ಕೋಲಾರ: ಕಳೆದ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ನಾನು ಮತ್ತು ಸಿದ್ಧರಾಮಯ್ಯ ಗ್ಯಾರೆಂಟಿ ಪತ್ರಕ್ಕೆ ಸಹಿ ಮಾಡಿದ್ದೆವು, ನುಡಿದಂತೆ ನಡೆದವು. ಈ ಬಾರಿ ಅದೇ ರೀತಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಗ್ಯಾರೆಂಟಿ ಪತ್ರಕ್ಕೆ ಸಹಿ ಮಾಡಿದ್ದಾರೆ. ಅಧಿಕಾರಕ್ಕೆ ಬಂದು ನಮ್ಮ ವಾಗ್ದಾನವನ್ನು ಈಡೇರಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಇಂದು ಮುಳಬಾಗಿಲಿನ ಕುರುಡು ಮಲೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ-2ಯನ್ನು ಅಂಬೇಡ್ಕರ್ ವೃತ್ತದಿಂದ ಆರಂಭಿಸಲಾಯಿತು. ಒಂದೇ ಬಸ್ ನಲ್ಲಿ ಪಯಣಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಗ್ಗಟ್ಟಿನ ಮಂತ್ರ ಜಪಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆವಿ ಗೌತಮ್ ಪರ ಮತ ಯಾಚನೆ ನಡೆಸಿದ ಡಿ.ಕೆ. ಶಿವಕುಮಾರ್, ತೆನೆ (ಜೆಡಿಎಸ್) ಒಣಗಿ ಹೋಗ್ತಿದೆ. ಕಮಲ (ಬಿಜೆಪಿ) ಮುದುಡಿ ಹೋಗುತ್ತಿದೆ. ಕಮಲ ಹೊಳೆಯಲ್ಲಿದ್ದರೆ ಮಾತ್ರ ಚೆನ್ನ. ತೆನೆ ಹೊಲದಲ್ಲಿದ್ದರೆ ಚೆಂದ. ದಾನ ಮಾಡುವ ಕೈ ಅಧಿಕಾರದಲ್ಲಿದ್ದರೆ ಅನುಕೂಲ. ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನಾವು ಎಲ್ಲರಿಗೆ ಸಮಾನತೆ ಕೊಡ್ತೇವೆ. ಈ ಬಾರಿ ಬಿಜೆಪಿ 200 ಸ್ಥಾನವನ್ನೂ ದಾಟುವುದಿಲ್ಲ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಯಂದಿರಿಗೆ ಅನುಕೂಲವಾಗುತ್ತದೆ. ಈ ಹಿಂದೆ ಕೂಡ ಇಲ್ಲಿಂದಲೇ ಪ್ರಚಾರ ಮಾಡಿದ್ದೆವು. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಕೈ ಬಲಪಡಿಸಬೇಕು. ಸಿದ್ದರಾಮಯ್ಯ ಕೈ ಬಲಪಡಿಸಬೇಕು. ನಮ್ಮ ಅಭ್ಯರ್ಥಿ ಪ್ರಜ್ಞಾವಂತನಿದ್ದಾನೆ. ಕೋಲಾರದಲ್ಲಿ ಅವನನ್ನ ಗೆಲ್ಲಿಸಬೇಕು. ಕಾಂಗ್ರೆಸ್ ಹೋರಾಟ ಮಾಡಿ ನೀರು ತರ್ತಿದೆ. ಇದಕ್ಕೆ ಯಾರು ಕಾರಣ ಸಿದ್ದರಾಮಯ್ಯ ಸರ್ಕಾರ ಕಾರಣ. ಒಬ್ಬ ಉತ್ತಮ ಯುವಕನನ್ನ ನಿಲ್ಲಿಸಿದ್ದೇವೆ. ಎಲ್ಲರನ್ನ ಒಟ್ಟಿಗೆ ಕರೆದೋಯ್ತಾನೆ. ಅವನನ್ನ ನೀವು ಆಶೀರ್ವದಿಸಬೇಕು ಎಂದು ನುಡಿದರು.