ಸಂಪರ್ಕ–ಸಂವಹನಗಳ ಕ್ರಾಂತಿಯ ಹೊರತಾಗಿಯೂ ಉಳಿದುಬಿಟ್ಟ ಒಂಟಿತನ, ನ್ಯೂ–ನಾರ್ಮಲ್ ಆಗಿಬಿಟ್ಟ ಸ್ವೇಚ್ಛೆ, ಮಾನವನ ಮನೋದೌರ್ಬಲ್ಯಗಳನ್ನೇ ಬಂಡವಾಳವಾಗಿಸಿಕೊಂಡ ಉದ್ಯಮಗಳು, ಪ್ರೀತಿಯನ್ನು ಕೊಡುಕೊಳ್ಳುವಿಕೆಗಳ ವ್ಯವಹಾರದಂತೆ ಬದಲಾಯಿಸಿಬಿಟ್ಟ ಮಾರುಕಟ್ಟೆ ವ್ಯವಸ್ಥೆ… ಹೀಗೆ ನಮ್ಮ ಸುತ್ತಲಿನ ಸಾಕಷ್ಟು ಸಂಗತಿಗಳು ಸಿನಿಮೀಯ ಪ್ರೀತಿಯ ಸವಿಗನಸುಗಳನ್ನು ತೋರಿಸುತ್ತಲೇ ಪ್ರೀತಿಯನ್ನು ಮತ್ತಷ್ಟು ಮರೀಚಿಕೆಯನ್ನಾಗಿಸಿದವು – ಪ್ರಸಾದ್ ನಾಯ್ಕ್, ದೆಹಲಿ.
“ಪ್ರೇಮ ಚಿಟ್ಟೆಯಂತೆ. ಅದರ ಬೆನ್ನಟ್ಟಿದಷ್ಟೂ ಅದು ನಿನ್ನಿಂದ ದೂರ ಓಡುತ್ತೆ”, ಎಂದು ಎಲ್ಲೋ ಓದಿದ ನೆನಪು.
ಫೆಬ್ರವರಿಯೆಂದರೆ ಒಂಥರಾ ಪ್ರೇಮಕ್ಕಾಗಿಯೇ ಮೀಸಲಾಗಿರುವ ಮಾಸ. ಹೀಗಾಗಿ ಈ ಬಾರಿಯೂ ಪ್ರೀತಿಯದ್ದೇ ಹುಡುಕಾಟ. ಪ್ರೀತಿಯ ಹುಡುಕಾಟವು ಮನುಷ್ಯನಿಗೆ ಹೊಸತೇನಲ್ಲ. ಅದು ಹಿಂದೆಯೂ ಇತ್ತು. ಮುಂದೆಯೂ ಇರಲಿದೆ. ತುಂಟ ಕಣ್ಣೋಟ, ಪತ್ರ ವ್ಯವಹಾರ, ಮಿಸ್ ಕಾಲ್, ಒಂದು ಎಸ್.ಟಿ.ಡಿ ಕಾಲ್, ಎಸ್ಸೆಮ್ಮೆಸ್ಸು, ಚಾಟಿಂಗ್… ಹೀಗೆ ಪ್ರೇಮವೆಂಬ ಗಮ್ಯಕ್ಕೆ ತಲುಪುವ ಹಲವು ಹಾದಿಗಳಲ್ಲಿ ಒಂದಿಷ್ಟು ರೂಪಾಂತರಗಳು ಬಂದುಹೋದವೇ ಹೊರತು ಗಮ್ಯವೇನೂ ಬದಲಾಗಿಲ್ಲ. ಇತ್ತ ಪ್ರೇಮದ ಮೂಲಭಾವವೂ ಬದಲಾಗಲಿಲ್ಲ. ಹೀಗಾಗಿಯೇ ಕಾವ್ಯಲೋಕದಲ್ಲೂ ಪ್ರೇಮಗೀತೆಗಳೆಂದರೆ ಇಂದಿಗೂ, ಎಂದೆಂದಿಗೂ ಎವರ್ ಗ್ರೀನ್.
