Wednesday, December 3, 2025

ಸ್ಲೋವಾಕಿಯಾದಲ್ಲಿ ಆಟೊಮೊಬೈಲ್‌, ವಿದ್ಯುತ್ ಕೌಶಲ್ಯ ತರಬೇತಿ ಹೊಂದಿದವರಿಗೆ ಬೇಡಿಕೆ: ಸಚಿವ ಶರಣಪ್ರಕಾಶ್ ಪಾಟೀಲ್

Most read

ಬ್ರಾಟಿಸ್ಲಾವಾ (ಸ್ಲೋವಾಕಿಯಾ): ಕರ್ನಾಟಕದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ವತಿಯಿಂದ ತರಬೇತಿ ಪಡೆದು ಅತ್ಯುನ್ನತ ಮಟ್ಟದ   ಕೌಶಲ್ಯ ತರಬೇತಿ ಪಡೆದುಕೊಳ್ಳುತ್ತಿರುವ ಉದ್ಯೋಗಿಗಳಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಬೇಡಿಕೆ ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ತಿಳಿಸಿದ್ದಾರೆ.

ಬ್ರಾಸಿಸ್ಲಾವಾದಲ್ಲಿರುವ ಸಿಟ್ರೊಯೆನ್‌ C3, C3 ಏರ್‌ಕ್ರಾಸ್ ಮತ್ತು ಒಪೆಲ್ ಫ್ರಾಂಟೆರಾ ಮಾದರಿಗಳ ವಾಹನ ತಯಾರಕ ಸಂಸ್ಥೆಯಾದ ಸ್ಟೆಲ್ಲಾಂಟಿಸ್ ಈಗಾಗಲೇ ಆಟೊಮೊಬೈಲ್‌ ವಿದ್ಯುತ್ ಕೌಶಲ್ಯ ತರಬೇತಿ ಹೊಂದಿದವರನ್ನು ಕಳುಹಿಸಿಕೊಡಬೇಕೆಂದು ಮನವಿ ಮಾಡಿದೆ. ಬ್ರಾಟಿಸ್ಲಾವಾ ಬಳಿಯ ತ್ರ್ವಾನಾ ಘಟಕದಲ್ಲಿ ಈಗಾಗಲೇ ಕರ್ನಾಟಕದ ಸುಮಾರು 100 ಅಸೆಂಬಲ್-ಲೈನ್ ಆಪರೇಟರ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

ಫೆಬ್ರವರಿ 2026 ರಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ  ಅಂತರರಾಷ್ಟ್ರೀಯ ಉದ್ಯೋಗ ಮೇಳಕ್ಕೆ ಪೂರ್ವಭಾವಿಯಾಗಿ ಸಚಿವರಾದ ಡಾ. ಶರಣಪ್ರಕಾಶ್ ಆರ್. ಪಾಟೀಲ್, ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಯುರೋಪ್‌ ಖಂಡದ ಪ್ರವಾಸ ಕೈಗೊಂಡಿದ್ದು, ರೋಡ್ ಶೋ ನಡೆಸಿ, ವಿವಿಧ ನಗರಗಳಿಗೂ ಭೇಟಿ ನೀಡುತ್ತಿದ್ದಾರೆ.

ಇಂದು ಸ್ಟೆಲ್ಲಾಂಟಿಸ್‌ಗೆ ಭೇಟಿ ನೀಡಿದ ಉಭಯ ಸಚಿವರು, ಕರ್ನಾಟಕದ ಉದ್ಯೋಗಿಗಗಳಿಗೆ ಸ್ಥಾವರದಲ್ಲಿ ನೀಡುತ್ತಿರುವ ಸೌಲಭ್ಯಗಳು ಮತ್ತು ಇತರೆ ವ್ಯವಸ್ಥೆಯ ಕುರಿತು ಪರಿಶೀಲಿಸಿದರು.

