ವಿಶ್ವದ 180 ದೇಶಗಳಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಸ್ವಾಯತ್ತೆಯ ವಿಷಯದಲ್ಲಿ ನಮ್ಮ ದೇಶ 161ನೇ ಸ್ಥಾನದಲ್ಲಿದೆ. ದೇಶದ ಪತ್ರಿಕೋದ್ಯಮ ಜಗತ್ತಿನ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಕೆಳಮಟ್ಟಕ್ಕೆ ಇಳಿದಿದೆ ಎಂದರೆ ಅದು ಜನಹಿತ ರಕ್ಷಣೆ ಮತ್ತು ನಿರ್ಭೀತಿಯಿಂದ ಕೆಲಸಮಾಡುವ ವಾತಾವರಣದಿಂದ ಬಹಳ ದೂರದಲ್ಲಿ ಇದೆ ಎಂದೇ ಹೇಳಬಹುದು – ಡಾ. ಉದಯಕುಮಾರ ಇರ್ವತ್ತೂರು, ವಿಶ್ರಾಂತ ಪ್ರಾಂಶುಪಾಲರು.
ಪ್ರಜಾತಂತ್ರ ವ್ಯವಸ್ಥೆಯ ಸಮರ್ಥ/ದಕ್ಷ ಕಾರ್ಯನಿರ್ವಹಣೆಯನ್ನು ಸಾಧ್ಯವಾಗಿಸುವ ಹಲವು ವಿಷಯಗಳಲ್ಲಿ “ಪತ್ರಿಕೆಗಳು” ಪ್ರಮುಖವಾದವು. ಪ್ರಭುತ್ವದ ನಿರಂಕುಶ ನೆಲೆಗಳನ್ನು ಶಿಥಿಲಗೊಳಿಸಿ ಜನಮನದ ಆಶಯಗಳ ಆಧಾರದಲ್ಲಿ ರಚಿತವಾದ ಹೊಸ “ಜನಮತ” ಆಧಾರಿತ ಹೊಸ ವ್ಯವಸ್ಥೆಯೊಂದರ ಹುಟ್ಟಿನ ಹಿಂದೆ ಪತ್ರಿಕೋದ್ಯಮದ ಬೆವರ ಹನಿಗಳು ಕೆಲಸ ಮಾಡಿವೆ ಎನ್ನುವುದನ್ನು ಮರೆಯಲಾಗದು. ಇದು ಪತ್ರಿಕೋದ್ಯಮಕ್ಕಿರುವ ಶಕ್ತಿ ಮತ್ತು ಜನಹಿತದ ಕುರಿತಂತೆ ಅದಕ್ಕಿರುವ ಉತ್ತರದಾಯಿತ್ವದ ಲಕ್ಷಣವೂ ಹೌದು.
