ಕೋಲಾರದ ನೆಲದಲ್ಲಿ ಇತ್ತೀಚಿಗೆ ನಡೆದ ನೈಜ ಘಟನೆಯನ್ನು ಆಧರಿಸಿ ‘ದ ರೂಲರ್ಸ್’ ಎಂಬ ಚಿತ್ರ ನಿರ್ಮಾಣವಾಗುತ್ತಿದೆ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಎ.ಎಸ್.ಎಸ್.ಕೆ ಎಂಬ ಸಂಘಟನೆಯನ್ನು ಸ್ಥಾಪಿಸಿ ದೊಡ್ಡ ದೊಡ್ಡ ಹೋರಾಟಗಳನ್ನು ಮಾಡಿ ಗೆಲುವು ದಕ್ಕಿಸಿಕೊಂಡ ಹುಡುಗ ಕೆ.ಎಂ.ಸಂದೇಶ್, ತನ್ನ ಹೋರಾಟದ ಸಂದರ್ಭದಲ್ಲಿ ನಡೆದ ಒಂದು ನೈಜ ಘಟನೆಯನ್ನು ತೆರೆಗೆ ತರುತ್ತಿದ್ದಾರೆ.
‘ದ ಪವರ್ ಆಫ್ ಕಾನ್ಸ್ಟಿಟ್ಯೂಷನ್’ ಎಂಬ ಅಡಿಬರಹ ಹೊಂದಿರುವ “ದ ರೂಲರ್ಸ್” ಚಿತ್ರಕ್ಕೆ ಸ್ವತಃ ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ ಸಂದೇಶ್ ಅವರೇ ಬರೆದಿದ್ದಾರೆ. ಚಿತ್ರ ಪ್ರಾರಂಭದಿಂದಲೂ ಬಹಳಷ್ಟು ಸುದ್ದಿಯಾಗುತ್ತಲೇ ಇದೆ.
ವಿಶೇಷವೆಂದರೆ, ಕಳೆದ ವರ್ಷ ನವೆಂಬರ್ 26ರ ಸಂವಿಧಾನ ಸಮರ್ಪಣಾ ದಿನದಂದು ಕೋಲಾರ ಸಮೀಪದ ಮಾರ್ಜೇನಹಳ್ಳಿಯ ಸ್ಮಶಾನದಲ್ಲಿ ಯಾವುದೇ ಮುಹೂರ್ತಗಳಿಲ್ಲದೆ, ಬಾಡೂಟ ತಿಂದು ಚಿತ್ರೀಕರಣ ಪ್ರಾರಂಭಿಸಲಾಗಿತ್ತು. ಮೊದಲ ಬಾರಿಗೆ ಕೋಲಾರ ಜಿಲ್ಲೆಯ ದ್ರಾವಿಡ ಭಾಷೆ ಅರವು ( ಕನ್ನಡ ತೆಲುಗು ತಮಿಳು ಮಿಶ್ರಿತ ) ಭಾಷೆಯನ್ನು ಚಿತ್ರದಲ್ಲಿ ಕೆಲವು ಕಡೆ ಬಳಸಲಾಗಿದೆ.
ಅರವು ಭಾಷೆಯ ಕೆಲವು ಡೈಲಾಗ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ಜನವರಿ 26ರಂದು ಬಿಡುಗಡೆಯಾದ ರೂಲರ್ಸ್ ಚಿತ್ರದ ಎರಡನೇ ಟೀಸರ್ ನಲ್ಲಿ ನಾಯಕ ಹೇಳುವ “ತಿಂಡ್ರಕ್ ಕಳಿಲ್ಲೆ ಇಂಗಮ್ಮ ಬುಲ್ಲೇಟನ ವಾಕ” ಅನ್ನೋ ಡೈಲಾಗ್ ಸಾಕಷ್ಟು ಕಡೆ ವೈರಲ್ ಆಗ್ತಿದೆ.
ಎಂ.ಎನ್.ಎಂ ಮೂವೀಸ್ ಬ್ಯಾನರ್ ಅಡಿಯಲ್ಲಿ ಅಶ್ವತ್ ಬಳಗೆರೆ ನಿರ್ಮಿಸುತ್ತಿರುವ ಈ ಚಿತ್ರವನ್ನು, ಉದಯ್ ಭಾಸ್ಕರ್ ನಿರ್ದೇಶಿಸುತ್ತಿದ್ದು, ಕರುಣ್ ಕೆ.ಜಿ.ಎಫ್, ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಬಹುಭಾಷಾ ನಟ ಚರಣ್ ರಾಜ್, ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದು ಉಳಿದಂತೆ ಉದಯೋನ್ಮುಖ ಕಲಾವಿದರಾದ ರಿತುಗೌಡ ನಾಯಕಿಯಾಗಿ, ವಿಶಾಲ್ ನಾಯಕನಾಗಿ ನಟಿಸುತ್ತಿದ್ದಾರೆ.
ಇದೇ ಮಾರ್ಚ್ 17 ರಂದು, ಕೋಲಾರದಲ್ಲಿ ಆಡಿಯೋ ಕಾರ್ಯಕ್ರಮ ಆಯೋಜಿಸಲಾಗಿದ್ದು, ಎಪ್ರಿಲ್ 14 ಅಂಬೇಡ್ಕರ್ ಜಯಂತಿಯಂದು “ದ ರೂಲರ್ಸ್” ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.