ಒಂದು ನಿರ್ದಿಷ್ಟ ಸಿದ್ದಾಂತವನ್ನು ಪೋಷಿಸುತ್ತಿರುವ ಜನರು ತಮ್ಮ ಭಾಷಣ, ಬರವಣಿಗೆಯೇ ಮೊದಲಾದ ಹಳೆಯ ತಂತ್ರಗಳೆಲ್ಲ ಕಳೆಗುಂದುತ್ತಾ ಬಂದ ಮೇಲೆ ಜನರು ಜನರ ನಡುವೆ ಒಡಕು ಮೂಡಿಸುವ ಸಲುವಾಗಿ ಇದೀಗ ಪ್ರಭಾವಿ ಸಿನಿಮಾ ಮಾಧ್ಯಮದ ಮೇಲೆ ತಮ್ಮ ದೃಷ್ಟಿ ಬೀರಿದ ಫಲವೇ ಈ ಪ್ರೊಪಗೆಂಡಾ ಮೂವಿಗಳು.ಅವುಗಳಲ್ಲೊಂದು ಈ ಕೇರಳ ಸ್ಟೋರಿ – ಶಂಕರ್ ಸೂರ್ನಳ್ಳಿ, ಸಾಮಾಜಿಕ ಹೋರಾಟಗಾರರು.
’ಕೇರಳ ಸ್ಟೋರಿ” ಸಿನಿಮಾ ಸಂಗತಿ ಇತ್ತೀಚೆಗೆ ಬಹಳಷ್ಟು ಸುದ್ದಿ ಮಾಡುತ್ತಿದೆ. ಹೇಳಿ ಕೇಳಿ ಇದೊಂದು ಪ್ರೊಪಗೆಂಡ (ವ್ಯವಸ್ಥಿತ ಅಪಪ್ರಚಾರದ ಉದ್ದೇಶವುಳ್ಳ) ಸಿನಿಮಾ. ಒಂದು ನಿರ್ದಿಷ್ಟ ಸಿದ್ದಾಂತವನ್ನು ಪೋಷಿಸುತ್ತಿರುವ ಜನರು ತಮ್ಮ ಭಾಷಣ, ಬರವಣಿಗೆಯೇ ಮೊದಲಾದ ಹಳೆಯ ತಂತ್ರಗಳೆಲ್ಲ ಕಳೆಗುಂದುತ್ತಾ ಬಂದ ಮೇಲೆ ಜನರು ಜನರ ನಡುವೆ ಒಡಕು ಮೂಡಿಸುವ ಸಲುವಾಗಿ ಇದೀಗ ಪ್ರಭಾವಿ ಸಿನಿಮಾ ಮಾಧ್ಯಮದ ಮೇಲೆ ತಮ್ಮ ದೃಷ್ಟಿ ಬೀರಿದ ಫಲವೇ ಈ ಪ್ರೊಪಗೆಂಡಾ ಮೂವಿಗಳು. ತಮ್ಮ ನಾಯಕನನ್ನು ಹೀರೋ ಸೂಪರ್ ಮ್ಯಾನ್ ಎಂದು ಬಿಂಬಿಸೋದು ಮನಮೋಹನ್ ಸಿಂಗರಂತಹ ಧೀಮಂತ ವ್ಯಕ್ತಿತ್ವದವರನ್ನು ಆಕ್ಸಿಡೆಂಟಲ್ ಪಿ ಎಮ್ ಎಂದು ಲೇವಡಿ ಮಾಡಿ ಸಿನಿಮಾ ತೆಗೆಯೋದು ಇಂತವರ ಚಾಳಿ. ಇದೇ ರೀತಿ ಕೆಲವರ ರಾಜಕೀಯದ ಬೇಳೆ ಬೇಯಲು ಅಗತ್ಯವಿರುವ “ಹಿಂದೂ ಖತ್ರೆ ಮೆ ಹೈ” ಎಂದು ಹಿಂದೂ ಮುಸ್ಲಿಮ್ ಕಚ್ಚಾಟವನ್ನು ಉತ್ತೇಜಿಸುವಂತಹ, ದ್ವೇಷ ಪೂರ್ಣ ಸರಕುಗಳಿರುವಂತ ಕತೆಯನ್ನು ಹೊಸೆದು ಸಿನಿಮಾ ತೆಗೆಯೋದು ಇವೆಲ್ಲ ಇಂದು ಸಾಮಾನ್ಯವೆನಿಸಿ ಬಿಟ್ಟಿವೆ. ಅಂತಹದ್ದರಲ್ಲೊಂದು ಈ ಕೇರಳ ಸ್ಟೋರಿ ಎನ್ನೋ ಸಿನಿಮಾ.