ಬೆನ್ನಟ್ಟಿದಷ್ಟೂ ದೂರ ಸಾಗುವ ಪ್ರೀತಿಯ ಬಗ್ಗೆ ಮಾತಾಡುವಾಗಲೆಲ್ಲ ನನಗೆ ನೆನಪಾಗುವುದು ಮೆಕ್ಸಿಕನ್ ಚಿತ್ರಕಲಾವಿದೆ ಫ್ರೀಡಾ ಕಾಹ್ಲೋ ಮತ್ತು ಅಮೆರಿಕನ್ ನಟಿ ಮರ್ಲಿನ್ ಮನ್ರೋ. ಇವರಿಬ್ಬರು ಪ್ರೀತಿಯ ಹಂಬಲದಲ್ಲೇ ತಮ್ಮ ಆಯಸ್ಸನ್ನು ಕಳೆದವರು. ಪ್ರೀತಿ ಹೀಗೆ ತಮ್ಮನ್ನು ಸತಾಯಿಸುತ್ತಾ ಹೋಗುತ್ತಿದ್ದರೆ ಇನ್ನಿಲ್ಲದಂತೆ ನರಳುತ್ತಾ ಹೋದವರು. ಇವೆಲ್ಲದರ ಹೊರತಾಗಿಯೂ ಕಾಲಾತೀತರಾಗಿ ಮತ್ತಷ್ಟು ಕಂಗೊಳಿಸಿದವರು. ಹಾಗೆ ನೋಡಿದರೆ ತಮ್ಮ ಬದುಕಿನ ಈ ಹಂತಗಳ ತಲ್ಲಣಗಳನ್ನು ಅಕ್ಷರರೂಪಕ್ಕೆ ಇಳಿಸಿದಾಗಲೆಲ್ಲಾ ನಮ್ಮ ನಿಮ್ಮಂಥಾ ಜನಸಾಮಾನ್ಯರಿಗೆ ಇವರಿಬ್ಬರು ಸೋಜಿಗದಂತೆ ಕಂಡಿದ್ದಾರೆ. ಪ್ರೀತಿಯ ಹಂಬಲ-ಹುಡುಕಾಟಗಳು ಎಂತೆಂಥವರನ್ನೂ ಬಿಟ್ಟಿಲ್ಲ ಎಂಬುದಕ್ಕೆ ಇವರಿಬ್ಬರೇ ಸಾಕ್ಷಿ.
ರೋಜರ್ ಮಿಶೆಲ್ ನಿರ್ದೇಶನದ “ನಾಟಿಂಗ್ ಹಿಲ್” (1999) ಚಿತ್ರದ ನಾಯಕಿ ಅನಾ ಸ್ಕಾಟ್ ತನ್ನ ಪ್ರೇಮಿಯ ಬಳಿ ಹೇಳುವುದು ಕೂಡ ಇದನ್ನೇ. “ನಾನು ವಿಶ್ವವಿಖ್ಯಾತ ಹಾಲಿವುಡ್ ನಟಿಯೆಂಬುದನ್ನು ಮರೆತುಬಿಡು. ನನ್ನ ಸೆಲೆಬ್ರಿಟಿ ಸ್ಟೇಟಸ್ ಅತ್ಲಾಗಿರಲಿ. ಪರಿಶುದ್ಧ ಪ್ರೀತಿಯನ್ನು ಹಂಬಲಿಸುತ್ತಿರುವ ಓರ್ವ ಮುಗ್ಧ ಹೆಣ್ಣುಮಗಳಷ್ಟೇ ನಾನು ಎಂಬ ಭಾವವನ್ನು ನೀನು ಒಂದರೆಕ್ಷಣ ನಿನ್ನದಾಗಿಸಿಕೊಂಡು ಬಿಡು”, ಅಂತ. ಇಡೀ ಚಲನಚಿತ್ರದ ಅದೊಂದು ಕ್ಷಣದಲ್ಲಿ ನಟಿ ಜೂಲಿಯಾ ರಾಬರ್ಟ್ಸ್ ಒಲವಿನ ಹಂಬಲದಲ್ಲಿರುವ ಅಪ್ಪಟ ಹುಡುಗಿಯಾಗಿ ಮಾತ್ರ ನಮಗೆ ಕಾಣುತ್ತಾರೆ. ಆ ಸನ್ನಿವೇಶದಲ್ಲಿ ಅವಳ ಹೊಳೆಯುವ ಕಂಗಳಲ್ಲಿ ಕಾಣುವುದು ಪ್ರೀತಿಯ ಹುಡುಕಾಟವೊಂದೇ.
