ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್ವಾರು ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 88,92,528 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ತಿಳಿಸಿದರು.
ಜಿಬಿಎ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಇಂದು ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಬಿಎ ವ್ಯಾಪ್ತಿಯಲ್ಲಿ ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಪಶ್ಚಿಮ ನಗರ ಪಾಲಿಕೆಗಳು ಸೇರಿದಂತೆ ಒಟ್ಟು 05 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 369 ವಾರ್ಡ್ಗಳು ರಚನೆಯಾಗಿವೆ ಎಂದು ಮಾಹಿತಿ ನೀಡಿದರು.
ಜಿಬಿಎ ನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ಪರಿಷ್ಕೃತ ಕರಡು ಮತದಾರರ ಪಟ್ಟಿಯಲ್ಲಿ 45,69,752 ಪುರುಷರು, 43,21,143 ಮಹಿಳೆಯರು ಹಾಗೂ 1,635 ಇತರೆ ಮತದಾರರು ಸೇರಿದಂತೆ, ಒಟ್ಟು 88,92,528 ಮತದಾರರು ಇದ್ದು, 8024 ಮತಟ್ಟೆಗಳು ಬರಲಿವೆ ಎಂದು ವಿವರಿಸಿದರು.
ಜಿಬಿಎ ವ್ಯಾಪ್ತಿಯಲ್ಲಿ ಒಟು 369 ವಾರ್ಡ್ಗಳ ಪೈಕಿ ಬೆಂಗಳೂರು ದಕ್ಷಿಣ ನಗರಪಾಲಿಕೆಯ ವಾರ್ಡ್ ಸಂಖ್ಯೆ 51- ಸುಭ್ರಮಣ್ಯ ನಗರ ಅತಿ ಹೆಚ್ಚು 54026 ಮತದಾರರನ್ನು ಹೊಂದಿರುತ್ತದೆ. ಬೆಂಗಳೂರು ಪೂರ್ವ ನಗರಪಾಲಿಕೆಯ ವಾರ್ಡ್ ಸಂಖ್ಯೆ 16-ಕೊತ್ತೂರು ಅತಿ ಕಡಿಮೆ 10940 ಮತದಾರರನ್ನು ಹೊಂದಿರುತ್ತದೆ.
ಮತದಾರರ ಪಟ್ಟಿ ಸಿದ್ದಪಡಿಸುವಿಕೆಯ ಕಾರ್ಯಕ್ರಮದ ವೇಳಾ ಪಟ್ಟಿಯಂತೆ ಹಕ್ಕುಗಳು ಮತ್ತು ಆಕ್ಷೇಪಣೆಗಳು ಸಲ್ಲಿಸುವ ಅವಧಿಯಲ್ಲಿ ಅಂದರೆ 10.03.2026ರಿಂದ 16.03.2026ರವರೆಗೆ ಒಂದು ವೇಳೆ ಪರಿಷ್ಕೃತ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲವಾಗಿದ್ದಲ್ಲಿ ಅಥವಾ ಮತ್ತೊಂದು ವಾರ್ಡ್ ವ್ಯಾಪ್ತಿಯಲ್ಲಿ ಹೆಸರು ಪ್ರಕಟವಾಗಿದ್ದಲ್ಲಿ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.
ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ಪ್ರಚುರಪಡಿಸಿರುವ ಕುರಿತು ಸಾರ್ವಜನಿಕರು ಅಥವಾ ಮತದಾರರಿಗೆ ಮಾಧ್ಯಮದ (ಮುದ್ರಣ ಮತ್ತು ದೃಶ್ಯ) ಮುಖೇನ ಮಾಹಿತಿಯನ್ನು ನೀಡಲು ಮತ್ತು ಒಟ್ಟಾರೆ ದೋಷರಹಿತ ಅಂತಿಮ ಮತದಾರರ ಪಟ್ಟಿಯನ್ನು ಸಿದ್ದಪಡಿಸಿ 6ನೇ ಏಪ್ರಿಲ್ 2026ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲು ನಿರ್ಧರಿಸಿದೆ.
ವೆಬ್ ಸೈಟ್ನಲ್ಲಿ ಮತದಾರರ ಪಟ್ಟಿ: ವಾರ್ಡ್ವಾರು ಕರಡು ಮತದಾರರ ಪಟ್ಟಿಯನ್ನು ಜಿಬಿಎ ಅಧಿಕೃತ ಜಾಲತಾಣ https://gba.karnataka.gov.in/home ನಲ್ಲಿ ಪಿಡಿಎಫ್ ಆವೃತ್ತಿಯಾಗಿ ಪ್ರಕಟಿಸಲಾಗುವುದು. ಸಾರ್ವಜನಿಕರು ತಮ್ಮ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸೇರಿರುವುದನ್ನು ಪರಿಶೀಲಿಸಿಕೊಂಡು ಖಚಿತಪಡಿಸಿಕೊಳ್ಳಬಹುದು.