ಭಾರತದಲ್ಲಿ ಒಟ್ಟು ಇದೀಗ 28 ರಾಜ್ಯಗಳಿವೆ. ಅದರೊಟ್ಟಿಗೆ 8 ಕೇಂದ್ರಾಡಳಿತ ಪ್ರದೇಶಗಳು ಬೇರೆ. ಇಷ್ಟಿದ್ದೂ ಈ ಹಿಂದೀ ವಾಲಾಗಳ ಈ ಪ್ರೊಪಗೆಂಡ ಸಿನಿಮಾದ ಹೆಸರು ಕೇರಳ ಸ್ಟೋರಿ. ಈ ಕೇರಳ ರಾಜಕೀಯವಾಗಿ ಇನ್ನೂ ಕೂಡ ತಮ್ಮವರನ್ನು ಸರಿಯಾಗಿ ಒಳ ಬಿಟ್ಟು ಕೊಡದಿರುವ ಕೋಪಕ್ಕೆ ಈ ದುರುದ್ದೇಶಿತ ಸಿನಿಮಾಕ್ಕೆ ಸಂವಿಧಾನಬದ್ಧ ಮಾನ್ಯತೆ ಉಳ್ಳ ರಾಜ್ಯವೊಂದರ ಹೆಸರು. ಪಾಪ ಇವರುಗಳಿಗೆ ದರಿದ್ರದ ಮತ್ತು ಮೌಢ್ಯದ ಕೊಚ್ಚೆಯಲ್ಲಿ ಮುಳುಗಿರುವ ತಮ್ಮ ಹಿಂದೀ ರಾಜ್ಯದ ಹೆಸರುಗಳು ಈ ಸಿನಿಮಾ ನಾಮಕರಣಕ್ಕೆ ಕಾಣಿಸಲೇ ಇಲ್ಲ.

ಅದೇ ’ ಹಿಂದೂ ಖತ್ರೇ ಮೆ ಹೈ” ಘೋಷಣೆಯ ಹಿನ್ನೆಲೆಯ ಲವ್ ಜೆಹಾದ್ ಎಂಬ ಖೊಟ್ಟಿ ಕಲ್ಪನೆಯೇ ಈ ಕೇರಳ ಸ್ಟೋರಿ ಚಿತ್ರ ಸರಣಿಯ ಹೂರಣ. ಹಿಂದೂ ಹೆಣ್ಣುಗಳನ್ನು ಮರಳುಗೊಳಿಸಿ ಮದುವೆ ಹೆಸರಲ್ಲಿ ಮತಾಂತರ ಮಾಡಿ ಅವರುಗಳನ್ನು ಭಯೋತ್ಪಾದನೆಯೇ ಮೊದಲಾದ ದುಷ್ಕೃತ್ಯಗಳಿಗೆ ಬಳಸುವ ಹಾಗು ಅದನ್ನು ವಿರೋಧಿಸುವವರು ಎದುರಿಸುವ ಚಿತ್ರಹಿಂಸೆಯ ಚಿತ್ರಣ ಇಂತಹ ಚಿತ್ರಗಳಲ್ಲಿ ಚೆನ್ನಾಗಿ ಹೊಸೆಯಲಾಗುತ್ತದೆ. ತಮಾಷೆಯೆಂದರೆ ಈ ಕೇರಳ ಸ್ಟೋರಿ ಸಿನಿಮಾದಲ್ಲಿ ಹಿಂದೂ ಹೆಣ್ಣಿಗೆ ಒತ್ತಾಯ ಪೂರ್ವಕವಾಗಿ ಬೀಫ್ ತಿನ್ನಿಸುವಂತಹ ಕರುಣಾಜನಕ ಸೀನ್ ಇದೀಗ ಭಾರೀ ಕಾಮಿಡಿ ಸೀನಾಗಿ ಪರಿವರ್ತಿತ ಗೊಂಡು ಜಾಲತಾಣಗಳಲ್ಲಿ ಹೊಸ ಹೊಸ ಆವೃತ್ತಿಗಳಲ್ಲಿ ಸಿಕ್ಕಾಪಟ್ಟೆ ವೈರಲ್ಲಾಗಿ ನಗೆಪಾಟಲಿಗೀಡಾಗಿದೆ…