ಪ್ರೀತಿಯ ಈ ಹುಡುಕಾಟವು ಸಹಜವಾಗಿ ನಮ್ಮ ಕಾಲಕ್ಕೂ ಬಂದಿದೆ. ಒಂದೇ ವ್ಯತ್ಯಾಸವೆಂದರೆ ನಾವಿರುವ ಆಧುನಿಕ ಯುಗದಲ್ಲಿ ಪ್ರೀತಿಯ ಹುಡುಕಾಟಕ್ಕೀಗ ಮತ್ತಷ್ಟು ವೇಗ ಸಿಕ್ಕಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನಕ್ಕೊಂದು ದೊಡ್ಡ ನಮಸ್ಕಾರ ಹೇಳಲೇಬೇಕು. ಹೊಸಬರನ್ನು ಭೇಟಿಯಾಗುವುದು, ಸಂಬಂಧಗಳನ್ನು ಕುದುರಿಸಿಕೊಳ್ಳುವುದು ಮತ್ತು ವೈಯಕ್ತಿಕ ಅವಶ್ಯಕತೆಗಳಿಗೆ ತಕ್ಕಂತೆ ಸಂಬಂಧಗಳನ್ನು ಬಳಸಿಕೊಳ್ಳುವ ಮಾದರಿಗಳನ್ನು ಮಹಾನಗರಗಳು ಬಹುಬೇಗನೆ ಮುಕ್ತವಾಗಿ ಒಪ್ಪಿಕೊಂಡವು. ಮಹಾನಗರಗಳಲ್ಲಿ ಬದುಕು ಬಹಳ ವೇಗವಾಗಿ ಸಾಗುತ್ತದೆಯೆಂಬ ಜನಪ್ರಿಯ ಇಮೇಜ್ ಇದಕ್ಕೆ ಪೂರಕವಾಗಿ ಕೆಲಸ ಮಾಡಿರಬಹುದು. ಹೀಗಾಗಿ ಹಿಂದೆ ಡೇಟಿಂಗ್ ಎಂದಷ್ಟೇ ಕರೆಯಲಾಗುತ್ತಿದ್ದ ಈ ಮಹಾವೃಕ್ಷಕ್ಕೆ ಈಗ ನೂರಾರು ರೆಂಬೆಕೊಂಬೆಗಳು. ಒಂದೊಂದಕ್ಕೆ ಒಂದೊಂದು ಹೆಸರು-ರೂಪ-ಆಯಾಮಗಳು. ಫಿಶಿಂಗ್, ಲವ್ ಬಾಂಬಿಂಗ್, ಘೋಸ್ಟಿಂಗ್… ಇತ್ಯಾದಿ ಸಹಸ್ರ ನಾಮಾವಳಿಗಳು. ಅಂತೂ ಪ್ರೇಮದ ಪರಿಕಲ್ಪನೆಗಳು ಅನುದಿನವೂ ಬದಲಾಗುತ್ತಿರುವ ಈ ವೇಗದ ಯುಗದಲ್ಲಿ ಪ್ರತಿಯೊಂದರ ಬಗ್ಗೆ ಅಪ್ಡೇಟ್ ಆಗಿರುವುದೇ ಒಂದು ಬಹುದೊಡ್ಡ ಸವಾಲು.
