ಬೆಂಗಳೂರು ಸೆ. 10: ತಮ್ಮ ಬಗ್ಗೆ ಸತ್ಯಾಸತ್ಯತೆ ತಿಳಿಯದೆ ಪ್ರಸಾರವಾಗಿರುವ ವಿಡಿಯೋಗಳು, ಸಂದರ್ಶನಗಳು, ಟ್ರೋಲ್‌ಗಳು, ಫೋಟೋಗಳು ಹಾಗೂ ವೈಯಕ್ತಿಕ ವಿಚಾರಗಳಿಂದ ತಮಗೂ, ತಮ್ಮ ಕುಟುಂಬಕ್ಕೂ ನೋವಾಗಿದೆ ಎಂದು ಬಿಗ್‌ಬಾಸ್ ಕನ್ನಡ ಸೀಸನ್ 12ರ ಸೆಕೆಂಡ್ ರನ್ನರ್ ಅಪ್ ಅಶ್ವಿನಿ ಗೌಡ ಹೇಳಿದ್ದಾರೆ.
ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ತಮ್ಮ ಹೆಸರು, ಇಮೇಜ್, ಫೋಟೋ ಹಾಗೂ ಕುಟುಂಬದ ಫೋಟೋ–ವಿಡಿಯೋಗಳು ಅಥವಾ ಕುಟುಂಬದ ಹೆಸರನ್ನು ಯಾವುದೇ ರೀತಿಯಲ್ಲಿ ಬಳಸಬಾರದು ಎಂದು ಈಗಾಗಲೇ Defamation Suit ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ಈಗಾಗಲೇ ಪ್ರಸಾರ ಮಾಡಿರುವ ವಿಡಿಯೋಗಳು, ಸಂದರ್ಶನಗಳು, ಫೋಟೋಗಳು, ಟ್ರೋಲ್‌ಗಳು ಹಾಗೂ ಇತರೆ ವಿಷಯಗಳನ್ನು ತೆಗೆದುಹಾಕುವಂತೆ ನ್ಯಾಯಾಲಯದ ಆದೇಶವೂ ಇದೆ ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ನ್ಯಾಯಾಲಯದ ಆದೇಶವನ್ನು ಗೌರವಿಸಿ, ಈಗಾಗಲೇ ಪ್ರಕಟಿಸಿರುವ ಎಲ್ಲ ವಿಷಯಗಳನ್ನು ತಕ್ಷಣ ತೆಗೆದುಹಾಕಬೇಕು. ಇನ್ನು ಮುಂದೆ ತಮ್ಮ ಅಥವಾ ತಮ್ಮ ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನು ಬಳಸಬಾರದು ಎಂದು ಮನವಿ ಮಾಡಿದ್ದಾರೆ.
‘ನಾನು ಮೌನವಾಗಿದ್ದದ್ದು ಭಯದಿಂದಲ್ಲ. ನನ್ನ ಮಗನ ಭವಿಷ್ಯ, ನನ್ನ ತಾಯಿಯ ಮನಸ್ಸು ಹಾಗೂ ನನ್ನ ಕುಟುಂಬದ ನೆಮ್ಮದಿಗಾಗಿ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
‘ನನ್ನ ತಂದೆ ಕಲಿಸಿಕೊಟ್ಟ ದಾರಿಯಲ್ಲಿ, ಅವರ ಆಶೀರ್ವಾದದೊಂದಿಗೆ ನಾನು ನಡೆಯುತ್ತಿದ್ದೇನೆ. ನನ್ನ ಮೌನವನ್ನು ದೌರ್ಬಲ್ಯವೆಂದು ಭಾವಿಸಬೇಡಿ. ಇನ್ನು ನನ್ನ ಉತ್ತರ ಮಾತಿನಲ್ಲಿ ಅಲ್ಲ… ಕಾನೂನಿನಲ್ಲಿ’ ಎಂದು ಅಶ್ವಿನಿ ಗೌಡ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

