ಕಾಲೇಜುಗಳಲ್ಲಿ ಸಂಘಗಳಿಗೆ ಚುನಾವಣೆ ನಡೆಸುವ ಉದ್ದೇಶ ಇದೆ: ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌

Most read

ಬೆಂಗಳೂರು: ನಾಯಕತ್ವ ಎನ್ನುವುದು ವಿದ್ಯಾರ್ಥಿ ದಿಸೆಯಿಂದಲೇ ಆರಂಭವಾಗುತ್ತದೆ. ಅನೇಕ ನಾಯಕರು ಕಾಲೇಜು ಹಂತದಿಂದಲೇ ಬೆಳದುಬಂದಿದ್ದಾರೆ. ಈ ನಿಟ್ಟಿನಲ್ಲಿ ಕಾಲೇಜು ಹಂತದಲ್ಲಿ ಚುನಾವಣೆ ಮಾಡುವ ಇಚ್ಛೆ ಇದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನವರಿ 13 ಕ್ಕೆ ಈ ಸಮಿತಿಯ ಮೊದಲ ಸಭೆ ಮಾಡಲಿದ್ದೇವೆ ಎಂದರು. ಕಾಲೇಜುಗಳಲ್ಲಿ ಚುನಾವಣೆ ನಡೆಸುವ ಸಂಬಂಧ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್‌ ಇತ್ತೀಚೆಗೆ ಸಮಿತಿ ರಚಿಸಿ, ಡಾ. ಶರಣಪ್ರಕಾಶ್‌ ಪಾಟೀಲ್‌ ಅವರನ್ನು ಸಂಚಾಲಕರನ್ನಾಗಿ ನೇಮಿಸಿದ್ದಾರೆ. ಚುನಾವಣೆ ರೂಪುರೇಷೆ ಕುರಿತು ಸಭೆಯಲ್ಲಿ ಚರ್ಚಿಸುತ್ತೇವೆ. ಸಮಿತಿ ಸಭೆಯಲ್ಲಿ ನಿರ್ಧರಿಸಿದ ವಿಷಯಗಳ ಕುರಿತು ವರದಿ ಮಾಡಿ ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷರು ನೇಮಿಸಿರುವ ಸಮಿತಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌, ಮುಖ್ಯ ಸಚೇತಕ ಸಲೀಂ ಅಹಮದ್‌, ಶಾಸಕರಾದ ರಿಜ್ವಾನ್‌ ಅರ್ಷದ್‌, ಬಿ. ಶಿವಣ್ಣ, ವಿಧಾನ ಪರಿಷತ್‌ ಸದಸ್ಯರಾದ ಪುಟ್ಟಣ್ಣ, ಬಸವನಗೌಡ ಬಾದರ್ಲಿ ಹಾಗೂ ಎಚ್‌.ಎಸ್. ಮಂಜುನಾಥ್‌ ಗೌಡ, ಕೀರ್ತಿ ಗಣೇಶ್‌ ಈ ಸಮಿತಿಯಲ್ಲಿದ್ದಾರೆ.

 ಕಾಲೇಜು ಮತ್ತು ವಿವಿ ವಿದ್ಯಾರ್ಥಿನಿಯರಿಗೆ ಋತುಚಕ್ರ ರಜೆ ಕೊಡುವ ಬಗ್ಗೆ ಸಿಎಂ ಸೂಚನೆ ಕೊಟ್ಟರೆ ಮಾಡುತ್ತೇವೆ. ಸಿಎಂ ಆದೇಶವೇ ಅಂತಿಮ ಎಂದ ಅವರು ಎಂಜಿನಿಯರ್ ಮತ್ತು ಮೆಡಿಕಲ್ ಸೀಟು ಶುಲ್ಕ ಹೆಚ್ಚಳ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲಎಂದು ಸ್ಪಷ್ಟಪಡಿಸಿದರು.

More articles

Latest article