ಆಗಂತುಕರಿಬ್ಬರು ಹೀಗೆ ಭೇಟಿಯಾಗುವುದು, ತಮ್ಮ ಮನೆ-ಮನಗಳನ್ನು ಪರಸ್ಪರ ತೆರೆದುಕೊಳ್ಳುವುದು, ನಂತರ ಏನೂ ಆಗಿಲ್ಲವೆಂಬಂತೆ ತಮ್ಮ ಪಾಡಿಗೆ ಮುಂದುವರಿಯುವುದು, ಮತ್ತೆ ಇದೇ ಪ್ರಕ್ರಿಯೆಯನ್ನು ಬೇರೊಬ್ಬರೊಂದಿಗೆ ಪುನರಾವರ್ತಿಸುವುದು… ಇತ್ಯಾದಿ ಸಂಗತಿಗಳ ಬಗ್ಗೆ ಸಣ್ಣಕತೆಯೊಂದನ್ನು ಇತ್ತೀಚೆಗೆ ಬರೆದಿದ್ದೆ. ಈ ಕತೆಯು ಕನ್ನಡದ ಮುಖ್ಯವಾಹಿನಿಯ ಪತ್ರಿಕೆಯೊಂದರಲ್ಲಿ ಮುಂದೆ ಪ್ರಕಟವಾಯಿತು. ಕತೆಯ ಪರಿಕಲ್ಪನೆಯು ಕೊಂಚ ವಿಚಿತ್ರವಾಗಿದ್ದರಿಂದ ಮಿಶ್ರ ಪ್ರತಿಕ್ರಿಯೆಗಳು ಬರುವುದು ನಿರೀಕ್ಷಿತವೇ ಆಗಿತ್ತು. ಅದರಂತೆ ಹಾಗಾಯಿತು ಕೂಡ. ಹೀಗೂ ಇರುತ್ತಾ ಎಂದು ಕೆಲ ಓದುಗರು ಅಚ್ಚರಿಪಟ್ಟುಕೊಂಡರು. ಇದೊಳ್ಳೆ ಚೆನ್ನಾಗಿದೆ ಎಂದು ಕೆಲವರು ನಕ್ಕರು. ಎಂಥಾ ವಿಚಿತ್ರ ಕಾಲದಲ್ಲಿ ಬದುಕುತ್ತಿದ್ದೇವಪ್ಪ ಎಂದು ಬಹುತೇಕರು ಹಣೆ ಚಚ್ಚಿಕೊಂಡರು ಕೂಡ.
ಆದರೆ ಬದುಕು ಕತೆಗಳಿಗಿಂತಲೂ ವಿಚಿತ್ರ ಎಂಬುದನ್ನು ನಾನು ಲೆಕ್ಕವಿಲ್ಲದಷ್ಟು ಬಾರಿ ಕಂಡುಕೊಂಡಿದ್ದೇನೆ. ಕತೆಗಾರರು ತಮ್ಮ ಒಂದಿಷ್ಟು ಓದು, ಕಲ್ಪನೆ, ಲೋಕಾನುಭವ ಮತ್ತು ಸೃಜನಶೀಲತೆಗಳನ್ನು ಬಳಸಿಕೊಂಡು ಕತೆಯೊಂದನ್ನು ಹೆಣೆದರೆ, ಬದುಕು ಅದರಪ್ಪ ಅನ್ನಿಸುವಂತಿನ ಕತೆಗಳನ್ನು ನಮ್ಮ ಮುಂದಿಡುತ್ತದೆ. ಉದಾಹರಣೆಗೆ ಸರಕಾರಿ ಸಂಸ್ಥೆಯಾದ ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ (ಎನ್.ಸಿ.ಆರ್.ಬಿ) 2022ರಲ್ಲಿ ನೀಡಿರುವ ವರದಿಯನ್ನೇ ನೋಡಿ. ಇದರ ಪ್ರಕಾರ ಆ ವರ್ಷ ಕೊಲೆಗಳು ಸಂಭವಿಸಲು ಆರೋಪಿಸಿದ್ದ ಬಹುಮುಖ್ಯ ಕಾರಣಗಳಲ್ಲಿ ಪ್ರೇಮ ಸಂಬಂಧಗಳು ಮೂರನೇ ಸ್ಥಾನವನ್ನು ಪಡೆದಿದ್ದವು. ಇಂಡಿಯಾ ಟುಡೇ ಪತ್ರಿಕೆಯು ಈ ಸಂಗತಿಯನ್ನು ತನ್ನ ಪ್ರಮುಖ ಸುದ್ದಿಗಳಲ್ಲೊಂದಾಗಿ ಪ್ರಕಟಿಸಿತ್ತು.
