ಜೊತೆಯಲ್ಲೇ ಆಡಿ ಬೆಳೆದಂತಹ ಗೆಳೆಯರು ನಮ್ಮನ್ನು ದ್ವೇಷ ಮಾಡ್ತಾರೆ ಅಂದ್ರೆ…

Most read

ಸಣ್ಣ ವಯಸ್ಸಿನಿಂದ ಜೊತೆಯಲ್ಲೇ ಇದ್ದು, ಜೊತೆಲೆ ಆಡಿ ಬೆಳೆದಂತಹ ಗೆಳೆಯರು ನಮ್ಮನ್ನ ದ್ವೇಷ ಮಾಡ್ತಾರೆ ಅಂದ್ರೆ ಇನ್ನ ಹೊರಗಡೆ ಇರೋ ಅಂತಹ ಮನುಷ್ಯರಲ್ಲಿ ಎಷ್ಟು ದ್ವೇಷ ಇರಬೇಡ?. ಇವರ ಮನಸ್ಸು ಎಷ್ಟರಮಟ್ಟಿಗೆ ಹಾಳಾಗಿದೆ ಅನ್ನೋದನ್ನ ಅರ್ಥಮಾಡ್ಕೋಬೇಕಿದೆ. ಈ ದ್ವೇಷದ ರಾಜಕಾರಣ ಹೀಗೆ ಮುಂದುವರೆದರೆ ಮುಂದೊಂದಿನ ಭಾರತ ದೇಶ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಕಳೆದುಕೊಳ್ಳುವುದರಲ್ಲಿ ಅನುಮಾನ ಇಲ್ಲ –ಮನಸ್ವಿ ಶಿವಮೊಗ್ಗ.

15-16 ವರ್ಷಗಳಿಂದ ಜೊತೆಲಿರೊ ಸ್ನೇಹಿತರೆ ನಮ್ಮನ್ನ ದೇಶದ್ರೋಹಿಗಳು, ಭಿಕ್ಷುಕರು ಅಂತ ಕರೆದಾಗ ಮನಸ್ಸಿಗೆ ತುಂಬಾ ನೋವಾಗತ್ತೆ. ದಿನಾಂಕ 16-4-2024 ರಂದು ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ರಾಜಕೀಯ ವಿಶ್ಲೇಷಕ ಸುಧೀಂದ್ರ ಕುಲಕರ್ಣಿಯವರ “ಮೋದಿ ಮತ್ತು ಸ್ವನಾಮ ಪ್ರೇಮ” ಅನ್ನೋ ವಿಶ್ಲೇಷಣಾ ಲೇಖನವು, ದೇಶ ಹೇಗೆ ಸರ್ವಾಧಿಕಾರದತ್ತ ಹೋಗ್ತಾ ಇದೆ, ಮೋದಿ ಅನ್ನೋ ಒಂದು ಹೆಸರೇ ಎಲ್ಲದಕ್ಕಿಂತ ಸರ್ವ ಶ್ರೇಷ್ಠ ಅನ್ನೋತರ ಬಿಂಬಿಸಲಾಗ್ತಾ ಇದೆ, ಬಿಜೆಪಿಯಲ್ಲಿನೇ ನಾವು ಬಿಜೆಪಿ ಅಥವಾ ತಮ್ಮ ಸರ್ಕಾರ ಅನ್ನೋದರ ಬದಲಾಗಿ ಎಲ್ಲಿ ನೋಡಿದರೂ ಒಬ್ಬ ವ್ಯಕ್ತಿಯ ಹೆಸರನ್ನೇ ಹಿಡ್ಕೊಂಡು, -ಮೋದಿ ಗ್ಯಾರಂಟಿಗಳು, ಮೋದಿ ವಿಶ್ವಾಸ, ಇನ್ಮುಂದೆ ಮೋದಿ ಸರ್ಕಾರ- ಪ್ರಚಾರ ಮಾಡ್ತಾ ಇರೋದನ್ನ ಗಮನಿಸಿದಾಗ ಆ ಸರ್ಕಾರ ಏಕವ್ಯಕ್ತಿಯ ಸರ್ವಾಧಿಕಾರದ ಕಡೆಗೆ ಹೋಗ್ತಾ ಇದೆ ಅನ್ನೋದು ಸ್ಪಷ್ಟವಾಗಿದೆ ಅಂತ ಆ ಬರಹ ಹೇಳ್ತಾ ಇತ್ತು.