ದಕ್ಷಿಣ ಆಫ್ರಿಕಾದಲ್ಲಿ ಜನತೆಗೆ ಘನತ್ತೆಯುಕ್ತ ಬದುಕು ಕಟ್ಟಿಕೊಡಲು ಹೊರಟ ಮೋಹನದಾಸ ಕರಮಚಂದ ಗಾಂಧಿʼಯ ಸಂದೇಶವನ್ನು ನೊಂದವರೆಲ್ಲರ ಎದೆಯಿಂದ ಎದೆಗೆ ಹರಿಸುವಲ್ಲಿ “ಇಂಡಿಯನ್ ಒಪೀನಿಯನ್” ವಹಿಸಿದ ಪಾತ್ರ ಪತ್ರಿಕೋದ್ಯಮ ಇತಿಹಾಸದಲ್ಲಿ ಅಚ್ಚಳಿಯದಂತೆ ದಾಖಲಾಗಿದೆ. ಹದಿನೆಂಟನೇ ಶತಮಾನದ ನಂತರ ಪ್ರಜಾತಂತ್ರ ವ್ಯವಸ್ಥೆ ನೆಲೆಗೊಂಡ ಯಾವುದೇ ದೇಶದ ಇತಿಹಾಸದ ಪುಟ ತಿರುವಿ ಹಾಕಿದರೂ ಪ್ರಜಾತಂತ್ರ ನೆಲೆಯೂರಲು ಪತ್ರಿಕೋದ್ಯಮ ವಹಿಸಿದ ಪಾತ್ರ ಬಹಳ ಹಿರಿದು ಎನ್ನುವುದು ನಮಗೆ ತಿಳಿಯುತ್ತದೆ. ಇದಕ್ಕೆ ನಮ್ಮ ದೇಶವೂ ಹೊರತಲ್ಲ. ಆಡಳಿತ ವ್ಯವಸ್ಥೆಯನ್ನು ದುರಾಡಳಿತದಿಂದ ವಿಮುಖಗೊಳಿಸಿ ಜನಪರತೆಯೆಡೆಗೆ, ಪ್ರಭುತ್ವದ ಕಪಿಮುಷ್ಠಿಯಿಂದ ಪ್ರಜೆಗಳ ನಾಡಿ ಬಡಿತ ನಿಯಂತ್ರಿತ ನಿರಂತರ ಉತ್ತರದಾಯಿತ್ವವೇ ಜೀವಾಳವಾಗಿರುವ ಪ್ರಜಾತಂತ್ರ ವ್ಯವಸ್ಥೆಯನ್ನು ನೆಲೆಗೊಳಿಸಿದ ಕಾರಣದಿಂದ ಪತ್ರಿಕೋದ್ಯಮವನ್ನು ಪ್ರಜಾತಂತ್ರದ ನಾಲ್ಕನೆಯ ಅಂಗ ಎಂದು ಪರಿಗಣಿಸಲಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಪ್ರಜಾತಂತ್ರದ ಆಶಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ರೀತಿಯ ಕುರಿತು, ಪ್ರಜಾತಂತ್ರದ ನಿಜವಾದ ಪ್ರಭುಗಳಾಗಿರುವ ಜನಸಾಮಾನ್ಯರಿಗೆ ಸರಿಯಾದ ಮಾಹಿತಿ ನೀಡುತ್ತಾ ಸದಾ ಜಾಗೃತರಾಗಿರುವಂತೆ ನೋಡಿಕೊಳ್ಳುವುದು ಪತ್ರಿಕೋದ್ಯಮದ ಜವಾಬ್ದಾರಿಯಾಗಿದೆ. ಈ ಕಾರಣದಿಂದಲೇ ನಿಜವಾದ ಅರ್ಥದಲ್ಲಿ ಪತ್ರಿಕೋದ್ಯಮವನ್ನು ಪ್ರಜಾತಂತ್ರ ವ್ಯವಸ್ಥೆಯ ನಿಷ್ಠಾವಂತ ಕಾವಲುಗಾರರು ಎಂದು ಪರಿಗಣಿಸಲಾಗಿದೆ.
