Sunday, September 8, 2024

ಪೆನ್ ಡ್ರೈವ್ ಪುರಾಣ ತೆರೆದು ತೋರುವ ಕೊಳಕು ವಾಸ್ತವ

Most read

ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಸೂಕ್ಷ್ಮ ಸಂವೇದನೆ ಉಳ್ಳವರು ಎಂದೆನಿಸಿ ಕೊಂಡವರೂ ಕುತೂಹಲ ತೋರುವುದು, ಲಘುವಾಗಿ ಪ್ರತಿಕ್ರಿಯಿಸುವುದನ್ನು ಕಂಡಾಗ ನಮ್ಮಲ್ಲಿ ಇನ್ನೊಬ್ಬರ ಖಾಸಗಿ ಬದುಕಿಗೆ ಇಣುಕಿ ನೋಡುವ ‘ಪೀಪಿಂಗ್ ಸಿಂಡ್ರೋಮ್’ ಯಾವ ಬಗೆಯಲ್ಲಿದೆ ಎಂಬುದು ತಿಳಿಯುತ್ತದೆ. ಇಡೀ ಸಮಾಜವೇ ತಲೆತಗ್ಗಿಸಬೇಕಾದ ಹೇಯ ಕೃತ್ಯವನ್ನು ಖಂಡಿಸಿ, ಈ ಹೊತ್ತಿನಲ್ಲಿ ಆ ಹೆಣ್ಣುಮಕ್ಕಳ ಬೆಂಬಲಕ್ಕೆ ನಿಲ್ಲಬೇಕಾಗಿರುವುದು ಸದ್ಯ ನಾವು ಮಾಡಬೇಕಾದದ್ದು -ಅನಿತಾ ಹಾಸನ,

ಪ್ರಭಾವೀ ವ್ಯಕ್ತಿಯೊಬ್ಬರು ತಮ್ಮ ಅಧಿಕಾರ, ಬಲ, ಹಣದಿಂದಾಗಿ ಅನೇಕ ಹೆಣ್ಣುಮಕ್ಕಳ ಜೊತೆ ಕಾಮಕೇಳಿ ನಡೆಸಿ ಅದನ್ನು ಸ್ವತಃ ಚಿತ್ರೀಕರಣ ಮಾಡಿ ಬೆದರಿಸಲು ಬಳಸುತ್ತಿದ್ದುದು, ಅದನ್ನು ಅವರಿಗೆ ಆಗದವರು ಸಾರ್ವಜನಿಕಗೊಳಿಸಿದ್ದು ಈಗ ಎಲ್ಲೆಲ್ಲೂ ಬಹು ಚರ್ಚಿತ ಸುದ್ದಿ. ಆರೋಪಿ ಎಂಥವನು? ಜೊತೆಗೆ ಹೋದ ಹೆಣ್ಣುಮಕ್ಕಳು ಯಾಕೆ ಹೋದರು? ಇದನ್ನು ಹೊರಹಾಕಿದವರು ಸಾಚಾನಾ? ಮತ್ತೆ ಮತ್ತೆ ಇವೇ ವಿಚಾರಗಳು ಮತ್ತೆ ಮತ್ತೆ ಎಲ್ಲರ ನಾಲಿಗೆಯಲ್ಲಿ ಹೊರಳಾಡುತ್ತಿವೆ. ಮಾಧ್ಯಮಗಳಂತೂ ಇದನ್ನೇ ಚಪ್ಪರಿಸಿಕೊಂಡು ಬಿತ್ತರಿಸುತ್ತಿವೆ.

