ʼಒಳಗಣ್ಣುʼ ಅಂಕಣ
ಅವರ ಮೂಗಿನ ಕೆಳಗೆ ಈ ರೀತಿಯ ದೌರ್ಜನ್ಯಗಳು ನಡೆಯುತ್ತಿರುವ ಅರಿವು ಅವರಿಗೆ ಇದ್ದೇ ಇರುತ್ತದೆ. ಅದನ್ನು ಅವರು ತಡೆಗಟ್ಟಬಹುದಿತ್ತು. ಪೊಲೀಸರಿಗೆ ತಿಳಿಸಬಹುದಿತ್ತು. ಧಾರ್ಮಿಕ ಕ್ಷೇತ್ರದ ಪಾವಿತ್ರ್ಯವನ್ನು ಕಾಪಾಡಬಹುದಿತ್ತು. ಆದರೆ ಅಲ್ಲಿನ ಮುಖ್ಯಸ್ಥರುಗಳಿಗೆ ಸಾಮಾನ್ಯ ಜನರ ಬಗ್ಗೆ ಇರುವ ಕೀಳು ಧೋರಣೆ, ತಾನು ಎಲ್ಲವನ್ನು ಮೀರಿದ ಮಹಾನ್ ಶಕ್ತಿ ಎಂಬ ದುಷ್ಟ ಮನೋಭಾವ ಇತ್ಯಾದಿಗಳಿಂದಾಗಿ ಅವರು ಈ ವಿಷಯದಲ್ಲಿ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ – ವಿವೇಕಾನಂದ ಎಚ್ ಕೆ.
ಇಡೀ ದೇಶ, ಮುಖ್ಯವಾಗಿ ಕರ್ನಾಟಕ ರಾಜ್ಯದ ಜನತೆ, ಒಂದು ಧಾರ್ಮಿಕ ಕ್ಷೇತ್ರದಲ್ಲಿ ಇಂತಹದೊಂದು ಐತಿಹಾಸಿಕ ಹತ್ಯಾಕಾಂಡ ನಡೆದಿರಬಹುದೇ, ಅದೂ ಧರ್ಮಸ್ಥಳವೆಂಬ ಧಾರ್ಮಿಕ ಕ್ಷೇತ್ರದಲ್ಲಿ ಈ ರೀತಿ ನೂರಾರು ತಲೆ ಬುರುಡೆಗಳ ದುರಂತ ಕಥೆಗಳು ಅಡಗಿರಬಹುದೇ ಎಂದು ಕುತೂಹಲದಿಂದ ಕಾಯುತ್ತಿದೆ.
ದಕ್ಷಿಣ ಭಾರತದಲ್ಲಿಯೇ ಧರ್ಮಸ್ಥಳಕ್ಕಿಂತ ಹೆಚ್ಚು ಪ್ರಖ್ಯಾತವಾದ, ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಭೇಟಿ ನೀಡುವ ಅನೇಕ ಧಾರ್ಮಿಕ ಶ್ರದ್ಧಾ ಕೇಂದ್ರಗಳಿವೆ. ತಿರುಪತಿ, ಶಬರಿಮಲೆ, ಗುರುವಾಯೂರು, ಮಧುರೈ, ಕನ್ಯಾಕುಮಾರಿ, ಮಲೆಮಹದೇಶ್ವರ, ಸುಬ್ರಹ್ಮಣ್ಯ ಇತ್ಯಾದಿ ಇತ್ಯಾದಿ. ಆದರೆ ಅಲ್ಲಿ ಎಲ್ಲಿಯೂ ಈ ರೀತಿಯ ಅಸಹಜ ಸಾವಿನ ಪ್ರಕರಣಗಳು ಕೇಳಿ ಬಂದಿಲ್ಲ. ಆದರೆ ಧರ್ಮಸ್ಥಳದಲ್ಲಿ ಮಾತ್ರ ಇಷ್ಟೊಂದು ಸಾವಿನ, ಗೋಳಿನ, ಕಾಣೆಯಾದ, ಅತ್ಯಾಚಾರದ ಆರೋಪಗಳು ಕೇಳಿ ಬರುತ್ತಿವೆ. ಅದೇ ಒಂದು ಆಶ್ಚರ್ಯ.
