ನವದೆಹಲಿ: ಕುಟುಂಬದ ಕಪಿಮುಷ್ಟಿಯಿಂದ ಪಕ್ಷ ಹೊರ ಬರಬೇಕು ಎಂದು ಪಕ್ಷದ ರಾಜ್ಯ ಅಧ್ಯಕ್ಷರ ವಿರುದ್ಧ ಸಮರ ಸಾಧಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹ ಪಡಿಸಿದ್ದಾರೆ. ದೆಹಲಿಯಲ್ಲಿ ಬುಧವಾರ ಪಕ್ಷದ ಶಿಸ್ತು ಸಮಿತಿಯ ಮುಂದೆ ಹಾಜರಾದ ಯತ್ನಾಳ್, ರಾಜ್ಯ ಬಿಜೆಪಿ ಘಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಕುರಿತು ವಿವರವಾದ ಮಾಹಿತಿಯನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪಕ್ಷದ ವರಿಷ್ಠರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅವರು, ಪಕ್ಷ ತಾಯಿ ಇದ್ದಂತೆ ಎಂದು ಬಹಳಷ್ಟು ಮಂದಿ ಹೇಳುತ್ತಾರೆ. ಆದರೆ ಅವರೇ ರಾಷ್ಟ್ರೀಯ ಪಕ್ಷಕ್ಕೆ ಮೋಸ ಮಾಡಿದ್ದಾರೆ ಎಂದು ಮತ್ತೆ ಪರೋಕ್ಷವಾಗಿ ವಿಜಯೇಂದ್ರ ವಿರುದ್ದ ಕಿಡಿಕಾರಿದರು.
ಕುಟುಂಬದ ಕಪಿ ಮುಷ್ಟಿಯಿಂದ ಪಕ್ಷ ಹೊರ ಬರಬೇಕು. ಪಕ್ಷ ಹಿಂದುತ್ವದ ಧ್ವನಿಯಾಗಬೇಕು ಪಕ್ಷ. ಆದರೆ ಕೆಲವರು ಅವರದ್ದೇ ಆದ ಟೀಮ್ ಕಟ್ಟಿಕೊಂಡು ತಮಗಿಷ್ಟ ಬಂದಂತೆ ವರ್ತಿಸುತ್ತಿದ್ದಾರೆ. ಈ ಎಲ್ಲ ವಿವರಗಳನ್ನು ಹೈಕಮಾಂಡ್ ಗೆ ವಿವರಿಸಿದ್ದೇನೆ ಎಂದರು.
ವರಿಷ್ಠರು ಬೆಂಗಳೂರು ಬಂದು ಕಾರ್ಯಕರ್ತರ ಧ್ವನಿ ಆಲಿಸಬೇಕು. ನನ್ನ ಜೊತೆಗೆ ಪ್ರತಾಪ್ ಸಿಂಹ, ಸಿದ್ದೇಶ್ವರ, ಲಿಂಬಾವಳಿ, ಜಾರಕಿಹೊಳಿ ದೆಹಲಿಗೆ ಬಂದಿದ್ದಾರೆ. ಎರಡೂ ಕಡೆ ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನಿನ್ನೆ ಸಂಸದರು ಹೇಳಿದ್ದಾರೆ. ನಾನು ಪಕ್ಷದ ಚೌಕಟ್ಟು ಬಿಟ್ಟು ಹೋಗಿಲ್ಲ ಎಂದು ಯತ್ನಾಳ್ ತಿಳಿಸಿದರು.