ಅಸೆಂಬ್ಲಿ ಲೈನ್‌ ಆಪರೇಟರ್‌ಗಳಿಗೆ ಅವಕಾಶ:

ಪ್ರಸ್ತುತ, ಕಂಪನಿಯು ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ (ಕೆವಿಟಿಎಸ್‌ಡಿಸಿ)ದ ವತಿಯಿಂದ ತರಬೇತಿ ಪಡೆದಿರುವ ಕೌಶಲ್ಯಪೂರ್ಣ 100 ಅಸೆಂಬಲ್-ಲೈನ್ ಆಪರೇಟರ್‌ಗಳನ್ನು ನೇಮಿಸಿಕೊಂಡಿದೆ. 50 ಕ್ಕೂ ಹೆಚ್ಚು ಹೆವಿ ವೆಹಿಕಲ್ ಡ್ರೈವರ್‌ ಗಳನ್ನೂ ನೇಮಿಸಲಾಗಿದೆ. ಉದ್ಯೋಗಿಗಳ  ವಲಸೆ ಮತ್ತು ನಿಯೋಜನೆ ಹಾಗೂ ಇತರೆ ಸೌಲಭ್ಯವನ್ನು ಕರ್ನಾಟಕ ಅಂತರರಾಷ್ಟ್ರೀಯ ವಲಸೆ ಕೇಂದ್ರ (IMC-K) ಸುಗಮಗೊಳಿಸಿದೆ.

ಈಗ ಸ್ಲೋವಾಕಿಯಾದಲ್ಲಿ ಉದ್ಯೋಗ ಪಡೆದಿರುವ ಕಲಬುರಗಿ ಜಿಲ್ಲೆಯ ಸೇಡಂನ ಸುನಿಲ್ ಕುಮಾರ್, ಕೆವಿಟಿಎಸ್‌ಡಿಸಿಗೆ ಕೃತಜ್ಞತೆ ಸಲ್ಲಿಸಿ, ಈ ಉಪಕ್ರಮವು ಸ್ಥಿರ ಆದಾಯ ಮತ್ತು ಉತ್ತಮ ಕೆಲಸ ಒದಗಿಸಿದೆ ಎಂದು ಹೇಳಿದರು.

ತ್ರ್ವಾನಾ ಸ್ಥಾವರದಲ್ಲಿ ಪ್ರತಿದಿನ 4,000 ಕ್ಕೂ ಹೆಚ್ಚು ಕಾರ್ಮಿಕರು ಸುಮಾರು 1,300 ವಾಹನಗಳನ್ನು ತಯಾರಿಸುತ್ತಿದ್ದಾರೆ.

ನಂತರ ಮಾತನಾಡಿದ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್, ನಮ್ಮ ಕರ್ನಾಟಕದ ಯುವ ಸಮೂಹವನ್ನು ಜಾಗತಿಕ ಮಟ್ಟದಲ್ಲಿ ಉದ್ಯೋಗ ಗಿಟ್ಟಿಸುವ ಅವಕಾಶ ಹೆಚ್ಚಿಸಲು ತರಬೇತಿ ನೀಡಲಾಗುತ್ತಿದೆ. ಇಂಗ್ಲಿಷ್, ಜರ್ಮನ್ ಮತ್ತು ಇಟಾಲಿಯನ್ ಭಾಷಾ ತರಬೇತಿ ನೀಡಲಾಗುತ್ತಿದೆ ಇದರಿಂದ ಎಲ್ಲರಿಗೂ ಅನುಕೂಲವಾಗಿದೆ. ನಮ್ಮ ರಾಜ್ಯದ ಯುವ ಸಮೂಹ ಈಗ ಜಾಗತಿಕ ಮಟ್ಟಕ್ಕೇರುತ್ತಿದೆ ಎಂದರು.