ನಮ್ಮ ಮಹಾನಗರಗಳಲ್ಲಿ ತಂತ್ರಜ್ಞಾನವನ್ನು ಒಳಗೊಂಡಂತೆ, ಆಧುನಿಕತೆಯ ಉಳಿದ ಮಸಾಲೆಗಳನ್ನು ತನ್ನ ಮೈಗೆ ಲೇಪಿಸಿಕೊಂಡು ಬರುವ ಪ್ರೀತಿಯ ಹುಡುಕಾಟಗಳನ್ನೊಮ್ಮೆ ನೋಡಿ. ಇದೊಂದು ಸತ್ಯಕತೆಯೆಂಬುದನ್ನು ಓದುಗರಿಗೆ ಮೊದಲೇ ಹೇಳಿಬಿಡುವುದು ಒಳಿತು. ಸಂಗಾತಿಯ ಹುಡುಕಾಟದಲ್ಲಿರುವ ಹುಡುಗನೊಬ್ಬ ಡೇಟಿಂಗ್ ಆಪ್ ಒಂದನ್ನು ಸ್ಮಾರ್ಟ್‌ಫೋನ್ ಗೆ ಇಳಿಸಿಕೊಂಡು ತನ್ನ ತಲಾಶೆಯನ್ನು ಆರಂಭಿಸುತ್ತಾನೆ. ಒಂದಿಷ್ಟು ಹುಡುಕಾಟದ ನಂತರ ಅವನಂತೆಯೇ ಸಂಗಾತಿಯ ತಲಾಶೆಯಲ್ಲಿ ತೊಡಗಿಕೊಂಡಿರುವ ಯುವತಿಯೊಬ್ಬಳು ಈತನಿಗೆ ಆನ್‌ಲೈನ್ ವೇದಿಕೆಯಲ್ಲೇ ಕನೆಕ್ಟ್ ಆಗುತ್ತಾಳೆ. ಉಭಯ ಕುಶಲೋಪರಿಗಳು ಮುಗಿದ ನಂತರ ಒಂದೆಡೆ ಭೇಟಿಯಾಗೋಣ ಎಂದು ಮಾತುಕತೆಯಾಗುತ್ತದೆ. ಅದರಂತೆ ಇವರೀರ್ವರು ಮುಂದೆ ಭೇಟಿಯೂ ಆಗುತ್ತಾರೆ.
ಆದರೆ ಇದು ತನ್ನನ್ನು ಖೆಡ್ಡಾ ಒಂದಕ್ಕೆ ಕೆಡವಲೆಂದೇ ಸಿದ್ಧಪಡಿಸಿರುವ ವ್ಯವಸ್ಥಿತ ಜಾಲ ಎಂಬುದು ಅವನಿಗೆ ತಿಳಿಯುವುದೇ ಇಲ್ಲ. ಮೊದಲ ಅಥವಾ ನಂತರದ ಭೇಟಿಯನ್ನು ನಗರದ ಲಾಡ್ಜ್ ಅಥವಾ ವಸತಿಗೃಹವೊಂದರಲ್ಲಿ ಇಟ್ಟುಕೊಳ್ಳೋಣ ಎಂದು ಅವಳು ಹೇಳಿದಾಗ ಇವನಿಗಿಲ್ಲಿ ಖುಷಿಯೋ ಖುಷಿ. ಆದರೆ ಅಲ್ಲಾಗುವುದು ಮಾತ್ರ ಬೇರೆಯೇ ಕತೆ. ಹೀಗೆ ಗಂಡುಹೆಣ್ಣುಗಳಿಬ್ಬರು ಮುಚ್ಚಿದ ಕೋಣೆಯನ್ನು ಸೇರಿ, ಒಂದಿಷ್ಟು ಸುಧಾರಿಸಿಕೊಂಡ ಸ್ವಲ್ಪ ಹೊತ್ತಿನಲ್ಲೇ ಅಲ್ಲೊಂದು ಪೊಲೀಸ್ ದಾಳಿಯಾಗುತ್ತದೆ. ಹೀಗೆ ದಾಳಿ ಮಾಡುವ ಖಾಕಿಧಾರಿ ಅಧಿಕಾರಿಗಳು ಆತನ ಮೇಲೆ ವಿವಿಧ ಬಗೆಯ ಬೆದರಿಕೆಯ ತಂತ್ರಗಳನ್ನೊಡ್ಡಿ ದೊಡ್ಡದೊಂದು ಮೊತ್ತಕ್ಕೆ ಡಿಮ್ಯಾಂಡ್ ಇಡುತ್ತಾರೆ.
