ಹೊಸದಿಲ್ಲಿ: ವೆಸ್ಟ್ ಇಂಡೀಸ್ ಮತ್ತು ಅಮೆರಿಕ ದೇಶಗಳ ಜಂಟಿ ಆಯೋಜನೆಯಲ್ಲಿ ನಡೆಯುತ್ತಿರುವ ಟಿ-ಟ್ವೆಂಟಿ ಕ್ರಿಕೆಟ್ (T-20) ಪಂದ್ಯಾವಳಿ ಎಂಟರಘಟ್ಟಕ್ಕೆ ತಲುಪಿದ್ದು ಗೆಲ್ಲುವ ಫೇವರಿಟ್ ತಂಡ ಯಾವುದು ಎಂಬ ಚರ್ಚೆ ಆರಂಭಗೊಂಡಿದೆ.
ಗ್ರೂಪ್ ಹಂತದ ಪಂದ್ಯಗಳು ಇಂದಿಗೆ ಮುಕ್ತಾಯವಾಗಿದ್ದು, ಇಂದು ಬೆಳಿಗ್ಗೆ ನಡೆದ ಕೊನೆಯ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡ ಅಫಘಾನಿಸ್ತಾನದ ತಂಡದ ವಿರುದ್ಧ 104 ರನ್ ಅಂತರದ ಭರ್ಜರಿ ಜಯಗಳಿಸುವುದರೊಂದಿಗೆ ಎಲ್ಲ ನಾಲ್ಕು ಪಂದ್ಯಗಳನ್ನು ಗೆದ್ದು ಸಿ ಗುಂಪಿನಲ್ಲಿ ಅಗ್ರಸ್ಥಾನವನ್ನು ಪಡೆಯಿತು.
ನಾಳೆಯಿಂದ ಸೂಪರ್ ಎಂಟರ ಘಟ್ಟದ ಪಂದ್ಯಗಳು ಆರಂಭವಾಗಲಿದ್ದು, ಸೂಪರ್ ಎಂಟರ ಘಟ್ಟಕ್ಕೆ ತೇರ್ಗಡೆಯಾದ ತಂಡಗಳನ್ನು ಎರಡು ಗುಂಪುಗಳನ್ನಾಗಿ ವಿಭಜಿಸಲಿದೆ. ಭಾರತ, ಆಸ್ಟ್ರೇಲಿಯಾ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ತಂಡಗಳು ಒಂದು ಗುಂಪಿನಲ್ಲಿದ್ದರೆ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಇಂಗ್ಲೆಂಡ್ ಮತ್ತು ಅಮೆರಿಕ ತಂಡಗಳು ಮತ್ತೊಂದು ಗುಂಪಿನಲ್ಲಿದೆ. ಎಲ್ಲ ತಂಡಗಳು ತಾವಿರುವ ಗುಂಪಿನ ಎಲ್ಲ ತಂಡಗಳೊಂದಿಗೆ ಆಡಿ ಸೆಮಿಫೈನಲ್ ತಲುಪಲು ಹಣಾಹಣಿ ನಡೆಸಲಿವೆ.
ನಾಳೆ ಸೂಪರ್ ಎಂಟರ ಘಟ್ಟದ ಮೊದಲ ಪಂದ್ಯದಲ್ಲಿ ಆತಿಥೇಯ ಅಮೆರಿಕ ತಂಡ ಪ್ರಬಲ ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ. ಜೂ. 20ರಂದು (ಗುರುವಾರ) ಭಾರತ ತಂಡ ಸೂಪರ್ ಎಂಟರಲ್ಲಿ ತನ್ನ ಮೊದಲ ಪಂದ್ಯವನ್ನು ಎದುರಿಸಲಿದ್ದು, ಅಫಘಾನಿಸ್ತಾನ ವಿರುದ್ಧ ಸೆಣಸಲಿದೆ. ಇದಾದ ನಂತರ ಜೂ.22ರಂದು (ಶನಿವಾರ) ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಭಾರತ ಸೂಪರ್ ಎಂಟರ ತನ್ನ ಕೊನೆಯ ಪಂದ್ಯವನ್ನು ಜೂ.24ರಂದು ಸೋಮವಾರ ಆಸ್ಟ್ರೇಲಿಯಾ ವಿರುದ್ಧ ಸೆಣೆಸಲಿದೆ.