ಸ್ಟೆಲ್ಲಾಂಟಿಸ್ ನೇಮಕಾತಿ ಮುಖ್ಯಸ್ಥರಾದ ಕತ್ರಿನಾ ಫೆಲ್ಕೋವಾ ಅವರು, ವೀಸಾ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಸ್ಲೋವಾಕಿಯಾದಲ್ಲಿ ಭಾರತೀಯ ರಾಯಭಾರಿ ಅಪೂರ್ವ ಶ್ರೀವಾಸ್ತವ ಅವರನ್ನು ಒತ್ತಾಯಿಸಿದರು.

ಕರ್ನಾಟಕದಿಂದ ವಾರ್ಷಿಕವಾಗಿ ಒಂದು ಲಕ್ಷಕ್ಕೂ ಹೆಚ್ಚು ಎಂಜಿನಿಯರಿಂಗ್ ಪದವೀಧರರು ಹೊರಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಒದಗಿಸಬೇಕು. ಅಲ್ಲದೇ ಕರ್ನಾಟಕದಲ್ಲಿ ಉತ್ಪಾದನಾ ಘಟಕವನ್ನು ಆರಂಭಿಸಿದರೆ ಎಲ್ಲ ಸೌಲಭ್ಯಗಳನ್ನು ಸರ್ಕಾರದ ವತಿಯಿಂದ ನೀಡಲಾಗುವುದು ಎಂದು ಡಾ. ಪಾಟೀಲ್‌ ಮತ್ತು ಡಾ. ಸುಧಾಕರ್‌ ತಿಳಿಸಿದರು.

ಫೋರ್ಕ್‌ಲಿಫ್ಟ್ ಆಪರೇಟರ್‌ಗಳಿಗೆ DHL ಬೇಡಿಕೆ:

ಬ್ರಾಟಿಸ್ಲಾವಾ ಬಳಿಯ ನಿಟ್ರಾದಲ್ಲಿ ಮತ್ತೊಂದು ಸಭೆ ನಡೆಸಿದರು. ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಪ್ರಮುಖ ಸಂಸ್ಥೆಯಾಗಿರುವ ಡಿಎಚ್‌ಎಲ್‌ ಈಗ ಮತ್ತಷ್ಟು ಉದ್ಯೋಗಿಗಳಿಗೆ ಬೇಡಿಕೆ ಸಲ್ಲಿಸಿದೆ. ಭಾರೀ ಫೋರ್ಕ್‌ಲಿಫ್ಟ್ ಆಪರೇಟರ್‌ಗಳಿಗೆ ಯುರೋಪಿನಾದ್ಯಂತ ಹೆಚ್ಚು ಬೇಡಿಕೆ ಇದೆ. ಕರ್ನಾಟಕದ ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ಪೂರೈಸಬೇಕು ಎಂದು ಸಚಿವರ ಮುಂದೆಯೇ ಡಿಎಚ್‌ಎಲ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಮಿಲೋಸ್ ಗೋಸಿಕ್ ಬೇಡಿಕೆ ಮಂಡಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌, ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮವು ಈ ಪ್ರಸ್ತಾವನೆಯನ್ನು ಅಧ್ಯಯನ ಮಾಡುತ್ತದೆ ಮತ್ತು ನಿಗದಿತ ಪಠ್ಯಕ್ರಮದಲ್ಲಿ ಫೋರ್ಕ್‌ಲಿಫ್ಟ್ ತರಬೇತಿಯನ್ನೂ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಶಿವಕಾಂತಮ್ಮ ನಾಯಕ್ ಮತ್ತು ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್, ಕೌಶಲ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಕೆಎಸ್‌ಡಿಸಿ ವ್ಯವಸ್ಥಾಪಕ ನಿರ್ದೇಶಕ ಎನ್.ಎಂ. ನಾಗರಾಜ್, ಕ್ರಿಸ್ತಗೌಡ ತಾಯಣ್ಣವರ್, ರಾಮೇಗೌಡ ಮತ್ತು ಕೆಎಸ್ ಅವಿನಾಶ್ ಉಪಸ್ಥಿತರಿದ್ದರು.

More articles

Latest article