ಹೀಗೆ ಸಿಕ್ಕಿಹಾಕಿಕೊಂಡ ಯುವಕನು ಕೊಂಚ ಗಟ್ಟಿಕುಳವಾಗಿದ್ದಲ್ಲಿ ಕೋರ್ಟು-ಕಚೇರಿಗಳ ಹೆಸರಿನಲ್ಲಿ ವಕೀಲರೊಬ್ಬರೂ ಆತನ ಮೇಲೆ ಒತ್ತಡ ಹೇರುತ್ತಾರೆ. ಅಸಲಿಗೆ ದಾಳಿ ಮಾಡಿರುವ ಅಧಿಕಾರಿಗಳೇ ನೆರವನ್ನು ನೀಡುವ ಸೋಗಿನಲ್ಲಿ ಪರಿಚಿತ ವಕೀಲರೊಂದಿಗೆ ಆತನಿಗೆ ಫೋನ್ ಕರೆಯ ಮೂಲಕ ಸಂಪರ್ಕ ಕಲ್ಪಿಸಿಕೊಡುತ್ತಾರೆ. ಇವೆಲ್ಲ ಆ ಕೋಣೆಯಲ್ಲೇ ನಡೆಯುತ್ತಿರುವ ಸುದೀರ್ಘ ಪ್ರಹಸನಗಳು ಎಂಬುದನ್ನು ನೀವು ನಂಬಲೇಬೇಕು. ವಿಚಿತ್ರವೆಂದರೆ ಅದೆಷ್ಟೋ ಬಾರಿ ಆತನನ್ನು ಹೋಟೇಲಿಗೆ ಕರೆದ ಯುವತಿಯಿಂದ ಹಿಡಿದು, ಖಾಕಿ ಅಧಿಕಾರಿಗಳು ಮತ್ತು ವಕೀಲರು ಕೂಡ ಚಾಣಾಕ್ಷ ಗ್ಯಾಂಗ್ ಒಂದರ ಪಾತ್ರಧಾರಿಗಳೇ ಆಗಿರುತ್ತಾರೆ. ಈ ಮಾದರಿಯ ಅಪರಾಧಗಳಲ್ಲಿ ಬ್ಲಾಕ್-ಮೇಲ್ ಮುಖಾಂತರ ಅಲ್ಪಾವಧಿ ಮತ್ತು ದೀರ್ಘಾವಧಿಗಳೆರಡರಲ್ಲೂ ದೋಚುವ ಸಾಧ್ಯತೆಗಳು ವಿಪುಲವಾಗಿರುವುದರಿಂದ ಇದೊಂದು ಅತ್ಯಂತ ಅಪಾಯಕಾರಿ ಜಾಲವೂ ಹೌದು.