ಪ್ರತಿ ಗುಂಪಿನಲ್ಲಿ ಅತಿಹೆಚ್ಚು ಅಂಕ ಗಳಿಸುವ ಎರಡು ತಂಡಗಳು ಸೆಮಿಫೈನಲ್ ತಲುಪಲಿದ್ದು ಜೂ.27ರಂದು ಎರಡೂ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಜೂ.29ರಂದು ಫೈನಲ್ ಪಂದ್ಯ ನಡೆಯಲಿದೆ.
ಎ ಗುಂಪಿನಲ್ಲಿ ಭಾರತ ತಾನು ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ಅಗ್ರಸ್ಥಾನಿಯಾಗಿ ಸೂಪರ್ ಎಂಟನ್ನು ಪ್ರವೇಶಿಸಿದೆ. ಮಳೆಯ ಕಾರಣದಿಂದಾಗಿ ಕೆನಡಾ ವಿರುದ್ಧ ನಡೆಯಬೇಕಿದ್ದ ಪಂದ್ಯ ರದ್ದಾಗಿದ್ದರಿಂದ ಎಂಟು ಅಂಕಗಳನ್ನು ಗಳಿಸಲು ಸಾಧ್ಯವಾಗದೆ, 7 ಅಂಕಕ್ಕೆ ತೃಪ್ತಪಡಬೇಕಾಯಿತು. ಇನ್ನೊಂದೆಡೆ ಪಾಕಿಸ್ತಾನ ವಿರುದ್ಧ ಸೂಪರ್ ಓವರ್ ನಲ್ಲಿ ಗೆದ್ದು ಬೀಗಿದ ಅಮೆರಿಕ ಎ ಗುಂಪಿನಿಂದ ಎಂಟರ ಘಟ್ಟ ತಲುಪಿದ ಎರಡನೇ ತಂಡವಾಗಿದೆ. ಪಾಕಿಸ್ತಾನವನ್ನು ಗ್ರೂಪ್ ಹಂತದಲ್ಲೇ ಮನೆಗೆ ಕಳುಹಿಸಿದ ಕೀರ್ತಿ ಅಮೆರಿಕ ತಂಡದ್ದಾಗಿದೆ.
ಬಿ ಗುಂಪಿನಲ್ಲಿ ಆಸ್ಟ್ರೇಲಿಯಾ ತನ್ನ ಎಂದಿನ ಲಯದಲ್ಲಿ ಆಡಿದ ಎಲ್ಲ ನಾಲ್ಕು ಪಂದ್ಯಗಳನ್ನು ಜಯಿಸಿ ಸೂಪರ್ ಎಂಟು ಪ್ರವೇಶಿಸಿದ ಮೊದಲ ತಂಡವಾಗಿದೆ. ಸ್ಕಾಟ್ ಲ್ಯಾಂಡ್ ವಿರುದ್ಧ ಪಂದ್ಯದಲ್ಲಿ ಗೆಲ್ಲಲು ತಡಬಡಾಯಿಸಿ ಕೇವಲ 1 ರನ್ ನಿಂದ ಸೋಲುಣಿಸಿದ ಆಸ್ಟ್ರೇಲಿಯಾ ಎಲ್ಲ ಎಂಟು ಅಂಕಗಳನ್ನು ಗಳಿಸಿದೆ. ಇನ್ನೊಂದೆಡೆ ಮಳೆಯಿಂದಾಗಿ ಒಂದು ಪಂದ್ಯ ಕಳೆದುಕೊಂಡು, ಇನ್ನೇನು ಗ್ರೂಪ್ ಹಂತದಿಂದ ನಿರ್ಗಮಿಸುವ ಆತಂಕ ಎದುರಿಸಿದ್ದ ಇಂಗ್ಲೆಂಡ್ ಕೊನೆಯ ಎರಡು ಪಂದ್ಯಗಳನ್ನು ಅಧಿಕಾರಯುತವಾಗಿ ಗೆದ್ದು ಸೂಪರ್ ಎಂಟರ ಘಟ್ಟ ತಲುಪಿದೆ.
