ವಿಶ್ವ ಹಿಂದೂ ಪರಿಷತ್ ನಡೆಯೇ ಕೊರಗಜ್ಜನಿಗೆ ಅವಮಾನ !

Most read

  • ನವೀನ್ ಸೂರಿಂಜೆ

ಕೊರಗಜ್ಜ/ ಕೊರಗ ತನಿಯ ಕರಾವಳಿಯ ಕ್ರಾಂತಿಕಾರಿ ದೈವ. ಕುತ್ತಾರಿನಲ್ಲಿರುವ ಕೊರಗಜ್ಜನ ಮೂಲಸ್ಥಾನ ಒಂದಾನೊಂದು ಕಾಲದ ಕರಾವಳಿಯ ಕ್ರಾಂತಿಯ ಸ್ಥಳ. ಇಲ್ಲಿ ಕೊರಗಜ್ಜ ನಡೆಸಿದ ಕ್ರಾಂತಿಗೂ ವಿಶ್ವ ಹಿಂದೂ ಪರಿಷತ್ ಸಿದ್ದಾಂತಗಳಿಗೂ ತಾಳೆಯೇ ಆಗುವುದಿಲ್ಲ. ಹಾಗೆ ನೋಡಿದರೆ ವಿಶ್ವ ಹಿಂದೂ ಪರಿಷತ್ ನಡೆಯೇ ಕೊರಗಜ್ಜನಿಗೆ ಮಾಡುವ ಘನಘೋರ ಅವಮಾನವಾಗಿದೆ.

ಕೊರಗಜ್ಜ ಕುತ್ತಾರಿನಲ್ಲಿ ನೆಲೆಯಾಗಲು ಜಮೀನು ಸಿಕ್ಕಿದ್ದು ಹೇಗೆ ?

ಕೊರಗ ಸಮುದಾಯ ಎನ್ನುವುದು ಒಂದು ಕಾಲದಲ್ಲಿ ಅಸ್ಪೃಶ್ಯರಿಗೇ ಅಸ್ಪೃಶ್ಯರಾಗಿದ್ದ ಸಮುದಾಯ. ಹಾಗಿದ್ದರೂ ಕೊರಗ ತನಿಯ ಕುತ್ತಾರಿನಲ್ಲಿ ನೆಲೆ ಆಗುವಷ್ಟು ಭೂಮಿ ಸಿಕ್ಕಿದ್ದು ಹೇಗೆ ? ಕರಾವಳಿಯ ಮೂಲ ನಿವಾಸಿಗಳಾಗಿದ್ದರೂ ತುಂಡು ಭೂಮಿಯಿಲ್ಲದೇ ಕಾಡಂಚಿನಲ್ಲಿ ಬದುಕಿದ್ದ ಸಮುದಾಯದ ಕೊರಗ ತನಿಯ ಭೂಮಿ ಪಡೆದುಕೊಂಡಿದ್ದು ಹೇಗೆ ಎಂಬ ಐತಿಹ್ಯ ಹೇಳಿದರೆ ವಿಶ್ವ ಹಿಂದೂ ಪರಿಷತ್ ನ ನಿಲುವೇನು ಎಂಬುದನ್ನು ಕೇಳಬೇಕಾಗುತ್ತದೆ.