ಪ್ರೇಮದ ತಲಾಶೆಗೆ ಸಂಬಂಧಪಟ್ಟಂತೆ ಹರಿಯಾಣದಲ್ಲಿ ನಡೆದ ಮತ್ತೊಂದು ಸರಣಿ ಪ್ರಕರಣವೂ ಕೂಡ ದೇಶದಾದ್ಯಂತ ಸಾಕಷ್ಟು ಸುದ್ದಿ ಮಾಡಿತ್ತು. ಕೆಲವು ಗಂಭೀರ ಅಪರಾಧಗಳ ಬೆನ್ನತ್ತಿ ಹೋದ ಪೋಲೀಸ್ ಇಲಾಖೆಯು “ಭಾರತದ ಶಾಂಘೈ” ಎಂದೇ ಕರೆಯಲಾಗುವ ಹರಿಯಾಣಾದ ಗುರುಗ್ರಾಮದಲ್ಲಿ ಯುವತಿಯೊಬ್ಬಳನ್ನು ವಶಪಡಿಸಿಕೊಂಡಿತ್ತು. ಈಕೆ ಸುಮಾರು ಹದಿನಾಲ್ಕು ತಿಂಗಳುಗಳ ಅಂತರದಲ್ಲಿ ಒಂಭತ್ತು ಗಂಡಸರ ವಿರುದ್ಧ, ಒಂಭತ್ತು ಪ್ರತ್ಯೇಕ ಪೋಲೀಸ್ ಠಾಣೆಗಳಲ್ಲಿ ಅತ್ಯಾಚಾರದ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಳು. ಹೀಗೆ ನಕಲಿ ರೇಪ್ ಕೇಸ್ ಗಳನ್ನು ಹಾಕಿಸಿಕೊಂಡ ಕೆಲ ಪುರುಷರು ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಕಂಗಾಲಾಗಿ ಒದ್ದಾಡುತ್ತಿದ್ದರೆ, ಇವೆಲ್ಲದರ ಹಿಂದಿರುವುದು ಒಬ್ಬಾಕೆಯದ್ದೇ ಹೆಸರು ಎಂಬ ರೋಚಕ ಸತ್ಯಕ್ಕೆ ತನಿಖಾಧಿಕಾರಿಗಳು ಆಕಸ್ಮಿಕವಾಗಿ ಎದುರಾಗಿದ್ದು ಯಾವ ಸಿನಿಮೀಯ ಥ್ರಿಲ್ಲರ್ ಕತೆಗೂ ಕಮ್ಮಿಯಿಲ್ಲ.
ಪ್ರೀತಿ ಮರೀಚಿಕೆಯಾದಷ್ಟು ಅದಕ್ಕೆ ತೆರಬೇಕಾದ ಬೆಲೆಯೂ ಹೆಚ್ಚುವುದು ಸಹಜವೇನೋ! ಸೈಬರ್ ಅಪರಾಧವೆಂಬ ನಿಗೂಢಲೋಕದಲ್ಲಿ ದೇಶವು ಇದಕ್ಕೆ ತೆರುತ್ತಿರುವ ಬೆಲೆಯೂ ಕಮ್ಮಿಯೇನಲ್ಲ. ಎಕನಾಮಿಕ್ ಟೈಮ್ಸ್ ನಲ್ಲಿ ವರದಿಯಾಗಿರುವಂತೆ ಜನವರಿ 2024ರಿಂದ ಎಪ್ರಿಲ್ 2024ರ ನಡುವಿನ ಅವಧಿಯಲ್ಲಿ ಅಂದಾಜು 1,750 ಕೋಟಿಗಳಷ್ಟು ದೊಡ್ಡ ಮೊತ್ತವನ್ನು ಭಾರತೀಯರು ಸೈಬರ್ ವಂಚಕರಿಂದಾಗಿ ಕಳೆದುಕೊಂಡಿದ್ದಾರೆ. ಈ ಚಿಕ್ಕ ಅವಧಿಯನ್ನಷ್ಟೇ ಪರಿಗಣಿಸಿದರೂ ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ಲಿನಲ್ಲಿ 7,00,000ಕ್ಕೂ ಹೆಚ್ಚು ದೂರುಗಳು ನಾಗರೀಕರಿಂದ ದಾಖಲಾಗಿವೆ. ಆನ್‌ಲೈನ್ ಜಗತ್ತಿನ ಕರಾಳ ಮುಖವನ್ನು ಪರಿಚಯಿಸಲು ಇದಕ್ಕಿಂತ ಹೆಚ್ಚು ಇನ್ನೇನು ಬೇಕು!