ಆ ಬರಹವನ್ನ ನಾನು ವಾಟ್ಸಪ್ ಸ್ಟೇಟಸ್ ಅಲ್ಲಿ ಹಾಕಿಕೊಂಡಿದ್ದೆ. ಅದನ್ನು ಓದಿದ ಸಣ್ಣ ವಯಸ್ಸಿಂದನೂ ಜೊತೆಲೇ ಬೆಳೆದಂತ ಸ್ನೇಹಿತರು ಕೂಡ ಕಟುವಾಗಿ ಟೀಕೆ ಮಾಡಿದ್ರು. ಅವರ ಪ್ರಕಾರ ದೇಶನ ನಡೆಸೋ ಶಕ್ತಿ ಇರದು ಮೋದಿ ಒಬ್ಬರಿಗೆ. ಆ ಸರ್ವಾಧಿಕಾರವನ್ನ ವಿರೋಧಿಸೋರೆಲ್ಲ ಅವರ ಪ್ರಕಾರ ದೇಶದ್ರೋಹಿಗಳು. ಹಾಗೆ ರಾಜ್ಯ ಸರ್ಕಾರ ಕೊಟ್ಟಂತಹ ಐದು ಗ್ಯಾರಂಟಿ ಯೋಜನೆಗಳ‌ ಉಪಯೋಗ ಪಡ್ಕೊಳ್ತಾ ಇರೊ ನಾವು ಭಿಕ್ಷುಕರು. ಈ ಮನಸ್ಥಿತಿಯವರಿಗೆ ನಮ್ಮ ದೇಶದಲ್ಲಿರೋ ಬಡತನದ ಬಗ್ಗೆ ಹಾಗೂ ಬಡವರ ಬಗ್ಗೆ ಅರಿವೂ ಇಲ್ಲ, ಎಳ್ಳಷ್ಟು ಕಾಳಜಿನೂ ಇಲ್ಲ. ಇನ್ನೂ ಮುಂದುವರೆದು “ನಾವು ಗಂಡಸ್ರು ಕಟ್ಟೊ ತೆರಿಗೆಲಿ ಹೆಣ್ಮಕ್ಳು ಬಿಟ್ಟಿಯಾಗಿ ಓಡಾಡ್ತಿದ್ದಾರೆ” ಅನ್ನೋ ಅವರ ಮಾತಿನ ಹಿಂದೆ ಪುರುಷ ಪ್ರಧಾನ ಸಮಾಜನ ಪೋಷಿಸುವಂತ ಕಾಣದ ಕೈಗಳು ಕೆಲಸ ಮಾಡ್ತಾ ಇದಾವೆ ಅನ್ನೋದನ್ನ ಗಮನಿಸಬೇಕಾಗಿದೆ. ಇಂತಹ ಮಾತುಗಳನ್ನಾಡುವ ಅವರೇ ಗ್ಯಾರಂಟಿ ಯೋಜನೆಗಳ ಲಾಭ ಪಡೆಯೋದರಲ್ಲಿ ಹಿಂದೇಟೇನ್ ಹಾಕಿಲ್ಲ. ಲಜ್ಜೆ ಬಿಟ್ಟು ಅದರ ಫಲಾನುಭವಗಳನ್ನ ಪಡ್ಕೊಳ್ತಾ ಇದ್ದಾರೆ.