14 ವರ್ಷಗಳ ಹಿಂದಿನ ಸೌಜನ್ಯ ಎಂಬ ವಿಧ್ಯಾರ್ಥಿನಿಯ ಅತ್ಯಾಚಾರ ಮತ್ತು ಬರ್ಬರ ಕೊಲೆಯ ನಂತರ ಈ ತಲೆ ಬುರುಡೆಗಳು ಹೆಚ್ಚು ಮಾತನಾಡತೊಡಗಿದವು. ಅದಕ್ಕಿಂತ ಮೊದಲು ಒಳಗೊಳಗೆ ಕುದಿಯುತ್ತಿದ್ದ ಅಸಹಾಯಕತೆಯ ಜ್ವಾಲಾಮುಖಿ ನಿಧಾನವಾಗಿ ಅಗ್ನಿ ಜ್ವಾಲೆಯಾಗಿ ಹೊರಬಂದು ಇದೀಗ ಸಾರ್ವಜನಿಕರ ಒತ್ತಾಯಕ್ಕೆ ಮಣಿದು ಕರ್ನಾಟಕ ಸರ್ಕಾರ ಡಿಜಿಪಿ ಡಾಕ್ಟರ್ ಪ್ರಣವ್ ಮೊಹಾಂತಿಯವರ ನೇತೃತ್ವದ ವಿಶೇಷ ತನಿಖಾ ತಂಡ ರಚಿಸುವಲ್ಲಿಗೆ ಬಂದು ನಿಂತಿದೆ.
ಸ್ವಾತಂತ್ರ್ಯಾ ನಂತರ ಕರ್ನಾಟಕದ ಚುನಾವಣಾ ರಾಜಕೀಯದಲ್ಲಿ ಕೆಲವು ಉದ್ಯಮಿಗಳು ಮತ್ತು ಧಾರ್ಮಿಕ ಮುಖಂಡರು ಎಲ್ಲಾ ಪಕ್ಷದ ಖಜಾನೆಗೆ ಮತ್ತು ಪ್ರತ್ಯೇಕವಾಗಿ ಚುನಾವಣಾ ಸಂದರ್ಭದಲ್ಲಿ ಕೆಲವು ಅಭ್ಯರ್ಥಿಗಳಿಗೆ ಆರ್ಥಿಕ ಸಹಾಯ ಮಾಡುತ್ತಿದ್ದರು. ಇವರಲ್ಲಿ ಮದ್ಯದ ದೊರೆಗಳು, ಕುಖ್ಯಾತ ರೌಡಿಗಳು, ಭೂಗಳ್ಳರು, ಶಿಕ್ಷಣ ಸಂಸ್ಥೆಗಳ ಪ್ರಮುಖರು, ಜಮೀನ್ದಾರರು ಮತ್ತು ಕೆಲವು ಧಾರ್ಮಿಕ ಕ್ಷೇತ್ರದ ನಾಯಕರು ಇದ್ದರು. ಅಂತಹ ಒಂದು ಆರ್ಥಿಕ ಮೂಲ ರಾಜಕಾರಣಿಗಳಿಗೆ ದೊರೆಯುತ್ತಿದ್ದುದು ಧರ್ಮಸ್ಥಳದಿಂದ. ಆಗಿನ ಅನೇಕ ರಾಜಕೀಯ ನಾಯಕರುಗಳಿಗೆ ಅಲ್ಲಿಂದ ಚುನಾವಣಾ ನಿಧಿ ತಲುಪುತ್ತಿತ್ತು. ಹಾಗೆಯೇ ಅದನ್ನು ಉಪಯೋಗಿಸಿಕೊಂಡು ಧರ್ಮಸ್ಥಳ ಒಂದು ದೊಡ್ಡ ಸಾಮ್ರಾಜ್ಯವಾಗಿ, ಭೂಪ್ರದೇಶವನ್ನು, ಆರ್ಥಿಕ ಚಟುವಟಿಕೆಗಳನ್ನು, ರಾಜಕೀಯ ಸಂಬಂಧಗಳನ್ನು, ಧಾರ್ಮಿಕ ಕಾರ್ಯಗಳನ್ನು ವಿಸ್ತರಿಸುತ್ತಾ ಬೆಳೆಯಿತು. ಮುಂದೆ ಅದರ ಮುಖ್ಯಸ್ಥರಿಗೆ ರಾಜ್ಯ ರಾಷ್ಟ್ರಮಟ್ಟದ ಪ್ರತಿಷ್ಠಿತ ಪ್ರಶಸ್ತಿಗಳಲ್ಲದೆ ರಾಜ್ಯಸಭಾ ಸದಸ್ಯತ್ವವೂ ಒಲಿದು ಬಂದಿತು.