ತಮ್ಮ ಶಕ್ತಿಯಿಂದ ಮತ್ತು ಹೆಣ್ಣುಮಕ್ಕಳಿಗಿರುವ ಅನಿವಾರ್ಯತೆ ಅಥವಾ ಅಸಹಾಯಕತೆಯಿಂದ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಈ ಬಳಸಿಕೊಳ್ಳುವಿಕೆ ನಡೆದಿದೆ. ಈ ಪ್ರಕರಣದ ಆಳ, ಅಗಲ ಊಹೆಗೂ ನಿಲುಕದ ಹಾಗಿದೆ. ಒಬ್ಬ ಮನುಷ್ಯ ತನ್ನ ತಾಯಿಯ ವಯಸ್ಸಿನವರನ್ನೂ ಬಿಡದಂತೆ ಇಷ್ಟು ಹೆಣ್ಣುಮಕ್ಕಳನ್ನು ಹೀಗೆ ಬಳಸಿಕೊಳ್ಳುವುದು ಹೇಗೆ ಸಾಧ್ಯ? ಇದು ಕೇವಲ ಅಧಿಕಾರ ದುರುಪಯೋಗದ ವಿಷಯ ಅಷ್ಟೇ ಅಲ್ಲ, ವಿಕೃತ, ರೋಗಗ್ರಸ್ತ ದೈಹಿಕ ಮತ್ತು ಮಾನಸಿಕ ಸ್ಥಿತಿಯ ದ್ಯೋತಕ. ಅಧಿಕಾರ ರಾಜಕಾರಣದ ಭಾಗವಾಗಿ ಒಂದಿಷ್ಟೂ ವಿವೇಚನೆ ಇಲ್ಲದಂತೆ ಈ ಚಿತ್ರಗಳನ್ನು ಮುಖಗಳನ್ನು ಮರೆಮಾಚದಂತೆ ಹೊರಹಾಕಿದವರೂ ಕನಿಷ್ಟ ಸಂವೇದನೆ, ಸೂಕ್ಷ್ಮತೆ ಇಲ್ಲದ ಅವಿವೇಕಿಗಳು. ಈ ಎಲ್ಲ ಬೆಳವಣಿಗೆಗಳೂ ಇದರಲ್ಲಿ ಪಾಲುದಾರರಾದವರ ತಪ್ಪು ಎದ್ದು ಕಾಣಿಸುತ್ತಿರುವ ಹಾಗೆಯೇ ಇದಕ್ಕೆ ಪ್ರತಿಕ್ರಿಯಿಸುತ್ತಿರುವ ಸುತ್ತಲಿನ ಜನರ ಮನಸ್ಸಿನ ಕಾಯಿಲೆಗಳನ್ನೂ ತೆರೆದು ತೋರುತ್ತಿದೆ.

ಮೊತ್ತಮೊದಲಿಗೆ, ಈ ವಿಚಾರವನ್ನು ಸಾರ್ವಜನಿಕರ ಗಮನಕ್ಕೆ ತಂದವರಿಗೆ ಇದು ಈ ಹಿಂದಿನಿಂದಲೂ ಗೊತ್ತಿತ್ತು. ಆದರೆ ಅವರು ಆಗ ಈ ಅನ್ಯಾಯದ ವಿರುದ್ಧ ಮಾತಾಡದೇ ಇದರ ಲಾಭ ಪಡೆಯಲು ಚುನಾವಣೆಯ ಸಂದರ್ಭ ಬಳಸಿ ಕೊಂಡಿದ್ದಾರೆ. ಈ ಗದ್ದಲದಲ್ಲಿ ಅಲ್ಲಿರುವ ಹತ್ತಾರು ಹೆಣ್ಣುಮಕ್ಕಳ ಬದುಕು ಏನಾಗಬಹುದು ಎಂಬ ಕನಿಷ್ಟ ಪರಿವೆಯೂ ಅವರಲ್ಲಿ ಕಾಣುವುದಿಲ್ಲ. ಆ ಹೆಣ್ಣುಮಕ್ಕಳು ಯಾವ ಕಾರಣಕ್ಕಾಗಿ ಆತನ ಬಳಿ ಹೋಗಿರಲಿ, ಅವರ ಖಾಸಗಿ ಕ್ಷಣಗಳನ್ನು ಬಹಿರಂಗಗೊಳಿಸುವ, ಅವರ ಬದುಕನ್ನು ಘಾಸಿಗೊಳಿಸುವ ಹಕ್ಕು ಯಾರಿಗೂ ಇಲ್ಲ. ಅವರು ಸಮ್ಮತಿ ಹೊಂದಿ ಹೋಗಿರಲಿ, ಇಲ್ಲದಿರಲಿ ಅವರ ಖಾಸಗಿತನವನ್ನು ಘಾಸಿಗೊಳಿಸುವ ಬಗೆಯಲ್ಲಿ ಅದನ್ನು ರೆಕಾರ್ಡ್ ಮಾಡಿಕೊಂಡಿದ್ದು ಮತ್ತು ಅವರ ಗುರುತು ನಿಚ್ಚಳವಾಗಿ ತಿಳಿಯುವ ರೀತಿಯಲ್ಲಿ ಸಾರ್ವಜನಿಕಗೊಳಿಸಿದ್ದು ಎರಡೂ ದೊಡ್ಡ ಅಪರಾಧವಾಗಿವೆ.