ಇಲ್ಲಿ ನಾವು ಸೂಕ್ಷ್ಮವಾಗಿ ಗಮನಿಸ ಬೇಕಾಗಿರೋದು ಅವರ ಮನಸಲ್ಲಿ ಮೊಳಕೆಯೊಡೆದು ಈಗ ಮರವಾಗಿರ್ತಕ್ಕಂತಹ ದ್ವೇಷ. ಈ ದ್ವೇಷ ಎಷ್ಟರ ಮಟ್ಟಿಗೆ ಇದೆ ಅಂತಂದ್ರೆ ಅವರ ಪ್ರತಿಸ್ಪರ್ಧಿಗಳನ್ನ ವೈರಿಗಳು ಅಥವಾ ಶತ್ರುಗಳಾಗೆ ಕಾಣ್ತಾಯಿದ್ದಾರೆ. ಇವರೆಲ್ಲಾ ತಮ್ಮ ಪ್ರತಿಸ್ಪರ್ಧಿಗಳನ್ನ ಹತ್ತಿಕ್ಕೋಕೆ ಬಳಸುವಂತಹ ಸಾಧನ ಕಮೂ ಹೇಳುವಂತ ಹಿಂಸೆ(violence). ಪ್ರತಿಸ್ಪರ್ಧಿ ವ್ಯಕ್ತಿನ ಮಾತಾಡ್ಲಿಕ್ಕೆ ಬಿಡದೇ ಇರೊ ಹಾಗೆ ಮಾಡೋದು ಕೂಡ ಒಂದು ರೀತಿಯ ಹಿಂಸೆ ಅಂತ ಕಮೂ ಹೇಳ್ತಾನೆ. ನಾನು ಮೇಲೆ ಹೇಳಿದ ಬರಹದಲ್ಲೂ ಕೂಡ ಈ ತರದ ಒಂದು ಉಲ್ಲೇಖ ಬರುತ್ತೆ. ಪಾರ್ಲಿಮೆಂಟ್ ಸೆಷನ್ ನಲ್ಲಿ ವಿರೋಧ ಪಕ್ಷದವರಿಗೆ ಮಾತಾಡ್ಲಿಕ್ಕೆ ಬಿಡದೆ ಇರೋ ಹಾಗೆ ಎಲ್ಲಾ ಸಂಘ ಪರಿವಾರದವರು ಸೇರ್ಕೊಂಡು ಮೋದಿ ಮೋದಿ ಅಂತ ಕೂಗಿ ಅವರನ್ನ ಸುಮ್ಮನಾಗಿಸ್ತಾರೆ. ಇದಕ್ಕೆ ಇನ್ನೊಂದು ಉದಾಹರಣೆ ಅಂದ್ರೆ ರಮ್ಯಾ ಪ್ರಚಾರಕ್ಕೆ ಹೋದಾಗ ಅವರ ಸುತ್ತ ಜನ ಸುತ್ವರ್ಕೊಂಡು ಅವರನ್ನ‌ ಮಾತಾಡ್ಲಿಕ್ಕೆ ಬಿಡದೆ ಮೋದಿ ಮೋದಿ ಅಂತ ಅಲ್ಲೂ ಕೂಡ ಕಿರ್ಚಾಡ್ತಾರೆ. ಇಂಥವರಿಗೆಲ್ಲ ಪ್ರಜಾಪ್ರಭುತ್ವ ಅಂದ್ರೆ ಏನು, ಸಂವಿಧಾನ ಅಂದ್ರೆ ಏನು ಅನ್ನುವ ಅರಿವೇ ಇಲ್ಲ. ಇಂಥ ಬುದ್ಧಿಮಾಂದ್ಯರನ್ನ ಸಂಘ ಪರಿವಾರದವರು ತುಂಬಾ ಚೆನ್ನಾಗಿ ಬಳಸಿಕೊಳ್ಳುತ್ತಾ ಬಂದಿದ್ದಾರೆ. ಅವರನ್ನೆಲ್ಲ ಇನ್ನೂ ಅಂಧಕಾರದ ಕಡೆಗೆ ತಳ್ಳಿ ದ್ವೇಷ ಅನ್ನೋ ವಿಷ ಬೀಜಗಳನ್ನು ಅವರಲ್ಲಿ ಬಿತ್ತಿದ್ದಾರೆ.

ರಮ್ಯಾ

ಎಂಥಾ ಸಾಮಾನ್ಯರಿಗೆ ಆಗಲಿ ಅಭಿವೃದ್ಧಿ ಅಂದ್ರೆ, ಶಿಕ್ಷಣದಲ್ಲಿ ಸುಧಾರಣೆ, ಉತ್ತಮ ಆಸ್ಪತ್ರೆ ವ್ಯವಸ್ಥೆಗಳು, ಉದ್ಯೋಗ ಸೃಷ್ಟಿ, ಹೀಗೆ ಸಮಾಜ ಸುಧಾರಣೆಯ ಕೆಲಸಗಳು ಅಂತ ಗೊತ್ತಿದೆ. ಆದರೆ ಈಗಿರೋ ಸರ್ಕಾರ ಇದ್ಯಾವುಗಳನ್ನೂ ಮಾಡದೆ ಧರ್ಮ ರಾಜಕಾರಣ ಮಾಡ್ತಾ ಇದೆ. ಓದಿ ಉತ್ತಮವಾದ ಕೆಲಸಗಳನ್ನ ತಗೋಬೇಕಾದಂತ ಮಕ್ಕಳನ್ನ ಧರ್ಮರಕ್ಷಣೆಯ ಹೆಸರಿನಲ್ಲಿ ಬೀದಿಗೆ ಕರೀತಾ ಇದ್ದಾರೆ. ಮೂಲಭೂತವಾದಿಗಳಿಗೆ ವಿದ್ಯೆ ಅಂದ್ರೇನೆ ಮುಳ್ಳು. ಜನ ವಿದ್ಯಾವಂತರಾದರೆ ಅವರ ಕುತಂತ್ರಗಳನ್ನೆಲ್ಲ ಅರ್ಥ ಮಾಡಿಕೊಳ್ಳುತ್ತಾರೆ. ಹಾಗಾಗಿ ಅವರನ್ನ ಆದಷ್ಟು ಶಿಕ್ಷಣದಿಂದ ದೂರಾನೆ ಇಡ್ಲಿಕ್ಕೆ ಪ್ರಯತ್ನ ಪಡ್ತಿದ್ದಾರೆ. NEP ಇದಕ್ಕೊಂದು ಉತ್ತಮ ಉದಾಹರಣೆ.