ಸಿ ಗುಂಪಿನಲ್ಲಿ ವೆಸ್ಟ್ ಇಂಡೀಸ್ ತಂಡದ ಅಬ್ಬರಕ್ಕೆ ಉಳಿದ ತಂಡಗಳು ನಲುಗಿಹೋಗಿವೆ. ಆಡಿದ ಎಲ್ಲ ನಾಲ್ಕು ಪಂದ್ಯಗಳನ್ನು ಗೆದ್ದಿರುವ ವೆಸ್ಟ್ ಇಂಡೀಸ್ ಪಂದ್ಯಾವಳಿಯ ಉಳಿದ ತಂಡಗಳಿಗೆ ತಲೆನೋವಾಗಿದೆ. ತವರಿನಲ್ಲೇ ಪಂದ್ಯಾವಳಿ ನಡೆಯುತ್ತಿರುವುದರಿಂದ ವೆಸ್ಟ್ ಇಂಡೀಸ್ ತಂಡಕ್ಕೆ ಇನ್ನಷ್ಟು ಶಕ್ತಿ ಬಂದಂತಾಗಿದೆ. ಟೂರ್ನಿಯುದ್ಧಕ್ಕೂ ಅಮೋಘ ಪ್ರದರ್ಶನ ತೋರುತ್ತ ಬಂದಿರುವ ಅಫಘಾನಿಸ್ತಾನ ತಂಡ ತನ್ನ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಹೀನಾಯವಾಗಿ ಸೋತು ಸೂಪರ್ ಎಂಟರ ಘಟ್ಟ ತಲುಪಿದೆ. ರಶೀದ್ ಖಾನ್ ನೇತೃತ್ವದ ಅಫಘಾನಿಸ್ತಾನ ತಂಡ ಬಲಿಷ್ಠ ತಂಡಗಳಿಗೆ ಸೋಲುಣಿಸುವಷ್ಟು ಸಮರ್ಥವಾಗಿದೆ. ಇದೇ ಗುಂಪಿನಲ್ಲಿದ್ದ ನ್ಯೂಜಿಲ್ಯಾಂಡ್ ತಂಡ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಸೋತು ಪಂದ್ಯಾವಳಿಯಿಂದಲೇ ಹೊರಹೋಗಿರುವುದು ಈ ಬಾರಿಯ ಅಚ್ಚರಿಯ ಬೆಳವಣಿಗೆಯಾಗಿದೆ.
ಡಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ಸೂಪರ್ ಎಂಟರ ಘಟ್ಟ ಪ್ರವೇಶಿಸಿದ್ದರೆ, ಬಾಂಗ್ಲಾದೇಶ ತಂಡ ಮೂರು ಪಂದ್ಯಗಳನ್ನು ಗೆದ್ದು ತೇರ್ಗಡೆಯಾಗಿದೆ. ಶ್ರೀಲಂಕ ತಂಡ ಈ ಬಾರಿ ಕಳಪೆ ಆಟ ಪ್ರದರ್ಶಿಸಿ ಆಡಿತ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಸೋತು ಮನೆಗೆ ತೆರಳಿದೆ. ಒಂದು ಪಂದ್ಯ ಮಳೆಗೆ ಆಹುತಿಯಾದರೆ ಒಂದನ್ನು ಮಾತ್ರ ಗೆಲ್ಲಲು ಅದಕ್ಕೆ ಸಾಧ್ಯವಾಯಿತು.
ಗ್ರೂಪ್ ಹಂತದ ಹಣಾಹಣಿಯನ್ನು ಗಮನಿಸಿದರೆ ವೆಸ್ಟ್ ಇಂಡೀಸ್ ತಂಡವೇ ಈ ಬಾರಿಯ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡದಂತೆ ಕಾಣುತ್ತಿದೆ. ತವರಿನ ಪಿಚ್ ಗಳಲ್ಲಿ ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಗಳು ಮತ್ತು ಬೌಲರ್ ಗಳು ಯಶಸ್ವಿಯಾಗುತ್ತಿದ್ದು, ಎಲ್ಲ ಆಟಗಾರರು ಫಾರ್ಮ್ ನಲ್ಲಿ ಇರುವುದು ಉಳಿದ ತಂಡಗಳ ನಿದ್ದೆಗೆಡಿಸಿದೆ. ಇನ್ನು ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ವಿಶ್ವಕಪ್ ಗೆಲ್ಲುವ ಸಾಧ್ಯತೆ ಇದೆ. ಅದರಲ್ಲೂ ಭಾರತ ಈ ಬಾರಿ ಕಪ್ ಗೆಲ್ಲಬೇಕೆಂದರೆ ಬ್ಯಾಟ್ಸ್ ಮನ್ ಗಳ ಬ್ಯಾಟ್ ನಿಂದ ರನ್ ಹೊಳೆ ಹರಿಯಬೇಕಾಗಿದೆ. ಬೌಲರ್ ಗಳು ಇದುವರೆಗಿನ ತಮ್ಮ ಯಶಸ್ವಿ ಪ್ರದರ್ಶನವನ್ನು ಮುಂದುವರೆಸಬೇಕಾಗಿದೆ.