ಹಾಸನದ ಸುತ್ತಮುತ್ತ ತಿರುಗಾಡುತ್ತಾ ಮಾತಾಡಿದಾಗ ಕೆಲವರು, ಹೆಣ್ಣುಮಕ್ಕಳೂ ಸೇರಿಕೊಂಡಂತೆ ಹೇಳುವ ಮಾತು, ‘ಈ ಹೆಣ್ಣುಮಕ್ಕಳೇ ಸರಿ ಇಲ್ಲ. ಅವರು ಯಾಕೆ ಹೋಗಬೇಕಿತ್ತು? ವೈಯಕ್ತಿಕ ಲಾಭದ ಆಸೆಗೆ ಅವರು ಹಾಗೆ ಮಾಡಿದ್ದಾರೆ’. ಹೀಗೆ ಮಾತನಾಡುವವರು ಹಿಂದಿನಿಂದಲೂ ಹೆಣ್ಣುಮಕ್ಕಳನ್ನು ಆಳುವ ವರ್ಗ ಬೇರೆ ಬೇರೆ ಬಗೆಯ ಕುಣಿಕೆಗಳಿಗೆ ಸಿಕ್ಕಿಸಿ ಬಲೆ ಬೀಳಿಸುವುದರ ಅರಿವು ಇಲ್ಲದ ಅಮಾಯಕರೇ? ಅಧಿಕಾರಿ ವರ್ಗ, ಪಕ್ಷದ ಕಾರ್ಯಕರ್ತರನ್ನು ಗೊತ್ತಿಲ್ಲದಂತೆ ಬೇರೆ ಬೇರೆ ಬಗೆಯಲ್ಲಿ ಸಿಕ್ಕಿಹಾಕಿಸುವುದು ಮತ್ತು ಅವರು ದಿಕ್ಕು ಕಾಣದಾಗ ಈ ಬಗೆಯ ಹೊರದಾರಿ ತೋರುವುದು ಎಂದಿಗೂ ಇದ್ದದ್ದೇ. ಅಷ್ಟಕ್ಕೂ ಹೆಣ್ಣು ತನ್ನ ದೇಹವನ್ನು ಒಡ್ಡಿ ಸಮಸ್ಯೆಯಿಂದ ಹೊರಬರಬಹುದಾದ ದಾರಿಯನ್ನು, ದೇಹವನ್ನು ಕೊಟ್ಟು ಬೇಕಾದ್ದನ್ನು ಪಡೆಯಬಹುದು ಎಂಬ ವ್ಯವಸ್ಥೆಯನ್ನು ರೂಪಿಸಿದವರು ಯಾರು? ತಲತಲಾಂತರದಿಂದ ಹೆಣ್ಣನ್ನು ದೇಹವಾಗಿಯೇ ನೋಡುವ ವ್ಯವಸ್ಥೆಗೆ ಸರಿಯೋ ತಪ್ಪೋ ಅದೇ ಭಾಷೆಯಲ್ಲಿ ಕೆಲವು ಹೆಣ್ಣುಮಕ್ಕಳು ಉತ್ತರಿಸುತ್ತಾರಾದರೆ ಅದಕ್ಕೆ ಕಾರಣರು ಯಾರು? ಮಾಧವಿ ಗಾಲವರ ಪ್ರಸಂಗ, ಚಾಣಕ್ಯನ ಕಾಲದ ವಿಷಕನ್ನಿಕೆಯ ಪ್ರಸಂಗದಿಂದ ಹಿಡಿದು ಇಂದಿನ ಹನಿ ಟ್ರ್ಯಾಪ್‍ನ ವರೆಗೆ ನಡೆಯುತ್ತಿರುವುದು ಇದೇ.