ಕೊರಗಜ್ಜನ ಪಾಡ್ದನಗಳ ಪ್ರಕಾರ ‘ಪಂಜದ ಉಲ್ಲಾಯನಿಗೂ ಉದ್ಯಾವರ ಮಾಡ ಅರಸು ದೈವಗಳಿಗೂ (ಪಂಜ ಸೀಮೆಯ ಅರಸರು ಮತ್ತು ಮಾಡ ಸೀಮೆಯ ಅರಸರು) ಏಳು ರಾತ್ರಿ ಏಳು ಹಗಲು ಯುದ್ದವಾಗುತ್ತದೆ. ಪಂಜದ ಉಲ್ಲಾಯ ಸೋತು ಹೋಗುತ್ತಾನೆ. ಉದ್ಯಾವರ ಮಾಡ ಅರಸರು, ಪಂಜದ ಉಲ್ಲಾಯನ ರಾಜ್ಯಭಾರದ ವ್ಯಾಪ್ತಿಯಲ್ಲಿರುವ ಕುತ್ತಾರು ಕಟ್ಟೆಯಲ್ಲಿ ಬಂದು ಕುಳಿತುಕೊಳ್ಳುತ್ತಾರೆ. ಅಂದರೆ ಪಂಜದ ಉಲ್ಲಾಯನ ಗ್ರಾಮವಾದ ಕುತ್ತಾರು ಪ್ರದೇಶ ಉದ್ಯಾವರ ಮಾಡ ಅರಸರ ಕೈವಶವಾಯಿತು ಎಂದರ್ಥ. ತನ್ನ ರಾಜ್ಯ ತಪ್ಪಿ ಹೋದ ಚಿಂತೆಯಲ್ಲಿ ಪಂಜದ ಉಲ್ಲಾಯ ಚಿಂತಾಕ್ರಾಂತನಾಗಿದ್ದ. ಕೊರಗ ತನಿಯರು ಪಂಜದ ಉಲ್ಲಾಯನಿಗೆ ಸಾಂತ್ವಾನ ಹೇಳಿ ‘ನಾನು ಉದ್ಯಾವರದ ಅರಸು ದೈವಗಳನ್ನು ನಮ್ಮ ಊರಿನಿಂದ ಓಡಿಸುತ್ತೇನೆ’ ಎಂದು ಭರವಸೆ ನೀಡುತ್ತಾರೆ. ಸೈನ್ಯ ಹೊಂದಿರುವ ಪಂಜದ ಅರಸನಾದ ನನಗೇ ಸಾಧ್ಯವಾಗದ್ದು ಕೊರಗ ತನಿಯನಿಗೆ ಸಾಧ್ಯವಾಗುವುದೇ ಎಂಬ ಪ್ರಶ್ನೆ ಪಂಜದ ಉಲ್ಲಾಯನದ್ದಾಗಿತ್ತು.

ಕೊರಗ ತನಿಯನು ನೇರ ಕುತ್ತಾರುವಿನ ದನದ ಕೊಟ್ಟಿಗೆಗೆ ಹೋಗುತ್ತಾನೆ. ಕಬಳ್ತಿ ದನ (ಕರಾವಳಿಯ ಕೆಂದು ಬಣ್ಣದ ಗಿಡ್ಡ ದನ)ವನ್ನು ಕೊಂದು ಅದರ ಚರ್ಮದಿಂದ ತನ್ನ ಶಿರವಸ್ತ್ರವಾದ ಮುಟ್ಟಾಲೆಯನ್ನು ತಯಾರಿಸುತ್ತಾನೆ. ದನದ ಎರಡೂ ಕಾಲುಗಳನ್ನೇ ಆಯುಧವನ್ನಾಗಿಸಿಕೊಂಡು ಕುತ್ತಾರು ಕಟ್ಟೆಯಲ್ಲಿ ಕುಳಿತ ಅರಸು ದೈವದ ಬಳಿ ಹೋಗುತ್ತಾನೆ. ‘ನೀವು ಕುತ್ತಾರು ಬಿಟ್ಟು ನಿಮ್ಮ ಉದ್ಯಾವರದ ವ್ಯಾಪ್ತಿಗೆ ತೆರಳದೇ ಇದ್ದರೆ ಈ ದನದ ಕಾಲುಗಳ ಮೂಲಕ ಯುದ್ದ ಎದುರಿಸಬೇಕಾಗುತ್ತದೆ’ ಎಂದು ಕೊರಗಜ್ಜ ಅರಸು ದೈವಗಳಿಗೆ ಎಚ್ಚರಿಕೆ ಕೊಡುತ್ತಾನೆ. ಉದ್ಯಾವರ ಮಾಡ ಅರಸು ದೈವಗಳಿಗೆ ದನದ ಮಾಂಸ ನಿಷಿದ್ದವಾಗಿರುತ್ತದೆ. ನಾವು ದನದ ಕಾಲುಗಳ ಜೊತೆ ಯುದ್ದ ಮಾಡಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಅರಸು ದೈವಗಳು ಕುತ್ತಾರು ಪ್ರದೇಶವನ್ನು ಪಂಜದ ಉಲ್ಲಾಯನಿಗೆ ಬಿಟ್ಟುಕೊಟ್ಟು ಉದ್ಯಾವರಕ್ಕೆ ತೆರಳುತ್ತದೆ’ ಎಂದು ಪಾಡ್ದನಗಳು ಹೇಳುತ್ತವೆ. ದನದ ಮಾಂಸವೇ ಪ್ರಧಾನ ಆಹಾರವನ್ನಾಗಿಸಿಕೊಂಡಿದ್ದ ಕೊರಗ ಸಮುದಾಯವು ಆ ಕಾರಣಕ್ಕಾಗಿ ದೈಹಿಕವಾಗಿ ಬಲಿಷ್ಟರಾಗಿದ್ದು ವಿರೋಧಿ ಸೈನ್ಯವನ್ನು ಹಿಮ್ಮೆಟ್ಟಿಸಿರುವ ಸಾಧ್ಯತೆ ಇದೆ. (ಆ ಬಳಿಕ ಅಜಲು ಪದ್ದತಿ ಹೇರಿಕೆಯಾಗಿ, ಸಾಮಾಜಿಕ ಶೋಷಣೆಗೆ ಒಳಗಾಗಿ ಕೊರಗರು ದೈಹಿಕವಾಗಿ ಕೂಡಾ ಕ್ಷೀಣಗೊಂಡರು) ಆ ಕಾರಣಕ್ಕಾಗಿಯೇ ಪಂಜದಾಯ (ಪಂಜದ ಉಲ್ಲಾಯ)ನು ಕೊರಗ ತನಿಯರಿಗೆ ಜಮೀನು ಮತ್ತು ಗೌರವ ಸಲ್ಲಿಕೆ ಮಾಡುತ್ತಾನೆ. ಎಲ್ಲಿಯ ಕೊರಗಜ್ಜ ? ಎಲ್ಲಿಯ ವಿಶ್ವ ಹಿಂದೂ ಪರಿಷತ್ ?