ಸ್ವಾತಂತ್ರ್ಯಾನಂತರ ದೇಶದಲ್ಲಿ ಜನಸಾಮಾನ್ಯರು ಕೂಡಾ ಸಂವಿಧಾನದ ಆಶಯದಂತೆ ಘನತೆಯುಕ್ತ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಡುವ ಮೂಲಕ ಪ್ರಗತಿ ಸಾಧಿಸುವ ಕಾಯಕ ಸರಕಾರದ ಆಶಯವಾಗಿದ್ದು, ಈ ಆಶಯವನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರುವಲ್ಲಿ ಸರಕಾರದ ನೀತಿ, ನಿಯಮಗಳು, ಯೋಜನೆಗಳು, ಯೋಚನೆಗಳು ಸಹಕಾರಿಯಾಗಬೇಕಿದೆ. ಸರಕಾರವನ್ನು ಮುನ್ನಡೆಸುವ ರಾಜಕೀಯ ಪಕ್ಷಗಳ ಸೈದ್ಧಾಂತಿಕ ಹಿನ್ನಲೆ, ಕನಸುಗಳು ಏನಿದ್ದರೂ ಅವುಗಳನ್ನು ಸಾಂವಿಧಾನಿಕ ಚೌಕಟ್ಟುಗಳ ಒಳಗೇ ನಿಭಾಯಿಸಬೇಕಾದ ಹೊಣೆಗಾರಿಕೆ ಚುನಾಯಿತ ಸರಕಾರದ ಮೇಲಿರುತ್ತದೆ. ಅನಿವಾರ್ಯ ಸಂದರ್ಭಗಳಲ್ಲಿ ಸಾಂವಿಧಾನಿಕ ಚೌಕಟ್ಟುಗಳನ್ನು ಮೀರಿ ಕೆಲಸ ಮಾಡುವ ಅಗತ್ಯ ಕಂಡು ಬಂದರೆ, ಆ ಕಾರಣ ಕಾರ್ಯ ಮತ್ತು ಬದಲಾವಣೆಯ ಗುಣ, ಅವಗುಣಗಳ ಕುರಿತು ಪಕ್ಷದ ಮಿತಿ, ಸೈದ್ಧಾಂತಿಕ ಹಿನ್ನಲೆಗಳನ್ನು ಮೀರಿ “ಕಟ್ಟಕಡೆಯ ಮನುಷ್ಯನ/ನಾಗರಿಕ”ನ ಹಿತದೃಷ್ಟಿಯಿಂದ ಚರ್ಚೆ, ಸಂವಾದಗಳು ನಡೆದು ಬದಲಾವಣೆಗಳನ್ನು ತರಬಹುದಾಗಿದೆ. ಹೀಗೆ ಶಾಸನಗಳ ರಚನೆ, ಶಾಸನಗಳ ಅನುಷ್ಠಾನ, ಮತ್ತು ಈ ಉದ್ದೇಶಗಳಿಗಾಗಿ ಆಯ್ಕೆ ಮಾಡಲಾದ ಜನಪ್ರತಿನಿಧಿಗಳು ಮತ್ತು ಜನಸೇವಕರು ಯಾವ ರೀತಿಯಲ್ಲಿ ಜನಹಿತಕ್ಕೆ ಬದ್ಧರಾಗಿ ಸಂವಿಧಾನಕ್ಕೆ ನಿಷ್ಠರಾಗಿ ಕೆಲಸ ನಿರ್ವಹಿಸುತ್ತಾರೆ ಎನ್ನುವುದನ್ನು ಜನರ ಮುಂದಿಡುವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೆಗಳ ಕರ್ತವ್ಯ. ಸಾವಿರದ ಒಂಬೈನೂರ ಎಂಬತ್ತರವರೆಗೆ ಬಹುತೇಕವಾಗಿ ಈ ಕೆಲಸ ಪರಿಣಾಮಕಾರಿಯಾಗಿಯೇ ವಿಶ್ವದ ಎಲ್ಲೆಡೆಯಂತೆ ಭಾರತದಲ್ಲಿಯೂ ನಡೆಯುತ್ತಿತ್ತು. ಅದರ ನಂತರದ ದಿನಗಳಲ್ಲಿ ಪರಿಸ್ಥಿತಿ ಬದಲಾಗುತ್ತಾ ಬಂದಿರುವುದನ್ನು ಕಾಣಬಹುದು.