ಮಹಿಳೆಯರಿಂದ ಪ್ರತಿಭಟನೆ

ಇಂದಿಗೂ ದೇಶದ ಜನಸಂಖ್ಯೆಯ ಅರ್ಧಭಾಗದಷ್ಟು ಹೆಣ್ಣುಮಕ್ಕಳಿದ್ದರೂ ರಾಜಕೀಯ ಅಧಿಕಾರ ಪಡೆಯಲು, ಅತ್ಯುನ್ನತ ಹುದ್ದೆಗೇರಲು ಕೆಲವರಿಗಷ್ಟೇ ಸಾಧ್ಯವಾಗಿದೆ. ಕಷ್ಟಪಟ್ಟು ಮೇಲೆ ಬಂದರೂ ಅದರಲ್ಲಿ ಮುಂದುವರೆಯಲು ನೂರೆಂಟು ವಿಘ್ನಗಳು. ಅವರಲ್ಲಿ ಒಂದು ಬಗೆಯ ಅಸಹಾಯಕತೆ, ಅಭದ್ರತೆ ಮೂಡಿಸುವ ಬಗೆಯಲ್ಲಿ ಸುತ್ತಲಿನ ವಾತಾವರಣ ಇದ್ದಾಗ ಅವರು ಪುರುಷ ರಾಜಕಾರಣದ ವರಸೆಗಳ ಮೂಲಕವೇ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ದಾರಿ ಹುಡುಕುವಂತಾಗುತ್ತದೆ. ಇದು ಎಲ್ಲರಿಗೂ ಅನ್ವಯಿಸದಿದ್ದರೂ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಹೀಗಾಗಿಯೇ ಮಗ, ಪತಿ, ಸೋದರರ ತಪ್ಪನ್ನು ಕಂಡೂ ಸುಮ್ಮನಿರುವ ಮಹಿಳೆಯರು, ಆಗಿರುವ ತಪ್ಪಿಗೆ ಹೆಣ್ಣನ್ನೇ ದೂರುವ ಸ್ತ್ರೀಯರು, ಇಕ್ಕಟ್ಟು ಎದುರಾದಾಗ ದೇಹ ಒಡ್ಡಬೇಕಾಗುವ ಅನಿವಾರ್ಯತೆಗೆ ಒಳಪಟ್ಟವರು ಕಾಣಸಿಗುತ್ತಾರೆ. ಇವು ನಮ್ಮ ಸಮಾಜದ ಪ್ರತಿಬಿಂಬಗಳು. ನಮ್ಮ ಒಟ್ಟು ಸಮಾಜದಲ್ಲಿ ಹೆಣ್ಣು ಗಂಡಿನ ಕುರಿತು, ಲೈಂಗಿಕ ಪ್ರವೃತ್ತಿಯ ಕುರಿತು ಪ್ರಬುದ್ಧ ತಿಳುವಳಿಕೆ ಇಲ್ಲದಿರುವ ಹೊತ್ತಿನಲ್ಲಿ ಅದರ ಫಲಿತಗಳಾಗಿ ಇಂಥವು ಕಾಣಿಸಿಕೊಂಡರೆ ಅದರಲ್ಲಿ ತೊಡಗಿದವರಷ್ಟೇ ಆರೋಪಿಗಳಾಗುವುದಿಲ್ಲ. ಇಡೀ ಸಮಾಜವೇ ತನ್ನನ್ನು ಅವಲೋಕನ ಮಾಡಿಕೊಳ್ಳಬೇಕಾಗುತ್ತದೆ.