ಅಂಬೇಡ್ಕರ್ ನಮಗಾಗಿ ಕಟ್ಟಿಕೊಟ್ಟಿರ್ತಕ್ಕಂತ ಈ ಸಂವಿಧಾನ, ಪ್ರಪಂಚದಲ್ಲಿಯೇ ಶ್ರೇಷ್ಠ ಸಂವಿಧಾನ ಅಂತನೇ ಹೇಳಬಹುದು. ಯಾವ ಜಾತಿ, ಧರ್ಮ,  ಹಾಗೂ ಲಿಂಗ ಭೇದಭಾವ ಇಲ್ಲದೆ ಎಲ್ಲರೂ ಸಮಾನರು ಅನ್ನೋ ಒಂದು ತತ್ವನ ನಮ್ಮ ಸಂವಿಧಾನ ಸಾರಿ ಸಾರಿ ಹೇಳತ್ತೆ. ವ್ಯಕ್ತಿ ಸ್ವಾತಂತ್ರ್ಯನ ಎತ್ತಿ ಹಿಡಿಯುತ್ತೆ. ಇತ್ತೀಚಿನ ಬೆಳವಣಿಗೆ ಗಮನಿಸಿದಾಗ ಇಂತಹ ಸಂವಿಧಾನನ ಬದಲಾಯಿಸ್ತಿವಿ ಅಂತ ಎಷ್ಟು ಜನ ಈ ಸಂಗ ಪರಿವಾರದ ನಾಯಕರು ಹೇಳಿದ್ದಾರೆ. ಸಮಾನತೆ ಅನ್ನೋದು ಸರ್ವಾಧಿಕಾರಿ ಧೋರಣೆಗೆ ಮುಳ್ಳು ಇದ್ದಾಗೆ. ಅವರು ಆದಷ್ಟು ಅದನ್ನ ಕಿತ್ತೊಗೆಯೋಕೆ ಪ್ರಯತ್ನ ಮಾಡ್ತಿರ್ತಾರೆ. ಶ್ರೀಮಂತರನ್ನೇ ಮತ್ತೆ ಅತಿ ದೊಡ್ಡ ಶ್ರೀಮಂತರನ್ನಾಗಿ ಮಾಡೋ ಅಂತ ಉದ್ದೇಶಗಳನ್ನ ಇಟ್ಕೊಂಡಿರುವ ಇಂಥವರು ಸಾಮಾನ್ಯರನ್ನ ಕೀಳಾಗಿ ಕಾಣೋದು ಸಹಜ. ದೇಶದಲ್ಲಿ ಬಡವರೇ ಇಲ್ಲ, ದೇಶ ಅಭಿವೃದ್ಧಿ ಕಡೆಗೆ ಸಾಗಿದೆ ಅನ್ನೋ ಜನರ ಕಣ್ಣಿಗೆ ಬಟ್ಟೆ ಕಟ್ಟುವಂತ ಮಾತುಗಳು ಸಮಾಜನ ಬದಲಾಯಿಸೋದಿಲ್ಲ. ವಾಸ್ತವತೆನ ಒಪ್ಪಿಕೊಂಡು ನಿಜವಾದ ಬದಲಾವಣೆಗಳನ್ನ ತರುವಂತ ನಾಯಕರುಗಳು ನಮಗೆ ಬೇಕಾಗಿದ್ದಾರೆ. ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು ಆ ನಿಟ್ಟಿನಲ್ಲಿ ಈಗ ಕೆಲಸ ಮಾಡ್ತಾ ಇದ್ದಾವೆ. ಇಂಥಾ ಯೋಜನೆಗಳನ್ನು ಬಿಟ್ಟಿ ಭಾಗ್ಯ ಅನ್ನೋದು ಅದರ ಫಲಗಳನ್ನ ಪಡೆದುಕೊಳ್ತಾ ಇರುವಂತವರಿಗೆ ಭಿಕ್ಷುಕರು ಅಂತ ಕರೆಯೋದು ಅಂಧ ಭಕ್ತರ ಮನಸ್ಸಿನ ವಿಕಲತೆಯನ್ನ ತೋರಿಸುತ್ತೆ..

ಮನಸ್ವಿ,ಶಿವಮೊಗ್ಗ

More articles

Latest article