ಕುತ್ತಾರಿನಲ್ಲಿರುವ ‘ಕೊರಗಜ್ಜನ ಆದಿ ಕ್ಷೇತ್ರಕ್ಕೆ ನಮ್ಮ ನಡೆ’ ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮ ಹಮ್ಮಿಕೊಂಡು ಕೋಮು ದ್ವೇಷದ ಭಾಷಣಕಾರ ಚಕ್ರವರ್ತಿ ಸೂಲಿಬೆಲೆಯನ್ನು ಕರೆಸಿಕೊಂಡಿದೆ. ಕೊರಗಜ್ಜ ತನ್ನ ಹುಟ್ಟೂರಿನಿಂದ ಕುತ್ತಾರಿಗೆ ಬಂದಿದ್ದೇಕೆ ಎಂಬುದನ್ನು ವಿಶ್ವ ಹಿಂದೂ ಪರಿಷತ್ ತಿಳಿದುಕೊಳ್ಳಬೇಕು.

ಕೊರಗಜ್ಜ ಊರು ಬಿಟ್ಟು ಕುತ್ತಾರಿಗೆ ನಡೆದಿದ್ದ್ಯಾಕೆ ?

ಕೊರಗ ತನಿಯನ ಸಾಕು ತಾಯಿ ಮೈರಕ್ಕೆ ಬೈದ್ಯತಿ ಎಂಬ ಬಿಲ್ಲವ ಮಹಿಳೆ. ಅವರ ಊರಿನಲ್ಲಿ ಈಶ್ವರ ದೇವರ ಪೂಜೆ ನಡೆಯುತ್ತಿತ್ತು. ಮೈರಕ್ಕೆ ಬೈದ್ಯತಿಯು ತನ್ನ ಸಾಕು ಮಗ ಕೊರಗ ತನಿಯನ ಪರವಾಗಿ ಈಶ್ವರ ದೇವಸ್ಥಾನಕ್ಕೆ ಎಳನೀರು ತೆಗೆದುಕೊಂಡು ಹೋದಳು. ಕೊರಗ ತನಿಯ ಅಸ್ಪೃಶ್ಯ ಜಾತಿಯನಾಗಿದ್ದರಿಂದ ಆತ ಮುಟ್ಟಿದ ಎಳನೀರನ್ನು ದೇವರಿಗೆ ಸ್ವೀಕರಿಸಲಾಗುವುದಿಲ್ಲ ಎಂದರು. ಇದರಿಂದ ಕೆರಳಿದ ಕೊರಗ ತನಿಯ ‘ನಾನು ಮಾಡಿದ ಬುಟ್ಟಿ ದೇವಸ್ಥಾನದ ಕೆಲಸಗಳಿಗೆ ಆಗುತ್ತದೆ. ನಾನು ಮುಟ್ಟಿದ ಎಳನೀರು ಆಗುವುದಿಲ್ಲವೇ ?’ ಎಂದು ಬಹಿರಂಗವಾಗಿ ಪ್ರಶ್ನಿಸುತ್ತಾನೆ. ಮಾತ್ರವಲ್ಲ, ‘ಮನುಷ್ಯರಿಗೆ ಗೌರವ ಇಲ್ಲದ ನಾಡಿನಲ್ಲಿ ನಾನು ಇರಲ್ಲ’ ಎಂದು ನಿರ್ಧರಿಸಿದ ಕೊರಗ ತನಿಯ ಆ ಊರಿನಿಂದ ಹೊರ ಬಂದು ಕುತ್ತಾರು ಪದವಿನಲ್ಲಿ ನೆಲೆಯಾದರು ! ಕೊರಗ ತನಿಯ ಅಂದು ಊರು ಬಿಟ್ಟು ಕುತ್ತಾರಿಗೆ ಬರಲು ಕಾರಣವಾದ ಅಸ್ಪೃಶ್ಯತೆಯನ್ನು ಆಚರಿಸುವ ಸಮುದಾಯದ ಪ್ರತಿನಿಧಿಯೇ ವಿಶ್ವ ಹಿಂದೂ ಪರಿಷತ್ !

