ಬೆಳಗಾವಿ: ದೇಶದ ಕಾನೂನುಗಳಲ್ಲಿ ಕಾಂಗ್ರೆಸ್ಸಿಗರು ಕೇವಲ ವಿದೇಶಿಗರ ಗುಲಾಮಿತನವನ್ನೇ ತುಂಬಿದ್ದರು. ಇದನ್ನು ಬಿಜೆಪಿ ತನ್ನ ಹತ್ತು ವರ್ಷದ ಆಡಳಿತದಲ್ಲಿ ಹೊಡೆದೋಡಿಸಿದೆ ಎನ್ನುವ ಮೂಲಕ ದೇಶದ ಕಾನೂನು ವ್ಯವಸ್ಥೆ ಸರಿಯಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಬೆಳಗಾವಿಯಲ್ಲಿ ನಡೆದ ಬೆಳಗಾವಿ, ಚಿಕ್ಕೋಡಿ ಲೋಕಸಭಾ ಚುನಾವಣೆ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬೆಳಗಾವಿಯಲ್ಲಿ ಆದಿವಾಸಿ ಮಹಿಳೆ ಮೇಲಿನ ದೌರ್ಜನ್ಯ, ಚಿಕ್ಕೋಡಿಯಲ್ಲಿ ಜೈನಮುಣಿ ಹತ್ಯೆ, ಹುಬ್ಬಳ್ಳಿಯ ನೇಹಾ ಪ್ರಕರಣ ಉಲ್ಲೇಖಿಸಿದ ಮೋದಿ, ಕಾಂಗ್ರೆಸ್ ಗೆ ಹಿಂದೂಗಳ ಜೀವದ ಬಗ್ಗೆ ಚಿಂತೆ ಇಲ್ಲ. ಕೇವಲ ವೋಟ್ ಬ್ಯಾಂಕ್ ಚಿಂತೆ ಅಷ್ಟೆ ಎಂದು ದೂರಿದರು.
ಕಾಂಗ್ರೆಸ್ ವಿರುದ್ಧ ಮೋದಿ ಗಂಭೀರ ಆರೋಪ
ರಾಮೇಶ್ವರಂ ಕೆಫೆ ಗಂಭೀರತೆಯನ್ನೂ ಕಾಂಗ್ರೆಸ್ ಅರಿತಿರಲಿಲ್ಲ. ಕೆಫೆಯಲ್ಲಿ ಸಿಲಿಂಡರ್ ಬ್ಲಾಸ್ಟ್ ಎಂದು ಉಡಾಫೆ ಹೇಳಿಕೆ ನೀಡಿದ್ದರು. ದೇಶದ್ರೋಹಿ PFI ಸಂಘಟನೆಯ ಪ್ರಮುಖ ನಾಯಕರನ್ನು ಜೈಲಿನಲ್ಲಿ ಇಟ್ಟಿದ್ದೇನೆ. ಮೋದಿ ನಿಷೇಧಿಸಿದ್ದ ದೇಶದ್ರೋಹಿ PFI ಜತೆ ಚುನಾವಣೆಗಾಗಿ ಕಾಂಗ್ರೆಸ್ ಕೈ ಜೋಡಿಸಿದೆ ಎಂದು ಕಾಂಗ್ರೆಸ್ ವಿರುದ್ಧ ಮೋದಿ ಗಂಭೀರ ಆರೋಪ ಮಾಡಿದರು.
ಕಾಂಗ್ರೆಸ್ಸಿನವರಿಗೆ ಯಾವುದರ ಮೇಲೆಯೂ ನಂಬಿಕೆ ಇಲ್ಲ. ಭಾರತದ ಕೋವಿಡ್ ವ್ಯಾಕ್ಸಿನ್ ಸರಿಯಿಲ್ಲ ಎಂದು ಕೂಗು ಎಬ್ಬಿಸಿದ್ದರು. ಅವರಿಗೆ ಇವಿಎಂ ಮೇಲೆ ನಂಬಿಕೆ ಇಲ್ಲ. ಆದರೆ ನಾವು ಇದಕ್ಕೆ ತಲೆಕೆಡಿಸಿಕೊಳ್ಳದೆ ದೇಶದ ಜನರ ಕ್ಷೇಮಕ್ಕಾಗಿ ಶ್ರಮಿಸುತ್ತೇವೆ ಎಂದರು.