ವಿಶ್ವದಲ್ಲಿ ಪತ್ರಿಕೆಗಳ ಸ್ವಾಯತ್ತತೆ, ಕಾರ್ಯನಿರ್ವಹಣೆಯ ಕುರಿತಂತೆ ನಮಗೆ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕ ಪತ್ರಿಕೋದ್ಯಮದ ಸ್ಥಿತಿಗತಿಯ ಕುರಿತ ಚಿತ್ರಣ ನೀಡುತ್ತದೆ. ಸದ್ಯ ಈ ಸೂಚ್ಯಂಕ ಕಳೆದ ಕೆಲವು ವರ್ಷಗಳಿಂದ ನಮ್ಮ ದೇಶದ ಪತ್ರಿಕೋದ್ಯಮದ ಆರೋಗ್ಯ ನಿರಂತರವಾಗಿ ಹದಗೆಡುತ್ತಿರುವುದನ್ನು ಸೂಚಿಸುತ್ತಾ ಬಂದಿರುತ್ತದೆ. ವಿಶ್ವದ 180 ದೇಶಗಳಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಸ್ವಾಯತ್ತೆಯ ವಿಷಯದಲ್ಲಿ ನಮ್ಮ ದೇಶ 161ನೇ ಸ್ಥಾನದಲ್ಲಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದೊಂದು ಕಳವಳ ಉಂಟುಮಾಡುವ ಬೆಳವಣಿಗೆಯಾಗಿದೆ. ನಮ್ಮ ದೇಶದಲ್ಲಿ 1,40,000 ನೊಂದಾಯಿತ ಪತ್ರಿಕೆ ಮತ್ತು ನಿಯತಕಾಲಿಕೆಗಳಿವೆ. ಅದರಲ್ಲಿ ಸುಮಾರು 22,000 ದೈನಿಕಗಳಿವೆ, 189 ಭಾಷೆಗಳಲ್ಲಿ ಪ್ರಕಟವಾಗುವ ಇವು ಭಾಷಾ, ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಗೆ ದೊಡ್ಡ ಕೊಡುಗೆಯನ್ನೇ ನೀಡುತ್ತಿವೆ ಎನ್ನುವುದೂ ಸರಿಯೇ. ಇದರೊಂದಿಗೆ ಸುಮಾರು 900 ಟಿ ವಿ ಚಾನೆಲ್ಗಳಿದ್ದು, ಅವುಗಳಲ್ಲಿ 350ರಷ್ಟು ದಿನದ 24 ಗಂಟೆಯೂ ಸುದ್ದಿ ಬಿತ್ತರಿಸುವ ವಾರ್ತಾ ಚಾನೆಲ್ಗಳು. ಆಕಾಶವಾಣಿಯ ಹೊರತಾಗಿ ಸುಮಾರು 850 ರಷ್ಟು ಎಫ್ ಎಂ ರೇಡಿಯೋ ಚಾನೆಲ್ಗಳು ಕೋಟ್ಯಂತರ ಶ್ರೋತೃಗಳನ್ನು ತಲುಪುತ್ತಿವೆ. ಸರಿಸುಮಾರು 82 ಕೋಟಿ ಜನ ಅಂತರ್ಜಾಲ ಬಳಕೆದಾರರು ಇದ್ದಾರೆ ಎಂದು ಹೇಳಲಾಗುತ್ತಿದೆ. ಇವಿಷ್ಟಲ್ಲದೆ ಸಾಮಾಜಿಕ ಜಾಲತಾಣಗಳಿವೆ. ಅಲ್ಲಿ ಉತ್ಪಾದನೆಯಾಗುವ, ವಿತರಣೆಯಾಗುವ ಬಿಸಿಬಿಸಿ ಸುದ್ದಿಗಳ ಹಿಂದೆ ಸಾವಿರಾರು ಜನರಿದ್ದರೆ ಹಲವಾರು ಗುಪ್ತ ಕಾರ್ಯಸೂಚಿಯೂ ಇದೆ ಎನ್ನುವುದನ್ನು ತಳ್ಳಿ ಹಾಕಲಾಗದು. ಮಾಧ್ಯಮದ ಈ ಮಟ್ಟದ ಬೆಳವಣಿಗೆಗೆ ಅಂತರ್ಜಾಲ ವಿಸ್ತರಣೆಯೂ ಒಂದು ಕಾರಣವಾಗಿರುವುದೂ ಸುಳ್ಳಲ್ಲ. ಇಷ್ಟೆಲ್ಲಾ ಸುದ್ದಿ ಮಾಧ್ಯಮಗಳಿರುವ ನಮ್ಮ ದೇಶದ ಪತ್ರಿಕೋದ್ಯಮ, ಜಗತ್ತಿನ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಕೆಳಮಟ್ಟಕ್ಕೆ ಇಳಿದಿದೆ ಎಂದರೆ ಅದು ಜನಹಿತ ರಕ್ಷಣೆ ಮತ್ತು ನಿರ್ಭೀತಿಯಿಂದ ಕೆಲಸಮಾಡುವ ವಾತಾವರಣದಿಂದ ಬಹಳ ದೂರದಲ್ಲಿ ಇದೆ ಎಂದೇ ಹೇಳಬಹುದು.