ಕೊರಗಜ್ಜನನ್ನು ಮಾಯ ಮಾಡಿದ ಪ್ರತಿನಿಧಿಗಳು

ಕೊರಗರ ತನಿಯ ಬಿಲ್ಲವರ ಬೈದ್ಯತಿಯ ಮನೆಯಲ್ಲಿ ಬೆಳೆಯುತ್ತಾನೆ. ಕೊರಗನೊಬ್ಬ ಬಿಲ್ಲವರ ಮನೆಯಲ್ಲಿ ಬೆಳೆಯುವುದು ಅಂದಿನ ಕಾಲಕ್ಕೆ ಕ್ರಾಂತಿಕಾರಿಯೇ ಆಗಿತ್ತು. ಮತ್ತು ಬೈದ್ಯೆತಿ ಜಾತಿ ನಿಯಮಗಳನ್ನು ಮೀರಿ ನಿಂತವಳಾಗಿ ಕಂಡಿದ್ದಳು. ಬಿಲ್ಲವರ ಕೋಟಿ ಚನ್ನಯ್ಯರಂತೆ ಅಪಾರ ಸಾಹಸಿಯಾಗಿದ್ದ ಕೊರಗ ತನಿಯನು ದುಷ್ಟ ಮೇಲ್ವರ್ಗಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಬೈದ್ಯತಿ ಕಳ್ಳು (ಶೇಂದಿ) ಮಾರಾಟದ ವೃತ್ತಿ ಮಾಡುತ್ತಿದ್ದಳು. ಕೊರಗ ತನಿಯನು ಬೈದ್ಯತಿಗೆ ಸಹಾಯ ಮಾಡುತ್ತಿದ್ದ. ಈ ಮಧ್ಯೆ ತನಿಯನಿಗೆ ಪ್ರತ್ಯೇಕ ಕೊಟ್ಟಿಗೆ ಕಟ್ಟಿ, ತಲೆಗೆ ಮುಟ್ಟಾಲೆ ಇಟ್ಟು ತನಿಯನ ಕುಲ ಕಸುಬಾಗಿದ್ದ ಬಿದಿರಿನ ಬುಟ್ಟಿ ತಯಾರಿಸಲು ಅನುವಾಗುವಂತೆ ವ್ಯವಸ್ಥೆ ಮಾಡಿಕೊಟ್ಟಳು. ಕದ್ರಿಯ ಮಂಜುನಾಥ ದೇವಸ್ಥಾನಕ್ಕೆ ಕೊರಗ ತನಿಯನು ಸಾವಿರ ಬುಟ್ಟಿ ಮಾಡಿಕೊಟ್ಟನು. ಬೈದ್ಯತಿಯ ಮಕ್ಕಳಾಗಿರುವ ಕೋಟಿ ಚೆನ್ನಯ್ಯರಂತೆಯೇ ಸಾಹಸಿಯಾಗಿ ಬೆಳೆದಿದ್ದ ತನಿಯ ಏಳು ಜನ ಕೆಲಸ ಮಾಡುವುದನ್ನು ಒಬ್ಬನೇ ಮಾಡುವಂತಹ ಸಾಮರ್ಥ್ಯ ಹೊಂದಿದ್ದ. ಅದೊಂದು ದಿನ ಕದ್ರಿಯ ದೇವಸ್ಥಾನಕ್ಕೆ ಹೊರೆಯನ್ನು ಕೊಂಡೊಯ್ಯುವ ದಿನ ಕದ್ರಿ ದೇವಸ್ಥಾನದ ಗೋಪುರಕ್ಕೆ ತಾಗಿದ್ದ ಮಾದಳದ ಹಣ್ಣನ್ನು ತನಿಯ ಗಮನಿಸಿದ. ತನ್ನ ಸಾಕು ತಾಯಿ ಬೈದ್ಯತಿಗೆ ಮಾದಳದ ಹಣ್ಣು ಎಂದರೆ ಇಷ್ಟ ಎಂದು ಗೊತ್ತಿದ್ದ ತನಿಯ ಹಣ್ಣು ಕೀಳಲು ದೇವಸ್ಥಾನದ ಗೋಪುರದ ಬಳಿ ಹೋದ. ತನಿಯ ದೇವಸ್ಥಾನದ ಗೋಪುರದ ಬಳಿ ಹೋಗುತ್ತಿದ್ದಂತೆ ಮಾಯವಾದ ಎಂದು ಪಾಡ್ದನಗಳು ಹೇಳುತ್ತದೆ.