ಸಂಪರ್ಕ ಮತ್ತು ಸಂವಹನಗಳು ಹೆಚ್ಚಿದ ಕಾಲಮಾನದಲ್ಲಿ ಪ್ರಯೋಗಶೀಲತೆಗೆ ಯಥೇಚ್ಛವಾಗಿ ಸಿಕ್ಕ ಅವಕಾಶ-ಸಂದರ್ಭಗಳು ಪ್ರೀತಿಯ ಮೂಲಪರಿಕಲ್ಪನೆಯನ್ನೇ ಒಂದರ್ಥದಲ್ಲಿ ಕಲುಷಿತಗೊಳಿಸಿದ್ದು ಸತ್ಯ. ಸಂಪರ್ಕ-ಸಂವಹನಗಳ ಕ್ರಾಂತಿಯ ಹೊರತಾಗಿಯೂ ಉಳಿದುಬಿಟ್ಟ ಒಂಟಿತನ, ನ್ಯೂ-ನಾರ್ಮಲ್ ಆಗಿಬಿಟ್ಟ ಸ್ವೇಚ್ಛೆ, ಮಾನವನ ಮನೋದೌರ್ಬಲ್ಯಗಳನ್ನೇ ಬಂಡವಾಳವಾಗಿಸಿಕೊಂಡ ಉದ್ಯಮಗಳು, ಪ್ರೀತಿಯನ್ನು ಕೊಡುಕೊಳ್ಳುವಿಕೆಗಳ ವ್ಯವಹಾರದಂತೆ ಬದಲಾಯಿಸಿಬಿಟ್ಟ ಮಾರುಕಟ್ಟೆ ವ್ಯವಸ್ಥೆ… ಹೀಗೆ ನಮ್ಮ ಸುತ್ತಲಿನ ಸಾಕಷ್ಟು ಸಂಗತಿಗಳು ಸಿನಿಮೀಯ ಪ್ರೀತಿಯ ಸವಿಗನಸುಗಳನ್ನು ತೋರಿಸುತ್ತಲೇ ಪ್ರೀತಿಯನ್ನು ಮತ್ತಷ್ಟು ಮರೀಚಿಕೆಯನ್ನಾಗಿಸಿದವು. ಪ್ರೀತಿಯನ್ನು ಗೆಲ್ಲಲೇಬೇಕಾದ ಆಟವೆಂಬಂತೆ ಪರಿವರ್ತಿಸಿ, ನೈಜ ಭಾವನೆಗಳನ್ನು ತಮ್ಮೊಳಗೆ ಬಿಟ್ಟುಕೊಳ್ಳಲೂ, ಅನುಭವಿಸಲೂ ತಯಾರಿಲ್ಲದ ಜಡತ್ವವನ್ನು ಕೂಡ ತಂದುಬಿಟ್ಟು ಇಡೀ ಪ್ರಕ್ರಿಯೆಯನ್ನು ಯಾಂತ್ರಿಕವಾಗಿಸಿಬಿಟ್ಟವು.
ಪ್ರೀತಿ ನಮ್ಮೊಡನಿರುವಷ್ಟು ಕಾಲ ಅದಕ್ಕಾಗಿ ಹುಡುಕಾಟ ಮತ್ತು ಬೆನ್ನಟ್ಟುವಿಕೆಗಳೂ ಕೂಡ ಎಂದಿನಂತೆ ಮುಂದುವರಿಯಲಿವೆ. ಆದರೆ ತಮ್ಮ ಸರ್ವಸ್ವವನ್ನೂ ಬೆಲೆಯಾಗಿ ಕಟ್ಟುವಷ್ಟು ದೊಡ್ಡ ಮರೀಚಿಕೆಯಾಗಿ ಪ್ರೀತಿಯು ಉಳಿಯದಿರಲಿ ಎಂಬುದಷ್ಟೇ ಹಾರೈಕೆ.
ಪ್ರಸಾದ್ ನಾಯ್ಕ್, ದೆಹಲಿ
ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು” ಮತ್ತು “ಮರ ಏರಲಾರದ ಗುಮ್ಮ” ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.
ಇದನ್ನೂ ಓದಿ- http://“ಪ್ರೇಮಲೋಕದ ಕ್ಲಿಕ್ಕು-ಕಿಕ್ಕು” https://kannadaplanet.com/click-kick-of-premaloka/