ಆದರೆ ಆಂತರಿಕವಾಗಿ ಆ ಸಂಸ್ಥೆಯ ಕೆಲವು ಪ್ರಮುಖ ವ್ಯಕ್ತಿಗಳ ಬಗ್ಗೆ, ಅಲ್ಲಿನ ನೌಕರರ ಬಗ್ಗೆ, ಅಲ್ಲಿನ ಕೆಲವು ಏಜೆಂಟರ ಬಗ್ಗೆ ಸಾರ್ವಜನಿಕರಿಗೆ ಸಾಕಷ್ಟು ಅಸಮಾಧಾನವಿತ್ತು. ಅಲ್ಲಿ ಅವರ ಗೂಂಡಾ ವರ್ತನೆ, ಅವರ ಸರ್ವಾಧಿಕಾರ, ಅವರು ಮಾಡುತ್ತಿದ್ದ ದೌರ್ಜನ್ಯಗಳು ಸಾಮಾನ್ಯ ಜನರ ಅನುಭವಕ್ಕೆ ಬರುತ್ತಿದ್ದವು. ಹಾಗೆಯೇ ತೀರ ಆಳಕ್ಕೆ ಇಳಿದು ಅಲ್ಲಿನ ಸ್ಥಳೀಯರ ಜೊತೆ ಮತ್ತು ಮಾಜಿ ನೌಕರರ ಜೊತೆ ಮಾತನಾಡಿದಾಗ ಹೆಣ್ಣು ಮಕ್ಕಳ ವಿಷಯದಲ್ಲಿ ಅನೇಕ ಬ್ಲಾಕ್‌ಮೇಲ್ ಗಳು, ಅಮಾಯಕ ಒಂಟಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು, ನಾಪತ್ತೆ ಪ್ರಕರಣಗಳು ನಡೆದಿರುವ ಬಗ್ಗೆ ಖಚಿತ ಎನ್ನಬಹುದಾದಷ್ಟು ಬಲವಾದ ಸಾಕ್ಷಿಗಳು ದೊರೆಯುತ್ತಿದ್ದವು.
ಸಾಮಾನ್ಯವಾಗಿ ಮಧ್ಯಮ ವರ್ಗದ ಜನ ತುಂಬಾ ಭಯಗ್ರಸ್ತರು ಮತ್ತು ಮರ್ಯಾದಸ್ಥರು. ಅದರಲ್ಲೂ ಧರ್ಮಸ್ಥಳದಂತ ದೊಡ್ಡ ಪ್ರಭಾವಶಾಲಿಗಳ ವಿರುದ್ಧ ಹೋಗುವ ಮನಸ್ಥಿತಿಯನ್ನೇ ಹೊಂದಿರುವುದಿಲ್ಲ. ತಮಗಾದ ಅನ್ಯಾಯ ಯಾರಿಗೂ ಗೊತ್ತಾಗದಿದ್ದರೆ ಸಾಕು ಎಂದು ಒಳಗೊಳಗೆ ನುಂಗಿಕೊಳ್ಳುವುದೇ ಹೆಚ್ಚು. ಇನ್ನು ತೀರ ಬಡವರ ಸ್ಥಿತಿ ಮತ್ತಷ್ಟು ಅಧೋಗತಿ. ಅವರು ಕಾನೂನು ಮತ್ತು ಪೊಲೀಸ್ ವ್ಯವಸ್ಥೆಯ ಪರಿಧಿಯೊಳಗೆ ಬರುವುದೇ ಇಲ್ಲ. ಅವರಿಗೆ ತಿರುಗಿ ಬೀಳುವ ಯಾವ ಅವಕಾಶವೂ ಇರುವುದಿಲ್ಲ.