ಈ ಲವ್ ಜಿಹಾದ್ ಎನ್ನುವ ಸಂಗತಿಯೇ ಅಸ್ತಿತ್ವದಲ್ಲಿಲ್ಲ ಎಂದು ನ್ಯಾಯಾಲಯವೇ ಒಪ್ಪಿಕೊಂಡಿದೆ. ಅಸಲಿಗೆ ಹಿಂದುತ್ವವಾದಿಗಳ ಪ್ರಯೋಗಶಾಲೆಯಾಗಿರುವ ಕರ್ನಾಟಕದ ಕರಾವಳಿಯಲ್ಲಿ ಸೃಷ್ಟಿಗೊಂಡ ಈ ಪದ ಇದೀಗ ದೇಶಾದ್ಯಂತ ಚಲಾವಣೆಯಲ್ಲಿದೆ. ಇಸ್ಲಾಮಿಕ್ ಧಾರ್ಮಿಕ ಪದವಾಗಿರುವ ಜಿಹಾದ್ ಪದವನ್ನು ವಿಕೃತಗೊಳಿಸಿ ದ್ವೇಷ ಹರಡುವ ಸಲುವಾಗಿ ಇದನ್ನು ಸಾಕಷ್ಟು ದುರ್ಬಳಕೆ ಗೊಳಿಸುವ ಪ್ರಕ್ರಿಯೆಯ ಹಿಂದೆ ದೊಡ್ಡದೊಂದು ಷಡ್ಯಂತ್ರವೇ ಇದೆ. ತಮ್ಮದೇ ಮಹಾನ್ ಶಕ್ತಿವಂತ, ಮಹಾ ಜ್ಞಾನಿ, ತಿಳುವಳಿಕಸ್ಥನೆಂದೇ ಖ್ಯಾತನಾದ ಆಂಜನೇಯ ದೇವರನ್ನೇ ಅವರ ಮುಖಭಾವವನ್ನು ಕ್ರೂರ ಭಾವಕ್ಕೆ ವಿಕೃತಗೊಳಿಸಿ ಹರಿಬಿಟ್ಟವರಿಗೆ ಅನ್ಯಧರ್ಮದ ಜಿಹಾದ್ ಪದವನ್ನು ಕೆಡಿಸೋದು ದೊಡ್ಡದೇನಲ್ಲ ಬಿಡಿ.
ಎಂಭತ್ತರ ದಶಕದಲ್ಲಿ ಕನ್ನಡದ ಪ್ರಸಿದ್ಧ ವಾರಪತ್ರಿಕೆಯಲ್ಲಿ ಬಂದಂತಹ ಕರಾವಳಿ ಮುಸ್ಲಿಮ್ ಲೇಖಕರೊಬ್ಬರ ಧಾರಾವಾಹಿ ಕಥೆ ಬಹಳ ಮನೆಮಾತಾಗಿತ್ತು. ಅದರ ಬಗ್ಗೆ ಆಫೀಸು ಕಛೇರಿ ಕಟ್ಟೆಗಳಲ್ಲಿ ಚರ್ಚೆಗಳೂ ನಡೆಯುತ್ತಿತ್ತು. ಅದನ್ನು ಓದಲು ವಾರ ವಾರಕ್ಕೆ ಜನ ಪತ್ರಿಕೆಗೆ ಕಾಯುತ್ತಿದ್ದರು. ಜನ ಸಾಮಾನ್ಯ ಬಳಕೆಯಲ್ಲಿಲ್ಲದ ಅನ್ಯ ಭಾಷೆಯ ಪದವೊಂದು ಈ ಮೂಲಕ ಗೊತ್ತಿಲ್ಲದೇ ಬಳಿಕ ಸಾರ್ವತ್ರಿಕಗೊಂಡಿತ್ತು. ಅದು ಆ ಧಾರಾವಾಹಿಯ ಹೆಸರಾದ ”ಜೆಹಾದ್ ’. ಬಳಿಕ ಅದನ್ನೇ ಹೆಕ್ಕಿಕೊಂಡ ಹಿಂದುತ್ವವಾದಿಗಳು ಆ ಪದವನ್ನು ತಮಗೆ ಬೇಕಾದಂತೆ ವಿಕೃತ ಗೊಳಿಸಿ ಹರಿಬಿಟ್ಟು ಆನಂದಿಸುತ್ತಿದ್ದಾರೆ. ಲವ್ ಜಿಹಾದ್, ತರಕಾರಿ ಜಿಹಾದ್, ಮೀನು ಜಿಹಾದ್, ಬಟ್ಟೆ ಜಿಹಾದ್ ನಿಂದ ಅದೇನೋ ಸಮುಂದರ್ ಜಿಹಾದ್ ತನಕ..
