ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆಗೆ ಈಗ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್

Most read

ಹೊಸದಿಲ್ಲಿ: ಲೋಕಸಭಾ ಚುನಾವಣೆಗಳು ಹತ್ತಿರವಾಗಿರುವ ಈ ಸನ್ನಿವೇಶದಲ್ಲಿ ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಈಗ ತಡೆಯಾಜ್ಞೆ ನೀಡಿದರೆ ಚುನಾವಣೆಗಳ ಸಂದರ್ಭದಲ್ಲಿ ಅವ್ಯವಸ್ಥೆಗೆ ಕಾರಣವಾಗುತ್ತದೆ. ಹೀಗಾಗಿ ತಡೆಯಾಜ್ಞೆ ನೀಡುತ್ತಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ, ದೀಪಾಂಕರ್‌ ದತ್ತ ಮತ್ತು ಆಗಸ್ಟೀನ್‌ ಜಾರ್ಜ್‌ ಮಸೀಯಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಹೇಳಿದೆ.

2023ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆಯನ್ವಯ ನೇಮಕಾತಿ ಸಮಿತಿಯಿಂದ ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿಗಳನ್ನು ಹೊರಗಿಡಲಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಇಬ್ಬರು ಚುನಾವಣಾ ಆಯುಕ್ತರನ್ನು ಚುನಾವಣಾ ಆಯೋಗಕ್ಕೆ ನೇಮಕಾತಿ ಮಾಡಿತ್ತು. ಈ ನೇಮಕಾತಿಗೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್‌ ಕೆಲವು ದಿನಗಳ ಹಿಂದಷ್ಟೇ ನಿರಾಕರಿಸಿತ್ತು.

ಅಸೋಸಿಯೇಷನ್‌ ಫಾರ್‌ ಡೆಮಾಕ್ರಾಟಿಕ್‌ ರಿಫಾರ್ಮ್ಸ್‌ ಸಂಸ್ಥೆ ಚುನಾವಣಾ ಆಯುಕ್ತರ ನೇಮಕಾತಿ ನಡೆಸುವ ಸಮಿತಿಯಿಂದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳನ್ನು ಹೊರಗಿಟ್ಟಿರುವ ಕುರಿತು ಸುಪ್ರೀಂಕೋರ್ಟ್‌ ಗೆ ಅರ್ಜಿ ಸಲ್ಲಿಸಿತ್ತು. ಹಿರಿಯ ನ್ಯಾಯವಾದಿ ಪ್ರಶಾಂತ್‌ ಭೂಷಣ್ ಅರ್ಜಿದಾರರ ಪರ ವಕಾಲತ್ತು ವಹಿಸಿದ್ದರು.

ಕಳೆದ ಗುರುವಾರವಷ್ಟೇ ಮಾಜಿ ಐಎಎಸ್‌ ಅಧಿಕಾರಿಗಳಾದ ಗ್ಯಾನೇಶ್‌ ಕುಮಾರ್‌ ಮತ್ತು ಸುಕ್ಬಿರ್‌ ಸಂಧು ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿ ಈ ನೇಮಕಾತಿಯನ್ನು ಮಾಡಿತ್ತು. ಇದಕ್ಕೂ ಮುನ್ನ ಚುನಾವಣಾ ಆಯುಕ್ತರಾಗಿದ್ದ ಅನೂಪ್‌ ಕುಮಾರ್‌ ಪಾಂಡೆ ನಿವೃತ್ತರಾಗಿದ್ದರೆ, ಅರುಣ್‌ ಗೋಯೆಲ್‌ ದಿಢೀರನೆ ರಾಜೀನಾಮೆ ಸಲ್ಲಿಸಿದ್ದರು. ಮೂವರು ಚುನಾವಣಾ ಆಯುಕ್ತರ ಪೈಕಿ ಎರಡು ಸ್ಥಾನ ಖಾಲಿ ಇದ್ದ ಹಿನ್ನೆಲೆಯಲ್ಲಿ ಗುರುವಾರ ಇನ್ನಿಬ್ಬರು ಆಯುಕ್ತರನ್ನು ನೇಮಿಸಲಾಗಿತ್ತು. ಹೊಸ ಕಾಯ್ದೆಯಂತೆ ನೇಮಕಾತಿ ಸಮಿತಿಯಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಇರಲಿಲ್ಲ.

More articles

Latest article