ಆರ್ಥಿಕ ಉದಾರೀಕರಣದ ತರುವಾಯ ದೇಶದಲ್ಲಿ, ಕಾರ್ಪೋರೇಟ್ ವಲಯ ಮಾಧ್ಯಮಗಳನ್ನು ತನ್ನ ತೆಕ್ಕೆಗೆ ಪಡೆಯುತ್ತಾ ಬಂದಿರುವ ಬೆಳವಣಿಗೆಯನ್ನು ನಾವು ಗಮನಿಸಬಹುದು. ಒಂದು ಕಾಲಕ್ಕೆ ಜನಪರವಾಗಿದ್ದ ಮಾಧ್ಯಮ ಬರಬರುತ್ತಾ ಹಣಪರವಾಗುತ್ತಾ ಬಂದಿರುವುದು, ಜನತಂತ್ರದ ದೃಷ್ಟಿಯಿಂದ ನಿರಾಶಾದಾಯಕ ಬೆಳವಣಿಗೆಯೆಂದೇ ಹೇಳಬೇಕಾಗುತ್ತದೆ. ಒಂದು ವೇಳೆ ಕಾರ್ಪೋರೇಟ್ ವಲಯದ ಆಸೆ ಆಮಿಷಗಳಿಗೆ ಸೊಪ್ಪು ಹಾಕದೇ ನಿರ್ಭೀತಿಯಿಂದ ಜನಪರವಾಗಿ ಉಳಿಯುತ್ತೇವೆ ಎಂದರೆ ಏನಾಗುತ್ತದೆ ಎನ್ನುವುದಕ್ಕೆ ನಮ್ಮ ಮುಂದಿರುವ ಎರಡು ದೃಷ್ಟಾಂತಗಳನ್ನು ಗಮನಿಸಿದರೆ ವಾಸ್ತವ ತಿಳಿಯುತ್ತದೆ.
ಒಂದು, ಕಳೆದ 2022 ನವೆಂಬರ್ ತಿಂಗಳಲ್ಲಿ ದೇಶದ ಪ್ರತಿಷ್ಠಿತ ಸುದ್ದಿ ಚಾನೆಲ್‌ಗಳಲ್ಲಿ ಒಂದಾಗಿದ್ದು ಮತ್ತು ವಿಶೇಷವಾಗಿ 2014ರಿಂದಲೂ ಸಾಕಷ್ಟು ವಸ್ತುನಿಷ್ಠ ವರದಿ ಮಾಡುತ್ತಾ, ಸರಕಾರದ ಎಲ್ಲ ಒತ್ತಡ, ಆಮಿಷಗಳನ್ನು ಮೀರಿಯೂ ಜನಪರ ನಿಲುವು ತಾಳಿದ್ದ ಎನ್ ಡಿ ಟಿವಿಯನ್ನು ಬಹುಪಾಲು ಶೇರು ಬಂಡವಾಳ ಖರೀದಿಸುವ ಮೂಲಕ ಅದಾನಿ ಮೀಡಿಯಾ ಕಂಪೆನಿ ತನ್ನ ತೆಕ್ಕೆಗೆ ಬೀಳಿಸಿ ಕೊಂಡಿತು. ಆ ಮೂಲಕ ಕಾರ್ಪೋರೇಟ್ ಕಂಪೆನಿಯ ಹಿಡಿತ ಮಾಧ್ಯಮ ಜಗತ್ತಿನ ಮೇಲೆ ಇನ್ನಷ್ಟು ಬಲಯುತವಾಗುತ್ತಾ ಬಂದಿತು. ಮುಂದೆ ಎಪ್ರಿಲ್ ತಿಂಗಳಲ್ಲಿ ಸಾಕಷ್ಟು ಜನಪರ ವಿಷಯಗಳನ್ನು ಮುನ್ನೆಲೆಗೆ ತಂದು ವರ್ತಮಾನದ ಮುಖಗಳನ್ನು ಜನರ ಮುಂದಿರಿಸುತ್ತಿದ್ದ ಕ್ವಿಂಟ್ ಮೀಡಿಯಾ ಎನ್ನುವ ಅಂರ್ತಜಾಲ ಆಧಾರಿತ ನ್ಯೂಸ್ ಚಾನೆಲನ್ನು ಕೂಡಾ ಕಾರ್ಪೋರೇಟ್ ಕಂಪೆನಿಗಳು ತಮ್ಮ ವಶಕ್ಕೆ ಪಡೆದವು. ಈ ಎರಡೂ ಬೆಳವಣಿಗೆಗಳಿಂದ ಪತ್ರಿಕೋದ್ಯಮ ಆಳಕ್ಕೆ ಅಗಲಕ್ಕೆ ಬೆಳೆದಿದೆ ಎನ್ನುವುದು ನಿಜವಾದರೂ, ಅವುಗಳ ಇಂತಹ ಅಗಾಧವಾದ ಬೆಳವಣಿಗೆಗಳಿಂದ ಲಾಭ ಪಡೆಯುತ್ತಿರುವವರು ಜನಸಾಮಾನ್ಯರಲ್ಲ ಬದಲಿಗೆ ಕಾರ್ಪೋರೇಟ್ ಕಂಪೆನಿಗಳು ಎನ್ನುವುದು ತಿಳಿದು ಬರುತ್ತಿದೆ.
ಇಂತಹ ಬೆಳವಣಿಗೆಗಳ ಹಿಂದೆ ಬಹಳಷ್ಟು ಕಾರಣಗಳಿವೆ. ಪ್ರಮುಖವಾಗಿ ತಾಂತ್ರಿಕತೆ ಬೆಳೆದಂತೆಲ್ಲಾ ಅದರ ಪ್ರಭಾವ ಪ್ರತಿಯೊಂದು ವಲಯದ ಮೇಲೆಯೂ ಆಗಿದೆ, ಅದರಂತೆ ಪತ್ರಿಕಾ ರಂಗದ ಮೇಲೂ ತಾಂತ್ರಿಕ ಅಭಿವೃದ್ಧಿಯ ಪರಿಣಾಮವಾಗಿದೆ. ಇದರ ಫಲವಾಗಿ ಪತ್ರಿಕೋದ್ಯಮ ಬದಲಾಗಿದೆ. ವರದಿ ಸಂಗ್ರಹ, ಮುದ್ರಣ, ವಿತರಣೆ, ಒಟ್ಟು ನಿರ್ವಹಣೆ ಇತ್ಯಾದಿ ಅಪಾರ ಪ್ರಮಾಣದ ಬಂಡವಾಳ ಬಯಸುತ್ತದೆ. ಇಂತಹ ಅಪಾರ ಪ್ರಮಾಣದ ಬಂಡವಾಳ ಅಗತ್ಯವಿರುವ ಕಾರಣ, ಅದಕ್ಕಾಗಿ ಕಾರ್ಪೋರೇಟ್ ಜಗತ್ತು ನೀಡುವ ಜಾಹೀರಾತು ಮತ್ತು ಸರಕಾರದಿಂದ ನೀಡುವ ಜಾಹೀರಾತನ್ನು ಅವಲಂಬಿಸದೆ ಗತ್ಯಂತರವಿಲ್ಲವಾಗಿದೆ.
