ಬೆಂಗಳೂರು: ಮೈಕ್ರೊ ಫೈನಾನ್ಸ್ ಕಂಪನಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ದೌರ್ಜನ್ಯ ತಡೆಗಟ್ಟಲು ರಾಜ್ಯ ಸರ್ಕಾರ ಕಳುಹಿಸಿದ್ದ ಸುಗ್ರೀವಾಜ್ಞೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ತಿರಸ್ಕರಿಸಿದ್ದಾರೆ.
ಸುಗ್ರೀವಾಜ್ಞೆಯಲ್ಲಿರುವ 10 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ. 5 ಲಕ್ಷ ದಂಡ ವಿಪರೀತವಾಗಿದೆ. ಈಗ ಜಾರಿಯಲ್ಲಿರುವ ಕಾನೂನನ್ನು ಉಪಯೋಗಿಸಿಕೊಂಡೇ ಪೊಲೀಸ್ ಇಲಾಖೆಯೇ ಪರಿಸ್ಥಿತಿಯನ್ನು ನಿಯಂತ್ರಿಸಬಹುದು ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ. ಈ ಸುಗ್ರೀವಾಜ್ಞೆಯಿಂದ ಮೈಕ್ರೊ ಫೈನಾನ್ಸ್ ಕಂಪನಿಗಳ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಮತ್ತು ಬಡವರಿಗೂ ತೊಂದರೆಯಾಗಲಿದೆ ಎಂದೂ ಹೇಳಿದ್ದಾರೆ.
ಸುಗ್ರೀವಾಜ್ಞೆಯಲ್ಲಿ ಸಾಲ ಪಡೆದವರ ರಕ್ಷಣೆಗೆ ಮಾತ್ರವೇ ಗಮನ ಹರಿಸಿದೆ. ಸಹಜ ನ್ಯಾಯದ ಅಡಿಯಲ್ಲಿ ಸಾಲ ಕೊಟ್ಟವರಿಗೆ ರಕ್ಷಣೆ ಇಲ್ಲ ಸುದೀರ್ಘ ಅವಧಿಯಲ್ಲಿ ಇದು ಮಾರಕವಾಗಲಿದೆ ಮೈಕ್ರೋ ಫೈನಾನ್ಸ್ 3 ಲಕ್ಷಕ್ಕಿಂತ ಜಾಸ್ತಿ ಸಾಲ ಕೊಡುವುದಿಲ್ಲ. ಹಾಗಿರುವಾಗ ರೂ. ಐದು ಲಕ್ಷ ದಂಡ ಹೇಗೆ ವಿಧಿಸುತ್ತೀರಾ ಎಂದು ರಾಜ್ಯಪಾಲರು ಪ್ರಶ್ನಿಸಿದ್ದಾರೆ.