ಜೊತೆಗೆ ಇನ್ನೊಂದು ವಿಚಿತ್ರ ಮನಸ್ಥಿತಿಯ ಜನರು ಇರುತ್ತಾರೆ. ಉದಾಹರಣೆಗೆ- ಮನೆ ಬಿಟ್ಟು ಓಡಿ ಹೋದ ಯುವ ಪ್ರೇಮಿಗಳು, ಅನೈತಿಕ ಸಂಬಂಧಗಳ ಕೆಲವು ಜೋಡಿಗಳು, ದಾರಿ ತಪ್ಪಿದ ಒಂದಷ್ಟು ಮಹಿಳೆಯರು, ಮಾನಸಿಕ ಅಸ್ವಸ್ಥರು ಮುಂತಾದ ಈ ರೀತಿಯ ಜನರು ಕೂಡ ಇವರ ಟಾರ್ಗೆಟ್ ಆಗದಿರುವ ಸಾಧ್ಯತೆಯೂ ಇದೆ. ಅವರುಗಳು ಯಾರ ವಿರುದ್ಧವೂ ದೂರು ಕೊಡುವ ಪರಿಸ್ಥಿತಿಯಲ್ಲಿ ಇರುವುದಿಲ್ಲ.
ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ ಕೆಲವು ಹೆಣ್ಣು ಮಕ್ಕಳನ್ನು ರಾತ್ರಿ ಬಲವಂತವಾಗಿ ಕರೆದುಕೊಂಡು ಹೋಗಿ ಬೆಳಗ್ಗೆ ಅವರನ್ನು ಕಳುಹಿಸಿರುವ ಸಾಧ್ಯತೆಗಳ ಬಗ್ಗೆಯೂ ಗುಸು ಗುಸು ನಡೆಯುತ್ತಿದೆ. ಅವರು ದೂರನ್ನೇ ನೀಡಿರುವುದಿಲ್ಲ. ಇಲ್ಲಿ ಮತ್ತೊಂದು ಮಾನಸಿಕ ವಿಶ್ಲೇಷಣೆ ಎಂದರೆ ಸಾಮಾನ್ಯವಾಗಿ ಮನುಷ್ಯ ರಕ್ತದ ರುಚಿ ಕಂಡ ಹುಲಿ ಮನುಷ್ಯನನ್ನೇ ಹೆಚ್ಚಾಗಿ ಭೇಟೆಯಾಡಲು ಸದಾ ಹಾತೊರೆಯುವುದಂತೆ. ಏಕೆಂದರೆ ಮನುಷ್ಯ ಸುಲಭವಾಗಿ ಅದರ ಕೈಗೆ ಸಿಕ್ಕಿ ಬೀಳುತ್ತಾನೆ, ಯಾವುದೇ ಹೆಚ್ಚಿನ ಪ್ರತಿಭಟನೆ ಇರುವುದಿಲ್ಲ. ಹಾಗೆಯೇ ಇಲ್ಲಿ ಕೆಲವು ವಿಕೃತಕಾಮಿಗಳಿಗೆ ಈ ಮಾರ್ಗದ, ವಿಧಾನಗಳ ದೌರ್ಬಲ್ಯಗಳು ಚೆನ್ನಾಗಿ ತಿಳಿದಿರುತ್ತದೆ ಮತ್ತು ಅಸಹಾಯಕರನ್ನು ಅವರ ಕಣ್ಣು ಮತ್ತು ಮನಸ್ಸು ಸುಲಭವಾಗಿ ಗುರುತಿಸುತ್ತದೆ. ಈ ಸಾಧ್ಯತೆಯೂ ಹೆಚ್ಚಾಗಿದೆ.