ಈ ಪಾಡ್ದನದ ಕತೆಯಲ್ಲಿ ಬರುವ ‘ಮಾಯವಾದ’ ಎಂಬ ಪದ ಖಂಡಿತವಾಗಿಯೂ ಕೊಲೆಯಾದ ಎಂಬುದಾಗಿರಬೇಕಿತ್ತು. ದೇವಸ್ಥಾನದ ಗೋಪುರದ ಬಳಿ ಅಸ್ಪೃಶ್ಯ ಸಮುದಾಯವಾಗಿರುವ ಕೊರಗ ಸಮುದಾಯದ ಯುವಕ ಬಂದಿರುವುದನ್ನು ಮೇಲ್ವರ್ಗಗಳು ಸಹಿಸದೇ ಕೊಲೆ ಮಾಡಿರಬಹುದು. ಕೊರಗ ತನಿಯನ ಮಾಯವಾಗುವಿಕೆಗೆ ಪ್ರೇರಕವಾಗಿದ್ದ ಸಮುದಾಯ ಯಾವುದು ? ಕೊರಗ ತನಿಯನನ್ನು ಮಾಯ ಮಾಡಿದ್ದ ಸಮುದಾಯವನ್ನೇ ವಿಶ್ವ ಹಿಂದೂ ಪರಿಷತ್ ಪ್ರತಿನಿಧಿಸುತ್ತದೆ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ.

ವಿಶ್ವ ಹಿಂದೂ ಪರಿಷತ್ ನ ಬ್ರಾಹ್ಮಣ ನಾಯಕರು ಕೊರಗಜ್ಜನನ್ನು ಪಾಡ್ದನ/ಐತಿಹ್ಯಗಳಲ್ಲಿ ಇರುವಂತೆಯೇ ಈಗಲೂ ಒಪ್ಪಿಕೊಳ್ಳಲು ಸಾದ್ಯವಿಲ್ಲ. ಕೊರಗ ತನಿಯರ ಕ್ರಾಂತಿಯನ್ನಂತೂ ವಿಹಿಂಪ ಒಪ್ಪಿಕೊಳ್ಳಲ್ಲ. ಕೇವಲ ದೈವವೆಂದು ಕೈ ಮುಗಿಯಬಹುದೇ ವಿನಹ ಕೊರಗಜ್ಜನ ಬದುಕಿನ ಕ್ರಾಂತಿಕಾರಿ ಬಂಡಾಯದ ಆದರ್ಶಗಳನ್ನು ನಾವು ಪಾಲಿಸುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ಘೋಷಿಸಲು ಸಾಧ್ಯವೇ ಇಲ್ಲ.

ಹಾಗಾಗಿ, ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ‘ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ’ ಎಂಬುದು ಕೊರಗಜ್ಜನಿಗೆ ಮಾಡುವ ಅವಮಾನವಲ್ಲದೇ ಇನ್ನೇನೂ ಅಲ್ಲ.

More articles

Latest article