ಕಾರ್ಪೋರೇಟ್ ಜಗತ್ತು ಮತ್ತು ಸರಕಾರದ ಹಂಗಿನಲ್ಲಿರುವ ಪತ್ರಿಕೋದ್ಯಮ ಅವರ ಹಿತಾಸಕ್ತಿಯನ್ನು ಕಾಯುವ ಕಡೆಗೆ ಹೆಚ್ಚು ಗಮನ ನೀಡತೊಡಗಿದುವು. ಇದರೊಂದಿಗೆ ಕಾರ್ಪೋರೇಟ್ ಜಗತ್ತು ಮತ್ತು ಸರಕಾರಗಳು ಅಧಿಕಾರ ಮತ್ತು ಸಂಪನ್ಮೂಲದ ಮೇಲೆ ಹಿಡಿತ ಸಾಧಿಸುವ ಕೆಲಸದಲ್ಲಿ “ಸಹಕಾರ ನೀತಿ”ಯನ್ನು ಅನುಸರಿಸುವಾಗ ಸ್ವಾಭಾವಿಕವಾಗಿಯೇ ಜನಹಿತ, ಜನಸಾಮಾನ್ಯರ ಧ್ವನಿ ಕ್ಷೀಣಿಸುತ್ತಾ ಬಂದಿರುವುದನ್ನು ಗಮನಿಸ ಬಹುದಾಗಿದೆ. ಇಂತಹ ಹೊತ್ತಲ್ಲಿ ಜನಪರ ನಿಲುವು ತಾಳುವ ಪತ್ರಿಕಾ ವರದಿಗಾರರ ಬದುಕು ಮತ್ತು ಬರಹ ಅಪಾಯದಲ್ಲಿರುವ ವಾತಾವರಣವಿದೆ. ವಿವಾದಾಸ್ಪದ ಕೃಷಿ ಕಾನೂನಿನ ವಿರುದ್ಧ ದೆಹಲಿಯಲ್ಲಿ ನಡೆದ ರೈತ ಚಳುವಳಿ, ಸರಕಾರದ ದಮನಕಾರಿ ನೀತಿಗಳು, ಸರಿಯಾದ ಚರ್ಚೆ ಸಂವಾದಗಳಿಗೆ ಅವಕಾಶವೇ ಇಲ್ಲದೆ ಸಾರ್ವಜನಿಕ ರಂಗದ ಉದ್ದಿಮೆ ಮತ್ತು ಗಣಿಗಳನ್ನು ಖಾಸಗಿಯವರ ಮಡಿಲಿಗೆ ಹಾಕುವ ಬೆಳವಣಿಗೆಗಳು ಇವೇ ಮುಂತಾದ ಸಂದರ್ಭದಲ್ಲಿ ಜನಪರವಾಗಿ ನಿಲ್ಲಬೇಕಿರುವ ಪತ್ರಿಕೆಗಳು ಮತ್ತು ಇತರ ಮಾಧ್ಯಮಗಳು ನಡೆದುಕೊಂಡ ಮತ್ತು ನಡೆದುಕೊಳ್ಳುತ್ತಿರುವ ರೀತಿ ಜನಸಾಮಾನ್ಯರಲ್ಲಿ ನಿರಾಶೆಯುಂಟು ಮಾಡುತ್ತಿದೆ. ಇನ್ನೊಂದೆಡೆ ನಟ ನಟಿಯರ ಖಾಸಗೀ ಬದುಕಿನ ಜಗಳಗಳು, ಮಾಧ್ಯಮ ಕೇಂದ್ರಿತ ನಾಯಕರ ಖಾಸಗೀ ಬದುಕಿನ ಸಾಧನೆಗಳು ಮತ್ತು ನಿರ್ದಿಷ್ಟ ಸಿದ್ಧಾಂತ ಆಧಾರಿತ ಪಕ್ಷಗಳಿಗೆ ಮತದಾರರನ್ನು ಆಕರ್ಷಿಸುವ ಉದ್ದೇಶದ ಕಾರ್ಯಕ್ರಮಗಳ ಪ್ರಸಾರ ಮತ್ತು ಪ್ರಚಾರದಲ್ಲಿ ನಿರತವಾಗಿರುವ ಪರಿಸ್ಥಿತಿಗೆ ಜನ ಅಸಹಾಯಕರಾಗಿ ಪ್ರೇಕ್ಷಕರಾಗುವಂತೆ ಮಾಡುವ ಪ್ರಯತ್ನಗಳೂ ಸಾಗುತ್ತಿವೆ.