ಇದಕ್ಕೆ ನೇರವಾಗಿ ಯಾರನ್ನಾದರೂ ಹೊಣೆ ಮಾಡುವುದು ಕಷ್ಟವಾಗಬಹುದು. ಆದರೆ ಅವರ ಮೂಗಿನ ಕೆಳಗೆ ಈ ರೀತಿಯ ದೌರ್ಜನ್ಯಗಳು ನಡೆಯುತ್ತಿರುವ ಅರಿವು ಅವರಿಗೆ ಇದ್ದೇ ಇರುತ್ತದೆ. ಅದನ್ನು ಅವರು ತಡೆಗಟ್ಟಬಹುದಿತ್ತು. ಪೊಲೀಸರಿಗೆ ತಿಳಿಸಬಹುದಿತ್ತು. ಧಾರ್ಮಿಕ ಕ್ಷೇತ್ರದ ಪಾವಿತ್ರ್ಯವನ್ನು ಕಾಪಾಡಬಹುದಿತ್ತು. ಆದರೆ ಅಲ್ಲಿನ ಮುಖ್ಯಸ್ಥರುಗಳಿಗೆ ಸಾಮಾನ್ಯ ಜನರ ಬಗ್ಗೆ ಇರುವ ಕೀಳು ಧೋರಣೆ, ತಾನು ಎಲ್ಲವನ್ನು ಮೀರಿದ ಮಹಾನ್ ಶಕ್ತಿ ಎಂಬ ದುಷ್ಟ ಮನೋಭಾವ ಇತ್ಯಾದಿಗಳಿಂದಾಗಿ ಅವರು ಈ ವಿಷಯದಲ್ಲಿ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಜೊತೆಗೆ ಅವರ ನಿಯಂತ್ರಣಕ್ಕೆ ಸಿಗದ ಅವರ ಬಂಧು ಬಳಗದವರು ಇದರಲ್ಲಿ ಭಾಗಿಯಾಗಿರುವ ಸಾಧ್ಯತೆ ಇರುವುದರಿಂದ ಅವರು ಈ ಬಗ್ಗೆ ದಿವ್ಯ ನಿರ್ಲಕ್ಷ್ಯ ಹೊಂದಿರುತ್ತಾರೆ.
ಇದೆಲ್ಲವನ್ನು ಗಮನಿಸಿದರೆ ಈಗ ರಚನೆಯಾಗಿರುವ ಎಸ್ಐಟಿ ಎಲ್ಲ ರೀತಿಯ ಒತ್ತಡಗಳನ್ನು ನಿಭಾಯಿಸಿ ಈ ವಿಷಯದಲ್ಲಿ ತನಿಖೆ ಮಾಡಬೇಕಿದೆ. ತಾನು ದೌರ್ಜನ್ಯಕ್ಕೊಳ್ಳಗಾದ ನೂರಾರು ಶವಗಳನ್ನು ನೆಲದಲ್ಲಿ ಹೂತಿದ್ದೇನೆ. ʼಈಗ ಪಶ್ಚಾತ್ತಾಪದಿಂದ ಸತ್ಯ ಹೇಳಲು ಮುಂದೆ ಬಂದಿದ್ದೇನೆʼ ಎನ್ನುವ ವ್ಯಕ್ತಿಯನ್ನು ತೀಕ್ಷ್ಣವಾಗಿ ತನಿಖೆಗೊಳಪಡಿಸಿ ಪೊಲೀಸ್ ಮತ್ತು ಅಪರಾಧ ಶಾಸ್ತ್ರದ ಎಲ್ಲಾ ವಿಧಾನಗಳನ್ನು ಬಳಸಿಕೊಂಡು ಅಪರಾಧಿಗಳು ಎಷ್ಟೇ ಬಲಿಷ್ಠರಾದರೂ ಅವರನ್ನ ಬಂಧಿಸುವ ಗುರುತರ ಜವಾಬ್ದಾರಿ ಮೊಹಾಂತಿಯವರ ತಂಡಕ್ಕೆ ಇದೆ.