ಇನ್ನೊಂದು ಮತ್ತೆ ಮತ್ತೆ ಚರ್ಚಿತವಾಗುತ್ತಿರುವುದು ಸಮ್ಮತಿಯ ಪ್ರಶ್ನೆ. ಸ್ವಾಯತ್ತತೆಯೇ ಇಲ್ಲದಿರುವ ಸಂದರ್ಭದಲ್ಲಿ ಸಮ್ಮತಿಯ ಪ್ರಶ್ನೆ ಅರ್ಥಹೀನ. ಅಲ್ಲದೆ, ಹೆಣ್ಣಿನ ಯೆಸ್ ಅಥವಾ ನೋ ಅನ್ನು ಸ್ವೀಕರಿಸುವ ಪ್ರಬುದ್ಧ ನಾಗರಿಕ ಸಮಾಜ ನಮ್ಮಲ್ಲಿದೆಯೇ? ಎಂದೂ ಕೇಳಿಕೊಳ್ಳ ಬೇಕಾಗುತ್ತದೆ. ಮದುವೆಯಾಗಲು ಒಪ್ಪದ್ದಕ್ಕೆ, ದೈಹಿಕ ಸಂಬಂಧ ನಿರಾಕರಿಸಿದ್ದಕ್ಕೆ ಆಸಿಡ್ ಸುರಿಯುವುದು, ಕೊಲ್ಲುವುದು, ತಲೆ ಕತ್ತರಿಸುವುದು, ಅಪವಾದ ಅಂಟಿಸುವುದು ಸರ್ವೇಸಾಮಾನ್ಯವೆನ್ನುವಂತೆ ನಡೆಯುತ್ತಲೇ ಇದೆ. ಇಂತಹ ಸ್ಥಿತಿಯಲ್ಲಿ ಯಾವುದು ಸಮ್ಮತಿ ಅಥವಾ ವಿವೇಕದಿಂದ ತೆಗೆದುಕೊಂಡ ನಿರ್ಧಾರ, ಯಾವುದು ಬಲವಂತದಿಂದ ನಡೆಯುವ ಸಮ್ಮತಿಯ ಉತ್ಪಾದನೆ ಎಂಬುದನ್ನು ತಿಳಿಯುವುದೇ ಕಷ್ಟ.

ಇಂತಹ ಅನಾರೋಗ್ಯಕರ ಸಮಾಜ ಈ ಘಟನೆಯ ಬಗ್ಗೆ ತಿಳಿದಾಗ ಪ್ರತಿಕ್ರಿಯಿಸಿದ ಬಗೆ ನೋಡಿದರೆ ಗೊತ್ತಾಗುತ್ತದೆ, ರೋಗದ ಉಲ್ಬಣಾವಸ್ಥೆ ಯಾವ ತೀವ್ರತೆಯಲ್ಲಿದೆ ಎಂದು. ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಸೂಕ್ಷ್ಮ ಸಂವೇದನೆ ಉಳ್ಳವರು ಎಂದೆನಿಸಿ ಕೊಂಡವರೂ ಕುತೂಹಲ ತೋರುವುದು, ಲಘುವಾಗಿ ಪ್ರತಿಕ್ರಿಯಿಸುವುದನ್ನು ಕಂಡಾಗ ನಮ್ಮಲ್ಲಿ ಇನ್ನೊಬ್ಬರ ಖಾಸಗಿ ಬದುಕಿಗೆ ಇಣುಕಿ ನೋಡುವ ‘ಪೀಪಿಂಗ್ ಸಿಂಡ್ರೋಮ್’ ಯಾವ ಬಗೆಯಲ್ಲಿದೆ ಎಂಬುದು ತಿಳಿಯುತ್ತದೆ. ಈ ಕೃತ್ಯವನ್ನು ಟೀಕಿಸುವವರೇ ಶೀಲ, ಪಾತಿವ್ರತ್ಯ ಎಂದು ಹೆಣ್ಣಿಗಷ್ಟೇ ಲಗಾವಾಗುವ ನಿಯಮಗಳನ್ನು ರೂಪಿಸಿ ಕೊನೆಗೂ ತಪ್ಪು ಮಾಡಿದವರಿಗಿಂತ ಅದಕ್ಕೆ ಒಳಗಾದವರನ್ನೇ ಮುನ್ನೆಲೆಗೆ ತಂದು ‘ವಿಕ್ಟಿಂ ಬ್ಲೇಮಿಂಗ್’ ಮಾಡುವ ಪರಿ ಯಾವಾಗಲೂ ಇದ್ದದ್ದೇ. ಈ ಹೆಣ್ಣುಮಕ್ಕಳು ಜೀವನವಿಡೀ ಈ ಭಾರವನ್ನು ಹೊತ್ತು ನರಳುವ ಹಾಗೆ ಆಗುವುದು ದುರಂತ.