ದಾಖಲೆಗಳಿಲ್ಲದೇ ಕಾಂಗ್ರೆಸ್ ವಿರುದ್ಧ ಆರೋಪ
ಕಾಂಗ್ರೆಸ್ ನವರು ಕಿತ್ತೂರು ರಾಣಿ ಚೆನ್ನಮ್ಮ, ಶಿವಾಜಿ ಮಹಾರಾಜರನ್ನು ಅವಮಾನಿಸಿದ್ದಾರೆ. ನವಾಬರು, ನಿಜಾಮರು, ಬಾದ್ ಷಾಗಳು ನಡೆಸಿದ್ದ ಅತ್ಯಾಚಾರದ ಬಗ್ಗೆ ಕಾಂಗ್ರೆಸ್ ಮಾತನಾಡಲ್ಲ. ನಮ್ಮ ಮಂದಿರಗಳನ್ನು ಒಡೆದ ಔರಂಗಜೇಬನನ್ನು ಕಾಂಗ್ರೆಸ್ ಹೊಗಳುತ್ತಿದೆ. ಮೈಸೂರು ರಾಜರ ಸಾಧನೆಗಳು ರಾಹುಲ್ ಗಾಂಧಿಗೆ ಗೊತ್ತಿಲ್ಲ. ರಾಣಿ ಅಹಲ್ಯ ಬಾಯಿ ಓಳ್ಕರ್ ನಮ್ಮ ಮಂದಿರಗಳನ್ನು ಪುನರ್ ನಿರ್ಮಿಸಿದ್ದು ಕಾಂಗ್ರೆಸ್ ನವರಿಗೆ ಗೊತ್ತಿಲ್ಲ. ಅಂಬೇಡ್ಕರ್ ಗೆ ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದ್ದು ಮಹಾರಾಜ ಗಾಯಕ್ ವಾಡ್. ನಮ್ಮ ರಾಜ-ಮಹಾರಾಜರನ್ನು ಕಾಂಗ್ರೆಸ್ ನೆನೆಸುವುದಿಲ್ಲ ಎಂದು ಯಾವುದೇ ದಾಖಲೆಗಳನ್ನು ನೀಡದೆ ಮೋದಿ ಕಾಂಗ್ರೆಸ್ ವಿರುದ್ಧ ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕಿಸಾನ್ ಸಮ್ಮಾನ್ ನ 4 ಸಾವಿರ ರೂ. ಹಣ ಕಡಿತಗೊಳಿಸಿದೆ. ಕಾಂಗ್ರೆಸ್ ನವರು ಪ್ರಿತಾರ್ಜಿತ ಆಸ್ತಿಗೆ ಹೊಸ ಕಾನೂನು ತಂದಿದ್ದಾರೆ. ನೀವು ಕಷ್ಟಪಟ್ಟು ನಿಮ್ಮ ಮಕ್ಕಳಿಗಾಗಿ ಸಂಪಾದಿಸಿದ ಆಸ್ತಿ ನಿಮ್ಮ ನಂತರ ನಿಮ್ಮ ಮಕ್ಕಳಿಗೆ ಸಿಗಬಾರದು ಎನ್ನುವುದು ಕಾಂಗ್ರೆಸ್ ಉದ್ದೇಶ ಎಂದು ಆರೋಪಿಸಿದರು.
ಅಣ್ಣಾ ಸಾಹೇಬ್ ಜೊಲ್ಲೆ, ಜಗದೀಶ್ ಶೆಟ್ಟರ್ ಪರ ಮತ ಯಾಚಿಸುತ್ತೇದ್ದೇನೆ. ಅವರು ನಿಮ್ಮ ಪರವಾಗಿ ದಿಲ್ಲಿಯಲ್ಲಿ ಅಧಿಕಾರ ನಡೆಸಲು ನಿಮ್ಮ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದರು.