ಹೋರಾಟಕ್ಕೆ ನಿಂತು ಜನರ ಪರವಾಗಿ ಯಶಸ್ಸು ಕಂಡವರು ನಾಡಿ. ಅಲ್ಪಸಂಖ್ಯಾತರ ಧಾರ್ಮಿಕ ಕೇಂದ್ರಗಳ ಮೇಲೆ ಮೇಲಿಂದ ಮೇಲೆ ಮತಾಂಧ ಸಂಘಟನೆಗಳು ದಾಳಿ ನಡೆಸುತ್ತಿದ್ದಾಗ ನಾವು ಪ್ರಗತಿಪರ ಸಂಘಟನೆಗಳು, ಮತಾಂಧರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಹೋರಾಟಕ್ಕೆ ಇಳಿದಾಗ ಅವರು ನಮ್ಮೊಡನೆ ನಿಂತಿದ್ದರು.
ಮಲೆನಾಡಿನ ಮಣ್ಣು, ಪರಿಸರ, ಜನ, ಜಲ ಗಳ ರಕ್ಷಣೆಗೆ ಯಾವಾಗಲು ನಿಲ್ಲುತ್ತಿದ್ದ ಅವರ ಕಾಳಜಿ ನಮಗೆಲ್ಲರಿಗೂ ಸ್ಫೂರ್ತಿಯೂ ಆಗಿತ್ತು ಮಾದರಿಯೂ ಆಗಿತ್ತು.
ಎನ್ ಶಿವಾನಂದ ಕುಗ್ವೆ
ಹೋರಾಟಗಾರರು
ಇದನ್ನೂ ಓದಿ- ಮುಜಾಫರ್ ಅಸ್ಸಾದಿ | ವಿದ್ವತ್ತಿನ, ಬಹುತ್ವದ ಪ್ರತೀಕ