ಹೊಸದಿಲ್ಲಿ: ಸರ್ವಾಧಿಕಾರಿಯ ನಿಜವಾದ ಮುಖ ಮತ್ತೊಮ್ಮೆ ದೇಶದ ಮುಂದೆ ಬಂದಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಾರ್ಮಿಕವಾಗಿ ನುಡಿದಿದ್ದಾರೆ.
ಜನರ ನಾಯಕನನ್ನು ಆಯ್ಕೆ ಮಾಡುವ ಹಕ್ಕನ್ನು ಕಸಿದುಕೊಳ್ಳುವುದು ಮಾತ್ರವಲ್ಲದೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ನಾಶಪಡಿಸುವುದು ಸರ್ವಾಧಿಕಾರಿಯ ಮತ್ತೊಂದು ಹೆಜ್ಜೆಯಾಗಿದೆ ಎಂದು ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ – ಇದು ಕೇವಲ ಸರ್ಕಾರ ರಚಿಸುವ ಚುನಾವಣೆಯಲ್ಲ, ಇದು ದೇಶವನ್ನು ಉಳಿಸುವ ಚುನಾವಣೆ, ಇದು ಸಂವಿಧಾನವನ್ನು ರಕ್ಷಿಸುವ ಚುನಾವಣೆ ಎಂದು ಅವರು ಹೇಳಿದ್ದಾರೆ.
ನಿನ್ನೆ ರಾಜಸ್ತಾನದ ಬನ್ಸ್ವಾರಾದಲ್ಲಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಸಭೆಯಲ್ಲಿ ʻʻಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರ ಈ ದೇಶದ ಸಂಪತ್ತಿನ ಮೇಲೆ ಮೊದಲ ಅಧಿಕಾರ ಇರುವುದು ಮುಸ್ಲಿಮರಿಗೆ ಮಾತ್ರ ಎಂದು ಹೇಳಿತ್ತು. ಇದರ ಅರ್ಥ ಹೆಚ್ಚು ಮಕ್ಕಳನ್ನು ಯಾರು ಹೊಂದಿರುತ್ತಾರೋ ಅವರಿಗೆ ಈ ದೇಶದ ಸಂಪತ್ತನ್ನು ಹಂಚುವುದು ಅವರ ಉದ್ದೇಶ. ನೀವು ಕಷ್ಟಪಟ್ಟು ದುಡಿದ ಹಣವನ್ನು ಈ ನುಸುಳುಕೋರರಿಗೆ (ಮುಸ್ಲಿಮರಿಗೆ) ಹಂಚಬೇಕೆ? ಇದಕ್ಕೆ ನಿಮ್ಮ ಸಮ್ಮತಿ ಇದೆಯೇ? ಇದನ್ನು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲೇ ಹೇಳಲಾಗಿದೆ. ದೇಶದ ವೈಯಕ್ತಿಕ ಆಸ್ತಿಗಳನ್ನು ಕಿತ್ತುಕೊಂಡು ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಹಂಚಲಿದೆ. ಇದು ನಗರ ನಕ್ಸಲರ ( Urban Naxal) ಯೋಜನೆಯಾಗಿದೆ. ಇದರಿಂದ ನಿಮ್ಮ ಹೆಣ್ಣುಮಕ್ಕಳ ಮಾಂಗಲ್ಯ ಕೂಡ ಉಳಿಯುವುದಿಲ್ಲʼʼ ಎಂದು ಹೇಳಿದ್ದರು.
ಪ್ರಧಾನಿ ಹೇಳಿಕೆಗೆ ದೇಶಾದ್ಯಂತ ತೀವ್ರ ಸ್ವರೂಪದ ಆಕ್ರೋಶ ವ್ಯಕ್ತವಾಗಿದೆ.