ಗುಜರಾತ್, ಯು ಪಿ ಯಂತಹ ಹಿಂದಿ ರಾಜ್ಯಗಳಲ್ಲಿ ಪ್ರತಿ ವರ್ಷ ಲಕ್ಷಾಂತರ ಅಪ್ರಾಪ್ತ ಬಾಲಕಿಯರು ಕಣ್ಮರೆಯಾಗುತ್ತಿದ್ದಾರೆ. ಬಡತನ, ದೌರ್ಜನ್ಯಗಳೆಲ್ಲ ಮಿತಿಗಳನ್ನು ದಾಟಿವೆ. ತಲಾ ಆದಾಯ, ವಿದ್ಯಾವಕಾಶ ತೀರಾ ಕಳಪೆ ಮಟ್ಟದಲ್ಲಿವೆ. ಕೇರಳ ರಾಜ್ಯದ ಸಾಕ್ಷರತಾ ಪ್ರಮಾಣ, ಗುಣಮಟ್ಟದ ಜೀವನ ಉತ್ತರ ರಾಜ್ಯಗಳಿಗಿಂತ ಎಷ್ಟೋ ಮುಂದಿವೆ. ಉತ್ತರದ ಹಿಂದೀ ಜನಗಳು ಕೆಲಸ ಅರಸಿ ದಕ್ಷಿಣದ ರಾಜ್ಯಗಳತ್ತ ಮುಖ ಮಾಡಿವೆ. ಸಿಮೆಂಟ್ ಕೆಲಸದಿಂದ ಹಿಡಿದು ಐಸ್ ಕ್ಯಾಂಡಿ ಮಾರುವ ಮತ್ತು ಆ ಮೂಲಕ ತಮ್ಮ ಮನೆ ಸಂಭಾಳಿಸುವ ಉತ್ತರದ ಮಂದಿ ಕರ್ನಾಟಕ, ಕೇರಳ ದಂತಹ ದಕ್ಷಿಣ ರಾಜ್ಯಗಳಲ್ಲಿ ಸಾಕಷ್ಟಿದ್ದಾರೆ. ಇಂತಹ ನೈಜ ಸಂಗತಿಗಳು ಈ ಪ್ರೊಪಗೆಂಡ ಸಿನಿಮಾ ಮೇಕರ್ ಗಳಿಗೆ ಗೊತ್ತಿಲ್ಲದೆಂದೇನಲ್ಲ. ಆದರೆ ಅದು ಅವರನ್ನು ಕುಣಿಸೋ ರಾಜಕಾರಣಿಗಳು ಎಸೆಯುವ ಕೂಳಿನ ಬಾಬ್ತನ್ನು ಪೂರೈಸುವುದಿಲ್ಲ ತಾನೇ… ರಾಜಕಾರಣಿಗಳಿಗೆ ಬೇಕಾದದ್ದು ಜನರನ್ನು ಒಡೆಯುವ ಯಶಸ್ವಿ ತಂತ್ರಗಾರಿಕೆಯಾದರೆ ಇವರಿಗೆ ಬೇಕಾದದ್ದು ಕೇವಲ ಕಾಸು. ಅದಕ್ಕೆ ಬೇಕಾಗಿ ಇವರುಗಳು ಏನು ಮಾಡಲೂ ಕೂಡ ಹೇಸುವುದಿಲ್ಲ ಎಂಬುದಕ್ಕೆ ಇವೇ ಸಾಕ್ಷಿ.
ಶಂಕರ್ ಸೂರ್ನಳ್ಳಿ
ಸಾಮಾಜಿಕ ಹೋರಾಟಗಾರರು
ಇದನ್ನೂ ಓದಿ- ನಮ್ಮ ‘ಜೇಮ್ಸ್ ಬಾಂಡ್’ ಗುಪ್ತಚರರೂ, ಅಲಿಪ್ತ ನೀತಿಯೂ!