ಇಂತಹ ಪರಿಸ್ಥಿತಿಯಲ್ಲಿಯೂ ಮೂಕ ಹಾಡುಗಳಿಗೆ ಹೊಸ ರಾಗ ಕಂಡು ಹಿಡಿಯುವ ಶತ ಪ್ರಯತ್ನಗಳಲ್ಲಿ ಸಣ್ಣ ಮಟ್ಟದಲ್ಲಿ ಆದರೂ ನಿರಂತರವಾಗಿ ಪ್ರಯತ್ನಗಳು ನಡೆಯುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆಯೇ. ಇಂತಹ ಜನದನಿಯಾಗಿ ಕೆಲಸ ಮಾಡುತ್ತಿರುವ ಮಾಧ್ಯಮಗಳ ಪ್ರಭಾವ 2024ರ ಲೋಕಸಭಾ ಚುನಾವಣೆಯಲ್ಲಿ ಬಹಳ ನಿಚ್ಚಳವಾಗಿಯೇ ಗೋಚರಿಸಿದೆ ಎಂದರೆ ಅತಿಶಯೋಕ್ತಿಯಾಗಲಾರದು. ನಮ್ಮ ದೇಶದ ಲಾಂಛನದಲ್ಲಿರುವ ಸಿಂಹದ ಗುರುತಿನ ಕೆಳಗಿರುವ ಚಕ್ರದ ಬಳಿಯಿರುವ ಮಂಡುಕೋಪನಿಷತ್ತಿನ “ಸತ್ಯಮೇವ ಜಯತೇ” ಎನ್ನುವ ಮಾತಿನ ಎದುರು ಅಧಿಕಾರ ದರ್ಪ ಮತ್ತು ಅದು ಕಟ್ಟುತ್ತಿರುವ ಮಾತಿನ ಮಂಟಪ ಹೆಚ್ಚು ಕಾಲ ನಿಲ್ಲಲಾರದು ಎನ್ನುವ ಭರವಸೆಯೇ ನಮ್ಮನ್ನು ಮುನ್ನಡೆಸಬೇಕು. ಬೆಳಕನ್ನು ಬಂಧಿಸುವ ಪರಿಮಳವನ್ನು ಹೊಸಕಿ ಹಾಕುವ ತಂತ್ರಜ್ಞಾನ ಬರುವವರೆಗೆ “ಸತ್ಯ” ಎಲ್ಲ ಸಂದಿಗೊಂದಿಗಳನ್ನು ದಾಟಿ ಒಡ್ಡೋಲಗದಲ್ಲಿ ಪ್ರತ್ಯಕ್ಷವಾಗುವುದನ್ನು ಯಾರಿಂದ ತಾನೇ ತಪ್ಪಿಸಲಾದೀತು?
ಡಾ.ಉದಯ ಕುಮಾರ ಇರ್ವತ್ತೂರು
ವಿಶ್ರಾಂತ ಪ್ರಾಂಶುಪಾಲರು
ಇದನ್ನೂ ಓದಿ- ದೇಶವನ್ನೇ ಸುಡಬಲ್ಲ ದ್ವೇಷವನ್ನು ನಿಗ್ರಹಿಸಲು ಬೇಕಿದೆ ಕಠಿಣ ಕಾನೂನು !!!