ಧರ್ಮಸ್ಥಳದ ಆಡಳಿತ ವ್ಯವಸ್ಥೆ ಕೂಡ ಈ ವಿಷಯದಲ್ಲಿ ತೀರಾ ಅಪ್ರಬುದ್ಧವಾಗಿ ನಡೆದುಕೊಳ್ಳುತ್ತಿದೆ. ಮಾಧ್ಯಮಗಳ ವಿರುದ್ಧ, ಸಾಮಾಜಿಕ ಜಾಲತಾಣಗಳ ವಿರುದ್ಧ ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಸಣ್ಣತನ ಪ್ರದರ್ಶಿಸುತ್ತಿದೆ. ಅದೇನು ವೈಯಕ್ತಿಕ ವಿಷಯವಲ್ಲ. ತೀರಾ ಗಂಭೀರ ಅಪರಾಧಗಳ ಆರೋಪ. ಆದ್ದರಿಂದ ಜನ ಸ್ವಯಂ ಪ್ರೇರಿತವಾಗಿಧರ್ಮಸ್ಥಳಕ್ಕೆ ಭೇಟಿ ನೀಡುತ್ತಾರೆ. ಅದು ಅವರವರ ಭಕ್ತಿ ಮತ್ತು ಆಸಕ್ತಿ. ಉತ್ತಮ ನಡವಳಿಕೆ ಇದ್ದರೆ ಜನ ತಾನೇ ತಾನಾಗಿ ಬರುತ್ತಾರೆ, ಇಲ್ಲದಿದ್ದರೆ ನಿರ್ಲಕ್ಷಿಸುತ್ತಾರೆ. ಆದರೆ ಅಲ್ಲಿನ ಕೆಲವು ಮುಖಂಡರು ತಮ್ಮ ಅಸ್ತಿತ್ವವೇ ಕುಸಿದು ಹೋಗುವಂತೆ ಅದರ ಬಗ್ಗೆ ಗಾಬರಿಯಾಗಿರುವುದು ಒಳ್ಳೆಯ ಲಕ್ಷಣವಲ್ಲ.
ಕೆಲವೊಮ್ಮೆ ಸಾರ್ವಜನಿಕ ಜೀವನದಲ್ಲಿ ಹೇಗೆ ಒಳ್ಳೆಯ ಅನುಕೂಲಕರ ವಾತಾವರಣ ಸೃಷ್ಟಿಯಾಗುತ್ತದೋ ಹಾಗೆ ಕೆಲವೊಮ್ಮೆ ಅನಾನುಕೂಲಕರ ಪರಿಸ್ಥಿತಿಯೂ ನಿರ್ಮಾಣವಾಗುತ್ತದೆ. ಜನರ ಅಭಿಪ್ರಾಯ ಪರವೂ, ವಿರೋಧವು ಆಗಬಹುದು. ಅದನ್ನು ಸಮಚಿತ್ತದಿಂದ ಸ್ವೀಕರಿಸಬೇಕಾದ ಜವಾಬ್ದಾರಿ ಸಹ ಧರ್ಮಸ್ಥಳ ಸಂಸ್ಥೆಗೆ ಇದೆ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು.
ವಾಸ್ತವವಾಗಿ ಅಪರಾಧಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸುವಲ್ಲಿ ಮಾತ್ರ ಈ ತನಿಖೆ ಮುಕ್ತಾಯವಾಗುತ್ತದೆ. ಏಕೆಂದರೆ ಈಗಿನ ನಮ್ಮ ನ್ಯಾಯಿಕ ವ್ಯವಸ್ಥೆಯಲ್ಲಿ ಅಪರಾಧಿಗಳನ್ನು ಶಿಕ್ಷಿಸುವುದು ಅದರಲ್ಲೂ, ಬಲಿಷ್ಠ ಪ್ರಭಾವಿಗಳನ್ನು ಶಿಕ್ಷಿಸುವುದು ಅಷ್ಟು ಸುಲಭವಲ್ಲ. ಆದರೆ ಕನಿಷ್ಠ ಸಾರ್ವಜನಿಕರಿಗಾದರೂ ಇವರ ಮುಖವಾಡ ಬಯಲಾಗಲಿ. ಆ ಮೂಲಕ ಈ ಸಮಾಜ, ಈ ರಾಜ್ಯ ಒಂದು ಬಹುದೊಡ್ಡ ದುರಂತಕ್ಕೆ ಮುಂದೆಂದೂ ಬಲಿಯಾಗದಿರಲಿ ಎಂದು ಆಶಿಸುತ್ತಾ……
ಮನಸ್ಸುಗಳ ಅಂತರಂಗದ ಚಳವಳಿ….
ವಿವೇಕಾನಂದ ಎಚ್. ಕೆ.
ಬರಹಗಾರರು ಹಾಗೂ ಪತ್ರಕರ್ತರು
ಇದನ್ನೂ ಓದಿ-ಬಹುತ್ವ ಭಾರತ ಬಲಿಷ್ಠ ಭಾರತ- ಆಯ್ಕೆ ನಮ್ಮ ಮುಂದಿದೆ