ಇದನ್ನೂ ಓದಿ- ಪ್ರಜ್ವಲ್ ಈಗ ಶಿಶ್ನ ಗೊಂಚಲಿನ ಬೇತಾಳ !

ಇಡೀ ಸಮಾಜವೇ ತಲೆತಗ್ಗಿಸಬೇಕಾದ ಹೇಯ ಕೃತ್ಯವನ್ನು ಖಂಡಿಸಿ, ಈ ಹೊತ್ತಿನಲ್ಲಿ ಆ ಹೆಣ್ಣುಮಕ್ಕಳ ಬೆಂಬಲಕ್ಕೆ ನಿಲ್ಲಬೇಕಾಗಿರುವುದು ಸದ್ಯ ನಾವು ಮಾಡಬೇಕಾದದ್ದು. ಏನೇ ಆಗಿದ್ದರೂ ಅವರ ಖಾಸಗಿತನವನ್ನು ಅತಿಕ್ರಮಿಸುವ ಹಕ್ಕು ಯಾರಿಗೂ ಇಲ್ಲ. ಈ ಒಂದು ಪ್ರಕರಣದ ಕಾರಣಕ್ಕೆ ಅವರು ಬದುಕಿನುದ್ದಕ್ಕೂ ಕಳಂಕ ಹೊತ್ತು ಬದುಕಬೇಕಾಗಿಲ್ಲ. ಯಾವ ವ್ಯವಸ್ಥೆ ಹೆಣ್ಣನ್ನು, ಹೆಣ್ಣಿನ ದೇಹವನ್ನು ನಿರ್ಬಂಧಕ್ಕೆ ಒಳಪಡಿಸಿದೆಯೋ ಅದೇ ವ್ಯವಸ್ಥೆಯ ಮೌಲ್ಯಗಳನ್ನು ಬಹುತೇಕರು ಹೆಣ್ಣುಮಕ್ಕಳೂ ಸೇರಿದಂತೆ ವಿಜೃಂಭಿಸುತ್ತಾರೆ. ಈ ಮೌಲ್ಯಗಳೇ ಇವರನ್ನು ಸ್ವತಂತ್ರ ವ್ಯಕ್ತಿಗಳಾಗದಂತೆ ತಡೆದಿವೆ. ಈ ಸೂಕ್ಷ್ಮ ಅರಿವಾಗಲು ಇನ್ನೆಷ್ಟು ಕಾಲ ಬೇಕೋ…

ಅನಿತಾ, ಹಾಸನ

ಖಾಸಗಿ ಕಂಪನಿಯಲ್ಲಿ ಉದ್ಯೋಗಿ

ಇದನ್ನೂ ಓದಿ- ಪ್ರಜ್ವಲ್‌ ಪ್ರಕರಣ | ಪಿತೃಪ್ರಧಾನ ರಾಜಕಾರಣದ ಅಟ್ಟಹಾಸ

More articles

Latest article