ನಗರ ಪಾಲಿಕೆವಾರು ಮತದಾರರ ಸಹಾಯವಾಣಿ: ಮತದಾರರ ಪಟ್ಟಿಗಳ ಪರಿಷ್ಕರಣೆಯ ವೇಳಾಪಟ್ಟಿಯ ಕುರಿತು ವ್ಯಾಪಕ ಪ್ರಚಾರಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಕರಡು ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳಿಗೆ ವಿತರಿಸಲಾಗುತ್ತಿದೆ. ಮತದಾರರ ಅನುಕೂಲಕ್ಕಾಗಿ ಐದು ನಗರ ಪಾಲಿಕೆಗಳ ಸಹಾಯವಾಣಿ ಸಂಖ್ಯೆಗಳು ಈ ಕೆಳಗಿನಂತಿವೆ:
1. ಬೆಂಗಳೂರು ಕೇಂದ್ರ : 080-22975803, 2. ಬೆಂಗಳೂರು ಉತ್ತರ : 080-22975936, 3. ಬೆಂಗಳೂರು ದಕ್ಷಿಣ : 9480685704, 4. ಬೆಂಗಳೂರು ಪೂರ್ವ : 9480685706, 5. ಬೆಂಗಳೂರು ಪಶ್ಚಿಮ : 9480685703
ಬೂತ್ ಲೆವಲ್ ಏಜೆಂಟ್ ನೇಮಕ: ನೋಂದಾಯಿತ ಮತ್ತು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರತಿ ವಾರ್ಡಿನ ಪ್ರತಿ ಮತಗಟ್ಟೆಗೆ ಒಬ್ಬರಂತೆ ಬೂತ್ ಲೆವಲ್ ಏಜೆಂಟ್ ನೇಮಕಾತಿ ಮಾಡಿ ಮತಗಟ್ಟೆ ಅಧಿಕಾರಿಗಳಿಗೆ ಎಲ್ಲಾ ಅರ್ಹ ಮತದಾರರ ನೋಂದಣಿ ಕಾರ್ಯದಲ್ಲಿ ಸಹಕಾರ ನೀಡಲು ಕೋರಲಾಗಿದೆ.
ಕಛೇರಿಗಳಲ್ಲಿ ಪರಿಶೀಲನೆಗೆ ಅವಕಾಶ: ಮತದಾರರ ಪಟ್ಟಿಯನ್ನು ಮತದಾರರ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗೆ ಮತದಾರರ ನೊಂದಣಾಧಿಕಾರಿಗಳ ಕಛೇರಿ, ವಾರ್ಡ್ ಕಛೇರಿಗಳಲ್ಲಿ ವೀಕ್ಷಣೆಗೆ ಅಥವಾ ಪರಿಶೀಲನೆಗೆ ಅವಕಾಶವನ್ನು ಸಹ ಕಲ್ವಿಸಲಾಗಿರುತ್ತದೆ.
ಧ್ವನಿವರ್ಧಕಗಳ ಮೂಲಕ ಜಾಗೃತಿ: ಘನತ್ಯಾಜ್ಯ ನಿಗಮದ ವತಿಯಿಂದ ಮನೆ ಮನೆ ಕಸ ಸಂಗ್ರಹಣೆ ಮಾಡುವ ಆಟೋಗಳಲ್ಲಿನ ದ್ವನಿವರ್ಧಕಗಳ ಮುಖೇನ ಪರಿಷ್ಕೃತ ಕರಡು ಮತದಾರರ ಪಟ್ಟಿ ಪ್ರಚುರ ಪಡಿಸಿರುವ ಕುರಿತು ಪ್ರತಿ ಪಾಲಿಕೆಯಲ್ಲೂ ವ್ಯಾಪಕ ಪ್ರಚಾರ ಮಾಡಲಾಗುವುದು. ಅದರ ಜೊತೆಗೆ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಎಕ್ಸ್ ಖಾತೆಗಳಲ್ಲಿಯೂಸ ಸಹ ವ್ಯಾಪಕ ಪ್ರಚಾರ ನೀಡಲಾಗುವುದು.

